ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-4)

Most read

ವಾಜಪೇಯಿಯವರು ಸಾವರ್ಕರರ ಮೇಲೆ ಹಾಡುಕಟ್ಟಿ ಹೊಗಳಿದ್ದರ ಹಿನ್ನೆಲೆ ಏನು- ಈ ಕುರಿತು ಬಿಬಿಸಿ ಪ್ರತಿನಿಧಿಗೆ ಅರುಣ್‌ ಶೌರಿ ನೀಡಿದ ಉತ್ತರ: 

ಶೌರಿ: ಇವೆಲ್ಲ ಕವಿಮನಸಿನ ಅತಿರೇಕದ ರೋಚಕ ವರ್ಣನೆಗಳು. ವಾಸ್ತವ ಏನು ಗೊತ್ತೆ? …..

ನಾಸಿಕ್‌ನಲ್ಲಿ ಎಮ್‌ಸಿ ಜಾಕ್ಸನ್‌ ಹೆಸರಿನ ಒಬ್ಬ ಬ್ರಿಟಿಷ್‌ ಅಧಿಕಾರಿ ಇದ್ದರು. ಅವರು ಸಂಸ್ಕೃತ ಓದಿಕೊಂಡಿದ್ದರು. ಅವರನ್ನು ಜನರು ʼಪಂಡಿತ್‌ ಜಾಕ್ಸನ್‌ʼ ಎಂದು ಕರೆಯುತ್ತಿದ್ದರು. ಆದರೆ ಪ್ಲೇಗ್‌ ಬಂದ ಅವಧಿಯಲ್ಲಿ ಅವರು ಕಟ್ಟುನಿಟ್ಟಿನ ಶಿಸ್ತುಪಾಲನೆಗೆ ಮುಂದಾದರು. ಅದೇ ಕಾರಣಕ್ಕೆ ಅವರ ಕಗ್ಗೊಲೆ ಆಯಿತು. ಅದು `ಮಹಾ ಕ್ರಾಂತಿಕಾರಿ’ ಸಾಹಸವೆನಿಸಿತು. ತನಿಖೆ ನಡೆದಾಗ, ಆ ಕೊಲೆಗೆ ಬಳಸಿದ ಪಿಸ್ತೂಲನ್ನು ಲಂಡನ್ನಿನಲ್ಲಿರುವ ಸಾವರ್ಕರ್‌ ನೆರವಿನಿಂದ ನಾಲ್ವರು ಕಳ್ಳಸಾಗಣೆ ಮಾಡಿ ತಂದಿದ್ದೆಂದು ಗೊತ್ತಾಯಿತು. ಆ ಕಾರಣದಿಂದ ಸಾವರ್ಕರರನ್ನು ದಸ್ತಗಿರಿ ಮಾಡಿ   ಎಸ್‌ಎಸ್‌ ಮೊರಿಯಾ ಹೆಸರಿನ ಉಗಿಹಡಗಿನಲ್ಲಿ ಭಾರತಕ್ಕೆ ತರಲಾಗುತ್ತಿತ್ತು. ಆ ಹಡಗು ಪ್ರಾನ್ಸ್‌ನ ಮಾರ್ಸೆ Marseille ಹೆಸರಿನ ಬಂದರಿನಲ್ಲಿ ಕಲ್ಲಿದ್ದಲು ಮರುಭರ್ತಿಗೆಂದು ಲಂಗರು ಹಾಕಿತ್ತು. ತನಗೆ ʻಬಾತ್‌ ರೂಮಿಗೆ ಹೋಗಬೇಕಿದೆʼ ಎಂದು ಹೇಳಿ ಆರೂವರೆ ವೇಳೆಗೆ ಸಾವರ್ಕರ್‌ ಶೌಚಾಲಯಕ್ಕೆ ಹೋದರು. ಅಲ್ಲೊಂದು ರಂಧ್ರ ಇತ್ತು. ಅಲ್ಲಿಂದ ಸಾವರ್ಕರ್‌ ಜಿಗಿದು ದಡ ಸೇರಿದರು. ಆ ದಡ ಎಷ್ಟು ದೂರ ಇತ್ತು? (ನಗು)  ಕೇವಲ 10-12 ಅಡಿ ದೂರದಲ್ಲಿ ಹಡಗುಕಟ್ಟೆ ಇತ್ತು! ಅಲೆಗಿಲೆಯ ಅಬ್ಬರ ಏನೂ ಇರಲಿಲ್ಲ. ಈತ ಆಚೆ ಪಾರಾಗಿ ಓಡತೊಡಗಿದಾಗ ಇವನ್ಯಾವನೊ ಕಳ್ಳನೆಂದು ‌ ಎತ್ತರದಿಂದ ನೋಡಿದ ಫ್ರೆಂಚ್ ಪೊಲೀಸ ಒಬ್ಬ ಕೂಗಾಡಿ ಇನ್ನಿಬ್ಬರು ಪೇದೆಗಳನ್ನು ಕೆಳಕ್ಕೆ ಕಳಿಸಿದ. ಅವರು ಧಡಧಡ ದೌಡಾಯಿಸಿ ಬಂದು ಈತನನ್ನು  ಹಿಡಿದು (ಹಡಗಿನೊಳಕ್ಕೆ) ತಳ್ಳಿದರು. ಮುಂದೆ ಮಂಬೈಯಲ್ಲಿ ತನಿಖಾ ಸಮಿತಿಯ ವಿಚಾರಣೆಯ ವೇಳೆಯಲ್ಲಿ ಇವೆಲ್ಲ ಸಂಗತಿ (ಬಂದರು ಕಟ್ಟೆ ಬರೀ 10-12 ಅಡಿ ದೂರ ಇತ್ತು) ಬೆಳಕಿಗೆ ಬಂತು. ಅಚ್ಚರಿ ಏನೆಂದರೆ ಆ ಪೊಲೀಸರ ಬಟ್ಟೆ ಒದ್ದೆ ಕೂಡ ಆಗಿರಲಿಲ್ಲವೇಕೆ ಎಂಬ ಪ್ರಶ್ನೆಯನ್ನು ಯಾರೂ ಎತ್ತಿಲ್ಲ. ಈ ತನಿಖೆಯ ವರದಿಯನ್ನು ಯಾರೋ ಸೋರೋಸ್‌ ಗೀರೋಸ್‌ ಬಹಿರಂಗಪಡಿಸಿಲ್ಲ. 1956ರಲ್ಲೇ ಮುಂಬೈ ಸರ್ಕಾರ ಅದನ್ನು ಮುದ್ರಿಸಿದೆ. ಆದರೆ ಯಾರೂ ಅದನ್ನು ಓದೋದಿಲ್ಲ!

