ದುರಂತವೆಂದರೆ ಆಹಾರ ವಿವಾದದ ಕೇಂದ್ರವಾಗಬಾರದು. ಆದರೆ ನಮ್ಮ ದೇಶದಲ್ಲಿ ಆಹಾರ ರಾಜಕೀಯದ ಅಸ್ತ್ರವಾಗಿ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತದೆ. ಜಾತಿ, ಭಾಶೆ, ಧರ್ಮಗಳನ್ನು ಅಸ್ತ್ರವಾಗಿಸಿಕೊಂಡಂತೆ ಆಹಾರವನ್ನೂ ನಿಯಂತ್ರಣದ ಸಾಧನವಾಗಿಸಿಕೊಳ್ಳಲಾಗುತ್ತಿದೆ. ಹೀಗೆ ಹತೋಟಿ ಮತ್ತು ಯಾಜಮಾನಿಕೆ ಸಾಧಿಸುವ ಯಾವುದೇ ಪ್ರಯತ್ನಗಳನ್ನು ವಿರೋಧಿಸಲೇಬೇಕಿದೆ – ರಂಗನಾಥ ಕಂಟನಕುಂಟೆ, ಕನ್ನಡ ಪ್ರಾಧ್ಯಾಪಕರು
ಕನ್ನಡ ಸಾಹಿತ್ಯ ಪರಿಶತ್ತಿನ ಈಗಿನ ಅಧ್ಯಕ್ಶರಾದ ಮಹೇಶ್ ಜೋಶಿ ಅವರು ಪರಿಶತ್ತಿನ ಅಧಿಕಾರ ವಹಿಸಿಕೊಂಡಾಗಿನಿಂದಲೂ ಒಂದಲ್ಲ ಒಂದು ರೀತಿಯ ವಿವಾದಗಳನ್ನು ಹುಟ್ಟಿ ಹಾಕುತ್ತಿದ್ದಾರೆ. ಅಂತಹ ವಿವಾದಗಳನ್ನು ಮುಗ್ಧತೆಯಿಂದ ಇಲ್ಲವೇ ಅಜಾಗರೂಕತೆಯಿಂದ ಸೃಶ್ಟಿಸುತ್ತಿದ್ದಾರೆ ಎನ್ನಲು ಸಾಧ್ಯವಿಲ್ಲ. ಒಂದು ವೇಳೆ ಮುಗ್ಧತೆಯಿಂದ ಸಮಸ್ಯೆಗಳನ್ನು ಸೃಶ್ಟಿಸಿದರೆ ಅವರನ್ನು ಎಡವಟ್ಟು ಗಿರಾಕಿಯೆಂದೇ ಕರೆಯಬೇಕು. ಆದರೆ ಅವರು ಚಾಲಾಕಿತನದಿಂದ ಮತ್ತು ಉದ್ದೇಶಪೂರ್ವಕವಾಗಿಯೇ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಸಂದೇಹಿಸಲು ಸಾಧ್ಯವಿದೆ. ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಾಗ ಅರಿವಿಲ್ಲದೆ ತಪ್ಪಾದರೆ ಅದನ್ನು ತಿದ್ದಿಕೊಳ್ಳಬಹುದು. ಆದರೆ ಪ್ರತಿ ಕೆಲಸದ ಸಂದರ್ಭದಲ್ಲಿಯೂ ವಿವಾದದ ರಾಡಿ ಎಬ್ಬಿಸುವುದನ್ನು ದುರುದ್ದೇಶಪೂರಿತವಾದುದು ಎಂದೇ ಹೇಳಬೇಕಾಗುತ್ತದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಜನಾಭಿಪ್ರಾಯ ಪಡೆದು ಕೆಲಸ ಮಾಡಬಹುದು; ಇಲ್ಲವೇ ತಪ್ಪಾದ ಕೆಲಸಕ್ಕೆ ಜನರಿಂದ ಪ್ರತಿರೋಧ ಬಂದಾಗ ಭಂಡತನದಿಂದ ಸಮರ್ಥಿಸಿಕೊಳ್ಳದೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಬಹುದು. ಆದರೆ ಈ ಅಧ್ಯಕ್ಶರು ಜನರ ಅಭಿಪ್ರಾಯಗಳನ್ನು ಗೌರವಿಸದೇ ಭಂಡತನದಿಂದ ವರ್ತಿಸುತ್ತಿರುವುದರಿಂದಲೇ ವಿವಾದಗಳೇಳುತ್ತಿವೆ ಎಂಬ ಅನುಮಾನ ಹುಟ್ಟುತ್ತದೆ. ಈ ಅಧ್ಯಕ್ಶರಿಗೆ ಕನ್ನಡಿಗರ ಬಗೆಗೆ, ಕನ್ನಡ ಸಾಹಿತ್ಯದ ಮೇಲೆ ನಿಜಕ್ಕೂ ಗೌರವ ಇದ್ದಿದ್ದರೆ ಇಂತಹ ಅನಗತ್ಯ ವಿವಾದಗಳು ಏಳದಂತೆ ನೋಡಿಕೊಳ್ಳುತ್ತಿದ್ದರು. ಕನ್ನಡದ ಕೆಲಸಗಳು ಸುಸುಂಗತವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.
