ಮನುಸ್ಮೃತಿಯಲ್ಲಿರುವಂತೆ ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು ಉಳಿದವರೆಲ್ಲಾ ನಿಕೃಷ್ಟರು ಎನ್ನುವುದಕ್ಕೆ ಈಗಿನ ಸಂವಿಧಾನದಲ್ಲಿ ಅವಕಾಶವಿಲ್ಲ ಹಾಗೂ ಎಲ್ಲರೂ ಸಮಾನರು ಎನ್ನುವುದನ್ನು ಮನುಶಾಸ್ತ್ರ ಒಪ್ಪುವುದಿಲ್ಲ. ಆದ್ದರಿಂದ ಮತ್ತೆ ವೈದಿಕರಿಗೆ ಶ್ರೇಷ್ಠತೆಯನ್ನು ಹಾಗೂ ಸರ್ವೋಚ್ಚ ಗೌರವವನ್ನೂ ಧಾರೆಯೆರೆದು ಕೊಡುವಂತಹ ಸಂವಿಧಾನ ಬೇಕು ಎಂಬುದು ಪೇಜಾವರರ ಅಂತರಂಗದ ಆಗ್ರಹ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಈಗಿರುವ ಸಂವಿಧಾನ ಸರಿ ಇಲ್ಲ. ನಮ್ಮನ್ನು ಅಂದರೆ ಬ್ರಾಹ್ಮಣರನ್ನು ಅರ್ಥಾತ್ ವೈದಿಕಶ್ರೇಷ್ಟ ಸ್ವಾಮಿಗಳನ್ನು ಗೌರವಿಸುವ ಸಂವಿಧಾನ ಇರಬೇಕು, ಬರಬೇಕು” ಅಂತಾ ಉಡುಪಿಯ ಪೇಜಾವರ ಮಠದ ಹಾಲಿ ಸ್ವಾಮಿಗಳಾಗಿರುವಂತಹ ವಿಶ್ವ ಪ್ರಸನ್ನ ತೀರ್ಥ ಮಹಾಸ್ವಾಮಿಗಳು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ?
ನ.23 ರಂದು ನಡೆದ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕದ ಸಂತ ಸಮಾವೇಶ ದ ಸಮ್ಮೇಳನದಲ್ಲಿ ಭಾಗವಹಿಸಿದ ಈ ಬ್ರಾಹ್ಮಣ ಮಠದ ಕರ್ಮಠ ಸ್ವಾಮಿಗಳು ತಮ್ಮನ್ನು ಅಂದರೆ ಸಮ್ಮೇಳನದಲ್ಲಿ ಸಮ್ಮಿಲನಗೊಂಡ ಪುರೋಹಿತಶಾಹಿ ಪಂಡಿತರ ಸಂತಾನವನ್ನು ಗೌರವಿಸುವಂತಹ ಸಂವಿಧಾನ ಬೇಕು ಎಂದು ಪ್ರತಿಪಾದಿಸಿದ್ದಾರೆ. ರಾಜ್ಯಪಾಲರನ್ನೂ ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದಾರೆ.
