ಸಾವರ್ಕರ್‌ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು:

Most read

ವಿನಾಯಕ್‌ ದಾಮೋದರ್‌ ಸಾವರ್ಕರ್‌ ಕುರಿತು ಹೊಸ ಬಗ್ಗಡ ಮೇಲೆದ್ದಿದೆ. ಈಚೆಗೆ ಖ್ಯಾತ ಪತ್ರಕರ್ತ ಅರುಣ್‌ ಶೌರಿ  (ಇವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು) ಒಂದು ಪುಸ್ತಕವನ್ನು ಬರೆದಿದ್ದಾರೆ. “The New Icon: Savarkar and the Facts” ಇದು ಆ 560 ಪುಟಗಳ ಪುಸ್ತಕದ ಹೆಸರು. ಅನೇಕ ಮೂಲ ದಾಖಲೆಗಳನ್ನು ಅಗೆದು ತೆಗೆದು ತಾನು ಸತ್ಯಸಂಗತಿಗಳನ್ನು ಮೇಲಕ್ಕೆತ್ತಿ ಇದನ್ನು ಬರೆದಿದ್ದೇನೆ ಎಂದು ಶೌರಿ ಹೇಳಿದ್ದಾರೆ.  

ಇದರಲ್ಲೇನಿದೆ ಎಂಬುದರ ಬಗ್ಗೆ ಅನೇಕ ವಿಡಿಯೊ ಸಂದರ್ಶನಗಳ ಮೂಲಕ ಅರುಣ್‌ ಶೌರಿ ವಿವರಿಸಿದ್ದಾರೆ. ಬಿಬಿಸಿ ಕೂಡ ತನ್ನ ಹಿಂದೀ ಚಾನೆಲ್‌ ನಲ್ಲಿ ಅವರ ಸಂದರ್ಶನ ಮಾಡಿದೆ. ಅದರ ಕನ್ನಡ ಅವತರಣಿಕೆ ಇಲ್ಲಿದೆ: (ನೆನಪಿಡಿ; ಇದು ಮೊದಲ ಕಂತು. ಮೂರು ಅಥವಾ ನಾಲ್ಕು ಕಂತುಗಳಲ್ಲಿ ಈ ಸಂದರ್ಶನ ಮುಗಿಯುತ್ತದೆ. ತುಂಬ ಸ್ವಾರಸ್ಯದ ಸಂಗತಿಗಳು ಇದರಲ್ಲಿವೆ. ಕೊನೆಯ ಭಾಗದಲ್ಲಂತೂ ಶೌರಿ ತಾನು ಎಂಥ ದುರ್ಭರ ಸನ್ನಿವೇಶದಲ್ಲಿ ಕೂತು ಈ ಪುಸ್ತಕ ಬರೆದೆ ಎನ್ನುತ್ತ  ತನ್ನ ಖಾಸಗಿ ಬದುಕಿನ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಸಾವರ್ಕರ್‌ ಚರಿತ್ರೆಯನ್ನು ಅಷ್ಟೇ ಅಲ್ಲ; ನಮ್ಮ ಅಂತರಂಗವನ್ನೂ ಕಲಕುವ ಸಂಗತಿಗಳು ಇಲ್ಲಿ ದಾಖಲಾಗಿವೆ. ) ಮೂಲ ಸಂದರ್ಶನವನ್ನು ನೋಡಬೇಕೆಂದರೆ:  

****

ಬಿಬಿಸಿ ಸಂದರ್ಶಕ (ಜುಗಲ್‌ ಪುರೋಹಿತ್‌): ಸಾವರ್ಕರ್‌ ಹೆಸರು ಎಲ್ಲರಿಗೂ ಪರಿಚಿತವೇ ಇದೆ. ಕೆಲವರು ಹೇಳುವ ಪ್ರಕಾರ ಈಚೆಗೆ ಇವರ ಬಗ್ಗೆ ಏನೆಲ್ಲ ಉತ್ಪ್ರೇಕ್ಷಿತ ಸಂಗತಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಈ ಮಧ್ಯೆ ಶೌರಿಯವರ ಹೊಸ ಪುಸ್ತಕ ಬಂದಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಶೌರಿಯವರೆ ನೀವು ಈ ವಿಷಯ ಕುರಿತ ಸಂಶೋಧನೆಗೆ ಏಕೆ ಇಳಿದಿರಿ?  

