ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ನವೆಂಬರ್ 26ಕ್ಕೆ 75 ವರ್ಷ ತುಂಬಲಿದೆ. ಇದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ. ಹಾಗಾಗಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ‘ಇಂಡಿಯಾ’ ಬಣದ ನಾಯಕರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನ ಅಂಗೀಕರಿಸಿದ ಹಳೆಯ ಸಂಸತ್ ಭವನವಾದ ಸಂವಿಧಾನ ಸದನದ ಐತಿಹಾಸಿಕ ‘ಸೆಂಟ್ರಲ್ ಹಾಲ್’ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.
ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಅನುಸರಿಸುವುದರ ಜತೆಗೆ ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಲು ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಗೂ ಅವಕಾಶ ನೀಡಬೇಕು ಎಂದು ಸ್ಪೀಕರ್ಗೆ ಬರೆದ ಪತ್ರದಲ್ಲಿ ‘ಇಂಡಿಯಾ’ ಬಣದ ನಾಯಕರು ಆಗ್ರಹಪಡಿಸಿದ್ದಾರೆ. ಟಿ.ಆರ್ ಬಾಲು, ತಿರುಚಿ ಶಿವ, ಕನಿಮೋಳಿ, ಸುಪ್ರಿಯಾ ಸುಳೆ, ರಾಘವ್ ಚಡ್ಡಾ, ಪಿ.ಸಂತೋಷ್ ಕುಮಾರ್, ಮೊಹಮ್ಮದ್ ಬಶೀರ್, ಕೆ.ರಾಧಾಕೃಷ್ಣನ್, ರಾಮ್ಜಿ ಲಾಲ್ ಸುಮನ್, ಎನ್.ಕೆ. ಪ್ರೇಮಚಂದ್ರನ್ ಸೇರಿದಂತೆ ಹಲವು ನಾಯಕರು ಪತ್ರಕ್ಕೆ ಸಹಿ ಮಾಡಿದ್ದಾರೆ.