ಇತ್ತೀಚೆಗೆ ಬಹಳ ಚರ್ಚೆಯಲ್ಲಿದ್ದ ತಮಿಳಿನ ‘ಅನ್ನಪೂರ್ಣಿ’ ಚಿತ್ರದ ನಟಿ ನಯನತಾರಾ ಕೊನೆಗೂ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ್ದಾರೆ.
OTT ಯಲ್ಲಿ ಬಿಡುಗಡೆಗೊಂಡಿದ್ದ ‘ಅನ್ನಪೂರ್ಣಿ’ ಸಿನಿಮಾದಲ್ಲಿ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ದೃಶ್ಯಗಳು ಇವೆ ಎಂಬ ಆರೋಪ ಬಲಪಂಥೀಯರಿಂದ ಕೇಳಿಬಂದಿದ್ದ ಬೆನ್ನಲ್ಲೇ ದೇಶಾದ್ಯಂತ ಚರ್ಚೆಗೆ ಒಳಗಾಗಿತ್ತು. ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಝೀಸ್ಟುಡಿಯೋ ಕ್ಷಮಾಪಣೆ ಪತ್ರ ಬರೆದಿತ್ತು.
ಈ ಹಿನ್ನೆಲೆಯಲ್ಲಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಚಿತ್ರತಾರೆ ನಯನತಾರಾ ಕ್ಷಮೆ ಯಾಚಿಸಲು ತೀವ್ರ ಒತ್ತಡ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾದ ಪತ್ರವೊಂದನ್ನು ಬರೆದು, “ನಾನು ಸೇರಿದಂತೆ ಅನ್ನಪೂರ್ಣಿ ಚಿತ್ರತಂಡದವರು ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶ ಹೊಂದಿಲ್ಲ. ಒಳ್ಳೆಯ ಸಂದೇಶ ಹಂಚಿಕೊಳ್ಳುವ ಪ್ರಯತ್ನದಲ್ಲಿ ಅಜಾಗರೂಕತೆಯಿಂದ ನಿಮ್ಮೆಲ್ಲರಿಗೂ ನೋವುಂಟಾಗಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಸೆನ್ಸರ್ ಗೆ ಒಳಪಟ್ಟಿದ್ದ ಸಿನಿಮಾವನ್ನು OTT ವೇದಿಕೆಯಿಂದ ತೆಗದುಹಾಕುವುದನ್ನು ನಾನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.
“ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ. ದೇಶಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ”ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.