ಮಾಂಸಾಹಾರ ಕುರಿತಾದ ಪ್ರಶ್ನೆ ಕೇವಲ ನೆಪ ಅಷ್ಟೇ. ಈ ಬಂಡಾಯದ ಹಿಂದೆ ಇರುವ ಅಸಲಿ ಕಾರಣ ಬೇರೆ ಇದೆ. ವೈದಿಕಶಾಹಿ ಎಂಬುದು ಸಸ್ಯಾಹಾರ ಶ್ರೇಷ್ಠತೆಯ ಮೂಲಕ ಹುಟ್ಟುಹಾಕಿದ ಆಹಾರ ರಾಜಕಾರಣದ ವಿರುದ್ಧದ ಧ್ವನಿಯಾಗಿದೆ. ಇಷ್ಟು ಕಾಲ ಇಲ್ಲದ ಆಗ್ರಹ ಈಗ್ಯಾಕೆ ಎಂದು ಕೇಳಬಹುದು. ಈಗ ಕಾಲ ಬದಲಾಗಿದೆ. ಯುವ ಪೀಳಿಗೆಯ ಅಶೋತ್ತರಗಳು ಭಿನ್ನವಾಗಿವೆ. ಬ್ರಾಹ್ಮಣ್ಯದ ಆಹಾರ ರಾಜಕಾರಣ ಗೊತ್ತಾಗಿದೆ. ತಿನ್ನುವ ಊಟದಲ್ಲೂ ತಾರತಮ್ಯ ಮಾಡುವ ಸಾಹಿತ್ಯ ಪರಿಷತ್ತಿನ ಸಂಪ್ರದಾಯ ಮಾನವ ವಿರೋಧಿ ಎಂಬುದು ಅರಿವಾಗಿದೆ. ಅದಕ್ಕಾಗಿಯೇ ಈ ಸಲ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರಕ್ಕೂ ಬೇಡಿಕೆ ಬಂಡಾಯದ ರೂಪದಲ್ಲಿ ಹೊರಹೊಮ್ಮಿದೆ. ಇದು ಶ್ರೇಷ್ಠತೆಯ ವ್ಯಸನಪೀಡಿತರ ವಿರುದ್ಧದ ಪ್ರತಿಭಟನೆಯಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಊಟ ಉಡುಪುಗಳಲ್ಲೂ ವ್ಯತ್ಯಾಸ ಹುಡುಕುವ ಉಡಾಫೆತನ, ಆಹಾರ ಕ್ರಮದಲ್ಲೂ ಮೇಲು ಕೀಳು, ಪವಿತ್ರ ಅಪವಿತ್ರ ಎನ್ನುವ ಉಪದ್ಯಾಪಗಳು ಬಹುಷಃ ನಮ್ಮ ದೇಶದಲ್ಲೇ ಅತಿಯಾಗಿವೆಯೇನೋ?
ಆಹಾರ ಸಂಸ್ಕೃತಿಯಲ್ಲಿ ವೈದಿಕಶಾಹಿ ಹುಟ್ಟಿಸಿದ ಕೀಳು ಮತ್ತು ಮೇಲರಿಮೆಗಳು ನಾಗರೀಕ ಸಮಾಜದ ನರನಾಡಿಗಳಲ್ಲಿ ಹರಿದಾಡುತ್ತಲೇ ಇವೆ. ಮಾಂಸಾಹಾರದ ಕುರಿತು ಒಂದು ರೀತಿಯ ಪೂರ್ವಗ್ರಹಪೀಡಿತ ಕೀಳರಿಮೆಯನ್ನು ಮಾಂಸಾಹಾರಿಗಳಲ್ಲೂ ಬಿತ್ತುವಲ್ಲಿ ಬ್ರಾಹ್ಮಣ್ಯ ಯಶಸ್ವಿಯಾಗಿದೆ.
ವೇದಕಾಲದ ಸನಾತನಿ ಋಷಿ ಮುನಿಗಳೇ ಮಾಂಸಾಹಾರಿಗಳಾಗಿದ್ದರು ಎನ್ನುವುದನ್ನು ಮರೆಮಾಚಿ ಸಸ್ಯಾಹಾರಿ ಶ್ರೇಷ್ಠತೆಯ ವ್ಯಸನವನ್ನು ಪಸರಿಸುವ ಮಾನವ ವಿರೋಧಿ ಕ್ರಮಗಳನ್ನು ದೇವರು ಮತ್ತು ಧರ್ಮದ ಹೆಸರಲ್ಲಿ ಪುರೋಹಿತಶಾಹಿ ವರ್ಗ ಅವ್ಯಾಹತವಾಗಿ ಆಚರಣೆಗೆ ತರುವ ಪ್ರಯತ್ನವನ್ನು ಶತಮಾನಗಳಿಂದ ಮಾಡುತ್ತಲೇ ಇದೆ.