ಆದರೆ ಅವರಿಗೆ ಸಾಹಿತ್ಯದ ವಿಚಾರಗಳಿಗಿಂತ ವೈಯಕ್ತಿಕ ಹಿತಾಸಕ್ತಿಗಳೇ ಮುಖ್ಯವಾಗಿರುವುದರ ಪರಿಣಾಮ ಅನಗತ್ಯ ಚರ್ಚೆಗಳು ನಡೆಯುವಂತಾಗಿದೆ. ಹಾಗಾದರೆ ಅವರ ಹಿತಾಸಕ್ತಿಗಳೇನು? ಎಂಬ ಪ್ರಶ್ನೆಯನ್ನು ಎತ್ತಲೇಬೇಕಿದೆ. ಅವರು ಮೂಲತಃ ಸಾಹಿತಿಯೇ ಅಲ್ಲ. ಸಾಹಿತ್ಯದ ಘನತೆಯನ್ನು ಹೆಚ್ಚಿಸುವ ಉದ್ದೇಶವೂ ಅವರಿಗಿಲ್ಲ. ವೈಯಕ್ತಿಕ ಹಿತಾಸಕ್ತಿ ಮತ್ತು ಕೊಳಕು ಜನಪ್ರಿಯತೆಯೇ ಪ್ರಧಾನವಾಗಿದೆ. ಅಲ್ಲದೆ ಅವರು ಇಂದು ದೇಶದಲ್ಲಿ ಹುಟ್ಟಿ ಬೆಳೆದಿರುವ ಪ್ರಳಯಕಾರಿ ಕೋಮುವಾದಿ ಮತ್ತು ಬಲಪಂಥೀಯ ಚಿಂತನೆಗಳಿಂದ ಪ್ರಭಾವಿತಗೊಂಡಿರುವುದು ಇನ್ನೊಂದು ಪ್ರಮುಖ ಕಾರಣ. ಮತೀಯ ಶಕ್ತಿಗಳ ಬೆಂಬಲದಿಂದಲೇ ಅಧ್ಯಕ್ಶರಾಗಿ ಆಯ್ಕೆಯಾಗಿರುವುದೂ ಎಲ್ಲರಿಗೂ ತಿಳಿದ ವಿಚಾರ. ಬಲಪಂಥೀಯ ಮತ್ತು ಜಾತಿಶ್ರೇಶ್ಟತೆಯ ರೋಗಪೀಡಿತ ಚಿಂತನೆಯನ್ನು ಸಾಹಿತ್ಯ ವಲಯದಲ್ಲಿ ಬೇರೂರಿಸುವುದು ಅವರ ಗುಪ್ತಕಾರ್ಯಸೂಚಿ ಇದ್ದಂತೆ ಕಾಣುತ್ತದೆ. ಯಾಕೆಂದರೆ ಅವರು ಮುಂಚೂಣಿಗೆ ತರುತ್ತಿರುವ ವಿವಾದಗಳು ಮತೀಯವಾದಿ ಮತ್ತು ಬ್ರಾಹ್ಮಣವಾದಿ ಚಿಂತನೆಗಳನ್ನು ಸಮಾಜದಲ್ಲಿ ಆಳವಾಗಿ ಬೇರೂರಿಸುವುದೇ ಆಗಿದೆ ಎಂಬ ಸಂಶಯವೂ ಮೂಡುತ್ತದೆ.
