Thursday, July 25, 2024

ಹೈದರಾಬಾದ್‌ನಲ್ಲಿ ರನ್‌ ಸುನಾಮಿ, 147 ಎಸೆತಗಳಲ್ಲಿ 300! ತನ್ಮಯ್‌ ಅಗರ್‌ ವಾಲ್‌ ಜಾಗತಿಕ ದಾಖಲೆ

Most read

252 ವರ್ಷಗಳ ಜಾಗತಿಕ ಕ್ರಿಕೆಟ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ 150ಕ್ಕೂ ಕಡಿಮೆ ಎಸೆತಗಳಲ್ಲಿ 300 ರನ್‌ ಬಾರಿಸಿದ ಮೊದಲ ಆಟಗಾರನೆಂಬ ಶ್ರೇಯಕ್ಕೆ ಹೈದರಾಬಾದ್‌ ಬ್ಯಾಟರ್‌ ತನ್ಮಯ್‌ ಅಗರ್‌ ವಾಲ್ ಪಾತ್ರರಾಗಿದ್ದಾರೆ.

ಅರುಣಾಚಲ ಪ್ರದೇಶ ತಂಡದ ವಿರುದ್ಧ ಹೈದರಾಬಾದ್‌ನ ಎನ್‌ಎಫ್‌ಸಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್‌ ತಂಡ ಹಲವು ದಾಖಲೆಗಳನ್ನು ನಿರ್ಮಿಸಿ ಬೀಗಿತು. ಕೇವಲ 48 ಓವರ್‌ ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 529 ರನ್‌ ಗಳಿಸಿದ ಹೈದರಾಬಾದ್‌ ತಂಡ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ತವಕದಲ್ಲಿದೆ.

ವಿಸ್ಡಮ್‌ ಅಲ್ಮಾನಾಕ್ ಪ್ರಕಾರ‌ 1772 ರಲ್ಲಿ ನಡೆದ ಮೊದಲ ದರ್ಜೆ ಕ್ರಿಕೆಟ್‌ನ ಮೊದಲ ಪಂದ್ಯದಿಂದ ಹಿಡಿದು ಇಲ್ಲಿಯವರೆಗೆ ತನ್ಮಯ್‌ ಅಗರ್‌ ವಾಲ್‌ ಅತಿವೇಗದ ತ್ರಿಶತಕ ಮೊದಲ ಸ್ಥಾನದಲ್ಲಿದೆ.

ಹೈದರಾಬಾದ್‌ನ ಎನ್‌ಎಫ್‌ಸಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಿನ್ನೆ ಆರಂಭವಾದ ಗ್ರೂಪ್‌ ಹಂತದ ರಣಜಿ ಪಂದ್ಯಾವಳಿಯ ಮೊದಲ ದಿನ, ಅರುಣಾಚಲ ಪ್ರದೇಶ ಬೌಲರ್‌ ಗಳು ದಿಕ್ಕೆಟ್ಟುಹೋದರು. ಒಂದೇ ದಿನ ಹೈದರಾಬಾದ್‌ ಗಳಿಸಿದ್ದು 529 ರನ್.‌ ಇದರಲ್ಲಿ ತನ್ಮಯ್‌ ಅಗರ್‌ವಾಲ್‌ ಗಳಿಸಿದ್ದು ಔಟಾಗದೇ 160 ಎಸೆತಗಳಲ್ಲಿ 323 ರನಗಳು! ಈ ಇನ್ನಿಂಗ್ಸ್‌ ನಲ್ಲಿ 33 ಬೌಂಡರಿಗಳು, 21 ಸಿಕ್ಸರ್‌ಗಳನ್ನು ಸಿಡಿಸಿರುವ ತನ್ಮಯ್‌ ಇಂದು ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ ರಣಜಿ ಪಂದ್ಯವೊಂದರಲ್ಲಿ ಒಂದೇ ದಿನದ ಆಟದಲ್ಲಿ 300 ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ತನ್ಮಯ್‌ ಪಾಲಾಗಿದೆ. ಜೊತೆಗೆ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಬಾರಿಸಿದ್ದ ಇಶಾನ್‌ ಕಿಶನ್‌ ಅವರ ದಾಖಲೆಯನ್ನೂ ಅವರು ಪುಡಿಗಟ್ಟಿದ್ದಾರೆ, ತನ್ಮಯ್‌ ರಣಜಿ ಪಂದ್ಯಗಳಲ್ಲಿ ಅತಿವೇಗದ ದ್ವಿಶತಕ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ. 123 ಎಸೆತಗಳಲ್ಲಿ ಬರೋಡ ವಿರುದ್ಧ ರವಿಶಾಸ್ತ್ರಿ ಗಳಿಸಿದ ವೇಗದ ದ್ವಿಶತಕ ಇದುವರೆಗಿನ ದಾಖಲೆಯಾಗಿತ್ತು. ತನ್ಮಯ್‌ ಇನ್ನೂರರ ಗಡಿ ದಾಟಲು ಕೇವಲ 119 ಎಸೆತಗಳನ್ನು ತೆಗೆದುಕೊಂಡರು.

ತನ್ಮಯ್‌ ಅವರ ಜೊತೆ ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿದಿದ್ದ ರಾಹುಲ್‌ ಸಿಂಗ್ ಸಹ ಆಕ್ರಮಣಕಾರಿಯಾಗಿ ಆಡಿ, ಕೇವಲ 105 ಎಸೆತಗಳಲ್ಲಿ 185 ರನ್‌ ಗಳಿಸಿ ಔಟಾದರು. ಅರುಣಾಚಲ ಪ್ರದೇಶ ತಂಡದ ನಾಯಕ ಎಂಟು ಬೌಲರ್‌ಗಳನ್ನು ಬಳಸಿಕೊಂಡರೂ ರನ್‌ ಪ್ರವಾಹ ತಡೆಯಲು ಸಾಧ್ಯವಾಗಲಿಲ್ಲ.

28 ವರ್ಷದ ಎಡಗೈ ಬ್ಯಾಟರ್‌ ತನ್ಮಯ್‌ ಹೈದರಾಬಾದ್‌ ತಂಡದ ನಾಯಕನೂ ಆಗಿದ್ದು, ಮೊದಲ ದರ್ಜೆ ಕ್ರಿಕೆಟ್‌ ನಲ್ಲಿ ಇದುವರೆಗೆ 8 ಶತಕ, 10 ಅರ್ಧಶತಕಗಳನ್ನು ಹೊಡೆದು, 2000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ.

More articles

Latest article