ಶ್ರೀಗಳ ಹೇಳಿಕೆಯನ್ನು ಟೀಕಿಸಲಾಗುತ್ತಿದೆ. ಸಂವಿಧಾನ ವಿರೋಧಿತನವೆಂದು ವಿಮರ್ಶಿಸಲಾಗುತ್ತಿದೆ. ಇದೆಲ್ಲಾ ಯಾಕೆ? ಭಾರತದ ಸಂವಿಧಾನ ಅನುಮೋದನೆಗೊಂಡು 75 ವರ್ಷಗಳು ತುಂಬಿದ್ದರೂ ಸಮಾನತೆ ಸಾರುವ ಸಂವಿಧಾನವನ್ನು ಈ ಸನಾತನಿಗಳು ಎಂದೂ ಒಪ್ಪಿಯೇ ಇಲ್ಲ ಎಂಬುದು ಗೊತ್ತಿರುವ ಸಂಗತಿ. ಸಂವಿಧಾನ ಅನುಮೋದನೆಗೊಂಡ ಎರಡೇ ದಿನಕ್ಕೆ ಆರೆಸ್ಸೆಸ್ಸಿನ ಅಧಿನಾಯಕರಾಗಿದ್ದ ಗೋಲ್ವಾಲ್ಕರ್ ರವರು ತಮ್ಮ ಆರ್ಗನೈಸರ್ ಪತ್ರಿಕೆಯಲ್ಲಿ “ಅಂಬೇಡ್ಕರ್ ರವರು ರಚಿಸಿದ ಸಂವಿಧಾನಕ್ಕೆ ಒಪ್ಪಿಗೆಯಿಲ್ಲ. ಇದು ಸನಾತನ ಪರಂಪರೆ ಸಂಸ್ಕೃತಿಯನ್ನು ಒಳಗೊಳ್ಳದ ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ” ಎಂದು ಬರೆದು ಸಂವಿಧಾನವನ್ನೇ ನಿರಾಕರಿಸಿದ್ದರು. ಗೋಲ್ವಾಲ್ಕರ್ ಸಂತತಿಯ ಉತ್ತರಾಧಿಕಾರಿಯಂತಿರುವ ವೈದಿಕಮಠದ ಪೇಜಾವರರು ಈಗಿರುವ ಸಂವಿಧಾನವನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಅದರಲ್ಲೂ ಸ್ವಾಂತಂತ್ರ್ಯ ಸಮಾನತೆ ಹಾಗೂ ಸಹೋದರತ್ವವನ್ನು ಪ್ರತಿಪಾದಿಸುವ ಸಂವಿಧಾನಕ್ಕೂ ಹಾಗೂ ಸನಾತನಿಗಳ ವರ್ಣಾಶ್ರಮ ಧರ್ಮಕ್ಕೂ ಅಷ್ಟೊಂದು ವೈರುಧ್ಯತೆಗಳಿರುವಾಗ ಸಂವಿಧಾನವನ್ನು ಒಪ್ಪಿಕೊಳ್ಳುವುದು ಪುರೋಹಿತಶಾಹಿ ಧರ್ಮಕ್ಕೆ ಅಪಚಾರ.
ಈ ಪೇಜಾವರ ಮಠದ ಹಿಂದಿನ ಸ್ವಾಮಿಗಳಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು “ಬ್ರಾಹ್ಮಣ ಧರ್ಮವೇ ಬೇರೆ, ಹಿಂದೂ ಧರ್ಮವೇ ಬೇರೆ” ಎಂದು ಸ್ಪಷ್ಟವಾಗಿ ಹೇಳಿಯೇ ದಿವಂಗತರಾಗಿದ್ದಾರೆ. ಎಲ್ಲ ಭಾರತೀಯರಂತೆ ಸಕಲ ಹಿಂದೂಗಳಿಗೂ ಅಂಬೇಡ್ಕರ್‌ರವರ ಸಂವಿಧಾನ ಸರ್ವಶ್ರೇಷ್ಠ ಗ್ರಂಥವಾಗಿದೆ. ಆದರೆ ಈ ಬ್ರಾಹ್ಮಣ್ಯದವರಿಗೆ ಆಗಿನಂತೆ ಈಗಲೂ ಮನುಶಾಸ್ತ್ರವೇ ಸಾರ್ವಕಾಲಿಕ ಅನುಕರಣೀಯ ಹಾಗೂ ಆರಾಧನೀಯ ಧರ್ಮಗ್ರಂಥವಾಗಿದೆ. ಹೀಗಾಗಿ ಸನಾತನ ಮನು ಸಂಸ್ಕೃತಿಯನ್ನೇ ಉಸಿರಾಡುವ ಪೇಜಾವರರಂತಹ ವೈದಿಕ ಮಠಾಧಿಪತಿಗಳು ಸದರಿ ಸಂವಿಧಾನವನ್ನು ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲಾ, 75 ವರ್ಷ ಕಳೆದರೂ ಇಂದಿಗೂ ಸಂವಿಧಾನವನ್ನು ಅಪ್ಪಿಕೊಳ್ಳಲೂ ಇಲ್ಲ.
ಅವರಿಗೆ ಅಂದರೆ ಸನಾತನಿ ವೈದಿಕಶಾಹಿಗಳಿಗೆ ತಮ್ಮದೇ ಆದ ಮನುಸ್ಮೃತಿ ಇದೆ. ಅದನ್ನು ಆಧರಿಸಿದ ಮನು ವ್ಯಾಧಿ ಸಂವಿಧಾನವೇ ಇರಬೇಕು ಹಾಗೂ ಬರಬೇಕು ಎನ್ನುವ ಬಯಕೆ ಭಯಂಕರವಾಗಿದೆ. ಈ ಪೇಜಾವರರೂ ಸಹ ಅದನ್ನೇ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಸನಾತನಿ ಸ್ವಾಮಿಗಳ ಸಮ್ಮೇಳನವೂ ಪೇಜಾವರರ ಮಾತಿಗೆ ಸಹಮತ ವ್ಯಕ್ತಪಡಿಸಿದೆ.
ಯಾಕೆಂದರೆ ಈ ಸನಾತನಿಗಳಿಗೆ ಈಗಿರುವ ಸಂವಿಧಾನದಲ್ಲಿ ವಿಶೇಷ ಗೌರವ ಇಲ್ಲವಾಗಿದೆ. ಈಗಿನ ಸಂವಿಧಾನದಲ್ಲಿ ಜಾತಿಬೇಧ, ಲಿಂಗಬೇಧ ಅಸ್ಪೃಶ್ಯತೆ ಆಚರಣೆಗಳಿಗೆ ಅವಕಾಶವಿಲ್ಲವಾಗಿದೆ. ಮನುಸ್ಮೃತಿಯಲ್ಲಿರುವಂತೆ ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು ಉಳಿದವರೆಲ್ಲಾ ನಿಕೃಷ್ಟರು ಎನ್ನುವುದಕ್ಕೆ ಈಗಿನ ಸಂವಿಧಾನದಲ್ಲಿ ಅವಕಾಶವಿಲ್ಲ ಹಾಗೂ ಎಲ್ಲರೂ ಸಮಾನರು ಎನ್ನುವುದನ್ನು ಮನುಶಾಸ್ತ್ರ ಒಪ್ಪುವುದಿಲ್ಲ. ಸನಾತನಿ ಗುರುವರ್ಗವನ್ನು ಸರ್ವಶ್ರೇಷ್ಠ ಎಂದು ಒಪ್ಪಿಕೊಳ್ಳದ ಸಂವಿಧಾನ ಅಪೇಕ್ಷಣೀಯವಲ್ಲ. ಆದ್ದರಿಂದ ಮತ್ತೆ ವೈದಿಕರಿಗೆ ಶ್ರೇಷ್ಠತೆಯನ್ನು ಹಾಗೂ ಸರ್ವೋಚ್ಚ ಗೌರವವನ್ನೂ ಧಾರೆಯೆರೆದು ಕೊಡುವಂತಹ ಸಂವಿಧಾನ ಬೇಕು ಎಂಬುದು ಪೇಜಾವರರ ಅಂತರಂಗದ ಆಗ್ರಹ. ಅದೇ ಸರ್ವ ಸನಾತನಿಗಳ ಸರ್ವಾನುಮತದ ಒತ್ತಾಯ.
“ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ನಂತರ ಜ್ಯಾತ್ಯತೀತ ರಾಷ್ಟ್ರವಾಯ್ತು. ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು. ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಗೌರವಿಸುವ ಪಕ್ಷವನ್ನು ಅಧಿಕಾರಕ್ಕೆ ತರಬೇಕು” ಎಂದು ಸಂತ ಸಮಾವೇಶದಲ್ಲಿ ಸನಾತನಿ ಸಂತ ಪೇಜಾವರರು ಒತ್ತಾಯಿಸಿದ್ದಾರೆ. ಅಂದರೆ ಮತ್ತೆ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮನುವ್ಯಾಧಿ ಸಂವಿಧಾನ ಜಾರಿಗೆ ಬರಬೇಕು ಹಾಗೂ ಇಂತಹ ಸಂವಿಧಾನವನ್ನು ಜಾರಿ ಮಾಡಬಹುದಾದ ಪಕ್ಷ ಅಂದರೆ ಸಂಘ ಪರಿವಾರದ ಬಿಜೆಪಿ ಪಕ್ಷ. ಅಂತಹ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆಯ ಸಂದರ್ಭದಲ್ಲಿ ಈ ಸನಾತನ ಸಂತ ಪಡೆ ಬೀದಿಗಿಳಿಯಬೇಕು ಎನ್ನುವುದೇ ಪೇಜಾವರರ ಪ್ರವಚನದ ತಾತ್ಪರ್ಯ.