ಅದಕ್ಕಾಗಿ ವಿವಾದಗಳನ್ನು ಹುಟ್ಟಿಸುತ್ತ ವಿವಾದಿತ ವಿಶಯಗಳನ್ನು ಸದಾ ಜೀವಂತವಾಗಿಡುವುದು; ಮತ್ತು ಆ ವಿವಾದದ ಮೂಲಕ ತಾವು ಕೇಂದ್ರದಲ್ಲಿದ್ದು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು; ಹಾಗೂ ತಮ್ಮ ಗುಪ್ತಕಾರ್ಯಸೂಚಿಯನ್ನು ಜಾರಿಗೆ ತರುವುದೇ ಆಗಿದೆ ಎನ್ನಿಸುತ್ತದೆ. ಹಾಗಾಗಿಯೇ ಅವರು ತಮ್ಮ ಪೂರ್ವಗ್ರಹಪೀಡಿತ ವಿಚಾರಗಳನ್ನು ಕಾರ್ಯರೂಪಕ್ಕೆ ತರುತ್ತ ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ ಕೆಸರು ಮೆತ್ತುವ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಹೊಳೆಯನ್ನು ರಾಡಿಯಾಗಿಸುತ್ತಿದ್ದಾರೆ. ಸಾಹಿತ್ಯ ಪರಿಶತ್ತಿನ ಚಟುವಟಿಕೆಗಳೆಂದರೆ ಜನರು ಮೂಗುಮುರಿಯುತ್ತಾರೆ. ಅವರು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದು, ಅದಕ್ಕೆ ಜನರಿಂದ ವಿರೋಧ ಸಹಜವಾಗಿ ವ್ಯಕ್ತವಾಗುತ್ತದೆ. ಈಗಿನ ಅಧ್ಯಕ್ಶರ ಐಲುತನದ ವಿಚಾರಗಳ ಬಗೆಗೆ ಚರ್ಚೆ ನಡೆದು ಸಾಹಿತ್ಯದ ವಿಚಾರಗಳೇ ಮುನ್ನೆಲೆಗೆ ಬಾರದಂತೆ ಮಾಡುತ್ತವೆ. ಇಂತಹ ಐಲುತನ ಮತ್ತು ಪ್ರತಿರೋಧಗಳ ನಡುವೆ ತಬ್ಬಲಿಯಾದ ಕೂಸೆಂದರೆ ಸಾಹಿತ್ಯವೇ ಆಗಿದೆ. ಈಗ ಕಸಾಪ ಆಯೋಜಿಸಿರುವ ಸಮ್ಮೇಳನದ ಸಂದರ್ಭದಲ್ಲಿ ಮಾರಾಟ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡದೆ ಅದನ್ನು ನಿಶೇಧಿಸಿರುವುದು ಮಾಂಸಾಹಾರದ ಹಕ್ಕಿನ ಪ್ರಶ್ನೆಯನ್ನು ಮುಖ್ಯವಾಗಿಸಿಕೊಂಡು ಚರ್ಚೆ ನಡೆಸಲು ಅವಕಾಶ ಸೃಶ್ಟಿಸಿದೆ. ಅದರಲ್ಲಿಯೂ ಮಾಂಸವನ್ನು ಮದ್ಯ ಮತ್ತು ಮಾದಕ ವಸ್ತುಗಳ ಜೊತೆಗೆ ಸೇರಿಸಿ ಅದನ್ನು ನಿಶೇಧಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ವಿವಾದ ಒಂದರ್ಥದಲ್ಲಿ ಸಾಹಿತ್ಯದ ವಿಚಾರಗಳನ್ನು ಸರಿಯಾದ ದಿಕ್ಕಿನತ್ತ ಮುಖಮಾಡುವಂತೆ ಮಾಡಿದೆ ಎನ್ನಿಸುತ್ತದೆ. ಇಲ್ಲಿಯವರೆಗೂ ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಆಹಾರ ಹಕ್ಕಿನ ಪ್ರಶ್ನೆಯನ್ನು ಪ್ರಮುಖವೆಂದು ಭಾವಿಸಿ ಚರ್ಚಿಸಿರುವುದೇ ಕಡಿಮೆ. ಈ ಹಿನ್ನೆಲೆಯಲ್ಲಿ ಸದ್ಯದ ಚರ್ಚೆ ಮಹತ್ವದ್ದಾಗಿದೆ.
ಯಾಕೆಂದರೆ ಇದುವರೆಗಿನ ಕನ್ನಡ ಸಾಹಿತ್ಯದ ಚರ್ಚೆಗಳನ್ನು ಗಮನಿಸಿದರೆ ಅಲ್ಲಿ ಕರ್ನಾಟಕದ ಆಹಾರ ವೈವಿಧ್ಯಗಳನ್ನು ಪ್ರಮುಖವಾಗಿಸಿಕೊಂಡಿಯೇ ಇಲ್ಲ. ಕೇವಲ ಸಸ್ಯಾಹಾರ ಕೇಂದ್ರಿತ ವಿಚಾರಗಳೇ ಪ್ರಧಾನವಾಗಿರುವಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ ಸಸ್ಯಾಹಾರವನ್ನೇ ಶ್ರೇಶ್ಟವೆಂಬಂತೆ ಬಿಂಬಿಸಲಾಗಿದೆ. ಹೀಗೆ ಬಿಂಬಿತವಾಗುವುದರಲ್ಲಿ ಜೈನ, ವೈದಿಕ ಮತ್ತು ಶೈವ ಪಂಥೀಯ ಲೇಖಕರೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಸಸ್ಯಾಹಾರವೇ ಶ್ರೇಶ್ಟವೆಂಬುದನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಇದು ಕನ್ನಡದ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದು ಸಾರ್ವಜನಿಕವಾಗಿ ಮಾಂಸಾಹಾರದ ಬಗೆಗೆ ಮಾತನಾಡುವುದು ಅಪರಾಧ ಎಂಬಂತೆ ಮಾಡಲಾಗಿದೆ. ಮಾಂಸವನ್ನು ‘ಹೊಲಸು’ ಎಂದು ಭಾವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳಲ್ಲಿ ಇಂದಿಗೂ ಈ ವಾತಾವರಣ ಮುಂದುವರಿದಿದೆ. ಈಚೆಗೆ ಟಿವಿ ಶೋಗಳಲ್ಲಿ ಪಾಲ್ಗೊಳ್ಳುವ ಜ್ಯೋತಿಶಿಗಳು ನೀಡುತ್ತಿರುವ ಜನವಿರೋಧಿ ಹೇಳಿಕೆಗಳು ಮಾಂಸಾಹಾರವನ್ನು ಮತ್ತಶ್ಟು ಕೀಳಾಗಿ ನೋಡುವ ವಾತಾವರಣವನ್ನು ಸೃಶ್ಟಿಸಿದೆ. ಇದು ಬಹಳ ಹಿಂದಿನಿಂದಲೂ ನಡೆದುಬಂದಿದ್ದು ಈಗಲೂ ಮುಂದುವರೆಯುವಂತೆ ಮಾಡಿದೆ. ಆಧುನಿಕ ಸಂದರ್ಭದಲ್ಲಿ ಗದ್ಯ ಸಾಹಿತ್ಯದಲ್ಲಿ ಕರ್ನಾಟಕದ ಆಹಾರ ವೈವಿಧ್ಯತೆ; ಮುಖ್ಯವಾಗಿ ಮಾಂಸಾಹಾರದ ಪ್ರಸ್ತಾಪ ಬರುತ್ತದೆ. ಆದರೆ ಅಲ್ಲಿಯೂ ಅದನ್ನು ಬಹಳ ಮುಖ್ಯವಾದ ವಿಶಯವೆಂಬಂತೆ ಪರಿಗಣಿಸಿಯೇ ಇಲ್ಲ. ಇದಕ್ಕೆ ಕಾರಣವೆಂದರೆ ಇತ್ತೀಚಿನವರೆಗೂ ಕನ್ನಡ ಸಾಹಿತ್ಯದಲ್ಲಿ ಮೇಲುಗೈ ಸಾಧಿಸಿದ್ದು ಬ್ರಾಹ್ಮಣ ಲೇಖಕರೇ. ಅವರು ಸಾಹಿತ್ಯ ಲೋಕದ ಮೇಲೆ ಡಾಮಿನೇಟ್ ಮಾಡಿದ್ದಾರೆ. ಇಂದಿಗೂ ಅವರು ರೂಪಿಸಿದ ಚಿಂತನೆಗಳೇ ‘ಕೇಂದ್ರ’ದಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹಿನ್ನೆಲೆಯಿಂದ ಬಂದ ಲೇಖಕರಿಂದ ಆಹಾರದ ಹಕ್ಕಿನ ಪ್ರಶ್ನೆ ಚರ್ಚೆಯ ಕೇಂದ್ರಕ್ಕೆ ಬಂದಿದೆ. ವಿಶೇಶವಾಗಿ ತಳಸಮುದಾಯಗಳ ಅಸ್ಮಿತೆಯ ಪ್ರಶ್ನೆಯಾಗಿ ಮಾಂಸಾಹಾರದ ವಿಚಾರವು ಮುಂಚೂಣಿಗೆ ಬಂದಿದೆ. ಇದು ಸರಿಯಾದುದೂ ಆಗಿದೆ. ಆ ಮೂಲಕ ಬ್ರಾಹ್ಮಣಶಾಹಿ ರೂಪಿಸಿಕೊಂಡು ಬಂದಿದ್ದ ಶ್ರೇಶ್ಟತೆಯ ಮಿಥ್ ಅನ್ನು ವಿರೋಧಿಸುತ್ತಿದೆ ಮತ್ತು ಆಹಾರ ಸಂಸ್ಕೃತಿಯಲ್ಲಿನ ತರತಮದ ಮೌಲ್ಯಗಳನ್ನು ತೊಡೆದು ಹಾಕಲು ಯತ್ನಿಸುತ್ತಿದೆ.
ಹೀಗೆ ಚರ್ಚೆ ಮುಂಚೂಣಿಗೆ ಬರುವಂತೆ ಮಾಡುವ ರಾಜಕೀಯ ವಾತಾವರಣವೂ ಬಹಿರಂಗದಲ್ಲಿ ಸೃಶ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾಂಸಾಹಾರದ ಮೇಲೆ ಹಲ್ಲೆ ನಡೆದು ಅದನ್ನು ತಿನ್ನುವವರನ್ನು ಅಪಮಾನಿಸುವ ಪ್ರಸಂಗಗಳು ಮತ್ತೆ ಮತ್ತೆ ಎದುರಾಗುತ್ತಿವೆ. ಮೊದಲು ದನದ ಮಾಂಸ ತಿನ್ನುವವರ ಮೇಲೆ ಹಲ್ಲೆ ಮಾಡಲಾಯಿತು. ಈಗ ಯಾವುದೇ ಬಗೆಯ ಮಾಂಸ ತಿನ್ನುವವರ ಮೇಲೆ ಬ್ರಾಹ್ಮಣಶಾಹಿ ಮೌಲ್ಯಗಳ ಹೇರಿಕೆಯ ರೂಪದಲ್ಲಿ ಮಾಡಲಾಗುತ್ತಿದೆ. ಭಾರತವನ್ನು ಸನಾತನ ವೈದಿಕಶಾಹಿ ರಾಶ್ಟ್ರವನ್ನಾಗಿ ಮಾಡುವ ಉದ್ದೇಶಕ್ಕೆ ಪೂರಕವಾದ ಸಾಮಾಜಿಕ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಬಹಳ ವ್ಯವಸ್ಥಿತವಾಗಿಯೇ ನಡೆಸಿಕೊಂಡು ಬರಲಾಗುತ್ತಿದೆ. ಹಾಗಾಗಿ ಪರಿಶತ್ತಿನ ನಿರ್ಣಯಕ್ಕೆ ತೀವ್ರ ಪ್ರತಿರೋಧ ಎದುರಾಗುತ್ತಿರುವುದು ಸಹಜ ಪ್ರಕ್ರಿಯೆಯೇ ಆಗಿದೆ. ಇಂತಹದೇ ಸಂದರ್ಭದಲ್ಲಿ ಕಸಾಪದ ಸಾರ್ವಜನಿಕ ನೋಟೀಸು ಮಾಂಸಾಹಾರ ಸೇವಿಸುವವರನ್ನು ಅವಮಾನಿಸುತ್ತದೆ. ಸದ್ಯ ಜನರಿಂದ ತೀವ್ರ ಪ್ರತಿರೋಧ ಬಂದ ಮೇಲೆ ಅಧ್ಯಕ್ಶರು ಸ್ಪಶ್ಟನೆ ನೀಡಿ ತನಗೂ ಈ ಆದೇಶಕ್ಕೂ ಸಂಬಂಧವಿಲ್ಲ; ಅದು ಆಹಾರ ಸಮಿತಿಯ ನಿರ್ಣಯ ಎಂದು ಸಮಜಾಯಿಶಿ ನೀಡಿದ್ದಾರೆ. ಇದು ಒಪ್ಪುವ ಮಾತಲ್ಲ. ಒಂದು ಸಮಿತಿ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂಬುದು ಅವರ ಗಮನಕ್ಕೆ ಬಾರದೇ ಅದು ಬಹಿರಂಗಗೊಳ್ಳುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಅದು ಅವರಿಗೆ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅದು ಬಹುದೊಡ್ಡ ಪ್ರಮಾದ. ಮಾಂಸಾಹಾರದ ಮೇಲೆ ಇತ್ತೀಚಿನ ವರ್ಶಗಳಲ್ಲಿ ತೀವ್ರವಾದ ಹಲ್ಲೆ ನಡೆಯುತ್ತಿದೆ. ಅಂತಹ ಹೊತ್ತಿನಲ್ಲಿ ಇಂತಹ ನಿರ್ಣಯಗಳು ಎಂತಹ ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯಬೇಕಲ್ಲವೇ? ಇಂತಹ ವಿಶಯಗಳ ಬಗೆಗೆ ಅಧ್ಯಕ್ಶರು, ಸಮಿತಿಗಳು ಯಾರೇ ಆದರೂ ಎಚ್ಚರ ವಹಿಸಬೇಕಲ್ಲವೇ? ಇಂತಹ ಪ್ರಮಾದಗಳು ಸಂಭವಿಸುವುದಕ್ಕೆ ನಮ್ಮ ಜನರ ಮನಸ್ಸಿನಲ್ಲಿಯೇ ಮಾಂಸಾಹಾರದ ಬಗ್ಗೆ ಮನದಾಳದಲ್ಲಿ ಬೇರುಬಿಟ್ಟಿರುವ ಪೂರ್ವಾಗ್ರಹ ಪೀಡಿತ ಭಾವನೆಯೇ ಕಾರಣ.