ಜನಸಂಖ್ಯೆಯ ಅಧಾರದಲ್ಲಿ ಲೆಕ್ಕಹಾಕಿದರೆ ಮಾಂಸಾಹಾರಿಗಳೇ ಬಹುಸಂಖ್ಯಾತರಾಗಿದ್ದು ಸಸ್ಯಾಹಾರಿಗಳು ಅಲ್ಪಸಂಖ್ಯಾತರು. ಹಿಂದುಳಿದ ಶೂದ್ರ ದಲಿತ ಆದಿವಾಸಿಗಳಲ್ಲಿ ಬಹುತೇಕರ ಆಹಾರ ಮಾಂಸಾಹಾರ. ಆದರೂ ಈ ಮಾಂಸಾಹಾರಿಗಳಲ್ಲೇ ಬಹುಸಂಖ್ಯಾತರ ಮೆದುಳಲ್ಲಿ ಮಾಂಸಾಹಾರ ಕುರಿತು ಒಂದು ರೀತಿಯ ಕೀಳರಿಮೆಯನ್ನು ಮೇಲ್ವರ್ಗದವರು ಹುಟ್ಟುಹಾಕಿದ್ದಾರೆ. ಶನಿವಾರ ಆ ದೇವರ ವಾರ, ಸೋಮವಾರ ಈ ದೇವರ ದಿನ, ಗುರುವಾರ ಬ್ರಾಹ್ಮಣೋತ್ತಮ ಸ್ವಾಮಿಗಳ ದಿನ.. ಹೀಗಾಗಿ ಈ ಪವಿತ್ರ ದಿನಗಳಂದು ಮಾಂಸಾಹಾರ ತಿನ್ನಬಾರದು, ತಿಂದರೆ ಆಯಾ ದೇವರುಗಳು ಮೆಚ್ಚುವುದಿಲ್ಲ ಎನ್ನುವ ಹುಸಿ ಸಂಕಥನದ ಮೌಲ್ಯವನ್ನು ಹುಟ್ಟಿಸಲಾಗಿದೆ. ಮೀನು ಮಾಂಸವನ್ನು ತಿಂದವರು ದೇವಸ್ಥಾನಕ್ಕೆ ಹೋಗುವಂತಿಲ್ಲ ಎಂಬ ಸನಾತನ ಮೌಢ್ಯವನ್ನು ಜನಮಾನಸದಲ್ಲಿ ಬಿತ್ತಲಾಗಿದೆ. ಕಾರ್ತಿಕ ಮಾಸ ಮಾಂಸ ಸೇವನೆ ವರ್ಜ್ಯ, ಅಯ್ಯಪ್ಪನ ಭಕ್ತರಿಗೆ ಮಾಂಸಾಹಾರ ತ್ಯಾಜ್ಯ. ಹಿಂದೂ ಹಬ್ಬ ಹರಿದಿನಗಳಂದು ನಾನ್ ವೆಜ್ ನಿಷಿದ್ಧ, ಗಾಂಧಿ ಜಯಂತಿ, ಮಹಾವೀರ ಜಯಂತಿಗಳಂದು ಮಾಂಸಾಹಾರ ಮಾರಾಟವೇ ನಿಷೇಧ.. ಹೀಗೆ ಮಾಂಸಾಹಾರದ ಮೇಲೆ ಅನೇಕಾನೇಕ ನಿಬಂಧನೆಗಳನ್ನು ಮಾಂಸಾಹಾರಿಗಳೇ ವಿಧಿಸಿಕೊಳ್ಳುವಂತೆ ಭಯ ಭಕ್ತಿಗಳನ್ನು ಸೃಷ್ಟಿಸಲಾಗಿದೆ.
