ಮರಾಠ ಕೋಟಾ ಹೋರಾಟಕ್ಕೆ ಮಣಿದ ಮಹಾರಾಷ್ಟ್ರ ಸರ್ಕಾರ: ಮನೋಜ್‌ ಜಾರಂಗೆ ಉಪವಾಸ ಅಂತ್ಯ

Most read

ಮರಾಠಾ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗೆ ಮನೋಜ ಜಾರಂಗೆ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದೆ. ಹಲವು ಬೇಡಿಕೆಗಳನ್ನು ಈಡೇರಿಸಲು ಶಿವಸೇನೆ-ಬಿಜೆಪಿ ನೇತೃತ್ವದ ಸರ್ಕಾರ ಒಪ್ಪಿಕೊಳ್ಳುವುದರೊಂದಿಗೆ ಸರ್ಕಾರ ಮತ್ತು ಮರಾಠಾ ಸಂಘಟನೆಗಳ ನಡುವಿನ ಸಂಘರ್ಷವೊಂದು ತಪ್ಪಿದಂತಾಗಿದೆ.

ಎಲ್ಲಾ ಮರಾಠಾ ಸಮುದಾಯಕ್ಕೆ ಕುಂಬಿ (ಓಬಿಸಿ) ಪ್ರಮಾಣಪತ್ರ ಮತ್ತು ಶಿಶುವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಉಚಿತ ಶಿಕ್ಷಣ ನೀಡಬೇಕು ಎಂಬುದು ಮನೋಜ ಪಾಟೀಲ ಅವರ ಬೇಡಿಕೆಯಾಗಿತ್ತು.

ಇತರ ಹಿಂದುಳಿದ ವರ್ಗಗಳ (OBC) ವರ್ಗದ ಅಡಿಯಲ್ಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಪಾಟೀಲ್ ನಿನ್ನೆಯಿಂದ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸರ್ಕಾರ ಬೇಡಿಕೆ ಒಪ್ಪಿಕೊಂಡಿರುವುದರಿಂದ ಸಮುದಾಯದಲ್ಲಿ ಇದುವರೆಗೆ ಪಡೆಯಲಾಗಿದ್ದ 37 ಲಕ್ಷ ಓಬಿಸಿ ಪ್ರಮಾಣ ಪತ್ರಗಳು 50 ಲಕ್ಷಕ್ಕೆ ಏರಲಿದೆ.

40ರ ಹರೆಯದ ಮನೋಜ್‌ ಜಾರಂಗೆ ಪಾಟೀಲ, ಮೀಸಲಾತಿ ಹೋರಾಟವನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿಸುತ್ತಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬೈನ ಆಜಾದ್ ಮೈದಾನಕ್ಕೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಸರ್ಕಾರ ಒಪ್ಪದಿದ್ದರೆ ನಾವೇನು ಮಾಡಬಹುದೆಂದು ತೋರಿಸುತ್ತೇವೆ ಎಂದು ಪಾಟೀಲ್ ಎಚ್ಚರಿಸಿದ್ದರು. ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಇಬ್ಬರು ಸಚಿವರು ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ಅವರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ಮರಾಠಾ ನಾಯಕ ಇಂದು ವಾಶಿಯಲ್ಲಿ ವಿಜಯಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಮರಾಠ ಮೀಸಲಾತಿಯನ್ನು ನೀಡುವಾಗ ಶೇ. 50 ಮೀಸಲಾತಿಯನ್ನು ಮೀರಲು ಯಾವುದೇ ಸಮರ್ಥ ಕಾರಣವಿಲ್ಲ ಎಂದು ಉಲ್ಲೇಖಿಸಿ, ಮೇ 5, 2021 ರಂದು ಸುಪ್ರೀಂ ಕೋರ್ಟ್ ಮರಾಠಾ ಸಮುದಾಯಕ್ಕೆ ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

More articles

Latest article