ಇವರ ಮಾತುಗಳನ್ನು ಅನುಮೋದಿಸಿ ಸಂತ ಸಮಾವೇಶವು ಪೇಜಾವರರ ನೇತೃತ್ವದಲ್ಲಿ ಸಂತರ ನಿಯೋಗವು ಈ ಕೆಳಗಿನ ಕೆಲವು ನಿರ್ಣಯಗಳನ್ನೂ ತೆಗೆದುಕೊಂಡು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಸಲ್ಲಿಸಿತು.
ವಕ್ಫ್ ಮಂಡಳಿಯಂತೆ ಸನಾತನ ಧರ್ಮದ ರಕ್ಷಣೆಗಾಗಿ “ಸನಾತನ ಮಂಡಳಿ’ ರಚಿಸಬೇಕು. ದೇವಾಲಯಗಳ ಆಸ್ತಿ ಹಾಗೂ ಹಣಕಾಸಿನ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಸಾಧು ಸಂತರಿಗೆ ಅಥವಾ ಸನಾತನ ಮಂಡಳಿಗೆ ವಹಿಸಬೇಕು ಎಂಬುದು ಸಂತ ನಿಯೋಗದ ಆಗ್ರಹವಾಗಿತ್ತು.
ಈ ಸನಾತನಿಗಳ ಉದ್ದೇಶ ಬಹಳ ಸ್ಪಷ್ಟವಾಗಿದೆ. ಮತ್ತೆ ದೇವಸ್ಥಾನಗಳ ಮೇಲೆ ಸಂಪೂರ್ಣ ನಿಯಂತ್ರಣ ಸ್ಥಾಪಿಸುವುದು. ಸನಾತನಿಗಳನ್ನು ಬೆಂಬಲಿಸುವ ಸರಕಾರವನ್ನು ಆಯ್ಕೆ ಮಾಡಿ ದೇಶದ ಆಡಳಿತವನ್ನು ಧರ್ಮದ ಆಧಾರದಲ್ಲಿ ವೈದಿಕರ ಮಾರ್ಗದರ್ಶನದಲ್ಲಿ ಮುನ್ನಡೆಸುವುದು. ದೇವರು ಧರ್ಮದ ಮೌಢ್ಯಗಳ ಮೂಲಕ ಜನರಲ್ಲಿ ಭಯ ಭಕ್ತಿ ಹುಟ್ಟಿಸಿ ಇಡೀ ದೇಶದ ನಿಯಂತ್ರಣವನ್ನು ಸನಾತನಿ ವೈದಿಕರು ಹೊಂದಿರಬೇಕು. ಇದೆಲ್ಲದರ ಜಾರಿಗೆ ಅಂಕುಶವಾಗಿ ಮನುಧರ್ಮ ಶಾಸ್ತ್ರದ ಪರಮ ಗ್ರಂಥ ಮನುಸ್ಮೃತಿ ಈ ದೇಶದ ಸಂವಿಧಾನ ಆಗಬೇಕು. ಇದೇ ಈ ಸಂತರ, ವೈದಿಕರ, ಪುರೋಹಿತಶಾಹಿಗಳ ಹಾಗೂ ಇವರೆಲ್ಲರನ್ನೂ ಪ್ರತಿನಿಧಿಸುವ ಹಿಂದುತ್ವವಾದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಮೋಚ್ಚ ಗುರಿಯಾಗಿದೆ. ಇವರ ಗುರಿ ಸಾಧನೆಗೆ ಅಂಬೇಡ್ಕರ್ ರವರ ಸಂವಿಧಾನ ಅಡ್ಡಿಯಾಗಿದೆ. ಈ ಅಡೆತಡೆಯನ್ನು ನಿವಾರಿಸಿ ವೈದಿಕಶಾಹಿ ನಿಯಂತ್ರಿತ ಆಡಳಿತ ಮರುಸ್ಥಾಪನೆ ಆಗಲೇಬೇಕೆಂಬುದು ಸನಾತನಿಗಳ ಉದ್ದೇಶವಾಗಿದೆ.