ಇದೆಲ್ಲಾ ಮತ್ತೇನಿಲ್ಲ, ಆಹಾರ ಸಂಸ್ಕೃತಿಯನ್ನು ನಿಯಂತ್ರಿಸುವ ಮೂಲಕ ಬ್ರಾಹ್ಮಣ್ಯವು ತನ್ನ ಪರಂಪರಾಗತ ಮೌಢ್ಯಾಚರಣೆಗಳನ್ನು ಮುಂದುವರೆಸಿಕೊಂಡು ಹೋಗುವ ತಂತ್ರಗಾರಿಕೆಯಾಗಿದೆ. ಹಸಿವೆ ನೀಗಿಸಿಕೊಳ್ಳಲು ತಿನ್ನುವ ಆಹಾರದಲ್ಲೂ ಪವಿತ್ರಾಪವಿತ್ರ್ಯಗಳನ್ನು ಆರೋಪಿಸಿ ಮಾಂಸಾಹಾರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರಕ್ಕೆ ಶತಮಾನಗಳ ಇತಿಹಾಸವಿದೆ.
ಈಗ…ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಆಹಾರ ಸಂಸ್ಕೃತಿ ಕುರಿತು ವಾದವಿವಾದಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಾರಕಕ್ಕೇರಿದೆ. ಮಂಡ್ಯದಲ್ಲಿ ವಿವಿಧ ರೀತಿಯ ಪ್ರತಿಭಟನೆಗಳೂ ನಡೆಯುತ್ತಿವೆ. ಸುಮ್ಮನಿರದೇ ಇರುವೆ ಬಿಟ್ಟುಕೊಳ್ಳುವುದರಲ್ಲಿ ಹೆಸರುವಾಸಿಯಾಗಿರುವ ಗುರು ಗೋವಿಂದ ಭಟ್ಟರ ಸಂತಾನವೆಂದು ಹೇಳಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷರು ಹೊರಡಿಸಿದ ನಿಬಂಧನೆ ವಿವಾದದ ಬೆಂಕಿಗೆ ಇಂಧನ ಸುರಿದಂತಾಗಿದೆ.
ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ “ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ” ಎಂದು ಹೊರಡಿಸಲಾದ ನಿಬಂಧನೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯ ಹಾಗೂ ತಂಬಾಕು ಸೇವನೆ ಏನೋ ಆರೋಗ್ಯಕ್ಕೆ ಮಾರಕ ಹೀಗಾಗಿ ಅವುಗಳನ್ನು ನಿಷೇಧಿಸಿದ್ದೇನೋ ಸರಿ. ಆದರೆ ಮಾಂಸಾಹಾರ ಸೇವನೆಯಿಂದ ಯಾರಿಗೆ ಮಾರಕವಾಗುತ್ತದೆ? ಎಂದು ಜನರು ಈ ವೈದಿಕ ವಟು ಮಹೇಶ್ ಜೋಶಿಯವರ ಬ್ರಾಹ್ಮಣ್ಯದ ನಿಲುವನ್ನು ಪ್ರಶ್ನಿಸುತ್ತಿದ್ದಾರೆ.
ಸಮ್ಮೇಳನ ನಡೆಯುತ್ತಿರುವುದು ಒಕ್ಕಲಿಗರ ಪ್ರಾಬಲ್ಯದ ಮಂಡ್ಯದಲ್ಲಿ. ಮಾಂಸಾಹಾರ ಸೇವನೆ ಆ ಸಮುದಾಯದ ಆಹಾರ ಸಂಸ್ಕೃತಿಯ ಭಾಗವೇ ಆಗಿದೆ. ಆ ಪ್ರದೇಶದ ಅಹಿಂದ ವರ್ಗ ಬಾಡು ತಿನ್ನದೇ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಮಾಂಸಾಹಾರ ನಿಷೇಧಿಸಲಾದ ನಿಬಂಧನೆ ಹಾಕಿದರೆ ಪ್ರತಿರೋಧ ಬರದೇ ಇದ್ದೀತೇ? ಸಾಹಿತ್ಯ ಅಂದರೆ ಅದು ಕೇವಲ ಪುಳುಚ್ಚಾರರ ಸ್ವತ್ತಾಗಿದೆಯಾ? ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕುವೆಂಪು ಆದಿಯಾಗಿ ಬಹುತೇಕ ಸಾಹಿತಿಗಳು ಮಾಂಸಾಹಾರಿಗಳಾಗಿರಲಿಲ್ಲವೇ? “ಮಾಂಸಾಹಾರಿಗಳೂ ಸರಕಾರಕ್ಕೆ ತೆರಿಗೆ ಕಟ್ಟುತ್ತಾರೆ. ಆ ತೆರಿಗೆ ಹಣದಿಂದಲೇ ಈ ಸಮ್ಮೇಳನ ನಡೆಯುತ್ತಿದೆ. ಮಾಂಸಾಹಾರಿಗಳೇ ಅಧಿಕವಾಗಿರುವ ಸರಕಾರಿ ನೌಕರರೆಲ್ಲಾ ತಮ್ಮ ಒಂದು ದಿನದ ಸಂಬಳವನ್ನು ಈ ಸಮ್ಮೇಳನಕ್ಕೆ ದಾನವಾಗಿ ಕೊಟ್ಟಿದ್ದಾರೆ. ಹೀಗಿರುವಾಗ ಮಾಂಸಾಹಾರಿಗಳ ಹಣ ಬೇಕು ಆದರೆ ಅವರ ಆಹಾರ ಸಂಸ್ಕೃತಿಯನ್ನು ಅಪಮಾನ ಮಾಡಬೇಕು ಎನ್ನುವುದು ಅಸಹನೀಯ” ಎನ್ನುವ ಆಕ್ಷೇಪ ಕೇಳಿಬರುತ್ತಿದೆ.