ಅರುಣ್ಶೌರಿ: ಹಿಂದೂತ್ವ ಹಿಂದೂತ್ವ ಎಂಬ ಮಾತು ಎಲ್ಲ ಕಡೆ ಕೇಳಬರುತ್ತಿದೆ. ಈ ಪದವನ್ನು 1923ರ ತನ್ನದೊಂದು ಪುಸ್ತಕದಲ್ಲಿ ಸಾವರ್ಕರ್‌ ವ್ಯಾಪಕವಾಗಿ ಬಳಸಿದ್ದರು. ಹಿಂದೂತ್ವ ಈಗ ಹೀಗೆಲ್ಲ ಕರಾಳ ರೂಪದಲ್ಲಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಈ ಪದದ ಮೂಲ ಎಲ್ಲಿದೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಅದನ್ನು ಹುಡುಕುತ್ತ ನಾನು ಗೊಲ್ವಾಲ್ಕರ್‌ ಅವರ 12 ಸಂಪುಟಗಳನ್ನು ಕೆದಕಿದೆ. ಅದರಲ್ಲೇನೂ ಸಿಗಲಿಲ್ಲ. ಆಮೇಲೆ ನಾನು ಸಾವರ್ಕರರ ಎಲ್ಲ ಸಂಪುಟಗಳನ್ನೂ ನೋಡುತ್ತ ಹೋದೆ. ಇನ್ನೊಂದು ಕಾರಣ ಏನೆಂದರೆ, ಸಾವರ್ಕರ್‌ ತನ್ನ ಬಗ್ಗೆ ತಾನೇ ಹೇಳಿಕೊಂಡಿದ್ದರಲ್ಲ? ತನ್ನ ಅಭಿಪ್ರಾಯ, ತಾನು ನೋಡಿದ ಸಂಗತಿ, ತಾನು ಹೋದ ಸಭೆಯಲ್ಲಿ ಅರಿತ ಸಂಗತಿ ಇವೆಲ್ಲ ಇತ್ತಲ್ಲ? ಆತ ಹೇಳಿದ ವಿಷಯಗಳಲ್ಲಿ ಸತ್ಯ ಎಷ್ಟಿತ್ತು ಎಂದು ಸಾಕ್ಷ್ಯಗಳನ್ನು ಹುಡುಕುತ್ತ ಹೋದೆ.

ಪ್ರಶ್ನೆ: ಅದರಲ್ಲಿ ನಿಮ್ಮ ಅಂತರಂಗವನ್ನು ಕಲಕಿದ ವಿಷಯಗಳು ಏನೇನು?  

ಶೌರಿ: ತುಂಬಾ ಇವೆ. ನಾವು ಕಟ್ಟಿಕೊಂಡ ಸಂಸ್ಥೆ/ಸಂಘಟನೆಗಳೆಲ್ಲ ಈಗ ದುರ್ಬಲವಾಗುತ್ತಿವೆ. ಎರಡನೆಯದಾಗಿ, ನಾವು ಜನರ ಮನಸ್ಸಿನಲ್ಲಿ ಏನೆಲ್ಲ ತುಂಬುತ್ತಿದ್ದೇವೆ. ಸುಳ್ಳು ಹೇಳುವುದು, ದೇಶದ ವಾಸ್ತವದ ಅಂಕಿಸಂಖ್ಯೆಗಳನ್ನು ಮುಚ್ಚಿಡುವುದು, ಜನಗಣತಿ ಮಾಡದಿರುವುದು, ಇವೆಲ್ಲ ಸಾಮಾನ್ಯ ಸಂಗತಿಗಳೆನಿಸುತ್ತಿವೆ. ಹಿಂದೂತ್ವದ ಬಗ್ಗೆ ಮಾತಾಡುವವರಿಗೆ ಒಂದು ಐಡಿಯಾಲಜಿ ಅಂತ ಇಲ್ಲ. (ಕಮ್ಯೂನಿಸಂ ನಲ್ಲೂ ಇರಲಿಲ್ಲ). ನಾನು ಈ ಎಲ್ಲ ಐಡಿಯಾಲಜಿಗಳ ವಿರೋಧಿ. ಅಂಥ ವಿಚಾರಧಾರೆಗಳನ್ನೆಲ್ಲ ಕೆದಕಿ, ಅವರ ಚಾಪೆಯ ತಳದಲ್ಲಿರುವ ಕೊಳಕುಗಳನ್ನು ಎತ್ತಿ ತೋರಿಸ ಬಯಸುತ್ತೇನೆ. 