ಬಿಬಿಸಿ: ಹಿಂದೊಮ್ಮೆ ಸ್ವತಃ ಇಂದಿರಾಗಾಂಧಿಯವರ ಅವಧಿಯಲ್ಲೇ ಸಾವರ್ಕರರನ್ನು ಸಮ್ಮಾನಿಸಿದ್ದರಂತೆ. ಭಾಜಪಾ ಮಾಡಿದ್ದನ್ನೇ ಹಿಂದೆ ಕಾಂಗ್ರೆಸ್‌ ಕೂಡ ಮಾಡಿದೆ ಎಂದು ಜನರು ಹೇಳುತ್ತಾರಲ್ಲ?

ಶೌರಿ: ನನ್ನ ಅಂದಾಜಿನ ಪ್ರಕಾರ (ನನಗೇನೂ ಇಂದಿರಾಗಾಂಧಿಯವರ ಪರಿಚಯ ಇರಲಿಲ್ಲ. ಅಥವಾ ಕಾಂಗ್ರೆಸ್ಸಿನವರ ಜೊತೆ ಈ ಕುರಿತು ಸಮಾಲೋಚನೆ ಮಾಡಿಲ್ಲ) ಆದರೆ ನನ್ನ ಅಂದಾಜು ಏನೆಂದರೆ, ಮಹಾರಾಷ್ಟ್ರದಲ್ಲಿ ಯಾರೋ ಕೆಲವು ರಾಜಕಾರಣಿಗಳು ಸಾವರ್ಕರ್‌ ಅಂಚೆ ಚೀಟಿ ತರಬೇಕೆಂದು ಶಿಫಾರಸು ಮಾಡಿರಬಹುದು. ದೇಶದ ಎಷ್ಟೆಲ್ಲ ಕಡೆ ಎಷ್ಟೊಂದು ಜನರ ಹೆಸರುಗಳನ್ನು ರಸ್ತೆಗೆ ಇಡಲಾಗುತ್ತದೆ….. 

ಬಿಬಿಸಿ:  ಹಿಂದೂತ್ವದ ಮುಷ್ಟಿಯಿಂದ ಹಿಂದೂಯಿಸಂನ್ನು ಉಳಿಸಲೆಂದು ಈ ಕೃತಿಯನ್ನು ಹೊರತಂದಿರುವುದಾಗಿ ನಿಮ್ಮ ಪುಸ್ತಕದ ಕೊನೆಯ ಪುಟದಲ್ಲಿ ನೀವು ಬರೆದಿದ್ದಿರಿ.

ಶೌರಿ: ಸಾವರ್ಕರರ ಒಂದು ಪುಸ್ತಕ ಇದೆ, ಹಿಂದೂತ್ವದ ಬಗ್ಗೆ. ಅದರಲ್ಲಿ ಅವರು ಹಿಂದೂಯಿಸಮ್ಮೇ ಬೇರೆ ಹಿಂದೂತ್ವವೇ ಬೇರೆ ಎಂದು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ. ನಾನು ಬರೆದಿದ್ದು ಕೇವಲ ಚಾರಿತ್ರಿಕ ದಾಖಲೆಗಾಗಿ ಅಲ್ಲ. ನನ್ನ ಉದ್ದೇಶ ಏನೆಂದರೆ ಇವತ್ತಿನ ಸಂದರ್ಭದಲ್ಲಿ ಹಿಂದೂಯಿಸಂನ್ನು ಹೇಗೆ ತಿರುಚಿ ಹಿಂದೂತ್ವವನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ತೋರಿಸುವುದು. ಈ ಪುಸ್ತಕದಲ್ಲಿ ಹೇಳಿದ ಹಿಂದೂತ್ವವೇ ಎಲ್ಲೆಡೆ ಜಾರಿಗೆ ಬಂದರೆ ನಮ್ಮ ಈ ಹಿಂದೂಸ್ತಾನ ಹಿಂದೂಸ್ತಾನವಾಗಿ ಉಳಿಯುವುದಿಲ್ಲ. ಅದೊಂದು ಕೇಸರಿ ಸಮವಸ್ತ್ರದ ಪಾಕಿಸ್ತಾನ ಅಥವಾ ಇಸ್ಲಾಮಿಕ್‌ ಸ್ಟೇಟ್‌ ಆಗುತ್ತದೆ. ಅದು ನಮಗೆ ಈಗಲೇ ಕಾಣತೊಡಗಿದೆ. ಸಾರಾಸಗಟಾಗಿ ಜನರನ್ನು ಕೊಚ್ಚಿ ಹಾಕವುದು, ದ್ವೇಷ ಸಾಧಿಸುವುದು ಇವೆಲ್ಲ ಸಾವರ್ಕರರ ಸೂತ್ರಗಳು. “ದ್ವೇಷವೇ ನಮ್ಮನ್ನು ಒಗ್ಗೂಡಿಸುತ್ತದೆʼ -ಈ ಹೇಳಿಕೆ ನನ್ನದಲ್ಲ, ಸಾವರ್ಕರರದ್ದು. ಈ ಮೌಲ್ಯಗಳನ್ನು ನಾವೆಲ್ಲರೂ ಅಂತರ್ಗತ ಮಾಡಿಕೊಂಡರೆ ಹಿಂದೂಯಿಸಂ ಎಲ್ಲಿ ಉಳಿಯುತ್ತದೆ? ಒಬ್ಬ ಗರ್ಭಿಣಿ ಮಹಿಳೆಯ (ಬಿಲ್ಕಿಸ್‌ ಬಾನು) ಗ್ಯಾಂಗ್‌ ರೇಪ್‌ ಮಾಡುವುದು, ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡುವುದು ಹಿಂದೂ ಧರ್ಮವೆ? ಇಂದೋರ್ ನ  ಒಬ್ಬ ಬಳೆಗಾರನನ್ನು ಚಚ್ಚಿ ಸಾಯಿಸುವುದು… ಇವೆಲ್ಲ ಹಿಂದೂಯಿಸಂ ಆಗಲು ಸಾಧ್ಯವೆ? ಅದು ಹಿಂದೂತ್ವ ಆಗುತ್ತದೆ.  

ಬಿಬಿಸಿ: ನೀವು ಮೋದಿಯವರ ಜೊತೆಗಿದ್ದಿರಿ, ಅವರ ಅನುಯಾಯಿ ಕೂಡ ಆಗಿದ್ದಿರಿ…. 

(ಅಂತಿಮ ಕಂತಿನಲ್ಲಿ ಸಾವರ್ಕರ್‌ ಆಚಿನ ವಿದ್ಯಮಾನಗಳು….)

ನಾಗೇಶ ಹೆಗಡೆ

ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪರಿಸರ ಬರಹಗಾರ


ಒಂದನೆಯ ಭಾಗ ಓದಿದ್ದೀರಾ? ಸಾವರ್ಕರ್‌ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು:

ಭಾಗ ಎರಡು ಓದಿದ್ದೀರಾ? ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-2)

ಭಾಗ ಮೂರು ಓದಿದ್ದೀರಾ? ಸಾವರ್ಕರ್‌ ಬಲೂನ್‌ಗೆ ಶೌರಿ ಚುಚ್ಚಿದ ಸೂಜಿಗಳು (ಭಾಗ-3)

More articles

Latest article