“ಸಾಹಿತ್ಯ ಸಮ್ಮೇಳನ ಸಸ್ಯಹಾರಿಗಳಿಗೆ ಮಾತ್ರವಾಗಿದ್ದರೆ ಅಖಿಲ ಭಾರತ ಸಸ್ಯಾಹಾರಿ ಸಾಹಿತ್ಯ ಸಮ್ಮೇಳನ ಎಂದು ಹೆಸರು ಬದಲಾಯಿಸಿಕೊಳ್ಳಲಿ. ಕನ್ನಡಿಗರ ಹಣದಿಂದ ನಡೆಸುವ ಸಮ್ಮೇಳನದಲ್ಲಿ ಹೀಗೆ ಆಹಾರ ಸಂಸ್ಕೃತಿಗೆ ಅವಮಾನ ಮಾಡುವುದು ಅಕ್ಷಮ್ಯ” ಎನ್ನುವುದು ಹಲವರ ಆರೋಪವಾಗಿದೆ. “ತಿನ್ನುವ ಆಹಾರದಲ್ಲಿ ಮೇಲು ಕೀಳು ತಾರತಮ್ಯ ಮನೋಭಾವ ವಿನಾಶವಾಗಬೇಕು” ಎಂದು ಪೋಸ್ಟರ್ ಹಿಡಿದು ಕೆಲವರು ಪ್ರತಿಭಟಿಸಿದರೆ, ಇನ್ನು ಕೆಲವರು ‘ಬಾಡೇ ನಮ್ಮ ಗಾಡು” ಎಂದು ಧ್ವನಿ ಎತ್ತಿದ್ದಾರೆ. ‘ಮಂಡ್ಯದ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಒದಗಿಸಬೇಕು’ ಎಂದು ಉಸ್ತುವಾರಿ ಸಚಿವರಿಗೆ ಸಂಘಟನೆಯೊಂದು ಮನವಿ ಮಾಡಿದೆ. ‘ಸಮ್ಮೇಳನದಲ್ಲಿ ಮಾಂಸಾಹಾರವನ್ನೂ ನೀಡುವ ಮೂಲಕ ಮಂಡ್ಯ ಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. ಮನೆಗೊಂದು ಕೋಳಿ ಸಂಗ್ರಹಿಸಿ ಸಮ್ಮೇಳನದಲ್ಲಿ ಚಿಕನ್ ಹಂಚಲಾಗುವುದು ಎಂದು ಸಂಘಟನೆಯೊಂದು ಘೋಷಿಸಿದೆ.
“ಹೇ ಇದೆಲ್ಲಾ ಸಾಧ್ಯವಿಲ್ಲ ಬಿಡಿ. ಇಲ್ಲಿವರೆಗೂ ನಡೆದ 86 ಸಮ್ಮೇಳನಗಳಲ್ಲೇ ಎಂದೂ ಮಾಂಸಾಹಾರ ನೀಡಿಲ್ಲ. ಸಮ್ಮೇಳನಕ್ಕೆ ಸೇರುವ ಲಕ್ಷಾಂತರ ಜನರಿಗೆ ಬಾಡೂಟ ಹಾಕಲು ಸಾಧ್ಯವೂ ಇಲ್ಲ” ಎಂದು ನಾನ್ವೆಜ್ ವಿರೋಧಿಗಳು ತಮ್ಮ ವಾದ ಮಂಡಿಸಿದ್ದಾರೆ.
