ಮಹಿಳೆ ಸೇರಿ 7 ಆರೋಪಿಗಳ ಬಂಧನ; ರೂ. 37.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

Most read

ಬೆಂಗಳೂರು: ಮನೆ ಕಳವು ಮತ್ತು ಸರ ಅಪಹರಣ ಮಾಡುತ್ತಿದ್ದ ಮಹಿಳೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿರುವ ಕೊಡಿಗೇಹಳ್ಳಿ ಪೊಲೀಸರು ರೂ. 37.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು 6 ಮಂದಿ ಆರೋಪಿಗಳಿಂದ 28.50 ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ, ಕುಮಾರಸ್ವಾಮಿ ಲೇಔಟ್ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿ 9 ಲಕ್ಷ ಮೌಲ್ಯದ 125ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.


ಕೊಡಿಗೇಹಳ್ಳಿಯ ನಿವಾಸಿಯೊಬ್ಬರು ಕುಟುಂಬ ಸಮೇತ ಕಳೆದ ವರ್ಷ ಮಾರ್ಚ್ 30 ರಂದು ಹೊರಹೋಗಿ ಮರಳಿ ಬರುವಷ್ಟರಲ್ಲಿ ಮುಂಬಾಗಿಲನ್ನು ಹೊಡೆದು, ಕೊಠಡಿಯ ಬೀರುವಿನಲ್ಲಿಟ್ಟಿದ್ದ 30 ಗ್ರಾಂ ಚಿನ್ನಾಭರಣ ಹಾಗೂ 2 ಬೆಳ್ಳಿಯ ದೀಪಗಳನ್ನು ಅಪರಿಚಿತರು ಕಳವು ಮಾಡಿದ್ದರು. ಸಹಕಾರನಗರದಲ್ಲಿರುವ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುತ್ತಿದ್ದ ಮಹಿಳೆಯೊಬ್ಬರ 30 ಗ್ರಾಂ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದರು. ಈ ಎರಡು ಪ್ರಕರಣದ ತನಿಖೆಯನ್ನು ಕೈಗೊಂಡು ಚಿಂತಾಮಣಿ ಸರ್ಕಲ್ ಬಳಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇತರೆ ಐವರು ಸಹಚರರೊಡನೆ ಸೇರಿ ಮನೆ ಕಳವು ಮಾಡಿರುವುದನ್ನು ತಿಳಿಸಿದ್ದಾನೆ.


ಆತ ನೀಡಿದ ಮಾಹಿತಿ ಮೇರೆಗೆ ಆಲಿ ಸಿರಾಜ್, ಸಾಧಿಕ್ ರಫೀಕ್, ಅಬ್ಬಾಸಾಲಿ, ಅಬೂತರಬ್, ತಬರೇಜ್ ಆಲಿ, ಹಾಗೂ ಮಾದೂಷ ಎಂಬುವರನ್ನು  ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಕೊಡಿಗೇಹಳ್ಳಿಯ 5 ಮನೆಕಳವು 1 ಸರ ಅಪಹರಣ, ಬಾಗಲೂರು, ಅಮೃತಹಳ್ಳಿ, ಸಂಜಯ್‌ನಗರ, ಆರ್.ಟಿ.ನಗರ, ವೈಟ್‌ಫೀಲ್ಡ್, ಕಾಡುಗೋಡಿ, ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ತಲಾ ಒಂದು ಸರ ಅಪಹರಣ ಸೇರಿದಂತೆ ಒಟ್ಟು13 ಪ್ರಕರಣಗಳು ಪತ್ತೆಯಾಗಿವೆ.


ಮಹಿಳೆ ಬಂಧನ:
ಪ್ರಗತಿಪುರ ಬಡಾವಣೆಯ ವಾಸಿಯೊಬ್ಬರು ಬನಶಂಕರಿ ದೇವಸ್ಥಾನದಲ್ಲಿ ನಮಸ್ಕಾರ ಹಾಕಿ, ಎದ್ದು ನೋಡುವಷ್ಟರಲ್ಲಿ ಕತ್ತಿನಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದ ಸುಭದ್ರ ಎಂಬ ಮಹಿಳೆಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.  ಈಕೆಯಿಂದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ. ಆಕೆಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಮತ್ತೆರಡು ಚಿನ್ನದ ಸರಗಳನ್ನು ಕಳವು ಮಾಡಿ ಸೇಲಂ ಜಿಲ್ಲೆಯಲ್ಲಿರುವ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದಾಳೆ. ಹೀಗೆ ಈಕೆಯಿಂದ ರೂ. 9 ಲಕ್ಷ ಮೌಲ್ಯದ 125 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

More articles

Latest article