ಬಿಬಿಸಿ: ಆ ಚಾಪೆಯ ಕೆಳಗೆ ನಿಮಗೆ ಸಿಕ್ಕಿದ್ದೇನು?

ಶೌರಿ: ನಾನು ಹೇಳುವುದೇನಿದೆ ಅದರಲ್ಲಿ! ನೀವು ಸ್ವಂತ ಓದಿ. ಆತ ಪ್ರಖರ ವಿಚಾರವಾದಿ ಆಗಿದ್ದರು. ಆ ಬಗ್ಗೆ ನಾನು ಆತನಿಗೆ ʻಭೇಷ್‌ʼ ಎನ್ನುತ್ತೇನೆ. ನಮ್ಮ ನಂಬುಗೆಗಳಲ್ಲಿ, ಶಾಸ್ತ್ರಗಳಲ್ಲಿ ಎಂಥ ಮೌಢ್ಯ, ಕಪಟಗಳಿವೆ- ಎಂಬುದನ್ನು ಆತ ಉಗ್ರವಾಗಿ ಟೀಕಿಸಿದ್ದಾರೆ. ಉದಾ: “ಹೋಮ ಹವನಕ್ಕೆ ನೀವು ತುಪ್ಪ ಸುರಿತೀರಿ. ಅದರ ಬದಲು ಬಡವರಿಗೆ ಕೊಡಿ. ದೇವರ ಗುಡಿಗಳಲ್ಲಿ ಪ್ರದಕ್ಷಿಣೆ ಹಾಕುವ ಬದಲು ಹರಿಜನರ ಕೇರಿಯ ಪ್ರದಕ್ಷಿಣೆ ಹಾಕಿ ಬನ್ನಿ. ಅಲ್ಲಿದ್ದವರನ್ನು ಮಾತಾಡಿಸಿ ಬನ್ನಿ. ಪಂಚಗವ್ಯ ಅಂತೀರಿ… ಅದು ಗೋಮಾತೆಯಿಂದ ಬಂದಿದ್ದು ಎಂದು ಹೇಳುತ್ತೀರಿ. ಅರೆ, ನಿಮ್ಮ ಅಮ್ಮನ ಉಚ್ಚಿಷ್ಟಗಳನ್ನು ನೀವೆಂದಾದರೂ ಪೂಜ್ಯವೆಂದು ಸೇವಿಸಿದ್ದಿರಾ? ಅದು ಪೂಜನೀಯ ಅಲ್ಲ ಎಂದರೆ ಇದು ಪೂಜನೀಯ ಎನ್ನಲು ಏನಾದರೂ ವೈದ್ಯಕೀಯ ಸಂಶೋಧನೆ ಆಗಿದೆಯೆ?” ಸಾವರ್ಕರ್‌ ಎತ್ತಿದ ಪ್ರಶ್ನೆ ಇವು.  ಮನು (ಸ್ಮೃತಿಯ) ಬಗ್ಗೆ ಆತ ಅದೆಷ್ಟೊಂದು ಲೇವಡಿ ಮಾಡಿದ್ದಾರೆ. ʻಶ್ರಾದ್ಧದ ದಿನ ಎಂಥ ಮಾಂಸವನ್ನು ಭಕ್ಷಿಸಬೇಕು ಎಂದೆಲ್ಲ ಅದರಲ್ಲಿ ಇದೆʼ ಎಂದು ಸಾವರ್ಕರ್‌ ಟೀಕಿಸಿದ್ದಾರೆ. ಆಶ್ಚರ್ಯ ಏನೆಂದರೆ, ಅಷ್ಟೆಲ್ಲ ವೈಚಾರಿಕತೆಯನ್ನು ತುಂಬಿಕೊಂಡಿದ್ದ ವ್ಯಕ್ತಿಗೆ ಈ ಗುಣಗಳೆಲ್ಲ ಹೇಗೆ ಬಂದವು ಎಂಬುದೇ ಅಚ್ಚರಿ.

