ಬೆಂಗಳೂರು: ರಾಜ್ಯದಲ್ಲಿ ಗೋವುಗಳ ಮೇಲಿನ ಹಿಂಸೆ ಮತ್ತು ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಗೋಹತ್ಯೆ ಹಾಗೂ ಗೋಹಿಂಸೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಮತ್ತೊಮೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ? ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಎಂಬ ಆಯಾಮಗಳ ಹಿನ್ನೆಲೆಯಲ್ಲೂ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಪರಪ್ಪನ ಆಗ್ರಹಾರ ಕಾರಾಗೃಹ ವಿಭಜನೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಜಿಸುವ ಯಾವುದೇ ಪ್ರಸ್ತಾವ ಸಧ್ಯಕ್ಕೆ ಸರ್ಕಾರದ ಮುಂದಿಲ್ಲ. ಆದರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು. ಬಹಳ ವರ್ಷಗಳಿಂದ ಬಂಧೀಖಾನೆ ಇಲಾಖೆಗೆ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.