ಇಷ್ಟಕ್ಕೂ ಸಮ್ಮೇಳನದ ಆವರಣದಲ್ಲಿ ಮಾಂಸಾಹಾರ ಪ್ರಿಯರಿಗೆ ಬಾಡೂಟದ ವ್ಯವಸ್ಥೆ ಮಾಡಿದರೆ ಪರಿಷತ್ತಿಗೆ ಬರುವ ಆಪತ್ತಾದರೂ ಏನು? ಇಲ್ಲಿವರೆಗೂ ಯಾವುದೇ ಸಮ್ಮೇಳನದಲ್ಲಿ ಮಾಂಸಾಹಾರ ಪೂರೈಕೆ ಮಾಡಿಲ್ಲವೆಂದರೆ ಈಗ ಆ ಅಘೋಷಿತ ನಿಬಂಧನೆಯನ್ನು ಮುರಿದರೆ ಆಗುವಂತಹ ಅನಾಹುತವಾದರೂ ಏನು? ಆಯ್ತು ಲಕ್ಷಾಂತರ ಜನರಿಗೆ ಮಾಂಸಾಹಾರ ಒದಗಿಸಲು ಪರಿಷತ್ತಿಗೆ ಸಾಧ್ಯವಾಗುವುದಿಲ್ಲ ಎಂದುಕೊಳ್ಳೋಣ. ಮಾಂಸಾಹಾರಿಗಳಿಗಾಗಿ ನಾನ್ವೆಜ್ ಮಾರಾಟ ಮಳಿಗೆಗಳಿಗೆ ಅವಕಾಶ ಮಾಡಿಕೊಡಬಹುದಾಗಿದೆ. ಇಷ್ಟ ಇರುವವರು ಹಣ ಕೊಟ್ಟು ಖರೀದಿಸಿ ತಿನ್ನಬಹುದಾಗಿದೆ. ಆಹಾರ ಮಾರಾಟ ಮಳಿಗೆಗಳಿಗೆ ಹೆಚ್ಚಿನ ಬಾಡಿಗೆ ವಿಧಿಸಿದರೆ ಪರಿಷತ್ತಿಗೂ ಒಂದಿಷ್ಟು ಹೆಚ್ಚುವರಿ ಆದಾಯವೂ ಬರಬಹುದಾಗಿದೆ.
ಆದರೆ ಇಲ್ಲಿವರೆಗೂ ಆಹಾರ ಸಂಸ್ಕೃತಿಗೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ತಿನ ಯಾವುದೇ ಅಧ್ಯಕ್ಷರೂ ಮಾಡದ ನಿರ್ಧಾರವನ್ನು ಬ್ರಾಹ್ಮಣ್ಯವನ್ನೇ ಮೈಮನಸು ಮೆದುಳಿಗೆ ಮೆತ್ತಿಕೊಂಡಿರುವ ಮಹಾ ಬ್ರಾಹ್ಮಣ ಮಹೇಶ್ ಜೋಶಿ ತೆಗೆದುಕೊಳ್ಳುತ್ತಾರೆ ಎಂದು ಅಪೇಕ್ಷಿಸುವುದೇ ತಪ್ಪು. ಎಷ್ಟೇ ವಿರೋಧ ಬಂದರೂ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೆ ವೈದಿಕಶಾಹಿ ಪ್ರಣೀತ ಸಂಕಥನಗಳ ಪರಂಪರೆ ಮುಂದುವರೆಯುವುದು ಖಚಿತ.