ಬಿಬಿಸಿ: ಯಾವ ಗುಣಗಳು? ನೀವು ಮೆಚ್ಚದೇ ಇರುವ ಯಾವ ಗುಣಗಳನ್ನು ಸಾವರ್ಕರ್‌ ಅವರಲ್ಲಿ ಕಂಡಿರಿ?

ಶೌರಿ: ಆ ಸಮಯದಲ್ಲಿ ಒಂದು ರಾಷ್ಟ್ರೀಯ ಚಳವಳಿ ಜಾರಿಯಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ʻರಾಷ್ಟ್ರೀಯ ಕಾಂಗ್ರೆಸ್‌ʼ ಸಂಘಟನೆ (ಈಗಿನ ರಾಜಕೀಯ ಪಕ್ಷ ಅಲ್ಲ) ಚಳವಳಿಯನ್ನು ಹಮ್ಮಿಕೊಂಡಿತ್ತು. ಸಾವರ್ಕರ್‌ ಅದರಲ್ಲಿ ಸೇರಿಕೊಳ್ಳಬಹುದಿತ್ತು. ಬದಲಿಗೆ, ಈತ ಈ ಚಳವಳಿಗೆ ಎಷ್ಟೊಂದು ಬಯ್ಗುಳ ಸುರಿಸಿದ್ದಾರೆ. ಗಾಂಧೀಜಿಯನ್ನು ಎಷ್ಟೊಂದು ಬಯ್ದಿದ್ದಾರೆ. ಅದೂ ಅಲ್ಲದೆ, ಸಾವರ್ಕರ್‌ ಬ್ರಿಟಿಷರ ಕೈಗಳನ್ನ ಬಲಪಡಿಸಲು ಹೊರಟಿದ್ದರು. ಎಷ್ಟರಮಟ್ಟಿಗೆ ಎಂದರೆ ʼ…ನನ್ನ ಸೇವೆ ನಿಮಗೆ ಉಪಯುಕ್ತ ಆಗಲಿದೆʼ ಎಂದು ಹೇಳಿದ್ದರು. ತಾನಾಗಿ ಅದೆಷ್ಟೊಂದು ಶರತ್ತುಗಳನ್ನು ಬ್ರಿಟಿಷರಿಗಾಗಿ ಘೋಷಿಸಿದ್ದರು ಎಂದರೆ- ಬ್ರಿಟಿಷರೇ ಮುಂದಾಗಿ, ʼಅಯ್ಯಾ, ನಿನ್ನ ಬಿಡುಗಡೆಗೆ ನಾವು ಈ ಎಲ್ಲ ಶರತ್ತುಗಳನ್ನು ಒಡ್ಡಲೇ ಇಲ್ಲʼ ಎಂತಲೂ ಹೇಳಿದ್ದರು! ಇದೆಂಥ ನಡವಳಿಕೆ? ನೆನಪಿಡಿ, ಈ ಯಾವುದೂ ನನ್ನ ಮಾತುಗಳಲ್ಲ.  ಅಂದಿನ ವೈಸ್‌ರಾಯ್‌ ಲಿನ್ಲಿಥ್‌ಗೋ ಅವರ ಭೇಟಿಗೆ ಸಾವರ್ಕರ್‌ ಹೋಗುತ್ತಾರೆ. ಅವರಿಬ್ಬರ ನಡುವಣ ಸಂಭಾಷಣೆಯನ್ನು ಲಿನ್ಲಿಥ್‌ಗೋ ದಾಖಲಿಸಿಕೊಂಡು ಅದನ್ನು ಲಂಡನ್ನಿಗೆ ಕಳಿಸುತ್ತಾರೆ. ಆ ದಾಖಲೆಯಲ್ಲಿ ಸಾವರ್ಕರ್‌ ನನ್ನಲ್ಲಿ (ವೈಸ್‌ರಾಯ್‌ ಬಳಿ)  ಬೇಡಿಕೊಳ್ಳುತ್ತಾರೆ: ʼನಾನು ಕಾಂಗ್ರೆಸ್‌ನ ಬಲವನ್ನು ಕುಗ್ಗಿಸಲು…. ಇದನ್ನು ಮಾಡುತ್ತೇನೆ, ಅದನ್ನು ಮಾಡುತ್ತೇನೆ…ʼ ಎಂದೆಲ್ಲ ಹೇಳಿದ್ದು ಇದೆ. 

