ಬೆಳಗಾವಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿಷಯವಾಗಿ ನಾಡವಿರೋಧಿ ಹೇಳಿಕೆ ನೀಡುವ ಜೊತೆಗೆ “ನ್ಯಾಯಾಲಯ ಎಂದರೆ ಸಮಸ್ಯೆಯನ್ನು ಗೂಟಕ್ಕೆ ತೂಗು ಹಾಕುವುದಾಗಬಾರದು” ಎಂದು ನ್ಯಾಯಾಲಯ ನಿಂದನೆ ಮಾಡಿರುವ ಅಥಣಿ ತಾಲೂಕಿನವರಾದ ಮರಾಠಿ ಸಾಹಿತಿ ಉತ್ತಮ ಕಾಂಬಳೆ ಅವರನ್ನು ರಾಜ್ಯ ಸರಕಾರ 2022-23ನೇ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಗಡಿಜಿಲ್ಲೆ ಬೆಳಗಾವಿಯ ಸಾಹಿತ್ಯಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.
ಅಖಿಲಭಾರತ ಮರಾಠಿ ಸಾಹಿತ್ಯ ಸಮ್ಮೇಳನ – 2011 ರ ಸಮ್ಮೇಳನಾಧ್ಯಕ್ಷರಾಗಿದ್ದ ಮರಾಠಿ ಸಾಹಿತಿ ಉತ್ತಮ ಕಾಂಬಳೆ ಅವರು, “ಮಹಾರಾಷ್ಟ್ರ – ಕರ್ನಾಟಕ ಗಡಿ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗಡಿ ತಂಟೆ ಶೀಘ್ರ ಬಗೆಹರಿಯುವ ಮೂಲಕ ಲಕ್ಷಾಂತರ ಮರಾಠಿ ಬಂಧುಗಳಿಗೆ ನ್ಯಾಯ ದೊರಕಬೇಕೆನ್ನುವುದು ನನ್ನ ಆಗ್ರಹ. ಕಳೆದ 60 ವರ್ಷಗಳಿಂದ ಸಮ್ಮೇಳನದ ವೇದಿಕೆಯಿಂದ ಬೇಡಿಕೆ ಇಡಲಾಗುತ್ತಿದೆ. ಬಹುದೊಡ್ಡ ಘರ್ಜನೆಯ ಮೂಲಕ ಠರಾವನ್ನು ಪಾಸು ಮಾಡಲಾಗುತ್ತದೆ. ಆದರೆ ಪ್ರತ್ಯಕ್ಷವಾಗಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಕುರಿತು ಹಿಂದಿದ್ದ ರಾಜಕೀಯ ಇಚ್ಛಾಶಕ್ತಿ ಕಡಿಮೆಯಾಗಿರುವುದು ದುರ್ದೈವ. ಈ ಬಗ್ಗೆ ರಾಜಕೀಯ ಹಾಗೂ ಆಡಳಿತ ಶಕ್ತಿಯ ಮೇಲೆ ಒತ್ತಡ ಹೇರಬೇಕಾಗಿದೆ. ಜೊತೆಗೆ ಈ ಅನ್ಯಾಯದ ಕುರಿತು ಮಹಾಕಾದಂಬರಿಗಳು, ಮಹಾನಾಟಕಗಳು ಮತ್ತು ಸಿನಿಮಾಗಳು ಹುಟ್ಟಬೇಕು. ಮರಾಠಿ ಬಂಧುಗಳ ಸಂಘರ್ಷಕ್ಕಾಗಿ ಪೊವಾಡಾ(ಜಾನಪದ ಗೀತೆ)ಗಳು ಸಹ ಬರಬೇಕು. ಈ ಸಮಸ್ಯೆಯಲ್ಲಿ ನಾನು ಸ್ವತಃ ಕರಕಲಾಗಿ ಸಹಿಸಿಕೊಂಡಿದ್ದೇನೆ ಮತ್ತು ಕಂಡಿದ್ದೇನೆ. ಗಡಿ ಭಾಗದ ಮರಾಠಿ ಭಾಷೆ ಮತ್ತು ಮರಾಠಿ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮರಾಠಿ ಶಾಲೆಗಳು ಮುಚ್ಚುತ್ತಿವೆ. ಹೀಗಾದರೆ ಮರಾಠಿ ಭಾಷೆಗೆ ಅಂಟಿಕೊಂಡವರ ಭವಿಷ್ಯವೇನು? ಮರಾಠಿ ಸಿನೆಮಾ, ನಾಟಕ, ಕಲೆ ಇವುಗಳೆಲ್ಲವೂ ಇಲ್ಲಿ ಉಸಿರುಗಟ್ಟುತ್ತಿವೆ. ಇದನ್ನು ತಡೆಯಲು ಬಹಳಷ್ಟು ಯತ್ನಗಳು ನಡೆಯಬೇಕು.
ಹೀಗೆ ಮುಂದುವರಿದು ನ್ಯಾಯಾಲಯದಲ್ಲಿರುವ ಗಡಿ ತಂಟೆಯ ಕುರಿತು, “ಈ ಸಮಸ್ಯೆ ನ್ಯಾಯಾಲಯದಲ್ಲಿದೆ ಎಂಬ ತ್ತರವನ್ನು ನಾವು ಇನ್ನೆಷ್ಟು ಕಾಲ ಹೇಳುತ್ತಿರಬೇಕು? ನ್ಯಾಯಾಲಯ ದರೆ ಸಮಸ್ಯೆಗಳನ್ನು ಗೂಟಕ್ಕೆ ತೂಗು ಹಾಕುವುದಾಗಬಾರದು. ನ್ಯಾಯಾಲಯದ ಹೊರಗೂ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯಬೇಕು” ಎಂಬ ನ್ಯಾಯಾಲಯ ನಿಂದನಾತ್ಮಕ ಹೇಳಿಕೆಗಳನ್ನು ಸಮ್ಮೇಳನದಲ್ಲಿ ನೀಡಿದ್ದಾರೆ.
ಹೀಗೆ, ಗಡಿ ವಿಷಯವಾಗಿ ನಾಡವಿರೋಧಿಯಾಗಿ ಒಂದು ಸಮ್ಮೇಳನದಲ್ಲಿ ಮಾತನಾಡಿರುವ ಉತ್ತಮ ಕಾಂಬಳೆ ಅವರನ್ನು ರಾಜ್ಯ ಸರಕಾರದ ಒಂದು ಶ್ರೇಷ್ಟ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕನ್ನಡಿಗರ ದುರ್ದೈವ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹರಿದಾಡುತ್ತಿವೆ.