ಇದು ಗೊತ್ತಿದ್ದರೂ ಆಹಾರ ಸಂಸ್ಕೃತಿಯ ಮೇಲೆ ಬ್ರಾಹ್ಮಣ್ಯದ ಹೇರಿಕೆಯನ್ನು ಪ್ರತಿರೋಧಿಸಲೇ ಬೇಕಿದೆ. ಮಾಂಸಾಹಾರಿ ಮತ್ತು ಸಸ್ಯಾಹಾರಿಗಳ ನಡುವೆ ವೈದಿಕಶಾಹಿಗಳು ಸೃಷ್ಟಿಸಿದ ಮೇಲು ಕೀಳಿನ ಕಟ್ಟುಪಾಡುಗಳನ್ನು ಕುಟ್ಟಿ ಪುಡಿಗಟ್ಟಬೇಕಿದೆ. ಜನರು ಸೇವಿಸುವ ಆಹಾರ ಪದ್ಧತಿಯಲ್ಲೂ ಶ್ರೇಷ್ಠತೆಯ ವ್ಯಸನವನ್ನು ಹುಟ್ಟುಹಾಕಿರುವ ಪುರೋಹಿತಶಾಹಿಗಳ ಪರಂಪರಾಗತ ಹುನ್ನಾರವನ್ನು ಬಯಲು ಮಾಡಲಾದರೂ ಸಾಹಿತ್ಯ ಪರಿಷತ್ತಿನ ನಿರ್ಧಾರವನ್ನು ಖಂಡಿಸಬೇಕಿದೆ. ಮಂಡ್ಯದ ಸಮ್ಮೇಳನದಲ್ಲಿ ‘ಆಹಾರ ಸಂಸ್ಕೃತಿ ಜನತೆಯ ಹಕ್ಕು’ ಎನ್ನುವ ವಿಷಯದ ಮೇಲೆ ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಬೇಕೆಂದು ಸಾಹಿತ್ಯ ಪರಿಷತ್ತಿನ ಆಯೋಜಕರ ಮೇಲೆ ಒತ್ತಡ ಹೇರಬೇಕಿದೆ. ಜೊತೆಗೆ ಸಮ್ಮೇಳನದ ಪ್ರದೇಶದ ಹೊರಗಡೆ, ಪ್ರವೇಶದ್ವಾರದ ಮುಂದುಗಡೆ ಮಾಂಸಾಹಾರದ ಮಳಿಗೆಗಳನ್ನು ತೆರೆಯಿಸಿ ಪರಿಷತ್ತಿನ ಆಹಾರ ಸಂಸ್ಕೃತಿ ವಿರೋಧಿತನಕ್ಕೆ ಪ್ರತಿರೋಧ ತೋರಬೇಕಿದೆ.
ಆಹಾರ ಜನರ ಹಕ್ಕು. ಅವರವರಿಗೆ ಇಷ್ಟವಾದದ್ದನ್ನು ಅವರವರು ಸೇವಿಸಲು ಯಾವುದೇ ಸಂಪ್ರದಾಯ ಪರಂಪರೆಗಳು ಅಡ್ಡಿ ಮಾಡುವುದೇ ಅಸಂವಿಧಾನಿಕ. ಧಾರ್ಮಿಕ ಆಚರಣೆಯ ಹಕ್ಕಿನಂತೆಯೇ ಆಹಾರ ಸೇವನೆಯ ಹಕ್ಕೂ ಕೂಡಾ ಸಾಂವಿಧಾನಿಕವಾಗಿ ಬಂದ ಬಳುವಳಿಯಾಗಿದೆ. ಆಹಾರದ ವಿಷಯದಲ್ಲಿ ತಾರತಮ್ಯ ಮಾಡುವವರು, ಅನ್ಯರ ಆಹಾರ ಕ್ರಮವನ್ನು ವಿರೋಧಿಸುವವರು ಹಾಗೂ ಹೇರಿಕೆ ಮಾಡುವವರು ಸಂವಿಧಾನ ದ್ರೋಹಿಗಳಾಗುತ್ತಾರೆ. ಅಂತಹ ದ್ರೋಹವನ್ನು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳಿಕೊಳ್ಳುವ ಸಾಹಿತ್ಯ ಪರಿಷತ್ತಿನಿಂದ ಆಗದೇ ಇರಲಿ ಎಂಬುದು ಕನ್ನಡಿಗರ ಆಶಯವಾಗಲಿ. ಊಟದ ವಿಷಯದಲ್ಲಿ ಯಾವುದೇ ರೀತಿಯ ನಿಬಂಧನೆ, ನಿಷೇಧ ಹಾಗೂ ಹೇರಿಕೆಗಳನ್ನು ವಿರೋಧಿಸುವ ಮೂಲಕ ಸಾಹಿತಿಗಳು ಹಾಗೂ ಸಾಹಿತ್ಯ ಪರಿಷತ್ತಿನ ಸಮಸ್ತ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯಲಿ. ಮಂಡ್ಯ ಸಾಹಿತ್ಯ ಸಮ್ಮೇಳನ ಆಹಾರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲಿ.