ಬಿಬಿಸಿ: ಸಾವರ್ಕರ್‌ ಮತ್ತು ಗಾಂಧೀಜಿಯ ನಡುವೆ ಉತ್ತಮ ಸಂಬಂಧ ಇತ್ತು. ಆದರೆ ಈತ ಅವರಿಗೆ ಬೈಗುಳ ಸಿಂಚನ ಮಾಡಿದ್ದೂ ಇದೆ. ನಿಮಗೆ ಏನನ್ನಿಸುತ್ತದೆ, ಅವರಿಬ್ಬರ ಸಂಬಂಧದ ಬಗ್ಗೆ? ಪರಸ್ಪರ ಮೈತ್ರಿ ಇತ್ತೆ?

ಶೌರಿ: ಇರಲಿಲ್ಲ; ಖಂಡಿತ ಇರಲಿಲ್ಲ. ಬದಲಿಗೆ ಗಾಂಧಿಯನ್ನು ಈತ ದ್ವೇಷಿಸುತ್ತಿದ್ದರು. ಒಂದೆರಡು ಬಾರಿ ಲಂಡನ್ನಿನಲ್ಲಿ ಅವರಿಬ್ಬರ ಭೇಟಿ ಆಗಿತ್ತು. ಸಾವರ್ಕರ್‌ ತಂಡ ತನ್ನನ್ನು ಹತ್ಯೆ ಮಾಡಲೂ ಬಯಸುತ್ತದೆ ಎಂದು ಗಾಂಧೀಜಿಗೆ ಅನ್ನಿಸಿತ್ತು. ಅದನ್ನವರು ಬರೆದಿದ್ದಾರೆ ಕೂಡ: ʼಯಾರನ್ನೋ ಕೊಲೆ ಮಾಡಿ ಸ್ವಾತಂತ್ರ್ಯವನ್ನು ಪಡೆದರೆ ಮುಂದೆ ಕೊಲೆಗಾರರೇ ಭಾರತವನ್ನು ಆಳುತ್ತಾರೆʼ ಎಂದು ಅವರು ಬರೆದಿದ್ದಾರೆ. ಅದಿರಲಿ, ʼನಾನು ಮತ್ತು ಗಾಂಧಿ ಲಂಡನ್ನಿನಲ್ಲಿ 1908ರಲ್ಲಿ ಒಟ್ಟಿಗೇ ಇದ್ದೆವುʼ ಎಂದು ಸಾವರ್ಕರ್‌ ಪ್ರಮಾಣ ಮಾಡಿ ಸುಳ್ಳು ಹೇಳಿದ್ದರು. ಗಾಂಧೀಜಿ ಆಫ್ರಿಕಾಕ್ಕೆ ಹೋದವರು 1914ರವರೆಗೆ ಲಂಡನ್ನಿಗೆ ಬಂದೇ ಇರಲಿಲ್ಲ. ಸಾವರ್ಕ ರ್‌ ನ್ನು 1910ರಲ್ಲಿ ಭಾರತಕ್ಕೆ ಕಳುಹಿಸಲಾಯಿತು. ಇವರ ಭೇಟಿಯ ಸಾಧ್ಯತೆ ಎಲ್ಲೂ ಇರಲಿಲ್ಲ.

