ಕೊಯಮತ್ತೂರು: ಕ್ಷೇತ್ರ ಪುನರ್ ವಿಂಗಡನೆ ನಡೆದಾಗ ದಕ್ಷಿಣದ ರಾಜ್ಯಗಳಲ್ಲಿನ ಸೀಟುಗಳು ಕಡಿಮೆಯಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದಲ್ಲಿ ದಕ್ಷಿಣದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಕ್ಷೇತ್ರ ಪುನರ್ ವಿಂಗಡನೆ ವಿಚಾರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದೇ ವಿಷಯವಾಗಿ ಮಾರ್ಚ್ 5ರಂದು ಎಲ್ಲಾ ಪಕ್ಷಗಳ ಸಭೆ ಕರೆಯಲಾಗಿದೆ ಎಂದಿದ್ದಾರೆ. ಕ್ಷೇತ್ರಗಳ ಪುನರ್ ವಿಂಗಡನೆಯಿಂದ ದಕ್ಷಿಣದ ರಾಜ್ಯಗಳಲ್ಲಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆಗಳು ಕಡಿಮೆಯಾಗಲಿವೆ ಎಂದು ಸ್ಟಾಲಿನ್ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಈ ಪ್ರಕ್ರಿಯೆಯಿಂದ ಯಾವ ರಾಜ್ಯಗಳಲ್ಲೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಹೆಚ್ಚುವರಿ ಕ್ಷೇತ್ರಗಳನ್ನು ಹೊಂದಲಿವೆ ಎಂದು ಶಾ ತಿಳಿಸಿದ್ದಾರೆ.
ಈ ವೇದಿಕೆ ಮೂಲಕ ದಕ್ಷಿಣದ ರಾಜ್ಯಗಳ ಜನರ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಲೋಕಸಭೆಯಲ್ಲಿ ಈ ಭಾಗದ ಜನರ ಪ್ರಾತಿನಿಧ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. 2026ರಲ್ಲಿ ನಡೆಸಲಾಗುವ ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಚ್ 5ರಂದು ಎಲ್ಲಾ ಪಕ್ಷಗಳ ಸಭೆ ಆಯೋಜಿಸಲಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ನ್ಯಾಯೋಚಿತ ಮತ್ತು ಪಾರದರ್ಶಕವಾಗಿ ಪ್ರಕ್ರಿಯೆ ನಡೆಸುವ ಭರವಸೆಯನ್ನು ಕೇಂದ್ರ ನೀಡಿದೆ.
ಕ್ಷೇತ್ರ ಪುನರ್ ವಿಂಗಡನೆ ಕುರಿತು ಸ್ಟಾಲಿನ್ ಆರೋಪ:
ಕ್ಷೇತ್ರ ಪುನರ್ ವಿಂಗಡನೆ ವಿಷಯ ಕುರಿತು ಸ್ಟಾಲಿನ್, ಪ್ರತಿ ಕುಟುಂಬವೂ ಹೆಚ್ಚು ಮಕ್ಕಳನ್ನು ಹೊಂದಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಲಿದೆ. ಇಲ್ಲವಾದಲ್ಲಿ 129 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ ವಿಂಗಡನೆಯ ತೂಗುಕತ್ತಿ ನೇತಾಡುತ್ತಿದೆ ಎಂದು ಹೇಳಿದ್ದರು.
ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ. ಆದರೆ 1971ರ ಜನಗಣತಿಯನ್ನು ಈಗಲೂ ಅನುಸರಿಸಲಾಗುತ್ತಿದೆ. ಸದ್ಯದ ಜನಸಂಖ್ಯೆಯನ್ನು ಆಧರಿಸಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಕ್ಷೇತ್ರಗಳನ್ನು ನಿಗದಿಪಡಿಸಬೇಕು ಎಂದು ಸ್ಟಾಲಿನ್ ಕೇಂದ್ರವನ್ನು ಒತ್ತಾಯಿಸಿದ್ದರು.
ಹಣಕಾಸು ಆಯೋಗಗಳು ದಕ್ಷಿಣದ ರಾಜ್ಯಗಳಿಗೆ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕ್ಷೇತ್ರ ಪುನರ್ ವಿಂಗಡನೆಯಿಂದ ಕೇಂದ್ರ ತೆರಿಗೆ ಹಂಚಿಕೆ ಪ್ರಮಾಣವೂ ಗಣನೀಯವಾಗಿ ತಗ್ಗುವ ಅಪಾಯವಿದೆ. ಪುದುಚೇರಿಯ ಒಂದು ಕ್ಷೇತ್ರವನ್ನು ಒಳಗೊಂಡು ದಕ್ಷಿಣದ 130 ಕ್ಷೇತ್ರಗಳ ಮೂಲಕ ಈ ರಾಜ್ಯಗಳಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣದ ರಾಜ್ಯಗಳನ್ನು ಸದಾ ಆತಂಕದಲ್ಲೇ ಇಡುವ ಹುನ್ನಾರ ನಡೆದಿದೆ ಎಂದು ಸ್ಟಾಲಿನ್ ಆರೋಪಿಸಿದ್ದರು. ಒಂದೊಮ್ಮೆ ದಕ್ಷಿಣದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾದರೂ, ಅದು ಉತ್ತರದ ರಾಜ್ಯಗಳೊಂದಿಗಿನ ಅನುಪಾತದಲ್ಲಿ ಹಿಂದೆಯೇ ಉಳಿಯಲಿದೆ. 1971ರ ಜನಸಂಖ್ಯೆ ಆಧಾರದಲ್ಲಿ ಬಿಹಾರ ಮತ್ತು ತಮಿಳುನಾಡು ರಾಜ್ಯಗಳು ಸಮನಾಗಿವೆ. ಹೀಗಿದ್ದರೂ ಬಿಹಾರ 40 ಕ್ಷೇತ್ರಗಳನ್ನು ಹಾಗೂ ತಮಿಳುನಾಡು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದರು.