ಭಾರತ ಬ್ಯಾಟ್ಸ್ ಮನ್ ಗಳ ಸಂಘಟಿತ ಆಕ್ರಮಣದ ಎದುರು ಇಂಗ್ಲಿಷ್ ಆಟಗಾರರ ಕೈಚಳಕ ನಡೆಯಲಿಲ್ಲ. 246ರನ್ ಗಳ ಅಲ್ಪಮೊತ್ತದೆದರು ದೊಡ್ಡ ಸ್ಕೋರ್ ನಿಲ್ಲಿಸಿ ಪಂದ್ಯದಮೇಲೆ ಹಿಡಿತ ಸಾಧಿಸುವ ಭಾರತ ತಂಡದ ಯೋಜನೆ ಸಫಲವಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಈಗಾಗಲೇ 175ರನ್ ಗಳ ಮುನ್ನಡೆ ಸಾಧಿಸಿರುವ ಭಾರತ ನಾಳೆ ಅದನ್ನು ಇನ್ನಷ್ಟು ಬೆಳೆಸಲು ವಿಕೆಟ್ ಕಾಯ್ದಿರಿಸಿಕೊಂಡಿದೆ.
ಟೀ ವಿರಾಮದ ನಂತರ ಭಾರತದ ಬೌಲಿಂಗ್ ಆಲ್ ರೌಂಡರ್ ರವೀಂದ್ರ ಜಡೇಜಾ ಮಿಂಚಿದರು. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಎಷ್ಟೇ ಬೌಲಿಂಗ್ ಬದಲಾವಣೆ ಮಾಡಿದರೂ ಜಡೇಜಾ ಕದಲಲಿಲ್ಲ. ದುರ್ಬಲ ಚೆಂಡುಗಳನ್ನು ದಂಡಿಸುತ್ತ ಸಾಗಿದ ಜಡೇಜಾ ದಿನದ ಅಂತ್ಯಕ್ಕೆ ಔಟಾಗದೇ 81 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಮತ್ತೊಬ್ಬ ಬೌಲಿಂಗ್ ಆಲ್ ರೌಂಡರ್ ಅಕ್ಷರ್ ಪಟೇಲ್ ಹಿರಿಯ ಆಟಗಾರನಿಗೆ ಸಮರ್ಥ ಜೊತೆಗಾರಿಕೆ ನೀಡಿದ್ದು, 35 ರನ್ ಗಳಿಸಿ ಆಡುತ್ತಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಗಳ ಸುದೀರ್ಘ ಸರಣಿಯ ಮೊದಲ ಟೆಸ್ಟ್ ನ ಎರಡನೇ ದಿನವಾದ ಇಂದು ಭಾರತ ಇನ್ನಿಂಗ್ಸ್ ಮುನ್ನಡೆ ಪಡೆಯಲು ಸಫಲವಾಯಿತು. ಟೀ ವಿರಾಮದ ವೇಳೆಗೆ ಐದು ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿದ್ದ ಭಾರತ ಆಟ ಮುಂದುವರೆಸಿ ದಿನದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿದೆ.
ಇಂದು ಎಲ್ಲ ಮೂರು ಸೆಷನ್ ಗಳಲ್ಲೂ ಎರಡೆರಡು ವಿಕೆಟ್ ಪಡೆಯಲು ಇಂಗ್ಲಿಷ್ ಬೌಲರ್ ಗಳು ಸಫಲರಾದರು. ಆದರೆ ರವಿಚಂದ್ರನ್ ಅಶ್ವಿನ್ ಹೊರತಾಗಿ ಯಾರೂ ಸುಲಭವಾಗಿ ವಿಕೆಟ್ ಒಪ್ಪಿಸಲಿಲ್ಲ. ಹೀಗಾಗಿ ಸ್ಕೋರ್ ಬೋರ್ಡ್ ಚಲಿಸುತ್ತಲೇ ಇತ್ತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆ.ಎಸ್.ಭರತ್ 41 ರನ್ ಗಳಿಸಿ ಔಟಾದರೆ, ಆರ್ ಅಶ್ವಿನ್ 1 ರನ್ ಗಳಿಸಿ ರನ್ ಔಟಾದರು.
ಇಂದು ಆಟ ಆರಂಭವಾಗುತ್ತಿದ್ದಂತೆ ನಿನ್ನೆಯ ಹೀರೋ ಯಶಸ್ವಿ ಜೈಸ್ವಾಲ್ ಶತಕ ದಾಖಲಿಸಲು ಸಾಧ್ಯವಾಗದೇ ನಿರಾಶೆ ಅನುಭವಿಸಿದರು. ಜೈಸ್ವಾಲ್ ವೈಯಕ್ತಿಕ ಮೊತ್ತ 80 ರನ್ ಆಗುತ್ತಿದ್ದಂತೆ ಜೋ ರೂಟ್ ಬೌಲಿಂಗ್ ನಲ್ಲಿ ಅವರಿಗೇ ಕ್ಯಾಚ್ ನೀಡಿ ಔಟಾದರು. 74 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಇನ್ನಿಂಗ್ಸ್ ನಲ್ಲಿ ಮೂರು ಭರ್ಜರಿ ಸಿಕ್ಸರ್ ಮತ್ತು ಹತ್ತು ಮನಮೋಹಕ ಬೌಂಡರಿಗಳು ಇದ್ದವು.
ರನ್ ಗಳಿಸಲು ಪರದಾಡುತ್ತಿದ್ದ ಶುಭಮನ್ ಗಿಲ್ ರನ್ ಗತಿ ಏರಿಸುವ ಸಾಹಸಕ್ಕೆ ಹೋಗಿ ಔಟಾದರು. ನಿನ್ನೆಯಿಂದಲೂ ಮಂದಗತಿಯಲ್ಲೇ ಬ್ಯಾಟಿಂಗ್ ಮಾಡುತ್ತಿದ್ದ ಶುಭಮನ್ ಗಿಲ್ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. ಇಂಗ್ಲೆಂಡ್ ಸ್ಪಿನರ್ ಗಳ ಎದುರು ತಿಣುಕಾಡುತ್ತಿದ್ದ ಗಿಲ್ 23 ರನ್ ಗಳಿಸಿದ್ದಾಗ ಟಾಮ್ ಹಾರ್ಟ್ಲೀ ಅವರ ಬೌಲಿಂಗ್ ನಲ್ಲಿ ಬೆನ್ ಡಕೆಟ್ ಅವರಿಗೆ ಕ್ಯಾಚ್ ನೀಡಿ ಔಟಾಗಿ ನಿರಾಶೆ ಮೂಡಿಸಿದರು.
ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಐಯ್ಯರ್ ಭಾರತಕ್ಕೆ ಆಸರೆಯಾದರು. ಆಕ್ರಮಣಕಾರಿಯಾಗಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಬೌಲಿಂಗ್ ನಲ್ಲಿ ಹಾರ್ಟ್ಲೀ ಅವರಿಗೆ ಕ್ಯಾಚಿತ್ತು ಔಟಾದರು.
ಆಕ್ರಮಣಕಾರಿ ಹೊಡೆತಗಳು, ಆಕರ್ಷಕ ಡಿಫೆನ್ಸ್ ಗಳ ನಡುವೆ ರನ್ ಮೇಲೆ ರನ್ ಪೇರಿಸುತ್ತ ಹೋದ ಕನ್ನಡಿಗ ಕೆ.ಎಲ್.ರಾಹುಲ್ ಭಾರತ ತಂಡದ ಬೃಹತ್ ಮೊತ್ತ ಪೇರಿಸುವ ಕನಸಿಗೆ ಜೀವ ತುಂಬಿದರು. ಬೆಳಿಗ್ಗೆ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರ ವಿಕೆಟ್ ಪತನದಿಂದ ಆತಂಕಕ್ಕೆ ಸಿಲುಕಿದ್ದ ಭಾರತ ತಂಡದ ಪಾಳಯ ಕೆ.ಎಲ್.ರಾಹುಲ್ ಆಟದಿಂದ ನಿರಾಳವಾಯಿತು. ಆದರೆ 86 ರನ್ ಗಳಿಸಿದ್ದಾಗ ಕೆ.ಎಲ್.ರಾಹುಲ್ ಟಾಮ್ ಹಾರ್ಟ್ಲೀ ಅವರ ಬೌಲಿಂಗ್ ನಲ್ಲಿ ರೆಹಾನ್ ಅಹ್ಮದ್ ಅವರಿಗೆ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಶತಕ ವಂಚಿತರಾದರು.
ನಿನ್ನೆ ಭಾರತದ ಸ್ಪಿನ್ ತ್ರಿವಳಿಗಳ ಮಾರಕ ಬೌಲಿಂಗ್ ಗೆ ನಲುಗಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (70) ಹೋರಾಟದ ನಡುವೆಯೂ ಕೇವಲ 246 ರನ್ ಗಳಿಗೆ ಆಲ್ ಔಟ್ ಆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಸ್ಪಿನ್ ಮೋಡಿಗೆ ಸಿಲುಕಿ ಆಲ್ ಔಟ್ ಆಯಿತು. ರವಿಚಂದ್ರನ್ ಅಶ್ವಿನ್ 3, ರವೀಂದ್ರ ಜಡೇಜಾ 3 ಹಾಗು ಅಕ್ಷರ್ ಪಟೇಲ್ ಮತ್ತು ಜಸ್ಪೀತ್ ಬುಮ್ರಾ 2 ವಿಕೆಟ್ ಪಡೆದುಕೊಂಡರು.ಇಂಗ್ಲೆಂಡ್ ಪರವಾಗಿ ನಾಯಕ ಬೆನ್ ಸ್ಟೋಕ್ಸ್ 70 ರನ್ ಗಳಿಸಿದರೆ, ಜಾನಿ ಬೇರ್ ಸ್ಟೋ 37, ಡಕ್ಕೆಟ್ 35 ರನ್ ಗಳಿಸಿದರು.
ಸ್ಕೋರ್:
ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್: 246ಕ್ಕೆ ಆಲ್ ಔಟ್
ಭಾರತ ಮೊದಲನೇ ಇನ್ನಿಂಗ್ಸ್: 421ಕ್ಕೆ 7