Thursday, July 25, 2024

ಬಿಜೆಪಿ ಸಂಸದನನ್ನು ಗೆಲ್ಲಿಸಿ ಎಂದ ಕಾಂಗ್ರೆಸ್ ಶಾಸಕ!

Most read

ಭಾರತೀಯ ಜನತಾ ಪಕ್ಷದ ಸಂಸದನನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಶಾಸಕ ಕರೆ ಕೊಡಲು ಸಾಧ್ಯವೇ? ಇದು ಸಾಧ್ಯವಾಗಿರುವುದು ಶಿವಮೊಗ್ಗದಲ್ಲಿ. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಮುಂದಿನ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರೇ ಗೆಲ್ಲಬೇಕಂತೆ.

ಹೌದು, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, 92 ವರ್ಷದ ವಯೋವೃದ್ಧ  ಶಾಮನೂರು ಶಿವಶಂಕರಪ್ಪ ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಬಿ.ವೈ ರಾಘವೇಂದ್ರ ಅವರನ್ನು ಹಾಡಿಹೊಗಳಿದರು. ಹೊಗಳಿದ್ದು ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕರೆ ನೀಡಿದರು.

ನೀರಿಗಿಂತ ರಕ್ತ ಮಂದವಾಗಿರುತ್ತದೆ ಎಂಬ ಮಾತೊಂದಿದೆ. ಸಮುದಾಯದ ಮೇಲಿನ ಪ್ರೀತಿಗೆ ಶಾಮನೂರು ಪಕ್ಷವನ್ನು ಮರೆತು ರಾಘವೇಂದ್ರ ಅವರನ್ನು ಬೆಂಬಲಿಸಿದರೇ ಎಂಬ ಮಾತುಗಳು ಈಗ ಕೇಳಿಬರುತ್ತಿದೆ.

ರಾಘವೇಂದ್ರರಂತ ಸಂಸದರನ್ನು ಪಡೆದ ನೀವೇ ಧನ್ಯರು. ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ನಿರಂತರ ಬೆನ್ನತ್ತಿ ಕೆಲಸ ಮಾಡುವ ಧೀಮಂತ ನಾಯಕ ಅವರು ಎಂದು ಶಾಮನೂರು ಗುಣಗಾನ ಮಾಡಿದರು.

ಒಳ್ಳೆಯ ವ್ಯಕ್ತಿಯನ್ನು  ಸಂಸದರಾಗಿ ಆಯ್ಕೆ ಮಾಡಿದ್ದೀರಿ.  2 ತಿಂಗಳಲ್ಲಿ ಬರುವ ಚುನಾವಣೆಗೆ ರಾಘವೇಂದ್ರ ಸ್ಪರ್ಧಿಸುತ್ತಾರೆ. ರಾಘವೇಂದ್ರ ಅವರಿಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ. ಕ್ಷೇತ್ರದ ಅಭಿವೃದ್ಧಿ ತೂಕ ಮಾಡಿ ಮತ್ತೆ ಅವರನ್ನು ಗೆಲ್ಲಿಸಿ. ರಾಘವೇಂದ್ರ ಗೆಲ್ಲಿಸುವ ದೊಡ್ಡ ಕರ್ತವ್ಯ ನಿಮ್ಮದಾಗಿದೆ ಎಂದು ಅವರು ಹೇಳಿದರು.

More articles

Latest article