ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ. – ಶೃಂಗ ಶ್ರೀ ಟಿ, ಉಪನ್ಯಾಸಕಿ.
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಮಾಧ್ಯಮ. ಸಮಾಜದ ಓರೆಕೋರೆಗಳನ್ನು ತಿದ್ದುವ, ಪ್ರತಿಯೊಬ್ಬರ ನೋವಿಗೂ ಪ್ರತಿಸ್ಪಂದಿಸುವ ಬೆಳಕಿನ ಕಿಂಡಿ ಮಾಧ್ಯಮ. ಮಾಧ್ಯಮವೆನ್ನುವುದು ಒಂದರ್ಥದಲ್ಲಿ ಸಮಾಜಕ್ಕೆ ಹಿಡಿದ ಕೈಗನ್ನಡಿ, ದಾರಿದೀಪ. ನಮ್ಮೆಲ್ಲರನ್ನು ಬಹಳ ಎಚ್ಚರಿಕೆಯಿಂದ ನಡೆಸಬೇಕಾದ ಕಂದೀಲು. ಪ್ರತಿ ಕ್ಷಣ ಮಾಧ್ಯಮದಿಂದ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗುತ್ತಲೇ ಇರುತ್ತೇವೆ. ನಮ್ಮ ಅಭಿಪ್ರಾಯಗಳನ್ನ ಅಲೋಚನಾ ಕ್ರಮವನ್ನ ಬದುಕಿನ ರೀತಿ ರಿವಾಜುಗಳನ್ನ ಮಾಧ್ಯಮ ಲೋಕ ಮಾರ್ಪಡಿಸುತ್ತಲೇ ನಮ್ಮನ್ನ ರೂಪಿಸುತ್ತಿರುತ್ತದೆ.
ಹಾಗಿದ್ದಾಗ ಮಾಧ್ಯಮ ಲೋಕ ಒಳ್ಳೆಯದನ್ನ ಪ್ರೇರೆಪಿಸಿದಾಗ ಬದುಕು ಚೆಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಆದರೆ ಅದೇ ಮಾಧ್ಯಮ ತಪ್ಪು ಹಾದಿಯಲ್ಲಿ ನಡೆದರೆ ಎಡವುದು ಇಡೀ ಸಮಾಜ ಮತ್ತು ಸಮಾಜದ ಸ್ವಾಸ್ಥ್ಯ. ಪ್ರತಿಯೊಂದು ಮಾಹಿತಿ, ವರದಿ, ಜಾಹಿರಾತುಗಳು, ಹೇಳಿಕೆಗಳು, ಹೆಸರಾಂತ ನಟ ನಟಿಯರ, ಕವಿಗಳ ಕವಯಿತ್ರಿಯರ, ರೈತರ, ದಾರ್ಶನಿಕರ, ಹೋರಾಟಗಾರರ ಸಾಧನೆ ಮಾಡಿದ ಜನರ ಬದುಕು ಇನ್ನೂ ಎಷ್ಟೋ ವಿಚಾರಗಳು ನಮ್ಮನ್ನ ಪ್ರಭಾವಿಸುತ್ತ ನಮ್ಮ ಬದುಕನ್ನ ರೂಪಿಸುತ್ತ ಭದ್ರವಾದ ಅಡಿಪಾಯ ಹಾಕುತ್ತಿರುತ್ತವೆ. ಹಾಗಿದ್ದಾಗ ಮಾಧ್ಯಮ ತನ್ನ ಮೈಯೆಲ್ಲಾ ಕಣ್ಣಾಗಿ ಅತ್ಯಂತ ಪ್ರಜ್ಞಾಪೂರ್ವಕವಾಗಿ ವಿಚಾರಗಳನ್ನ ವಿನಿಮಯ ಮಾಡಬೇಕು. ಒಳ್ಳೆಯ ವಿಚಾರಗಳನ್ನ ನಮ್ಮಲ್ಲಿ ತುಂಬಬೇಕು. ಆದರೆ ಅದೇ ಮಾಧ್ಯಮದಲ್ಲಿ ಸಿಕ್ಕ ಈ ಸಣ್ಣ ತುಣುಕು ನನ್ನನ್ನು ಯೋಚನೆಗೆ ಹಚ್ಚಿತು.
ಇದು ಕೆಲವರಿಗೆ ಏನೂ ಅನ್ನಿಸದಿರಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಮೈ ಬಣ್ಣದ ಸುತ್ತ ನಡೆಯುವ ವರ್ಣ ರಾಜಕಾರಣ ಬೆಳಕಿಗೆ ಬರುತ್ತದೆ. ಅಷ್ಟೇ ಅಲ್ಲದೇ ಈ ತೆಳ್ಳಗೆ ಬೆಳ್ಳಗಿರುವವರನ್ನ ನೋಡಿದಾಕ್ಷಣ ಅವರ ದೇಹದ ಭಾಗಗಳನ್ನ ನೋಡಿದಾಕ್ಷಣ ಪಡ್ಡೆ ಹುಡುಗರ ನಿದ್ದೆ ಕೆಡುತ್ತದೆ, ಅವರು ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕೆಟ್ಟ ಸ್ಥಿತಿಯನ್ನ ಸೃಷ್ಟಿಸಿ ಯುವ ಮನಸ್ಸುಗಳನ್ನ ದಾರಿ ತಪ್ಪಿಸುವ ಓ ಬೆಳ್ಳಗಿದ್ದರೆ ಮಾತ್ರವೇ ಅದು ಬದುಕಿನ ಶ್ರೇಷ್ಠತೆ ಎಂಬುದನ್ನ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಲಾಗುತ್ತಿದೆ.
ಈ ಒಂದು ಫೋಟೋದಲ್ಲಿರುವ ಹೇಳಿಕೆಗಳನ್ನ ಗಮನಿಸಿದರೆ ಈ ಜಗತ್ತಿನಲ್ಲಿ ಬೆಳ್ಳಗಿರುವವರಿಗೆ ಮಾತ್ರವೇ ಬದುಕುವುದಕ್ಕೆ ಅರ್ಹತೆ, ಬೆಳ್ಳಗಿರುವವರು ಮಾತ್ರವೇ ಶ್ರೇಷ್ಠ ಅನ್ನುವ ತಪ್ಪು ಕಲ್ಪನೆಗಳನ್ನ ನಮ್ಮಲ್ಲಿ ತುಂಬುತ್ತಲೇ ಬಂದಿರುವ ಸಮಾಜದ ನಿಜಮುಖ ಹೊರ ಬೀಳುತ್ತದೆ. ಕಪ್ಪು ಕನಿಷ್ಠ ಬಿಳಿ ಬಣ್ಣವೇ ಶ್ರೇಷ್ಠ ಎಂಬ ವ್ಯವಸ್ಥಿತವಾದ ಸುಳ್ಳನ್ನ, ಬಣ್ಣದ ರಾಜಕೀಯವನ್ನ ನಮ್ಮ ಮೇಲೆ ತೋರುತ್ತಲೇ ಇದ್ದಾರೆ. ಕಪ್ಪು ಶ್ರೇಷ್ಠ ಕಪ್ಪಾಗಿರುವವರೂ ಕೂಡ ಮನುಷ್ಯರು ಎಂಬುದನ್ನ ಯಾವುದೇ ಮಾಧ್ಯಮ ತೋರುತ್ತಿಲ್ಲ.
ಬದಲಾಗಿ Black is Crime, ಕಪ್ಪಾಗಿರುವುದು ಒಂದು ಅಪರಾಧ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಶತಶತಮಾನಗಳಿಂದಲೂ ಕೂಡ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಇನ್ನೂ ಏಕೆ ಆರ್ಥಿಕವಾಗಿ ಸಬಲರಾಗಿದ್ದರೂ ಕೇವಲ ತನ್ನ ಮೈಬಣ್ಣದ ಕಾರಣದಿಂದ ಶೋಷಣೆಗೆ, ಹಿಂಸೆಗೆ, ಅವಮಾನಕ್ಕೆ ಹೆಣ್ಣನ್ನು ಗುರಿಯಾಗಿಸಿರುವುದು ಒಂದು ಹೇಯ ಕೃತ್ಯ.
ಯಾವುದೇ ಜಾಹೀರಾತಿನಲ್ಲಿ ಕಪ್ಪಗಿರುವವರನ್ನ ಬೆಳ್ಳಗೆ ಮಾಡುವುದನ್ನಷ್ಟೇ ತೋರಿಸುತ್ತಾರೆಯೇ ವಿನಃ ಕಪ್ಪನ್ನ ಸಹಜವಾಗಿ ಒಪ್ಪಿಕೊಳ್ಳುವ, ಕಪ್ಪು ಶಿಕ್ಷೆಯಲ್ಲ, ಕಪ್ಪೆಂಬ ಕಾರಣಕ್ಕೆ ನೀವು ಕುಗ್ಗುವ ಅವಶ್ಯಕತೆಯಿಲ್ಲ, ಅದೊಂದು ಸಹಜ ರೂಪ, ಅದೇ ನಿಮ್ಮ ವಿಶಿಷ್ಟತೆ, ವಿಭಿನ್ನತೆ, ನೀವು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಅಂತ ಉತ್ತೇಜಿಸುವ ಜಾಹಿರಾತುಗಳು ಇಲ್ಲವೆನ್ನುವಷ್ಟು ಕಡಿಮೆ.
ಯಾವುದೇ ಜಾಹೀರಾತನ್ನು ಗಮನಿಸಿದರೆ ಈ ಸಾಬೂನು ಹಚ್ಚಿ, ಈ ಕ್ರೀಂ ಹಚ್ಚಿ ನೀವು ಬೆಳ್ಳಗಾಗುತ್ತೀರ, ಸೂರ್ಯನ ಕಾಂತಿಯಂತ ಹೊಳಪು ನಿಮಗೆ ಸಿಗುತ್ತದೆ, ಎರೆಡೆರಡು ಮಕ್ಕಳಾಗಿದ್ದರೂ ಕೂಡ ನಿಮ್ಮ ತ್ವಚೆ ಕೋಮಲವಾಗಿರುತ್ತದೆ, ನೀವು ಬಹಳ ಯಂಗ್ ಆಗಿ ಕಾಣುತ್ತೀರಿ ಅಂತೆಲ್ಲಾ ಕಟ್ಟು ಕತೆಗಳನ್ನ ಕಟ್ಟಿ ಮುಖದ ಮೇಲೆ ಒಂದೇ ಒಂದು ಮೊಡವೆಯಾದರಂತೂ ಅವರ ಬದುಕೇ ಮುಗಿಯಿತು ಅನ್ನುವ ಹಾಗೆ ಬಿಂಬಿಸಿ ಅವರು ಪದೇ ಪದೇ ಕನ್ನಡಿಯ ಮುಂದೆಯೇ ನಿಂತು ತಮ್ಮನ್ನೇ ತಾವು ದೂಷಿಸುವ ಹಾಗೆ ಮಾಡಲಾಗಿದೆ. ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಸಾಯುವವರೆಗೂ ಯಂಗ್ ಆಗಿಯೇ ಕಾಣಬೇಕು, ಮದುವೆಯಾಗಿ ಮಕ್ಕಳಾದ ಮೇಲೂ ಯಂಗ್ ಆಗಿಯೇ ಕಾಣಬೇಕು ತನ್ನ ಗಂಡನ ಮುಂದೆ ಸದಾಕಾಲ ಸುಂದರವಾಗಿಯೇ ತೆಳ್ಳಗೆ ಬೆಳ್ಳಗೆ ಹೊಳೆಯುವ ಹಾಗೆಯೇ ಕಾಣಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ಅದು ವಿಫಲವಾದಾಗ ಎಷ್ಟೋ ಹೆಣ್ಣುಮಕ್ಕಳು ತಮ್ಮ ಮೈ ಬಣ್ಣದ ಬಗೆಗೆ, ತಮ್ಮ ದೇಹದ ಬಗೆಗೆ ತಾವೇ ಅಸಹ್ಯ ಸೃಷ್ಟಿಸಿಕೊಂಡು ಸದಾ ಕಾಲ ಕೊರಗುತ್ತಾ ತಮ್ಮನ್ನೇ ತಾವು ಹಳಿದುಕೊಳ್ಳುತ್ತಿದ್ದಾರೆ.