ಇಷ್ಟಕ್ಕೂ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ ವಿಚಾರ, ಜನಪರ ಆಚಾರಗಳು ಸುದ್ದಿಯಾಗಬೇಕಿತ್ತು. ಆದರೆ ಹೀಗೆ ಆಹಾರ ಸಂಸ್ಕೃತಿಯಲ್ಲಿ ಭಿನ್ನಬೇಧ ಮಾಡುವ ಮೂಲಕ ಪರಿಷತ್ತು ಅನಗತ್ಯ ವಾದವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇತ್ತೀಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಕ ಸಾಮಾಜಿಕ ಚರ್ಚೆ ಚಿಂತನೆಗಳ ನೆಪದಲ್ಲಿ ರಾಜಕೀಯದವರ ಮೆರೆದಾಟವೇ ಅತಿಯಾಗುತ್ತಿದೆ. ಸರಕಾರದಿಂದ ಸಮ್ಮೇಳನಕ್ಕೆ 25 ಕೋಟಿ ಅನುದಾನ ಕೊಟ್ಟಿರುವಾಗ ಸರಕಾರಿ ಅಧಿಕಾರಸ್ಥರು ಸಮ್ಮೇಳನದಲ್ಲಿ ಮೆರೆಯದೇ ಇರಲು ಹೇಗೆ ಸಾಧ್ಯ? ಪ್ರತಿ ಸಲದ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಿರ್ಲಕ್ಷ್ಯ ವಹಿಸುವ ಆಳುವ ಸರಕಾರದ ಮಂತ್ರಿಗಳು, ಶಾಸಕರುಗಳು ಸಮ್ಮೇಳನದಲ್ಲಿ ವೇದಿಕೆ ಏರಿ ರಾಜಕೀಯ ಭಾಷಣ ಮಾಡುವಲ್ಲಿ ಮುಂಚೂಣಿಯಲ್ಲಿರುವುದು ಸಾಹಿತ್ಯ ಕ್ಷೇತ್ರದ ದೌರ್ಭಾಗ್ಯ. ಅದೇ ರೀತಿ ಸಾಹಿತ್ಯದ ಹೆಸರಲ್ಲಿ ಸಮ್ಮೇಳನದಾದ್ಯಂತ ನಡೆಯುವ ಸನ್ಮಾನ ಗೌರವಾರ್ಪಣೆಗಳಂತೂ ರೇಜಿಗೆ ಹುಟ್ಟಿಸುವಷ್ಟು ಹೆಚ್ಚಾಗಿವೆ.
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ ಸಭೆಗಳಲ್ಲಿ ಕಡಿಮೆ ಜನರಿದ್ದರೆ ಹೊರಗೆ ಊಟದ ಸಾಲಿನಲ್ಲಿ, ಮಳಿಗೆಗಳ ಅಂಗಳಗಳಲ್ಲಿ ಜನರ ಜಾತ್ರೆ ನೆರೆದಿರುತ್ತದೆ. ಕವಿಗೋಷ್ಟಿಗಳಲ್ಲಂತೂ ಖಾಲಿ ಕುರ್ಚಿಗಳೇ ಕಾಣುತ್ತವೆ. ಹೀಗಿರುವಾಗ..ಜನರ ತೆರಿಗೆಯ ಹಣದಲ್ಲಿ ನಡೆಯುವ ಈ ಈವೆಂಟ್ ಯಾರಿಗಾಗಿ? ಯಾತಕ್ಕಾಗಿ? ಯಾವ ಸಾಧನೆಗಾಗಿ? ಎನ್ನುವ ಪ್ರಶ್ನೆಗಳು ಕಾಡದೇ ಇರಲಾರವು. ಸಾಹಿತ್ಯ ಎನ್ನುವುದು ಇಲ್ಲಿ ನೆಪ ಮಾತ್ರ. ಊಟ ವ್ಯಾಪಾರಗಳೇ ಸಮ್ಮೇಳನದ ಮುಖ್ಯ ಪಾತ್ರ.