ವೈದಿಕಶಾಹಿ ಕುಲಪುರೋಹಿತರಂತಿರುವ ಪೇಜಾವರರು ತಮ್ಮ ಬ್ರಾಹ್ಮಣ ಧರ್ಮದ ಹಿತಾಸಕ್ತಿಗಾಗಿ ಇಂತಹ ಹೇಳಿಕೆಗಳನ್ನು ಕೊಟ್ಟಿದ್ದಾರೆ ಹಾಗೂ ಕೊಡುತ್ತಲೇ ಇರುತ್ತಾರೆ. ಈ ಹಿಂದೆಯೂ ಸಹ ಬ್ರಾಹ್ಮಣ್ಯದ ಶ್ರೇಷ್ಠತೆಯ ಕುರಿತ ಅನೇಕ ಹೇಳಿಕೆಗಳನ್ನು ಇದೇ ಪೇಜಾವರ ಸ್ವಾಮಿಗಳು ಕೊಟ್ಟಿದ್ದಾರೆ. ಬ್ರಾಹ್ಮಣರಿಗೆ ಮಾತ್ರ ಅರ್ಚಕ ಹುದ್ದೆ ಮೀಸಲಾಗಿರಬೇಕು ಎಂದರು. ಬ್ರಾಹ್ಮಣ ಕನ್ಯೆಯರು ಬೇರೆ ಜಾತಿಯವರನ್ನು ಮದುವೆಯಾಗದಂತೆ ತಡೆಯಲು ಮಾತೃ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದ್ದರು. ಹಿಂದಿನ ಹಿರಿಯ ಸ್ವಾಮಿಗಳು ಬ್ರಾಹ್ಮಣ ಧರ್ಮವೇ ಬೇರೆ ಎಂದು ಹೇಳಿದ್ದರು. ಇವೆಲ್ಲಾ ಹೇಳಿಕೆಗಳು ವೈದಿಕಶಾಹಿ ಪುನರುತ್ಥಾನದ ಪ್ರಯತ್ನದ ಭಾಗಗಳೇ ಆಗಿವೆ. ಸನಾತನಿಗಳ ದೃಷ್ಟಿಯಲ್ಲಿ ಈ ಸ್ವಾಮಿಗಳ ಹೇಳಿಕೆಗಳಲ್ಲಿ ತಪ್ಪಿದೆ ಎಂದು ಅನ್ನಿಸುವುದಿಲ್ಲ. ಆದರೆ ಇವೆಲ್ಲವೂ ಸಂವಿಧಾನ ವಿರೋಧಿ ಹೇಳಿಕೆಗಳಾಗಿವೆ. ಸಮಾನತೆಯನ್ನು ಸರ್ವನಾಶ ಮಾಡುವಂತಹ ಹುನ್ನಾರಗಳಾಗಿವೆ. ಪ್ರಜಾಪ್ರಭುತ್ವದ ಮೇಲೆ ಬ್ರಾಹ್ಮಣತ್ವವನ್ನು ಹೇರುವ ಶಡ್ಯಂತ್ರಗಳಾಗಿವೆ.
