ಅಂಬೇಡ್ಕರ್ ಹೆಗಲ ಮೇಲೆ ಬಂದೂಕಿಟ್ಟು ಬ್ರಾಹ್ಮಣ್ಯವಾದಿಗಳ ಹೊಸ ಅಭಿಯಾನ

Most read

ಸಮಾನತೆ ಪ್ರತಿಪಾದಿಸುವ ಈ ಸಂವಿಧಾನವನ್ನು ಬದಲಿಸಬೇಕೆನ್ನುವ ಮಾತು ಬಿಂದಾಸ್ ಆಗಿ ಈಗ ಕೇಳಿಬರುತ್ತಿದೆ. ಇಂತಹವರುಗಳಿಗೆ ಇದೀಗ ಏಕಾಏಕಿ ಅಂಬೇಡ್ಕರ್ ಎಂದರೆ ಭೂಮಿಗಿಳಿದ ಭಗವಂತ, ಇಂದ್ರ ಚಂದ್ರ, ಮಹಾಮೇಧಾವಿ, ದಾರ್ಶನಿಕ ಮತ್ತಿನ್ನಿನ್ನೇನೋ ಎಂದು ಹಾಡಿ ಹೊಗಳಿ ಇನ್ನಿಲ್ಲದ ’ಅತಿವಿನಯ”ವಂತಿಕೆಯನ್ನು ತೋರ್ಪಡಿಸೋ ಸ್ಥಿತಿ ಬಂದಿರುವುದನ್ನು ಗಮನಿಸಿದಾಗ ಇದರ ಹಿಂದಿರುವ “ಧೂರ್ತತನ”ದ ವಾಸನೆ ಯಾರಿಗೇ ಆದರೂ ಬಡಿಯದೇ ಇರದು ಶಂಕರ್‌ ಸೂರ್ನಳ್ಳಿ.

ಪುರಾಣ, ಇತಿಹಾಸ ಅಥವಾ ಯಾವುದೇ ನಿರ್ದಿಷ್ಟ ವಿಚಾರವನ್ನು ತಮ್ಮ ಮೂಗಿನ ನೇರಕ್ಕೆ ಸಾಂದರ್ಭಿಕವಾಗಿ ತಿರುಚಿ ಹೇಳುವಂತಹ ಕಲೆ ನಮ್ಮ ಭೂಸುರ ಸಮುದಾಯದ್ದು. ಜಾಲತಾಣದಲ್ಲಿದ್ದ ಒಂದು ವೀಡಿಯೋ ಕ್ಲಿಪ್ಪಿಂಗ್ ಹೀಗಿದೆ. ಉತ್ತರ ಭಾರತದ ಧೀರೇಂದ್ರಶಾಸ್ತ್ರಿ ಎಂಬ ದೇವಮಾನವರು ಈರುಳ್ಳಿ ಬೆಳ್ಳುಳ್ಳಿಗಳು ಹೇಗೆ ಹುಟ್ಟಿದವು ಎಂಬುದನ್ನು ವಿವರಿಸುತ್ತಾ ಇವು ರಾಕ್ಷಸರ ಮಲದಿಂದ ಹುಟ್ಟಿದಂತವು ಹಾಗಾಗಿ ಅದು ವಾಸನೆಯಿಂದ ಕೂಡಿದೆ ಎನ್ನುತ್ತಾನೆ (ಇವು ವೈದಿಕರಿಗೆ ನಿಷಿದ್ಧ ಹಾಗಾಗಿ ಈ ಋಣಾತ್ಮಕ ಆರೋಪ) ಮತ್ತೊಂದೆಡೆ ಅನಿರುದ್ಧಾಚಾರ್ಯ ಮಹಾರಾಜ್ ಅನ್ನೋ ಮತ್ತೊಬ್ಬ ದೇವಮಾನವ ಅಮೃತದ ಎರಡು ಬಿಂದುಗಳು ಭೂಮಿಗೆ ಬಿದ್ದಾಗ ಈ ಈರುಳ್ಳಿ ಬೆಳ್ಳುಳ್ಳಿಗಳು ಹುಟ್ಟಿದವು ಎಂದು ಮತ್ತೊಂದು ಬಗೆಯ ಕತೆ ಹೇಳುತ್ತಾರೆ. ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಖಾವಿಧಾರಿ ನಾಯಿಯ ಅಂಡಕೋಶ ಮತ್ತು ಅದರ ಉಗುರೇ ಈ ಈರುಳ್ಳಿ ಬೆಳ್ಳುಳ್ಳಿಗಳಿಗೆ ಮೂಲ ಎನ್ನುತ್ತಾನೆ. ವಾಸ್ತವದಲ್ಲಿ ತೆಂಗು, ಬಾಳೆ, ಭತ್ತದಂತೆ ಪ್ರಕೃತಿ ಸಹಜವಾಗಿ ಭೂಮಿಯಲ್ಲಿ ಇವು ಹುಟ್ಟಿ ಹಬ್ಬಿದ್ದವೇ ವಿನಃ ಇವರುಗಳು ಬಿತ್ತುವ ಕತೆಯಂತಲ್ಲ. ತಮ್ಮ ಮೂಗಿನ ನೇರದ ಇವರ ಸಾಂದರ್ಭಿಕ ಬುದ್ಧಿವಂತ ವ್ಯಾಖ್ಯಾನಗಳಿಗೆ ಇದೊಂದು ಸಣ್ಣ ಉದಾಹರಣೆಯಷ್ಟೆ. ಅವರು ಹಾವನ್ನು ಹೂವು ಮಾಡಬಲ್ಲರು ಕಾಗೆಯನ್ನು ಗೂಬೆಯನ್ನಾಗಿಸಲೂಬಲ್ಲರು.

ಇದನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ ’ಜಾತ್ಯತೀತತೆ” ಎಂದರೇನೇ ಉರಿದುಕೊಳ್ಳೋ ಈ ಬ್ರಾಹ್ಮಣ್ಯ ಜೀವಿಗಳಿಗೆ ಅದೇ ರೀತಿ ದೇಶದಲ್ಲಿ ಜಾತ್ಯತೀತತೆ, ವರ್ಗ ಹಾಗು ಲಿಂಗ ಸಮಾನತೆಗೆ ಸಂವಿಧಾನದ ಮೂಲಕ ಗಟ್ಟಿ ಅಡಿಪಾಯ ಊರಿ ಹೋದ ಅಂಬೇಡ್ಕರ್ ಎಂದರೆ ಒಳಗೊಳಗೇ ಹೇಳಲಾಗದಂತಹ ತೀರಾ ಅಸಹನೆ ಇದ್ದದ್ದು ರಹಸ್ಯವೇನಲ್ಲ. ಅಂಬೇಡ್ಕರರ ಬಗ್ಗೆ ನೇರ ಟೀಕೆಗಿಳಿದು ಬಹುಸಂಖ್ಯಾತರನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲದಿದ್ದರೂ ಸಂವಿಧಾನ ಮತ್ತು ಅವರ ಕನಸಾದ ಜಾತ್ಯತೀತ ತತ್ವಗಳ ಬಗ್ಗೆ ಉರಕೊಂಡ ಭೂಸುರರು ಸಾಕಷ್ಟಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಯೊಬ್ಬರ ಸಹೋದರ ಕೋಟ ವಾಸುದೇವ ಕಾರಂತರಿಂದ ಹಿಡಿದು ಕೆಎಸ್ ನಾರಾಯಣಾಚಾರ್ಯರಂತವರ ವರೆಗೆ ಕೆಲವರು ಈ ಜಾತ್ಯತೀತತೆಯ ಬಗ್ಗೆ ತಮ್ಮ ಕೃತಿಗಳಲ್ಲಿ ನೇರವಾಗಿ ಅಸಮಾಧಾನ ತೋರಿದ್ದುಂಟು. ಈವಾಗಂತು ಅವರದೇ ರಾಜ್ಯಭಾರ. ಸಮಾನತೆ ಪ್ರತಿಪಾದಿಸುವ ಈ ಸಂವಿಧಾನವನ್ನು ಬದಲಿಸಬೇಕೆನ್ನುವ ಮಾತು ಬಿಂದಾಸ್ ಆಗಿ ಈಗ ಕೇಳಿಬರುತ್ತಿದೆ. ಇಂತಹವರುಗಳಿಗೆ ಇದೀಗ ಏಕಾಏಕಿ ಅಂಬೇಡ್ಕರ್ ಎಂದರೆ ಭೂಮಿಗಿಳಿದ ಭಗವಂತ, ಇಂದ್ರ ಚಂದ್ರ, ಮಹಾಮೇಧಾವಿ, ದಾರ್ಶನಿಕ ಮತ್ತಿನ್ನಿನ್ನೇನೋ ಎಂದು ಹಾಡಿ ಹೊಗಳಿ ಇನ್ನಿಲ್ಲದ ’ಅತಿವಿನಯ”ವಂತಿಕೆಯನ್ನು ತೋರ್ಪಡಿಸೋ ಸ್ಥಿತಿ ಬಂದಿರುವುದನ್ನು ಗಮನಿಸಿದಾಗ ಇದರ ಹಿಂದಿರುವ “ಧೂರ್ತತನ”ದ ವಾಸನೆ ಯಾರಿಗೇ ಆದರೂ ಬಡಿಯದೇ ಇರದು.

ಬಾಬಾ ಸಾಹೇಬ್ ಅಂಬೇಡ್ಕರರನ್ನು ವಿಶ್ವಜ್ಞಾನಿ ಎಂದು ಕರೆಯುವರಿದ್ದಾರೆ. ಇಷ್ಟೊಂದು ಪದವಿಗಳನ್ನು ಪಡೆದಂತವರು ಎಂದು ಮೈಲುದ್ದದ ಪಟ್ಟಿಯನ್ನೇ ನೀಡುವವರಿದ್ದಾರೆ. ಆದರೆ ಕೇವಲ ಇಂತಹವುಗಳಿಂದಲೇ ಅವರನ್ನು ಅಳೆಯುವುವುದೆಂದರೆ ಅದು ಅಂಬೇಡ್ಕರರನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂದೇ ಅರ್ಥ. ಯಾಕೆಂದರೆ, ಅಂಬೇಡ್ಕರ್ ರಾಶಿ ರಾಶಿ ಪದವಿಗಳ ಗುಡ್ಡೆಹಾಕಿ ವಿಶ್ವ ದಾಖಲೆ ಮಾಡಲು ಹೊರಟಂತವರೇನೂ ಅಲ್ಲ. ಬದಲು ಯಾತಕ್ಕಾಗಿ ಅವರು ಇಂತಹ ಶ್ರಮಕ್ಕೆ ಮುಂದಾದರು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ. ಯಾವುದೋ ದಾಖಲೆಗೋ ಅಥವಾ ನಾನೂ ನಿಮಗಿಂತ ಮೇಲು ಎಂಬುದನ್ನು ಸಾಧಿಸಿ ತೋರಿಸಲೋ ಎಂಬುದಕ್ಕಂತೂ ಖಂಡಿತಾ ಅಲ್ಲ. ಅದರ ಹಿಂದಿದ್ದದು ಕೇವಲ ಜ್ಞಾನ ಸಂಪಾದನೆಯ ಉದ್ದೇಶ ಮಾತ್ರ. ವೈದಿಕ ಶಾಸ್ತ್ರಪುರಾಣಗಳನ್ನು ವಿಮರ್ಶಿಸುವ ಮೊದಲು ಅದನ್ನವರು ಅಧ್ಯಯನ ಮಾಡುತ್ತಿದ್ದರು, ಸಂಸ್ಕೃತ ಕಲಿತರು, ಎಲ್ಲಾ ವಿಚಾರಗಳ ಜ್ಞಾನ ಸಂಪಾದನೆಗಾಗಿ ತಪಸ್ಸಿನಂತೆ ಅಧ್ಯಯನಕ್ಕಿಳಿದರು. ಅವರಿಗೆ ತಾನು ಎದುರಿಸಬೇಕಾದದ್ದು ಯಾರು ತನ್ನ ಗುರಿ ಏನು ಎಂಬುವುದರ ಬಗ್ಗೆ ಅರಿವಿತ್ತು. ಶೋಷಿತರ ದಮನಿತರ ಪರವಾಗಿ, ಅಸಮಾನತೆಯ ವಿರುದ್ಧವಾಗಿ ತಾವು ಹೊಂದಿರುವ ನಿಲುವುಗಳ ಕುರಿತಂತೆ ಅವರಿಗೆ ಸ್ಪಷ್ಟತೆಯಿತ್ತು.  ಸ್ವತಃ ಅಸ್ಪೃಶ್ಯತೆಯ ನೋವನ್ನುಂಡ ಅವರು ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಬದುಕಿನುದ್ದಕ್ಕೂ ಹೋರಾಡಿದರೇ ವಿನಹ ಅವರ ಇನ್ನಿತರ ವಿಚಾರಗಳು ಇಲ್ಲಿ ಗೌಣ.