ಇಲ್ಲಾ.. ಇಲ್ಲಿ ಎಲ್ಲವೂ ಬದಲಾಗಬೇಕಿದೆ. ಆಹಾರ ಸಂಸ್ಕೃತಿಯಿಂದ ಹಿಡಿದು ಸನ್ಮಾನಾತಿರೇಕಗಳ ತನಕ ಎಲ್ಲವೂ ಪರಿವರ್ತನೆ ಹೊಂದಬೇಕಿದೆ. ಪರಿಷತ್ತು ನಡೆಸುವುದು ಸಾಹಿತ್ಯ ಸಮ್ಮೇಳನ ಎಂದಾದರೆ ಸಾಹಿತ್ಯ ಚಟುವಟಿಕೆಗಳು, ಚರ್ಚೆ ಸಂವಾದಗಳೇ ಪ್ರಧಾನವಾಗಿರಬೇಕು. ಇಲ್ಲದೇ ಹೋದರೆ ಸಾಹಿತ್ಯ ಸಮ್ಮೇಳನ ಎನ್ನುವ ಹೆಸರನ್ನೇ ಬದಲಾಯಿಸಿ ಕನ್ನಡ ಜಾತ್ರೆ ಇಲ್ಲವೇ ನಾಡುನುಡಿ ಹಬ್ಬ ಅಂತ ಬೇರೆ ಹೆಸರಲ್ಲಿ ಕನ್ನಡಿಗರ ಸಮ್ಮೇಳನ ಮಾಡಬೇಕು. ಸಾಹಿತ್ಯದ ನೆಪದಲ್ಲಿ ಜಾತ್ರೆ ಮಾಡುವುದಾಗಲೀ, ಸಾಹಿತ್ಯೇತರ ವ್ಯಕ್ತಿಗಳೇ ಸಮ್ಮೇಳನದಲ್ಲಿ ವಿಜೃಂಭಿಸುವುದೇ ಆದರೆ ಈ ಸಾಹಿತ್ಯ ಸಮ್ಮೇಳನಕ್ಕೆ ಅರ್ಥವಿಲ್ಲ. ಮೂವತ್ತು ಕೋಟಿಗೂ ಹೆಚ್ಚು ಹಣ ವೆಚ್ಚಮಾಡಿದರೂ ಅದರಿಂದ ಸಾಹಿತ್ಯ ಕ್ಷೇತ್ರಕ್ಕಾಗಲೀ, ಕನ್ನಡ ಭಾಷೆಗಾಗಲೀ, ಕರ್ನಾಟಕದ ಸಂಸ್ಕೃತಿಗಾಗಲೇ ಯಾವುದೇ ರೀತಿಯ ಗಮನಾರ್ಹ ಕೊಡುಗೆ ದಕ್ಕದೇ ಇದ್ದಲ್ಲಿ ಇಂತಹ ಅದ್ದೂರಿ ಜಾತ್ರೆಗಳ ಅಗತ್ಯವನ್ನೇ ಪ್ರಶ್ನಿಸಬೇಕಿದೆ. ಮೂರು ದಿನಗಳ ಕಾಲ, ಮೂವತ್ತು ಕೋಟಿ ವೆಚ್ಚದ ಕಾರ್ಯಕ್ರಮದ ಫಲಶೃತಿ ಸೊನ್ನೆಯಾದರೆ ಸಮ್ಮೇಳನದ ಉದ್ದೇಶವನ್ನೇ ಮರುಪರಿಶೀಲಿಸಬೇಕಿದೆ.
ಸಾಹಿತ್ಯ ಸಮ್ಮೇಳನ ಎನ್ನುವುದು ಕನ್ನಡ ನಾಡು ನುಡಿ ಕಲೆ ಸಾಹಿತ್ಯದ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಂತಾಗಬೇಕಿದೆ. ಹಾಗೂ ತೆಗೆದುಕೊಂಡ ನಿರ್ಧಾರಗಳನ್ನು ಹೋರಾಟಗಳ ಮೂಲಕವಾದರೂ ಸರಕಾರಗಳಿಂದ ಅನುಷ್ಟಾನಗೊಳಿಸುವಂತೆ ಮಾಡುವ ಇಚ್ಚಾಶಕ್ತಿ ಸಾಹಿತ್ಯ ಪರಿಷತ್ತಿಗೆ ಇರಬೇಕಿದೆ. ಆಗ ಮಾತ್ರ ಸಮ್ಮೇಳನಕ್ಕೆ ಒಂದು ಬೆಲೆ. ಸಾಹಿತ್ಯ ಸಂಸ್ಕೃತಿಗೊಂದು ನೆಲೆ. ಇಲ್ಲದೇ ಹೋದರೆ ಜಾತ್ರೆ ಸನ್ಮಾನಗಳ ಹೆಸರಲ್ಲಿ ನಡೆಯುವುದು ಸಾಹಿತ್ಯದ ಕೊಲೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಸಾಹಿತ್ಯ ಸಮ್ಮೇಳನ : ಮಾಂಸದೂಟ ಇರದಿದ್ದರೆ ಮನೆಗೊಂದು ಕೋಳಿ ಸಂಗ್ರಹಿಸಿ ನಾವೇ ಬಾಡೂಟ ಹಾಕಿಸ್ತೀವಿ