ಬೆಂಗಳೂರು: ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದೆ. ಆದರೆ ವಿವಿಧ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಚಳಿ ತೀವ್ರಗೊಳ್ಳುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಚಳಿ ತೀವ್ರಗೊಂಡಿದೆ. ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಇಂದು ಮುಂಜಾನೆಯಿಂದಲೇ ಬೀದರ್, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಚಳಿಯ ವಾತಾವರಣ ಆರಂಭವಾಗಿದೆ. ಈ ಭಾಗದಲ್ಲಿ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್ ಗೆ ತಲುಪುವ ಸಾಧ್ಯತೆ ಇದೆ.
ಯಾದಗಿರಿ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಶೀತದ ಅಲೆ ಇದೆ. ಈ ಭಾಗದಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ತೀವ್ರ ಚಳಿಯಿಂದಾಗಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿವೆ. ಅತಿ ಹೆಚ್ಚು ಚಳಿ ಇರುವ ಜಿಲ್ಲೆಗಳಲ್ಲಿ ರೈತರು ಮುಂಜಾನೆ ಸಮಯದಲ್ಲಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡದಂತೆ ಸಲಹೆಗಳನ್ನು ನೀಡಲಾಗಿದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮುಂಜಾನೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಚಳಿ ಮುಂದುವರಿದಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮಂಜಿನ ವಾತಾವರಣ ಕಾಣಿಸಿಕೊಂಡಿದೆ. ಮಂದ ಬೆಳಕಿನ ಪರಿಣಾಮವಾಗಿ ಚಾಲಕರಿಗೆ ವಾಹನಗಳನ್ನು ಚಲಾಯಿಸುವುದು ಕಷ್ಟವಾಗುತ್ತಿದೆ.