ಅಗ್ನಿ ದುರಂತ; ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಲಾಗಿದ್ದ 150 ವಾಹನಗಳು ಭಸ್ಮ

Most read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದ ಶ್ರೀರಾಂಪುದ ಜಕ್ಕರಾಯನಕೆರೆ ಮೈದಾನದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಡೀ  ಬೆಂಗಳೂರಿನಲ್ಲಿ ಕ್ರಿಮಿನಲ್‌ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಲಾಗುತ್ತದೆ. ಬುಧವಾರ ಬೆಳಗ್ಗೆ 10.55 ಕ್ಕ ಸಂಭವಿಸಿದ ಬೆಂಕಿ ದುರಂತದಲ್ಲಿ 130 ದ್ವಿಚಕ್ರ ವಾಹನಗಳು, 10 ಕಾರು ಮತ್ತು 10 ಆಟೋರಿಕ್ಷಾಗಳು ಸುಟ್ಟು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ವರಿತಗತಿಯಲ್ಲಿ ಹತ್ತಿಕೊಂಡಿದ್ದರಿಂದ ಬೆಂಕಿ ವೇಗವಾಗಿ ಹರಡಿದೆ. ಅಗ್ನಿಶಾಮಕದಳದ ವಾಹನಗಳು ಸುಮಾರು ಎರಡೂವರೆ ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಶ್ರಮಿಸಿವೆ. ಶ್ರೀರಾಂಪುರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಪಕ್ಕದಲ್ಲೇ ಇದ್ದ ಒಣಹುಲ್ಲಿನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಊಹಿಸಲಾಗಿದೆ. ಯಾರೋ ಬೀಡಿ ಸಿಗರೇಟ್‌ ಹತ್ತಿಸಿಕೊಂಡು ಬೆಂಕಿ ಕಡ್ಡಿಯನ್ನು ಎಸೆದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಊಹಿಸಿದ್ದಾರೆ.

ಈ ಮೈದಾನದಲ್ಲಿ 2016 ರಿಂದೀಚೆಯಿಂದ ಜಪ್ತಿ ಮಾಡಲಾದ 10 ಸಾವಿರಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. ಬೆಂಗಳೂರಿನ ಎಲ್ಲ ಪೊಲೀಸ್‌ ಠಾಣೆಗಳೂ ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು  ಈ ಪಾರ್ಕಿಂಗ್‌ ಸ್ಥಳಕ್ಕೆ ಕಳುಹಿಸುತ್ತವೆ. ಈ ಸ್ಥಳದಲ್ಲಿ ಕೆಲವು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ನಿಯೋಜಿಸಲಾಗಿರುತ್ತದೆ. ಬೆಂಕಿ ಹೊತ್ತಿಕೊಂಡು ಹೊಗೆಯಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಉದಾಸೀನ ಮಾಡಿದ್ದಲ್ಲಿ ಎಲ್ಲ 10 ಸಾವಿರ ವಾಹನಗಳೂ ಬೆಂಕಿಗೆ ಆಹುತಿಯಾಗುವ ಸಂಭವವಿತ್ತು. ಜತೆಗೆ ಅನೇಕ ವಾಹನಗಳ ಟ್ಯಾಂಕರ್‌ ನಲ್ಲಿ ಇಂಧನವಿದ್ದು ಬೆಂಕಿ ವೇಗವಾಗಿ ಹರಡುವ ಸಾಧ್ಯತೆಗಳೂ ಇದ್ದವು ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

More articles

Latest article