ಕಪ್ಪು ಬಣ್ಣದ ಮದುವೆಯ ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಗೋಳನ್ನಂತೂ ಕೇಳುವುದಕ್ಕೂ, ಊಹಿಸುವುದಕ್ಕೂ ಅಸಾಧ್ಯ. ಹುಡುಗಿ ಕಪ್ಪಾಗಿರುವ ಕಾರಣಕ್ಕೆ ಅವಳನ್ನ ಜರಿದು ಚುಚ್ಚಿ ಚುಚ್ಚಿ ಮಾತನಾಡಿ ಅವಳಿಗೂ ಅವಳ ತಂದೆ ತಾಯಿಗಳ ಮನಸ್ಸಿಗೂ ಘಾಸಿಮಾಡಿ ಆ ಹೆಣ್ಣು ಹುಟ್ಟಲೇ ಬಾರದಿತ್ತು ಎಂಬ ಅಭಿಪ್ರಾಯಕ್ಕೆ ತಂದು ನಿಲ್ಲಿಸಿಬಿಡುತ್ತದೆ ಈ ಸಮಾಜ.
ನಾನೇ ಸ್ವತಃ ಸಾಕ್ಷಿಯಾದ ಒಂದು ನಿಜ ಘಟನೆಯನ್ನ ಇಲ್ಲಿ ವಿವರಿಸುತ್ತೇನೆ.
ಹೀಗೆ ನನ್ನ ಸ್ನೇಹಿತೆಯ ಮದುವೆಗೆಂದು ಒಂದು ಹಳ್ಳಿಗೆ ಹೋಗಿದ್ದಾಗ ನಡೆದ ವಿಚಿತ್ರ ಘಟನೆಯೊಂದು ತೀವ್ರವಾಗಿ ಮನಸ್ಸನ್ನು ಘಾಸಿಗೊಳಿಸಿತ್ತು. ಕಪ್ಪಾಗಿರುವ ಕಾರಣಕ್ಕೆ ಅಲಂಕಾರವೇ ನಿಷಿದ್ಧವೇನೋ ಅನ್ನುವ ಹಾಗೆ ನಡೆದುಕೊಂಡ ಅಲ್ಲಿನ ಜನರ ಮನಸ್ಥಿತಿ ಅದೆಷ್ಟು ವಿಕೃತವಾದದ್ದು ಅನಿಸಿತ್ತು. ಅದೆಷ್ಟೋ ಬಣ್ಣ ಬಣ್ಣದ ಆಸೆಕನಸುಗಳನ್ನ ಹೊತ್ತು ಹುಟ್ಟಿದಾಗಿನಿಂದಲೂ ಕಪ್ಪೆಂಬ ಕಾರಣಕ್ಕೆ ದೂಷಿಸಲ್ಪಡುವ ಹೆಣ್ಣು ತನ್ನ ಮದುವೆಯ ದಿನದಂದಾದರೂ ತನ್ನಿಚ್ಛೆಯಂತೆ ಶೃಂಗರಿಸಿಕೊಳ್ಳಬೇಕೆಂಬುದು ಮಹದಾಸೆಯಾಗಿರೋ ಎಲ್ಲಾ ಹೆಣ್ಣು ಮಕ್ಕಳಂತೆ ನನ್ನ ಗೆಳತಿಯೂ ಕೂಡ ಬೆಟ್ಟದಷ್ಟಾಸೆ ಇಟ್ಟಿದ್ದಳು. ಅಂತೆಯೇ ಬ್ಯೂಟಿಷಿಯನ್ ನ ಕೂಡ ಕರೆಸಿ ಅಲಂಕೃತಗೊಂಡು ಇನ್ನೇನು ಮುಂದಿನ ಶಾಸ್ತ್ರಗಳಿಗೆ ಅಣಿಯಾಗಬೇಕೆನ್ನುವಷ್ಟರಲ್ಲಿ (ಮೇಕ್ ಅಪ್ ಹಾಕಿ ಐದು ನಿಮಿಷಗಳು ಕಳೆದಿಲ್ಲ) ಹಸಿದ ಹುಲಿಗಳಂತೆ ಮೂರು ಜನ ಹೆಂಗಳೆಯರು ಮುಗಿಬಿದ್ದು ಹಚ್ಚಿದ ಎಲ್ಲಾ ಮೇಕಪ್ಪನ್ನು ಕ್ಷಣಾರ್ಧದಲ್ಲೇ ಒರೆಸಿ ಅಳಿಸಿ ಹಾಕಿ ಆ ಸರ ಈ ಓಲೆ ಆ ಬಳೆ ಒಪ್ತಿಲ್ಲ ಅಂತ ತಮಗೆ ಬಂದ ಹಾಗೆ ರೆಡಿ ಮಾಡಿಬಿಟ್ಟರು .
ಅಬ್ಬಾ ಅದೆಷ್ಟು ವಿಕೃತ ಮನಸ್ಥಿತಿಗಳು ಆಗತಾನೇ ಬಣ್ಣದ ಕನಸುಗಳ ಹೊತ್ತು ತಾನು ಎಲ್ಲರ ಮುಂದೆ ಚೆಂದ ಕಾಣಬೇಕು ಎಂದು ಕನಸುಕಂಡು ಆಗ ತಾನೇ ಅರಳಿನಿಂತ ಸುಮದ ಕತ್ತನ್ನ ಕಿತ್ತು ಧ್ವಂಸ ಮಾಡಿದಂತ ಅನುಭವವದು.ಅದೆಷ್ಟೋ ದಿನಗಳ ಕಾಲದಿಂದ ಕಂಡ ಆ ಹೆಣ್ಣಿನ ಕನಸೆಲ್ಲಾ ನಾಶವಾಗಿ ಹೋಗಿತ್ತು.
ಅಷ್ಟಲ್ಲದೆ ಅವಳಿಗೆ ಸೂಟ್ ಆಗ್ತಿಲ್ಲ , ಅವಳು ಕಪ್ಪಗಿದ್ದಾಳೆ ಮೇಕಪ್ ಚೆನ್ನಾಗಿ ಕಾಣೋದಿಲ್ಲ, ಸುಮ್ಮನೆ ಜಡೆ ಹಾಕಿದರೆ ಸಾಕಿತ್ತು ಇಷ್ಟೆಲ್ಲಾ ಅಲಂಕಾರ ಬೇಕಿತ್ತಾ ? ಅನ್ನೋ ಅವರ ಉದ್ಗಾರಗಳು ವಿಚಿತ್ರ ವಿಕೃತ ಮನಸ್ಥಿತಿಗಳು ಮನಸನ್ನ ನೋಯಿಸಿತ್ತು. ಆದರೆ ಒಬ್ಬಾರಾದರೂ ಅವಳ ಮನಸ್ಸಿಗಾದ ಘಾಸಿಯ ಬಗ್ಗೆ ಆಲೋಚಿಸಿದರಾ ? ಅಥವಾ ತನ್ನ ಮದುವೆಯ ದಿನದಂದಾದರು ತನ್ನಿಷ್ಟದಂತೆ ಅಲಂಕರಿಸಿಕೊಳ್ಳಲಿ ಎಂಬ ಭಾವ ಒಬ್ಬರಿಗೂ ಬರಲಿಲ್ಲವೆ ? ಅವಳು ಒಂದೇ ಒಂದು ಫೋಟೋಗೂ ಮನಸಾರೆ ನಕ್ಕದ್ದನ್ನ ನಾ ನೋಡಲೇ ಇಲ್ಲ.
ಅವಳು ಕಪ್ಪಾಗಿದ್ದಾಳೆ ಎಂಬ ಕಾರಣಕ್ಕಾಗಿಯೇ ಅವಳ ಅತ್ತೆ, ಮದುವೆಯಾದ ನಂತರದಿಂದ ಎರಡು ಮಕ್ಕಳಾದರೂ ಅವಳನ್ನ ಪ್ರೀತಿಯಿಂದ ಸ್ನೇಹದಿಂದ ಮಮತೆಯಿಂದ ನೋಡುವುದಿರಲಿ ಅವಳನ್ನ ಮಾತಾನಾಡಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಅವಳು ಮಾಡಿದ ಯಾವ ಅಡುಗೆಯನ್ನೂ ಮುಟ್ಟದೇ ಅವಳ ಎಲ್ಲಾ ಕೆಲಸಗಳಲ್ಲಿ ಕೊಂಕನ್ನೇ ಹುಡುಕುತ್ತಾ ಅವಳ ನೆರಳೂ ಸೋಕದಂತೆ ಸಣ್ಣ ಸಣ್ಣ ತಪ್ಪಿಗೂ ಬೈಗುಳಗಳಿಂದ ಹಿಂಸಿಸುತ್ತ ನೋಯಿಸುತ್ತಾ ಬದುಕುತ್ತಿದ್ದಾರೆ.
ಅಷ್ಟೇ ಅಲ್ಲದೇ ಅವಳ ಗಂಡನೂ ಕೂಡ ಯಾವುದಾದರೂ ಕ್ರೀಂ ಹಚ್ಚು ಬೆಳ್ಳಗಾಗು ಅನ್ನುವ ಮಾತುಗಳಿಂದ ಅವಳನ್ನ ಇನ್ನೂ ಕಪ್ಪಾಗಿ ಹುಟ್ಟಿರುವುದೇ ಅಪರಾಧ ಎಂದು ಬಿಂಬಿಸುತ್ತಿದ್ದಾರೆ. ಇತ್ತ ನೋವೂ ಸಹಿಸಲಾಗದೆ ತವರಿಗೂ ಹಿಂದಿರುಗಲಾಗದೆ ಗಂಡನಿಂದ ಪ್ರೀತಿಯೂ ಸಿಗದೆ ತಾನೇ ತನ್ನದೇ ಸ್ವತಂತ್ರ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ತಂದೆ ತಾಯಿಗಳ ಮನೆಯ ಮರ್ಯಾದೆಗೆ ಅಂಜಿ ಪ್ರತಿ ಕ್ಷಣ ನರಕದಂತ ಬದುಕನ್ನ ಬದುಕುತ್ತಿದ್ದಾಳೆ. ಇದೆಲ್ಲದಕ್ಕೂ ಕಾರಣ ಅವಳ ಬಣ್ಣವನ್ನೇ ಮೂಲ ಕಾರಣವನ್ನಾಗಿ ಮಾಡಿದ ಕೆಟ್ಟ ಮನಸ್ಥಿತಿಯ ಜನರು ಮತ್ತು ಸಮಾಜ.
ಯಾವುದೇ ಜಾಹೀರಾತಿನಲ್ಲಿ, ಸಿನಿಮಾ, ಸೀರಿಯಲ್ ಗಳಲ್ಲಿ ಕಪ್ಪಾಗಿರುವರನ್ನು ಹೀರೋಯಿನ್ಗಳನ್ನಾಗಿ ಮಾಡುವುದೇ ಇಲ್ಲ. ಆದರೇ ಎಷ್ಟೇ ಕಪ್ಪಾಗಿದ್ದರೂ ಗಂಡಸರು ಹೀರೋಗಳಾಗಬಹುದು ಇಲ್ಲಿಯೂ ಕೂಡ ಗಂಡು ಹೆಣ್ಣಿನ ನಡುವೆ ಬಣ್ಣ ತಾರತಮ್ಯ ಮತ್ತು ರಾಜಕೀಯ ನಡೆಸಲಾಗುವುದು.
ಅಷ್ಟೇ ಅಲ್ಲದೆ ಆಫ್ರಿಕಾದ ಹೆಣ್ಣು ಮಕ್ಕಳ ಆತ್ಮಕತೆಗಳನ್ನ ಓದುವಾಗ ಕೆಲವು ವಿಚಾರಗಳು ಬಹಳ ನೋಯಿಸಿದವು. ಅಲ್ಲಿ ಕಪ್ಪು ಬಣ್ಣದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಬಿಳಿ ಬಣ್ಣದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದರೆ ಅದನ್ನು ಮಾತ್ರ ಅತ್ಯಾಚಾರವೆಂದು ಕರೆಯಲಾಗುತ್ತದೆ ಮತ್ತು ಕ್ರಮ ಕೈಗೊಳ್ಳಲಾಗುತ್ತದೆ.
ಇಂತಹ ಈ ಕೆಟ್ಟ ಮನಸ್ಥಿತಿಯನ್ನು ಸರಿ ಮಾಡುವಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವದ್ದು. ಜನರನ್ನ ಬಹಳ ಮುಖ್ಯವಾಗಿ ಯುವಕ ಯುವತಿಯರ, ಮಕ್ಕಳ ಮನಸ್ಸಿನಲ್ಲಿ ಕಪ್ಪು ಬಿಳುಪು ಎಂದು ಭೇದ ಭಾವಗಳನ್ನ ಸೃಷ್ಟಿಸದೆ ಎಲ್ಲರನ್ನೂ ಸಮಾನರನ್ನಾಗಿ ಸಹಜವಾಗಿ ಪ್ರಬುದ್ಧತೆಯಿಂದ ಒಪ್ಪಿಕೊಳ್ಳುವ ಮನೋಭಾವವನ್ನ ಶಕ್ತಿಯನ್ನ ಧೈರ್ಯವನ್ನ ತುಂಬುವಂತ ಕೆಲಸಗಳಾಗಬೇಕು.
ಕಪ್ಪು ವರ್ಣದ ಹೆಣ್ಣು ಅಲಂಕಾರಕ್ಕೆ ಅನರ್ಹಳು ಎಂಬ ಹಾಗೆ ಪ್ರತಿಕ್ರಿಯಿಸುವುದನ್ನ ಬಿಟ್ಟು ಅವರು ಇದ್ದ ಹಾಗೆ ಅವರನ್ನ ಸ್ವೀಕರಿಸಿ, ಗೌರವಿಸಿ, ಪ್ರೀತಿಸಿ. ಸಾಧ್ಯವಿಲ್ಲದಿದ್ದರೆ ಕನಿಷ್ಠ ಮಾನವೀಯ ಗುಣಗಳಿಂದ ಮನುಷ್ಯರನ್ನಾಗಿಯಾದರೂ ಕಾಣುವ ಮನಸ್ಥಿತಿ ಇಡೀ ಸಮಾಜದ ಬದಲಾವಣೆಗೆ ನಾಂದಿ ಹಾಡಬಹುದು, ಹೊಸ ಜಗತ್ತಿಗೆ ಮುನ್ನುಡಿ ಬರೆಯಬಹುದು.
ಅಂದವಾದ ಕೈಗಳನ್ನ, ಕಾಲುಗಳನ್ನ, ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ. ಮೈಬಣ್ಣಕ್ಕಿಂತ ಮನಸ್ಸಿನ ಬಣ್ಣ ಬಹಳ ಮುಖ್ಯವಾದದ್ದು ಎಂಬುದನ್ನ ಅರ್ಥಮಾಡಿಕೊಂಡು ಪ್ರೀತಿ, ಕರುಣೆ, ಮೈತ್ರಿ, ಸಹನೆ, ಮಾನವೀಯ ಮೌಲ್ಯಗಳನ್ನ ರೂಢಿಸಿಕೊಂಡು ಪರಸ್ಪರ ಗೌರವದಿಂದ ಬದುಕಬೇಕಿದೆ. ಮಾಧ್ಯಮಗಳೂ ಕೂಡ ಜನರನ್ನ ಯುವ ಮನಸ್ಸುಗಳನ್ನ ದಾರಿ ತಪ್ಪಿಸದೇ ಒಳ್ಳೆಯ ದಾರಿಯಲ್ಲಿ ನಡೆಸುವ ನಿಟ್ಟಿನಲ್ಲಿಯೇ ಕೆಲಸ ಮಾಡಬೇಕಿದೆ.
ಶೃಂಗ ಶ್ರೀ ಟಿ
ಅತಿಥಿ ಉಪನ್ಯಾಸಕಿ, ಶಿವಮೊಗ್ಗ
ಇದನ್ನೂ ಓದಿ- ಈ ಮೊಲೆಗಳೇ ಬೇಡ ಎಂಬ ಒಳಮನದ ತಳಮಳ