ಧಾರವಾಡ: ಮನೆ ಕಳವು ಪ್ರಕರಣದ ಆರೋಪಿ, ಆಂಧ್ರದ ಕರ್ನೂಲ್ ಮೂಲದ ಕುಖ್ಯಾತ ಪಾಲಾ ವೆಂಕಟೇಶ್ವರರಾವ್ ನ ಎರಡೂ ಕಾಲುಗಳಿಗೆ ಧಾರವಾಡದ ವಿದ್ಯಾಗಿರಿ ಪೋಲೀಸರು ಇಂದು ಬೆಳಗ್ಗೆ ಗುಂಡು ಹೊಡೆದಿದ್ದಾರೆ. ಧಾರವಾಡದ ನವಲೂರಿನ ಮನೆಯೊಂದಲ್ಲಿ ಕಳ್ಳತನ ಮಾಡಿದ್ದ ಪಾಲಾನನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಪಿಎಸ್ಐ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ಕದಂ ಎಂಬುವರ ಮನೆ ಬಾಗಿಲಿಗೆ ಕಲ್ಲುಗಳಿಂದ ಬಾಗಿಲು ಮುರಿದು ಮನೆಯಲ್ಲಿದ್ದ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಿ ಪರಾರಿಯಾಗಿದ್ದರು. ವಿದ್ಯಾಗಿರಿ ಠಾಣೆ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳ್ಳತನದಲ್ಲಿ ಆಂಧ್ರಪ್ರದೇಶದ ಕರ್ನೂಲ್ನ ಚಡ್ಡಿ ಗ್ಯಾಂಗ್ ಕೈವಾಡ ಇರುವುದು ತಿಳಿದು ಬಂದಿತ್ತು.
ಮೂಲತಃ ಆಂದ್ರಪ್ರದೇಶದ ಪಾಲಾ ವೆಂಕಟೇಶ್ವರ ರಾವ್ 80 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾನೆ. ಐದು ರಾಜ್ಯಗಳ ಪೊಲೀಸರು ಇವನಿಗಾಗಿ ಹುಡುಕಾಟ ನಡೆಸಿದ್ದರು. ಸಧ್ಯ ಈತ ಈಗ ಪೊಲೀಸರ ವಶದಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಆ ವೇಳೆ ಆತ್ಮರಕ್ಷಣೆಗಾಗಿ ಪಿ.ಎಸ್.ಐ ಪ್ರಮೋದ್ ಪಾಲಾ ವೆಂಕಟೇಶ್ವರ ರಾವ್ ಮೇಲೆ ಗುಂಡು ಹಾರಿಸಿದ್ದರು. ಪಿ.ಎಸ್.ಐ ಪ್ರಮೋದ ಸೇರಿದಂತೆ ಓರ್ವ ಪೊಲೀಸ್ ಕಾನ್ ಸ್ಟೇಬಲ್ಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಆಯುಕ್ತ ಎನ್ .ಶಶಿಕುಮಾರ್ ಭೇಟಿ ನೀಡಿ ಇವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಚಡ್ಡಿ ಗ್ಯಾಂಗ್ ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿದ್ದು, ತನಿಖೆಯಿಂದ ಎಷ್ಟು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರಬಹುದು ಎನ್ನುವ ಸತ್ಯ ತಿಳಿದು ಬರಬೇಕಿದೆ.