ಇದನ್ನೂ ಓದಿ-ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ
ಸ್ವಾಮಿಗಳ ಸಂವಿಧಾನ ವಿರೋಧಿ ಹೇಳಿಕೆಯನ್ನು ಸಂವಿಧಾನ ಪರವಾಗಿರುವ ಎಲ್ಲರೂ ಖಂಡಿಸಬೇಕಿತ್ತು. ದೇಶದ್ರೋಹದ ಹೇಳಿಕೆಯ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕಿತ್ತು. ಪ್ರತಿಗಾಮಿತನಕ್ಕೆ ಪ್ರತಿರೋಧ ತೋರಬೇಕಾಗಿತ್ತು. ಆದರೆ ಇವು ಯಾವುವೂ ಅವ್ಯಾಹತವಾಗಿ ಆಗಲಿಲ್ಲ. ಇಂತಹ ಸಂವಿಧಾನ ದ್ರೋಹವನ್ನು ಜನರು ಸಹಿಸಿಕೊಂಡಷ್ಟೂ ಹಿಂದುತ್ವವಾದಿಗಳ ಬಲ ಹೆಚ್ಚುತ್ತದೆ. ಸನಾತನಿಗಳ ತಾಕತ್ತು ಹೆಚ್ಚಿದಷ್ಟೂ ಸಂಘಿಗಳು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕುಣಿದಾಡುತ್ತಾರೆ. ಹೀಗೆಯೇ ಸಮಾನತೆ ಬಯಸುವ, ಅಂಬೇಡ್ಕರ್ ರವರ ಸಂವಿಧಾನವನ್ನು ಬೆಂಬಲಿಸುವವರು ಸುಮ್ಮನೆ ಇದ್ದಷ್ಟೂ ಹಿಂದೂರಾಷ್ಟ್ರದ ಹೆಸರಲ್ಲಿ ಹಿಂದುತ್ವವಾದ ಜಾರಿಗೆ ಬರುತ್ತದೆ. ಪ್ರಜಾಪ್ರಭುತ್ವದ ಬದಲಾಗಿ ಕ್ರಿ.ಪೂ 187 ನೇ ಇಸವಿಯ ಪುಷ್ಯಮಿತ್ರ ಶುಂಗನ ವರ್ಣಾಶ್ರಮ ಆಧರಿತ ಪ್ರಭುತ್ವ ಈ ದೇಶವನ್ನು ಆಳತೊಡಗುತ್ತದೆ. ಶುಂಗನು ಬೌದ್ಧ ಧರ್ಮವನ್ನು ಹೊಸಕಿ ಹಾಕಿ ಗಡಿ ಪಾರು ಮಾಡಿದಂತೆ ಆಧುನಿಕ ಸನಾತನಿ ಶುಂಗರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಗೂ ಸಮಾನತೆ ಸಾರುವ ಸಂವಿಧಾನವನ್ನು ಮತ್ತು ಅವುಗಳ ಬೆಂಬಲಿಗರನ್ನು ಶಸ್ತ್ರ ಶಾಸ್ತ್ರಗಳ ಬಲದಿಂದ ಸರ್ವನಾಶ ಮಾಡಿ ಅಂತಿಮವಾಗಿ ವೈದಿಕ ಧರ್ಮಾಧಾರಿತ ಮನುಧರ್ಮ ಈ ದೇಶವನ್ನು ಆಳತೊಡಗುತ್ತದೆ.
ಮತ್ತೆ ಶುಂಗನ ಆಡಳಿತ ಬರಬಾರದು ಎಂದರೆ ಸನಾತನಿಗಳ ಸಂವಿಧಾನ ವಿರೋಧಿತನವನ್ನು ಖಂಡಿಸಬೇಕಿದೆ. ಮತ್ತೆ ವರ್ಣಾಶ್ರಮದ ಮನುಸ್ಮೃತಿ ಜಾರಿಯಾಗಬಾರದು ಎಂದರೆ ಹಿಂದುತ್ವವಾದಿಗಳ ಹುನ್ನಾರಗಳ ವಿರುದ್ಧ ಜನರನ್ನು ಜಾಗೃತಗೊಳಿಸಬೇಕಾಗಿದೆ. ಸಂವಿಧಾನದ ಆಶಯಗಳಾದ ಜ್ಯಾತ್ಯತೀತತೆ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವಗಳನ್ನು ಭಾರತೀಯರಾದ ನಾವು ಉಳಿಸಿಕೊಳ್ಳಲೇಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು