ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಪ್ರಕರಣ ಮುಗಿದುಹೋದ ಅಧ್ಯಾಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿದ್ದೇವೆ. ಸದನವನ್ನು ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿದೆ. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಎಂದು ದೂರು ಸಲ್ಲಿಸಿದರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅವರಿಗೆ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಎಫ್ಐಆರ್ ಆಗಿದೆ. ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮ್ಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದರೂ ಕಳುಹಿಸಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.
ಈ ಮಧ್ಯೆ ಬೆಳಗಾವಿ ಸುವರ್ಣಸೌಧದಲ್ಲಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಮಂದಿ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಸ್ವಿ ಸಂಕನೂರ ಮತ್ತು ಕಿಶೋರ್ ಬಿಆರ್ ಬೆಂಗಳೂರಿನ ವಿಧಾನಪರಿಷರ್ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 189(2), 191(2), 126(2), 352, 351(4) ಕಲಂ ಹಾಗೂ 190ರ ಅಡಿ ದೂರು ಎಫ್ಐಆರ್ ದಾಖಲಿಸಿದ್ದಾರೆ.