ಮೂರು ಮಕ್ಕಳನ್ನು ಹೆರುವ ಭಾಗವತ್ ಐಡಿಯಾಗೆ ಸಚಿವ ಮಹದೇವಪ್ಪ ವಿರೋಧ

Most read

ಬೆಂಗಳೂರು : ಹಿಂದೂ ಧರ್ಮದ ಉಳಿವಿಗಾಗಿ ಪ್ರತಿ ದಂಪತಿಯು ಕನಿಷ್ಠ 3 ಮಕ್ಕಳನ್ನು ಹೆರಬೇಕು ಎಂದು ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆಯನ್ನು, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.

ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನ ಸಂಖ್ಯೆಯಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸಲು ಉನ್ನತ ಅಧಿಕಾರ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು. ಆದರೆ ಭಾಗವತ್ ಅವರು ಹೆಚ್ಚು ಮಕಕ್ಳನ್ನು ಹೆರಲು ಹೇಳತ್ತಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ನಾಗ್ಪುರದಲ್ಲಿ ಕಥಾಳೆ ಕುಲ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಮೋಹನ್ ಭಾಗವತ್, ಜನಸಂಖ್ಯಾ ದರ 2:1 ಅನುಪಾತಕ್ಕಿಂತ ಕಮ್ಮಿಯಾದರೆ, ಸಮಾಜ ನಾಶವಾಗುತ್ತದೆ. ಹಾಗಾಗಿ, ಅದು ಕನಿಷ್ಠ ಮೂರು ಆದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರು.

ದೇಶವೊಂದರ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯಾ ಸ್ಪೋಟ ಸದಾ ಮಾರಕ ಎಂಬುದನ್ನು ಹಲವು ಅರ್ಥಶಾಸ್ತ್ರಜ್ಞರು ಒತ್ತಿ ಹೇಳುತ್ತಾರೆ. ಸದ್ಯ ಭಾರತದ ಜನಸಂಖ್ಯಾ ಸ್ಪೋಟ ಮತ್ತು ಅದರಿಂದ ಇಲ್ಲಿನ ಜನರಿಗೆ ದೊರಕುತ್ತಿರುವ ಬದುಕಿನ ಅವಕಾಶಗಳು ಮತ್ತು ಸೌಲಭ್ಯವನ್ನು ಗಮನಿಸಿದರೆ ನಮ್ಮಲ್ಲಿ ಜನಸಂಖ್ಯಾ ನಿಯಂತ್ರಣ ಮಾಡುವುದು ಅಗತ್ಯವಾಗಿದೆ ಎಂದು ಡಾ.ಮಹದೇವಪ್ಪ ಹೇಳಿದ್ದಾರೆ.

ಇದಕ್ಕಾಗಿ ನಮ್ಮ ಸರ್ಕಾರಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದು ಇದು ರಾಷ್ಟ್ರೀಯ ನೀತಿಯ ಆಶಯವೂ ಆಗಿದೆ. ದೇಶದ ಜನರು ಸಮಾನವಾದ ಘನತೆಯ ಬದುಕು ನಡೆಸಲು ಜನಸಂಖ್ಯಾ ಸ್ಪೋಟವೇ ಅಡ್ಡಿಯಾಗಿರುವಾಗ ಮೋಹನ್ ಭಾಗವತ್ ಅವರು ಜವಾಬ್ದಾರಿಯನ್ನು ಅರಿತು ಮಾತನಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಮಹದೇವಪ್ಪ ಹೇಳಿದ್ದಾರೆ.

ಮೋಹನ್ ಭಾಗವತರ್ ಅವರ ಹೇಳಿಕೆಯನ್ನು ಎಐಎಂಐಎಂ ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಅವರೂ ಖಂಡಿಸಿದ್ದಾರೆ. ಮೂರು ಮಕ್ಕಳನ್ನು ಹೆತ್ತವರಿಗೆ ಸಂಘದಿಂದ ಯಾವ ಪ್ರಯೋಜನವಾಗುತ್ತದೆ. ಪ್ರತೀ ತಿಂಗಳು ಮೂರು ಮಕ್ಕಳನ್ನು ಹೆರುವ ಕುಟುಂಬಕ್ಕೆ 1,500 ಸಾವಿರ ಹಾಕುತ್ತಾರಾ? ಈ ಸ್ಕೀಂ ಅನ್ನು ಸಂಘ ಪರಿವಾರ ಜಾರಿಗೆ ತರುತ್ತದೆಯೇ ಎಂದು ಅವರೂ ಪ್ರಶ್ನಿಸಿದ್ದಾರೆ. ಮೋಹನ್ ಭಾಗವತರ್ ತಮ್ಮ ಆಪ್ತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ. ಅವರು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಈ ಸಂಬಂಧ ಹೊಸ ಯೋಜನೆಯನ್ನು ಜಾರಿಗೆ ತಂದರೂ ತರಬಹುದು ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.

More articles

Latest article