ಕೋಮುದ್ವೇಷಿ ಯತ್ನಾಳರನ್ನು ತರಾಟೆಗೆ ತೆಗೆದುಕೊಂಡ ತೇರದಾಳ‌

Most read

ಮೈಸೂರಿನ ಪ್ರತಾಪ ಸಿಂಹ, ಚಿಕ್ಕಮಗಳೂರಿನ ಸಿ.ಟಿ.ರವಿ, ಬೆಂಗಳೂರಿನ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಧಾರವಾಡದ ಪ್ರಹ್ಲಾದ ಜೋಶಿಯಂತಹ ಇಸ್ಲಾಮೋಫೋಬಿಯಾ ರೋಗ ಪೀಡಿತ ವ್ಯಕ್ತಿಗಳನ್ನು ಎಲ್ಲಾ ಸಾರ್ವಜನಿಕ ವೇದಿಕೆಗಳಿಂದ ಜನರೇ ಬಹಿಷ್ಕರಿಸಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಉತ್ತರ ಕರ್ನಾಟಕವೆಂದರೆ ಕೋಮು‌ ಸೌಹಾರ್ದತೆಯ ನಾಡು. ಬಸವಾದಿ ಶರಣರು ಸಮಾನತೆ ಸಾರಿದ ಜಗತ್ತಿಗೇ ಮಾದರಿ ನಾಡು. ವೈವಿಧ್ಯತೆಯಲ್ಲೂ ಮಾನವೀಯತೆಯನ್ನು ಬದುಕಿನ ಭಾಗವಾಗಿ ರೂಢಿಸಿಕೊಂಡ ಪ್ರದೇಶ. 

ಇಲ್ಲಿ ಹಿಂದೂಗಳು ದರ್ಗಾಕ್ಕೆ ಹೋಗಿ ಪೂಜೆ ಸಲ್ಲಿಸಿ ಹರಕೆ ಹೊತ್ತು ಹೆತ್ತ ಮಕ್ಕಳಿಗೆ ಮುಸ್ಲಿಂ ಹೆಸರನ್ನು ಇಡುತ್ತಾರೆ. ಮುಸ್ಲಿಂ ಸಮುದಾಯದವರು ಹಿಂದೂ ದೇವಸ್ಥಾನಗಳಿಗೂ ಹೋಗಿ ಪ್ರಾರ್ಥಿಸುತ್ತಾರೆ. ಊರಲ್ಲಿ ದೇವಸ್ಥಾನ ಕಟ್ಟಿಸಿದರೆ ಮುಸಲ್ಮಾನರೂ ದೇಣಿಗೆ ಸಲ್ಲಿಸುತ್ತಾರೆ, ಮುಸಲ್ಮಾನರು ಮಸೀದಿ ಕಟ್ಟಿಸಿದರೆ ಹಿಂದೂಗಳು ಸಹಾಯ ಮಾಡುತ್ತಾರೆ. ಮುಸ್ಲಿಂ ಹಬ್ಬಗಳನ್ನು ಹಿಂದೂಗಳೂ ಸಂಭ್ರಮದಿಂದ ಆಚರಿಸುತ್ತಾರೆ. ಹಿಂದೂ ಹಬ್ಬಗಳಲ್ಲಿ ಮುಸಲ್ಮಾನ ಬಾಂಧವರು ನೀರು ಪಾನಕ ವಿತರಿಸುತ್ತಾರೆ. ಇದು ಭಾವೈಕ್ಯತೆ ಸಾರಿದ ಸೂಫಿ ಸಂತರು, ಶಿಶುನಾಳ ಷರೀಫರು ನಡೆದಾಡಿದ ಜಾಗ. ಕೋಮು ಸೌಹಾರ್ದತೆ ಇಲ್ಲಿಯ ಜನರ ಬದುಕಿನ ಭಾಗ.

ಬಸನಗೌಡ ಪಾಟೀಲ ಯತ್ನಾಳ

ಆದರೆ ಕಳೆದೊಂದು ದಶಕದಿಂದ ಧಾರ್ಮಿಕ ಸೌಹಾರ್ದತೆಯನ್ನು ನಾಶಮಾಡಿ ಧರ್ಮ ದ್ವೇಷವನ್ನು ಬಿತ್ತಿ ಕೋಮು ವಿಭಜನೆ ಮಾಡುವ ಹುನ್ನಾರಗಳು ಸಂಘ ಪರಿವಾರಗಳಿಂದ ಅವ್ಯಾಹತವಾಗಿ ನಡೆಯುತ್ತಿವೆ. ಸಂಘದ ಶಾಖೆಗಳು ಅಣಬೆಗಳಂತೆ ಎಲ್ಲೆಂದರಲ್ಲಿ ಹುಟ್ಟಿ ಹಿಂದೂ ಮಕ್ಕಳು ಹಾಗೂ ಯುವಕರಲ್ಲಿ ಹಿಂದುತ್ವದ ಭ್ರಮೆಯನ್ನು ಹಾಗೂ ಅನ್ಯ ಧರ್ಮದ್ವೇಷವನ್ನು ಹುಟ್ಟು ಹಾಕುತ್ತಿವೆ. ಅದರಲ್ಲೂ ಮುಸ್ಲಿಂ ಸಮುದಾಯದ ಮೇಲೆ ದಲಿತ ಹಾಗೂ ಹಿಂದುಳಿದ ವರ್ಗಗಳ ಜನತೆಯನ್ನು ಎತ್ತಿಕಟ್ಟಿ ಕೋಮು ವಿಭಜನೆಯನ್ನು ಸಂಘಟನಾತ್ಮಕವಾಗಿ ಮಾಡಲಾಗುತ್ತಿದೆ. 

ಸಂಘಿಗಳು ಅದೆಷ್ಟೇ ಧರ್ಮದ್ವೇಷವನ್ನು ಪ್ರಚೋದಿಸಿದರೂ ಉತ್ತರ ಕರ್ನಾಟಕದ ಜನತೆ ಈಗಲೂ ಕೋಮು ಸೌಹಾರ್ದತೆಯನ್ನು ಬಯಸುತ್ತಾರೆ ಎನ್ನುವುದಕ್ಕೆ ತೇರದಾಳದ ಘಟನೆಯೇ ಸಾಕ್ಷಿಯಾಗಿದೆ.

ಲಿಂಗಾಯತ ನಾಯಕ ಎಂದು ಹೇಳುತ್ತಲೇ ವೈದಿಕಶಾಹಿ ಆರೆಸ್ಸೆಸ್ ನ ಗುಲಾಮಗಿರಿ ಮಾಡುತ್ತಿರುವ ದ್ವೇಷ ಭಾಷಣಕಾರ ಬಿರುದಾಂಕಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರನ್ನು ತೇರದಾಳ ಗ್ರಾಮದ ಜನತೆ ವೇದಿಕೆಯಿಂದ ಓಡಿಸಿದ್ದಾರೆ.  “ಇಲ್ಲಿ ರಾಜಕೀಯ ಮಾಡಲು ಬರಬೇಡಿ” ಎಂದು ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗೆ ಗ್ರಾಮಸ್ಥರು ಸಿಡಿದೇಳಲು ಈ ಕೋಮು ಕ್ರಿಮಿ ಹೇಳಿದ್ದಾದರೂ ಏನೆಂದರೆ,

“ಅಲ್ಲಮಪ್ರಭುಗಳ ಶಿವಾನುಭವ ಮಂಟಪ ದರ್ಗಾ ಆಗಿ ಪರಿವರ್ತನೆಯಾಗಿದೆ. ಎಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಪ್ರವಚನ ನಡೆಯುತ್ತಿತ್ತೋ ಅಲ್ಲಿ ಈಗ ಮಾಂಸವನ್ನು ಕಡಿಯುವಂತಹ  ಸ್ಥಳ ಆಗಿದೆ. ನಾವು ದೇವಸ್ಥಾನ ಕಟ್ತೇವೆ. ನಾಳೆ ಅದು ವಕ್ಫ್ ಆಸ್ತಿ ಆಗುತ್ತೆ. ಮಠ ಮಂದಿರಗಳು ಯಾವಾಗ ವಕ್ಫ್ ಆಗ್ತಾವೋ ಗೊತ್ತಿಲ್ಲ. ಅಷ್ಟು ಭಯಾನಕ ಸನ್ನಿವೇಶ ದೇಶದಲ್ಲಿದೆ. ತೇರದಾಳದಲ್ಲಿ ಸಾವಿರಾರು ಎಕರೆ ವಕ್ಫ್ ಅಂತಾರೆ. ಇಡೀ ಬಿಜಾಪುರವನ್ನೇ ವಕ್ಫ್ ಆಸ್ತಿ ಅಂತಾರೆ. ಬೀದರನಲ್ಲಿ ನಿಜಾಮ ತೋರಿಸಿದ್ದೆಲ್ಲಾ ನಮ್ದು ಅಂತಿದ್ದಾರೆ..” ಎಂದು ಯತ್ನಾಳ ಕೋಮು ಪ್ರಚೋದನೆಗೆ ಯತ್ನಿಸಿದ ಕೂಡಲೇ ಅಲ್ಲಿ ನೆರೆದಿದ್ದ ಭಕ್ತರಲ್ಲಿ ಆಕ್ರೋಶ ಭುಗಿಲೆದ್ದಿತು.

“ನಿಮ್ಮ ದ್ವೇಷವನ್ನ ನಿಮ್ಮಲ್ಲೇ ಇಟ್ಕೊಳ್ಳಿ. ನಾವಿಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಎಲ್ಲಾ ಸಮುದಾಯದವರೂ ದೇಣಿಗೆ ಕೊಟ್ಟಿದ್ದಾರೆ. ಈ ದೇವಸ್ಥಾನಕ್ಕೆ ಮುಸ್ಲಿಮರೂ 6 ಲಕ್ಷ ಹಣವನ್ನು ಕೊಟ್ಟಿದ್ದಾರೆ. ನಿಮ್ಮ ರಾಜಕೀಯ ನಿಮ್ಮ ಹತ್ರಾನೆ ಇಟ್ಕೊಳ್ಳಿ” ಎಂದು ಗ್ರಾಮಸ್ಥರು ಏರು ದ್ವನಿಯಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿ ಈ ವಿಭಜನಕಾರಿ ವ್ಯಕ್ತಿಯನ್ನು ವೇದಿಕೆಯಿಂದಲೇ ಓಡಿಸಿದ್ದಾರೆ.

ಅಲ್ಲಮಪ್ರಭುಗಳ ಹೆಸರಲ್ಲಿ ಕಟ್ಟಿಸಲಾಗಿದ್ದ ದೇವಸ್ಥಾನದ ಉದ್ಘಾಟನೆಗೆ ಬಂದು ವಕ್ಫ್ ಹೆಸರಲ್ಲಿ ಕೋಮುಪ್ರಚೋದನೆ ಮಾಡಲು ಪ್ರಯತ್ನಿಸಿದ ಹರಕು ಬಾಯಿಯ ಯತ್ನಾಳರನ್ನು ಜನರೇ ತರಾಟೆಗೆ ತೆಗೆದುಕೊಂಡಿದ್ದು ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಜನರಲ್ಲಿರುವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ.

ಈ ಸಂಘಿಗಳು ಎಲ್ಲೆಲ್ಲಿ ಮತಾಂಧತೆಯನ್ನು ಬಿತ್ತಲು ಪ್ರಯತ್ನಿಸುತ್ತವೆಯೋ ಅಲ್ಲೆಲ್ಲಾ ಜನರು ಇದೇ ರೀತಿ ವಿರೋಧ ವ್ಯಕ್ತಪಡಿಸಿ ಕೋಮುದ್ವೇಷಿಗಳನ್ನು ಓಡಿಸಬೇಕಿದೆ. ಪರಸ್ಪರ ಸಹಕಾರ ಹಾಗೂ ಹೊಂದಾಣಿಕೆಯಿಂದ ಬದುಕುತ್ತಿರುವ ಜನರನ್ನು ಧರ್ಮಾಧಾರಿತವಾಗಿ ಒಡೆಯುವ ಹಿಂದುತ್ವವಾದಿ ದುಷ್ಟ ಶಕ್ತಿಗಳ ವಿರುದ್ಧ ಜನರೇ ಧ್ವನಿ ಎತ್ತಬೇಕಿದೆ. ಮೈಸೂರಿನ ಪ್ರತಾಪ ಸಿಂಹ, ಚಿಕ್ಕಮಗಳೂರಿನ ಸಿ.ಟಿ.ರವಿ, ಬೆಂಗಳೂರಿನ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಧಾರವಾಡದ ಪ್ರಹ್ಲಾದ ಜೋಶಿಯಂತಹ ಇಸ್ಲಾಮೋಫೋಬಿಯಾ ರೋಗ ಪೀಡಿತ ವ್ಯಕ್ತಿಗಳನ್ನು ಎಲ್ಲಾ ಸಾರ್ವಜನಿಕ ವೇದಿಕೆಗಳಿಂದ ಜನರೇ ಬಹಿಷ್ಕರಿಸಬೇಕಿದೆ. ‘ನಿಮ್ಮ ಕೋಮು ರಾಜಕೀಯ ನಿಮ್ಮಲ್ಲಿರಲಿ’ ಎಂದು ಹೇಳಬೇಕಿದೆ. ಇದಕ್ಕೆ ತೇರದಾಳದ ಜನತೆ ನಿಜಕ್ಕೂ ಅಭಿನಂದನೀಯರು. 

ಪ್ರಹ್ಲಾದ ಜೋಶಿ

ಇತ್ತೀಚೆಗೆ ಕೇಂದ್ರ ಸರಕಾರದ ಸಚಿವ ಪ್ರಹ್ಲಾದ ಜೋಶಿಯವರು ಶಿಗ್ಗಾವಿಯ ಉಪಚುನಾವಣೆಯಲ್ಲಿ ಚುನಾವಣಾ ಪ್ರಚಾರ ಮಾಡಲು ಬಂದಾಗ ಯಾವುದೋ ಕಂಬಕ್ಕೆ ಕಟ್ಟಿದ ಹಸಿರು ಬಾವುಟ ಕಂಡು ಕೆಂಡವಾಗಿದ್ದಾರೆ. ಅಲ್ಲಿ ಭಗವಾಧ್ಜಜ ಹಾರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸಿರು ಬಾವುಟವೊಂದನ್ನು ತೆರವುಗೊಳಿಸಿ ಕೇಸರಿ ಬಾವುಟವನ್ನು ಹಾರಿಸಲಾಗಿದೆ. ಇದಲ್ಲವೇ ಕೋಮುದ್ವೇಷ ಎಂದರೆ?. ಈ ದೇಶ ಈ ವೈದಿಕಶಾಹಿ ಕೇಸರಿಗರಿಗೆ ಮಾತ್ರ ಸೇರಿದೆಯಾ?. ಎಲ್ಲಾ ಜಾತಿ ಧರ್ಮದವರಿಗೂ ಸೇರಿದ್ದಲ್ಲವೇ?‌. ಇವರು ಕಂಡ ಕಂಡಲ್ಲಿ ಕೇಸರಿ ಬಾವುಟ ಹಾರಿಸಬಹುದು, ಕೇಸರಿ ಬಣ್ಣ ಬಳಿಯಬಹುದು. ಎಲ್ಲವನ್ನೂ ಕೇಸರೀಕರಣ ಮಾಡಬಹುದು. ಆದರೆ ಅನ್ಯ ಧರ್ಮೀಯರು ಒಂದು ಬಾವುಟವನ್ನೂ ಹಾರಿಸಕೂಡದು ಎನ್ನುವುದೇ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಈ ದೇಶದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ. ಆದರೆ ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಈ ಫ್ಯಾಸಿಸ್ಟ್ ಹಿಂದುತ್ವವಾದಿಗಳು ದೇಶಾದ್ಯಂತ ಧರ್ಮದ್ವೇಷವನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೋಮು ಪ್ರಚೋದಕ ಭಾಷಣಗಳನ್ನು ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನೇ ಸರ್ವನಾಶ ಮಾಡುತ್ತಿದ್ದಾರೆ. 

ಇಂತಹ ಫ್ಯಾಸಿಸ್ಟ್ ಮನೋಭಾವನೆಯನ್ನೇ ಸೌಹಾರ್ದತೆ ಬಯಸುವ ಎಲ್ಲರೂ ವಿರೋಧಿಸಬೇಕಿದೆ. ಹಿಂದೂ ಹೆಸರಲ್ಲಿ ವೈದಿಕಶಾಹಿ ಹಿಂದುತ್ವವನ್ನು ಹೇರುತ್ತಿರುವ ವಿಭಜಕ ಶಕ್ತಿಗಳನ್ನು ಪ್ರಶ್ನಿಸಬೇಕಿದೆ. ಧರ್ಮದ್ವೇಷ ಹರಡುವ ಮತಾಂಧರನ್ನು ದ್ವೇಷಿಸಬೇಕಿದೆ. ಕೋಮು ಪ್ರಚೋದನೆ ಮಾಡುವ ಸಂಘಿಗಳನ್ನು ವೇದಿಕೆಯಿಂದಲೇ ಓಡಿಸಬೇಕಿದೆ. ಅದಕ್ಕೆ ತೇರದಾಳದ ಜನತೆ ಮಾದರಿಯಾಗಿದ್ದಾರೆ. ಬಸವಣ್ಣನ ನಾಡಿನ ಜನ ಪ್ರಜ್ಞಾವಂತರಾಗಿದ್ದಾರೆ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಮುಸ್ಲಿಂ ಸಮುದಾಯಕ್ಕೆ ತಲೆನೋವಾಗಿರುವ ಸಚಿವ ಝಮೀರ್ ಅಹಮದ್..

More articles

Latest article