ಅಂಬೇಡ್ಕರರು ಹಿಂದುತ್ವದ ಪರವಾಗಿದ್ದರು, ಮುಸಲ್ಮಾನರ ಬಗ್ಗೆ ಸದಭಿಪ್ರಾಯವನ್ನು ಅವರು ಹೊಂದಿರಲಿಲ್ಲ ಅವರನ್ನೆಲ್ಲ ಪಾಕಿಸ್ಥಾನಕ್ಕೆ ಕಳುಹಿಸಬಯಸಿದ್ದರು, ಅಂಬೇಡ್ಕರರಿಗೆ ಕಾಂಗ್ರೇಸ್ ಪಕ್ಷ ಆರಂಭದಿಂದ ಅವರ ಸಾವು ಮತ್ತು ಭಾರತ ರತ್ನ ಪ್ರಶಸ್ತಿಯವರೆಗೂ ಮೋಸ ಮಾಡುತ್ತಲೇ ಹೋಯಿತು ಅಂಬೇಡ್ಕರರಿಗೂ ಕಾಂಗ್ರೇಸ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದಿರಲಿಲ್ಲ ಎಂಬಿತ್ಯಾದಿಯಾಗಿ ತಮ್ಮದೇ ರೀತಿಯ ವಿತಂಡವಾದಗಳನ್ನು ಮುಂದಿಟ್ಟುಕೊಂಡು ಬ್ರಾಹ್ಮಣ್ಯವಾದಿಗಳ ಹೊಸ ಅಭಿಯಾನ ಇದೀಗ ಆರಂಭಗೊಂಡಿದೆ. ಒಟ್ಟಾರೆಯಾಗಿ ಅಂಬೇಡ್ಕರರನ್ನು ನಿಜವಾಗಿಯೂ ಪ್ರೀತಿಸುವಂತವರು ಯಾವ ಕಾರಣಕ್ಕೂ ಮುಸಲ್ಮಾನರನ್ನು ನಂಬಬಾರದು, ಅದೇರೀತಿ ಅವರಿಗೆ ದ್ರೋಹ ಮಾಡಿದ ಕಾಂಗ್ರೇಸನ್ನಂತೂ ಹತ್ತಿರಕ್ಕೇ ಸೇರಿಸಬಾರದು ಎಂದು ಬಿಂಬಿಸುವ ಹಿಡನ್ ಅಜೆಂಡಾ ಈ ಹುಸಿ ಅಂಬೇಡ್ಕರ್ ಪ್ರೀತಿಯ ಹಿಂದಿದೆಯೇ ಹೊರತು ಬೇರೆ ಯಾವ ಪ್ರಾಮಾಣಿಕ ನೈಜ ಗೌರವವೂ ಕಿಂಚಿತ್ತೂ ಕಾಣಸಿಗದು.

ಇವರುಗಳೇ ಹಿಂದೆ ಕಾಂಗ್ರೇಸ್ ಶಾಸ್ತ್ರಿಯವರಿಗೆ ಮೋಸ ಮಾಡಿತು. ಪಟೇಲರಿಗೆ ಮೋಸ ಮಾಡಿ ಪ್ರಧಾನಿ ಪಟ್ಟ ತಪ್ಪಿಸಿತು (ಹೇಳಿ ಕೇಳಿ ಪಟೇಲರು ಗೃಹಸಚಿವನಾಗಿ ತಮ್ಮ ಸಂಘಟನೆಯನ್ನೇ ಬ್ಯಾನ್ ಮಾಡಿದಂತಹ ವ್ಯಕ್ತಿ ಆಗಿದ್ದರೂ…), ಸುಭಾಶ್‌ ಚಂದ್ರ ಭೋಸರಿಗೂ ಕಾಂಗ್ರೆಸ್ ಮೋಸ ಮಾಡಿತೆಂದು ಅವರ ನಿಗೂಢ ಸಾವಿನ ಕುರಿತಂತೆಯೂ ಕತೆಗಳನ್ನು ಕಟ್ಟಿ  ಆ ಕುರಿತ ಹಳೆಯ ಫೈಲುಗಳನ್ನೆಲ್ಲ ಕೆದಕಿ ದೊಡ್ಡ ಸರ್ಕಾರಿ ತನಿಖೆಯನ್ನೇ ದಶಕದ ಹಿಂದೆ ನಡೆಸಲಾಗಿತ್ತು. ಇದೆಲ್ಲದರ ಹಿಂದೆ ಈ ಮಹಾನ್ ನಾಯಕರುಗಳ ಬಗ್ಗೆ ಇರುವ ಪ್ರಾಮಾಣಿಕ ಗೌರವಕ್ಕಿಂತ ಕಾಂಗ್ರೇಸ್ ಮತ್ತು ನೆಹರೂರವರನ್ನು ಜನರ ಮುಂದೆ ವಿಲನ್ ಆಗಿ ತೋರಿಸುವ ಕು-ತಂತ್ರಗಾರಿಕೆಯ ಪಾಲೇ ಅಧಿಕ. ಇದೇ ಚಾಳಿ ಅಂಬೇಡ್ಕರರ ಹೆಸರಲ್ಲೂ ಇದೀಗ ನಡೆಯುತ್ತಿದೆ. ಅಂಬೇಡ್ಕರರ ಹೆಗಲ ಮೇಲೆ ಬಂದೂಕನ್ನಿಟ್ಟು ಮುಸಲ್ಮಾನರನ್ನು ಮತ್ತು ಕಾಂಗ್ರೇಸನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿದ ಅಥವಾ ತಮ್ಮ ಅರ್ಧಸತ್ಯ ಕಥನಗಳ ಮೂಲಕ ಹಳಿಯಲಾಗುತ್ತಿದೆ. ಕಾಗದದ ಮೇಲೆ ಬರೆದಂತಹ ದೊಡ್ಡ ಗೆರೆಯನ್ನು ಮುಟ್ಟದೇ ಚಿಕ್ಕದಾಗಿಸುವುದು ಕಷ್ಟ. ಆದರೆ ತಂತ್ರಗಾರಿಕೆಯಿಂದ ಇದು ಅಸಾಧ್ಯವೇನಲ್ಲ. ಅದರ ಪಕ್ಕದಲ್ಲಿ ಅದಕ್ಕಿಂತ ದೊಡ್ಡ ಗೆರೆಯನ್ನು ಎಳೆದರೆ ಮೊದಲಿನ ಗೆರೆ ತಂತಾನೆ ಚಿಕ್ಕದಾಗಿ ಬಿಡುತ್ತದೆ. ಅಂಬೇಡ್ಕರ್ ಕುರಿತಂತೆ ಮನಸ್ಸಲ್ಲಿ ದ್ವೇಷವಿದ್ದರೂ (ಈ ಕುರಿತಂತೆ ಸಾಕಷ್ಟು ಐತಿಹಾಸಿಕ ರುಜುವಾತುಗಳಿವೆ) ಬಹಿರಂಗ ತೋರಿಕೆಗಾಗಿ ಅಂಬೇಡ್ಕರರನ್ನು ಇನ್ನಿಲ್ಲದಂತೆ ಹೊಗಳಿ ಅಟ್ಟಕ್ಕೇರಿಸುವುದರ ಹಿಂದಿರುವುದು  ಕೂಡ ಇಂತದ್ದೇ ತಂತ್ರಗಾರಿಕೆ.

ಇವರ ಈ ಬಣ್ಣದ ನಾಜೂಕಿನ ಮಾತುಗಳನ್ನು ಕೇಳಿಸಿಕೊಳ್ಳುವ ಇತಿಹಾಸದ ನೋವುಗಳ ಅರಿವಿರದ ಯುವ ಜನತೆ ಹೌದಲ್ಲ, ಈ ತನಕ ನಾವು ಯಾರೋ ಅಯೋಗ್ಯರನ್ನು ನಮ್ಮವರೆಂದು ನಂಬಿದ್ದೆವು. ಆದರೆ ನಿಜವಾದ ನಮ್ಮವರು ಇವರೇ ಎಂದು ಸುಲಭದಲ್ಲಿ ಹಳ್ಳಕ್ಕೆ ಬೀಳುತ್ತಾರೆ.

ಬಹುಸಂಖ್ಯಾತ ದಲಿತ ಸಮುದಾಯ ಮುಸಲ್ಮಾನರೊಂದಿಗೆ ಸೇರಿ ಬೆರೆಯುವ ಸಂಗತಿ ಇವರುಗಳಿಗೆ ಯಾವತ್ತಿದ್ದರೂ ಅಪಥ್ಯವೇ. ಹಿಂದೆ ಪೇಜಾವರ ಸ್ವಾಮೀಜಿಯವರು ಸಿದ್ದರಾಮಯ್ಯನವರ ಅಹಿಂದ ಚಳುವಳಿಯ ಕುರಿತು “ಈ ಅಹಿಂದದ ’ಅ’ ತೆಗೆದರೆ ನನ್ನದೂ ಬೆಂಬಲವಿದೆ“ ಎಂದಿದ್ದರು. ಈ ಅಲ್ಪಸಂಖ್ಯಾತ ಅದರಲ್ಲೂ ಮುಸಲ್ಮಾನ ಸಮುದಾಯ ದಲಿತರೊಂದಿಗೆ ಬೆರೆಯುವುದನ್ನು ಇವರು ಯಾವತ್ತಿಗೂ ಕೂಡ ಒಪ್ಪರು.  (ಹಳೆಪೇಜಾವರರ ಡ್ರೈವರ್ ಮಾತ್ರ ಮುಸಲ್ಮಾನ. ಆದರೆ ದಲಿತರು ಮಾತ್ರ ಸಾಬರನ್ನ ನಂಬಬಾರದು ಎಂಥಾ ವಿಚಿತ್ರ..) ಅಂಬೇಡ್ಕರ್ ಕುರಿತ ಇವರ ಬಣ್ಣಬಣ್ಣದ ಮಾತುಗಳ, ’ಕರಳು ಕಿತ್ತು ಬರುತ್ತೆ ಕಣ್ರೀ..’ ಎನ್ನುವ ಕಕಿಬಕ ಕಥನಗಳ ಹಿಂದಿರುವುದು ವಿಭಜಿಸುವ ತಂತ್ರಗಾರಿಕೆಯೇ ಹೊರತು ನೈಜ ಅಂಬೇಡ್ಕರ್ ಪ್ರೇಮವಲ್ಲ.

ತೀರಾ ಅಲ್ಪಸಂಖ್ಯಾತರಾದ ಬ್ರಾಹ್ಮಣ್ಯವಾದಿ ಸಮುದಾಯದ ಈ ಭಯ ಸಹಜವಾದದ್ದೇ. ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಸಮುದಾಯವನ್ನು ಹೊರ ಹೋಗಗೊಡದೇ ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಯಾವತ್ತಿಗೂ ಈ ಸಮುದಾಯಕ್ಕಿದೆ. ತಮ್ಮದು ಏನಿದ್ದರೂ ಕೋಣೆಯೊಳಗಿನ ತಂತ್ರಗಾರಿಕೆಯಾದರೆ ಮಸಲ್ ಪವರ್ರೂ ಹೊಡೆದಾಟ ಬಡಿದಾಟಕ್ಕೆ ಇವರೇ ಬೇಕು ತಾನೇ.. ತಮಗೆ ಸಂಬಂಧವಿರದ ಲವ್ ಜೆಹಾದ್, ಗೋಮಾತೆ ಎಂದು ಸಾಬರ ವಿರುದ್ಧ ತೊಡೆತಟ್ಟಲು, ಮತಾಂತರ ಎಂದು ಏಸು ಪ್ರತಿಮೆಯ ಕೈಕಾಲು ಮುರಿಯಲು ಚರ್ಚ್ ದಾಳಿ ನಡೆಸಲು ನೂಲೆಳೆಧಾರಿಗಳನ್ನು ಕಳಿಸುವುದು ಶಾಸ್ತ್ರಗಳ ಪ್ರಕಾರ ನಿಷಿದ್ಧವಂತೆ. ಅವರೆಲ್ಲ ಫಾರಿನ್ ಗೆ ಹಾರಿ ಹೈಯರ್ ಸ್ಟಡೀಸ್ ಮತ್ತು ಉದ್ಯೋಗಗಳಿಗಷ್ಟೇ ಲಾಯಕ್ಕು!

ಬ್ರಾಹ್ಮಣ್ಯದ ಉನ್ನತೀಕರಣದ ಗುಪ್ತ ನೆವನದಲ್ಲಿ ಬ್ರಾಹ್ಮಣ್ಯವನ್ನು ಕಡೆತನಕ ದೂರೀಕರಿಸಿಟ್ಟಿದ್ದ ಸ್ವಯಂ ಅಂಬೇಡ್ಕರರನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಇವರ ಬುದ್ದಿವಂತಿಕೆಗಂತು ಸಾಟಿಯೇ ಇಲ್ಲ ಬಿಡಿ.

ಶಂಕರ್ ಸೂರ್ನಳ್ಳಿ

ಸಾಮಾಜಿಕ ಚಿಂತಕರು

ಇದನ್ನೂ ಓದಿ- ದೇವರ ಊರಿನಲ್ಲಿ ಮನುಷ್ಯ ಸತ್ತರೆ ಹೂಳಲು ಸ್ಥಳವಿಲ್ಲ??



More articles

Latest article