ಮರಾಠಿ ಪುಂಡರ ಹಲ್ಲೆ: ಬಸ್‌ ನಿರ್ವಾಹಕರ ಮೇಲೆ ಪೋಕ್ಸೊ ಪ್ರಕರಣ ದಾಖಲು; ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಕರವೇ

Most read

ಬೆಳಗಾವಿ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ ವಿಚಿತ್ರ ತಿರುವು ಪಡದುಕೊಂಡಿದೆ. ಮರಾಠಿ ಪುಂಡರ ಮೇಲೆ ಪ್ರಕಣ ದಾಖಲಾಗುತ್ತಿದ್ದಂತೆ ಬಸ್‌ ನಿರ್ವಾಹಕರ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಈ ವರ್ತನೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಕರವೇ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಎಂಇಎಸ್‌, ಶಿವಸೇನಾ ವಿರುದ್ಧ ಹೋರಾಟ ನಡೆಸುವುದರ ಜತೆಗೆ ಪೊಲೀಸರ ವಿರುದ್ಧವೂ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಮರಾಠಿಗರೊಂದಿಗೆ ಪ್ರತಿ ಬಾರಿ ಘರ್ಷಣೆ ನಡೆದಾಗಲೂ ಪೊಲೀಸರು ಸಂಧಾನ ಮಾಡಿ ಕಳುಹಿಸುತ್ತಿದ್ದಾರೆ. ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ.ಕೂಡಲೇ ನಿರ್ವಾಹಕರ ವಿರುದ್ಧ ದಾಖಲಿಸಿರುವ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸಬೇಕು. ತಂದೆಯ ವಯಸ್ಸಿನ ಬಸ್‌ ನಿರ್ವಾಹಕರು ಬಸ್‌ ನಲ್ಲಿ ಈ ರೀತಿ ನಡೆದುಕೊಳ್ಳಲು. ಸಾಧ್ಯವೇ ಇಲ್ಲ. ನಿರ್ವಾಹಕರು ಮತ್ತು ಚಾಲಕರ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರನ್ನು ಬಂಧಿಸಿರುವುದನ್ನು ಬಿಟ್ಟು ನಿರ್ವಾಹಕರ ಮೇಲೆಯೇ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಒಂದು ವೇಳೆ ಪೋಕ್ಸೊ ಪ್ರಕರಣವನ್ನು ಹಿಂಪಡೆಯದಿದ್ದರೆ ಮಾರಿಹಾಳ ಪೊಲೀಸ್ ಠಾಣೆಯ ಮೇಲೆ ಮತ್ತಿಗೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬಂದ್‌ ಗೆ ಕರೆನೀಡಲೂ ಹಿಂಜರಿಯುವುದಿಲ್ಲ ಎಂದೂ ದೀಪಕ್ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.

ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕರ ಹಾಗೂ ಚಾಲಕರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದ ಘಟನೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ನಿನ್ನೆ ನಡೆದಿತ್ತು. ಬಸ್‌ನ ನಿರ್ವಾಹಕ 51 ವರ್ಷದ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಎಂಬುವರ ಮೇಲೆ ಮರಾಠಿ ಪುಂಡ ಯುವಕರು ಹಲ್ಲೆ ಮಾಡಿದ್ದಾರೆ. ಗಾಯಗೊಂಡ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ವಿವರಿಸಿದ ಮಹಾದೇವ ಅವರು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಈ ಪ್ರಕರಣ ಸಂಬಂಧ ಕೆಲವು ಆರೋಪಿಗಳರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಇವರೆಲ್ಲರೂ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದವರು ಎಂದು ತಿಳಿದುಬಂದಿದೆ. ಬೆಳಗಾವಿ ಹಾಗೂ ಸುಳೇಭಾವಿ ಮಾರ್ಗ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಲಾಟೆ ನಡೆದಿದೆ.

ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಒಬ್ಬ ಯುವಕ ಹಾಗೂ ಯುವತಿ ಜತೆಯಾಗಿ ಬಸ್ ಹತ್ತಿದರು. ನಾನು ಟಿಕೆಟ್ ಪಡೆಯಿರಿ ಎಂದು ಕನ್ನಡದಲ್ಲಿ ಕೇಳಿದೆ. ಯುವತಿ ಆಧಾರ್ ಕಾರ್ಡ್ ತೋರಿಸಿ ಎರಡು ಟಿಕೆಟ್ ನೀಡುವಂತೆ ಕೇಳಿದರು. ನಿಮಗೆ ಮಾತ್ರ ಉಚಿತ ಟಿಕೆಟ್ ನೀಡಲಾಗುವುದು, ಯುವಕ ದುಡ್ಡು ಕೊಟ್ಟು ಟಿಕೆಟ್ ಪಡೆಯಬೇಕು ಎಂದು ನಾನು ತಿಳಿಸಿದೆ. ಇದರಿಂದ ಸಿಟ್ಟಿಗೆದ್ದ ಯುವಕ ಯುವತಿ ಇಬ್ಬರೂ ಮರಾಠಿಯಲ್ಲಿ ನಿಂದಿಸಿದರು. ಕನ್ನಡ ಏಕೆ ಬೊಗಳುತ್ತೀ, ಮರಾಠಿ ಕಲಿತುಕೋ ಎಂದು ಬೆದರಿಕೆ ಹಾಕಿದರು ಎಂದು ಮಹಾದೇವ ತಿಳಿಸಿದ್ದಾರೆ.

ನಮ್ಮೂರು ತಲುಪಿದಾಗ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಮರಾಠಿಯಲ್ಲಿ ಬೆದರಿಕೆ ಹಾಕಿದ ಯುವಕ, ಫೋನ್ ಮಾಡಿ ಯುವಕರನ್ನು ಕರೆಸಿದ್ದ. ಬಸ್ ಸಣ್ಣಬಾಳೇಕುಂದ್ರಿ ಗ್ರಾಮಕ್ಕೆ ಬಂದಾಗ ನೂರಾರು ಜನ ಬಸ್ಸಿಗೆ ಮುತ್ತಿಗೆ ಹಾಕಿದರು. 20ಕ್ಕೂ ಹೆಚ್ಚು ಯುವಕರು ಬಸ್ ಹತ್ತಿ ನನ್ನ ಮೇಲೆ ಹಲ್ಲೆ ನಡೆಸಲು ಮುಂದದರು. ತಲೆ, ಬೆನ್ನು, ಕಿಬ್ಬೊಟ್ಟೆ, ಭುಜಕ್ಕೆ ಹೊಡೆದು ಕಾಲಿನಿಂದ ಒದ್ದರು. ಬಸ್ ಚಾಲಕರಿಗೂ ಕಪಾಳು ಹಾಗೂ ಹೊಟ್ಟೆಗೆ ಜೋರಾಗಿ ಹೊಡೆದರು. ಹೆದರಿ ಅಲ್ಲಿಂದ ಪಾರಾಗಿ ಬಂದೆವು ಎಂದು ಹೇಳಿದರು. ಮಾರಿಹಾಳ ಠಾಣೆಗೆ ದೂರು ದಾಖಲಿಸಲು ಹೋದರೆ ಪೊಲೀಸರು ರಾಜೀ ಸಂಧಾನಕ್ಕೆ ಯತ್ನಿಸಿದರು ಎಂದು ಚಾಲಕ ಆರೋಪಿಸಿದ್ದಾರೆ.
ಡಿಸಿಪಿ ರೋಹನ್ ಜಗದೀಶ್ ಆಸ್ಪತ್ರೆಗೆ ಭೇಟಿ ನೀಡಿ ಚಾಲಕ ಹಾಗೂ ನಿರ್ವಾಹಕರಿಂದ ಮಾಹಿತಿ ಸಂಗ್ರಹಿಸಿ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಹಾಗೆಯೇ ಪೊಲೀಸರು ರಾಜೀ ಸಂಧಾನಕ್ಕೆ ಯತ್ನಿಸಿದ ಆರೋಪದ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

More articles

Latest article