ಕನ್ನಡದ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮೊದಲಿನಿಂದಲೂ ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ತರತಮವಿಲ್ಲದೆ ವಿತರಿಸಿದ್ದರೆ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳು ಆರಂಭಗೊಂಡ ಕಾಲದಿಂದಲೂ ಸಸ್ಯಾಹಾರವನ್ನು ನೀಡುತ್ತ ಬರಲಾಗಿದೆ. ಯಾಕೆಂದರೆ ಇದನ್ನು ಆರಂಭಿಸಿದ ಪ್ರಮುಖರೆಲ್ಲರೂ ಬ್ರಾಹ್ಮಣರು ಇಲ್ಲವೇ ಸಸ್ಯಾಹಾರಿಗಳೇ ಆಗಿದ್ದರಿಂದ ಅವರ ಆಹಾರ ಪದ್ದತಿಯನ್ನೇ ರೂಢಿಗೆ ತಂದರು. ಶತಮಾನದಿಂದಲೂ ಅದನ್ನೇ ರೂಢಿಯಾಗಿ ಆಚರಿಸಲಾಗುತ್ತಿದೆ. ಅದೇ ಸರಿಯಾದ ಪದ್ದತಿ ಎಂದೂ ಭಾವಿಸಲಾಗಿದೆ. ಇದರಿಂದಾಗಿಯೂ ಮಾಂಸಾಹಾರ ವಿತರಣೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ರೂಢಿಗೆ ಬರಲೇ ಇಲ್ಲ. ಇದಕ್ಕೆ ಅಪವಾದವಾಗಿ ಜನನುಡಿ, ಮೇ ಸಾಹಿತ್ಯ ಮೇಳಗಳಲ್ಲಿ ಮಾಂಸಾಹಾರ ನೀಡುತ್ತ ಇದುವರೆಗೆ ಇದ್ದ ಮಡಿತನ ಮೀರುವ ಪ್ರಯತ್ನ ಮಾಡಲಾಗಿದೆ. ಸದ್ಯದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವನ್ನು ವಿತರಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗುತ್ತಿದೆ. ಮಾಂಸಾಹಾರವನ್ನು ಸಹಸ್ರಾರು ಜನರಿಗೆ ವಿತರಿಸುವುದು ಸವಾಲಿನ ಕೆಲಸ. ಅದನ್ನು ವಿತರಿಸಬಹುದು ಇಲ್ಲವೇ ವಿತರಿಸದಿರಬಹುದು. ಆದರೆ ಅದು ಕೇವಲ ಮಾಂಸದೂಟದ ಪ್ರಶ್ನೆಯಲ್ಲ. ಮಾಂಸಾಹಾರ ಮತ್ತು ಅದನ್ನು ಸೇವಿಸುವವರನ್ನು ಸಮಾಜ ಕೀಳಾಗಿ ಭಾವಿಸುತ್ತಿರುವುದರ ವಿರುದ್ಧ ಹುಟ್ಟಿಕೊಂಡಿರುವ ತೀವ್ರ ಬಂಡಾಯವಾಗಿ ಪ್ರಸ್ತುತದ ವಿವಾದವನ್ನು ಗ್ರಹಿಸ ಬೇಕಾಗುತ್ತದೆ. ಆ ಮೂಲಕ ನಮ್ಮ ಸಮಾಜದಲ್ಲಿ ಆಹಾರಾಧಾರಿತವಾಗಿ ನಡೆಯುತ್ತಿರುವ ತರತಮವನ್ನು ತಾತ್ವಿಕವಾಗಿ ವಿರೋಧಿಸುತ್ತಿರುವ ಹೋರಾಟವಾಗಿ ಪ್ರಸ್ತುತದ ವಿದ್ಯಮಾನ ಕಂಡುಬರುತ್ತದೆ.
ಹಾಗಾಗಿ ಈಗಿನ ವಿದ್ಯಮಾನವನ್ನು ವಿಸ್ತಾರವಾದ ರಾಜಕೀಯ ದೃಶ್ಟಿಕೋನದಿಂದ ಗ್ರಹಿಸಬೇಕಿದೆ. ಇದು ನಿಡುಗಾಲದಲ್ಲಿ ಉಂಟು ಮಾಡುವ ಧನಾತ್ಮಕ ಪರಿಣಾಮಗಳ ಹಿನ್ನೆಲೆಯಿಂದ ನೋಡಬೇಕಾಗುತ್ತದೆ. ಆಗ ಮಾಂಸಾಹಾರ ವಿತರಣೆಯ ಬೇಡಿಕೆ ಇಡುತ್ತಿರುವವರ ಉದ್ದೇಶ ಮಹತ್ವದ್ದಾಗಿ ಕಾಣಿಸುತ್ತದೆ. ಇಲ್ಲವಾದರೆ ಅದನ್ನು ವ್ಯಂಗ್ಯ ಮಾಡುತ್ತ ‘ಶ್ರೇಶ್ಟತೆಯ ವ್ಯಸನಿ’ಗಳ ಗುಪ್ತಸೂಚಿಯನ್ನು ಬೆಂಬಿಲಿಸಿದಂತೆ ಆಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮಾಂಸಾಹಾರ ಚರ್ಚೆಯನ್ನು ತೆರೆದ ಕಣ್ಣಿನಿಂದ ನೋಡುತ್ತ ಜನರ ಹೋರಾಟದ ಪ್ರಯತ್ನಗಳನ್ನು ತಾತ್ವಿಕವಾಗಿ ಬೆಂಬಲಿಸಬೇಕಿದೆ. ದುರಂತವೆಂದರೆ ಆಹಾರ ವಿವಾದದ ಕೇಂದ್ರವಾಗಬಾರದು. ಆದರೆ ನಮ್ಮ ದೇಶದಲ್ಲಿ ಆಹಾರ ರಾಜಕೀಯದ ಅಸ್ತ್ರವಾಗಿ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತದೆ. ಜಾತಿ, ಭಾಶೆ, ಧರ್ಮಗಳನ್ನು ಅಸ್ತ್ರವಾಗಿಸಿಕೊಂಡಂತೆ ಆಹಾರವನ್ನೂ ನಿಯಂತ್ರಣದ ಸಾಧನವಾಗಿಸಿಕೊಳ್ಳಲಾಗುತ್ತಿದೆ.
ಹೀಗೆ ಹತೋಟಿ ಮತ್ತು ಯಾಜಮಾನಿಕೆ ಸಾಧಿಸುವ ಯಾವುದೇ ಪ್ರಯತ್ನಗಳನ್ನು ವಿರೋಧಿಸಲೇಬೇಕಿದೆ. ಸದ್ಯದ ಕಸಾಪದ ನಿರ್ಣಯ ಕೂಡ ಅಂತಹದೇ ಪೂರ್ವಗ್ರಹಪೀಡಿತ ದುರುದ್ದೇಶದಿಂದ ಕೂಡಿರುವುದರಿಂದ ಅದನ್ನು ಪ್ರಜ್ಞಾವಂತರು ವಿರೋಧಿಸಲೇಬೇಕಿದೆ. ಅಂತಹ ವಿರೋಧವನ್ನು ತೋರಿಸುತ್ತಲೇ ಜನರ ಹಕ್ಕುಗಳ ಪ್ರಶ್ನೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಬೇಕಿದೆ. ಆ ಮೂಲಕ ನಮ್ಮ ನೆಲದಲ್ಲಿ ಆಹಾರದ ಆಯ್ಕೆಯ ಸಂಗತಿಗಳನ್ನು ಮೇಲು-ಕೀಳು, ಶ್ರೇಶ್ಟ-ಕನಿಶ್ಟ ಇತ್ಯಾದಿ ರೂಪದಲ್ಲಿ ತಾರತಮ್ಯ ಆಚರಿಸಲು ಬಳಸಿಕೊಳ್ಳುವುದು; ಆ ಮೂಲಕ ಒಂದು ಚಿಕ್ಕ ಸಮುದಾಯ ಬಹುಸಂಖ್ಯಾತ ಜನರ ಮೇಲೆ ಹತೋಟಿ ಸಾಧಿಸುವುದು ಒಪ್ಪುವ ಮಾತಲ್ಲ. ಹತ್ತೂ ಬಗೆಯ ಜನರು ಸೇರುವ ಜಾಗೆಗಳು ಕೇವಲ ಒಂದೇ ಬಗೆಯ ಆಹಾರ ತಿನ್ನುವ ಜನರ ಜಾಗೀರು ಪ್ರದೇಶಗಳಲ್ಲ. ಎಲ್ಲ ಬಗೆಯ ಆಹಾರಗಳಿಗೂ ಹತ್ತೂ ಜನರು ಸೇರುವ ಜಾಗಗಳಲ್ಲಿ ಅವಕಾಶ ಕಲ್ಪಿಸಿರಬೇಕು. ತಮ್ಮ ಪೂರ್ವಾಗ್ರಹಪೀಡಿತ ಮನೋಭಾವದಿಂದ ವರ್ತಿಸುವುದು ಒಪ್ಪತಕ್ಕ ವಿಚಾರವಲ್ಲ. ಸಮ್ಮೇಳನದಲ್ಲಿ ಮಾಂಸಾಹಾರವನ್ನು ನಿಶೇಧಿಸಿ ಪ್ರಕಟಿಸಿದ ನೋಟೀಸು ನಿಜಕ್ಕೂ ಪೂರ್ವಾಗ್ರಹ ಪೀಡಿತವಾಗಿದ್ದು ಅದನ್ನು ಒಪ್ಪಲಾಗದು.
ಸದ್ಯ ಮಾಂಸವನ್ನು ನಿಶೇಧದ ಪಟ್ಟಿಯಿಂದ ತೆಗೆದಿರುವುದಾಗಿ ಸುದ್ದಿಯಾಗಿದೆ. ತೆಗೆದದ್ದು ಸರಿ. ಆದರೆ ಹೀಗೆ ತೆಗೆಯುವಂತಹ ಸನ್ನಿವೇಶಕ್ಕೆ ಕಾರಣವಾದುದೇನು? ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಅಂದರೆ ನಮ್ಮ ಸಮಾಜ ಜಾತಿ ವರ್ಣಗಳ ಮೇಲೆ ವಿಭಜನೆಗೊಂಡಂತೆ ಆಹಾರದ ಮೇಲೂ ವಿಭಜನೆಗೊಂಡಿದೆ. ಅದರಲ್ಲಿ ಸಸ್ಯಾಹಾರ ಶ್ರೇಶ್ಟವೆಂಬ ಸಾಮಾಜಿಕ ಭಾವವನ್ನು ಬೆಳೆಸುತ್ತ ಬಂದಿರುವುದು ಇದಕ್ಕೆ ಪ್ರಮುಖ ಕಾರಣ. ನಮ್ಮ ದೇಶದಲ್ಲಿ ಆಹಾರವನ್ನು ಆಧರಿಸಿ ಜನರನ್ನು ಮಾತ್ರವಲ್ಲದೆ ದೇವರನ್ನೂ ವಿಭಜಿಸಲಾಗಿದೆ. ಸಸ್ಯಾಹಾರಿ ದೇವರಿಗೆ ಮಾಂಸಾಹಾರಿ ದೇವರು ಕೀಳಾಗಿರುವುದೂ ಉಂಟು. ಇಲ್ಲಿನ ಮೇಲ್ಜಾತಿಗಳಿಗೆ ಮಾಂಸ ಬಳಸದ ದೇವರೇ ನಿಜವಾದ ದೈವ. ಆದರೆ ದಲಿತ-ಶೂದ್ರರಿಗೆ ತಮ್ಮಂತೆಯೇ ತಮ್ಮ ದೇವರೂ ಮಾಂಸಾಹಾರವನ್ನು ಸೇವಿಸುತ್ತದೆ. ಅದರಂತೆ ಊರ ನಡುವೆ ಸಸ್ಯಾಹಾರಿ ದೇವರನ್ನು ಊರಾಚೆ ಮಾಂಸಾಹಾರಿ ದೇವರನ್ನೂ ಪೂಜಿಸಲಾಗುತ್ತದೆ. ಅಂದರೆ ಇಡೀ ಪರಿಸರವನ್ನು ಆಹಾರ ಆಧರಿಸಿ ವಿಭಜಿಸಲಾಗಿದೆ. ಇಂತಹ ಪರಿಸರವನ್ನು ಕಾಪಾಡಿಕೊಂಡು ಹೋಗುವ ಮತ್ತು ಮಾಂಸಾಹಾರದ ಮೇಲೆ ಇನ್ನಶ್ಟು ಕೀಳುಭಾವ ಬರುವಂತೆ ಮಾಡುವ ಪ್ರಯತ್ನವನ್ನು ಬ್ರಾಹ್ಮಣಶಾಹಿ ಮಾಡುತ್ತಲೇ ಬರುತ್ತಿದೆ. ಅದರ ಪುನರಾರ್ವನೆಯಾಗಿ ಕಸಾಪ ಅಧ್ಯಕ್ಶರ ವರ್ತನೆಯಿದೆ. ಆದ್ದರಿಂದ ಇಂತಹ ಬ್ರಾಹ್ಮಣಶಾಹಿಯ ಧೋರಣೆಯನ್ನು ಸೋಲಿಸುವ ಉದ್ದೇಶದಿಂದ ಬೌದ್ಧಿಕ ಮತ್ತು ವೈಚಾರಿಕ ಸಂಘರ್ಶ ನಡೆಸಬೇಕಿದೆ. ಆ ಮೂಲಕ ಸಹ್ಯ ಮತ್ತು ಸೌಹಾರ್ದದ ಸಾಮಾಜಿಕ ಪರಿಸರವನ್ನು ಕಟ್ಟಿಕೊಳ್ಳುವುದೇ ಪ್ರಜ್ಞಾವಂತರ ಹೊಣೆ ಆಗಿರುತ್ತದೆ. ಸದ್ಯ ಈ ಕೆಲಸದಲ್ಲಿ ಕೆಲವು ಲೇಖಕರು, ನಾಗರಿಕರು, ಸಂಘಟನೆಗಳು ಸಕ್ರಿಯರಾಗಿ ತೊಡಗಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಈ ತೊಡಗುವಿಕೆ ಆಹಾರ ಆಧಿಸಿರದ ತಾರತಮ್ಯವನ್ನು ನಿವಾರಿಸುವಲ್ಲಿ ಯಶಸ್ಸು ಸಾಧಿಸಲಿ.
ರಂಗನಾಥ ಕಂಟನಕುಂಟೆ
ಕನ್ನಡ ಪ್ರಾಧ್ಯಾಪಕರು, ಲೇಖಕರು.
ಇದನ್ನೂ ಓದಿ- ಮಂಡ್ಯ ಸಾಹಿತ್ಯ ಸಮ್ಮೇಳನ; ಆಹಾರ ಸಂಸ್ಕೃತಿಗೆ ಅವಹೇಳನ