ಬಿಬಿಸಿ: ನೀವು ಹೇಳುವ ಪ್ರಕಾರ ಆತನಿಗೆ ಗಾಂಧೀಜಿ ಬಗ್ಗೆ ದ್ವೇಷ ಇತ್ತು. ಈ ದ್ವೇಷಕ್ಕೆ ಕಾರಣ ಏನು?

ಶೌರಿ: ಸಾವರ್ಕರ್‌ಗೆ ತನ್ನ ಶ್ರೇಷ್ಠತೆಯ ಬಗ್ಗೆ ಭಾರೀ ದೊಡ್ಡ ಅಹಂ ಇತ್ತು. ಎರಡನೆಯದಾಗಿ, ಮರಾಠಾ ವಂಶಜ. ಅದರಲ್ಲೂ ಬ್ರಾಹ್ಮಣ. ಅದರಲ್ಲೂ ಚಿತ್‌ಪಾವನ್‌ ಬ್ರಾಹ್ಮಣ. ಅದರಲ್ಲೂ ಲೋಕಮಾನ್ಯ ತಿಲಕರ ನಂತರ ತಾನೇ ಎಂಬ ಅಹಂ. 

ಬಿಬಿಸಿ: ಅವರು ತನಗೆ ತಾನೇ ಪರಮಶ್ರೇಷ್ಠ ಅಂದುಕೊಂಡಿದ್ದರು…

ಶೌರಿ: ಅಂದುಕೊಂಡಿದ್ದರು. ಮಧ್ಯೆ ಈ ʻಗುಜರಾತಿʼ (ಗಾಂಧಿ) ಮಧ್ಯೆ ಬಂದ. ತನಗೆ ಸಿಗಬೇಕಿದ್ದ ಮರ್ಯಾದೆಯನ್ನೆಲ್ಲ ಈತ ದೋಚಿಕೊಂಡ. ಆ ದ್ವೇಷ ಸಾವರ್ಕರ್‌ಗೆ ಇತ್ತು. 1922-23ರಲ್ಲಿ ಗಾಂಧೀಜಿಯನ್ನು ʼಈತ ತಲೆತಿರುಕ, ಮೂರ್ಖ. ಈತನಿಗೆ ಮೂರ್ಛೆರೋಗ ಇದೆ. ಏನೇನೋ ಹಲುಬುತ್ತಾನೆ. ಈತ ಓಡಾಡುವ ಪ್ಲೇಗ್‌ ರೋಗʼ ಎಂದೆಲ್ಲ ಬಯ್ಗುಳ ಸಮರ್ಪಿಸಿದ್ದಾರೆ.

***

(ನಾಳಿನ ಕಂತಿನಲ್ಲಿ… ಸಾವರ್ಕರರ ಅಂಡಮಾನ್ ಶಿಕ್ಷೆಯ ಬಗ್ಗೆ ಹಾಗೂ ಬ್ರಿಟಿಷರಿಗೆ ಅವರು ಬರೆದ ಕ್ಷಮಾಪತ್ರದ ಕುರಿತು ಹೊಸ ಬೆಳಕು)

ನಾಗೇಶ ಹೆಗಡೆ

ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪರಿಸರ ಬರಹಗಾರ

ಇದನ್ನೂ ಓದಿ- ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥ “ ಭೂ ಸ್ವಾಧೀನ ಒಳಸುಳಿಗಳು”

More articles

Latest article