Saturday, July 27, 2024

ಕಲ್ಲಡ್ಕ ಭಟ್ ಪರ ವಕಾಲತ್ತು: ಕಾಂಗ್ರೆಸ್ ವಕೀಲನ ತಲೆದಂಡ

Most read

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಾದಮಂಡಿಸಿದ್ದ ವಕೀಲರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಲಾಗಿದೆ.

ಟಿ.ಚಂದ್ರೇಗೌಡ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮುಖಂಡ. ಕೋಮುದ್ವೇಷದ ಹೇಳಿಕೆ ನೀಡುವ ಪ್ರಭಾಕರ ಭಟ್ ಪರ ವಾದ ಮಂಡಿಸಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.

ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನಿಗಾಗಿ ಡಿ.ಚಂದ್ರೇಗೌಡ ಎಂಬುವರು ನ್ಯಾಯಾಲಯದಲ್ಲಿ ಆರೋಪಿ ಪರ ಹಾಜರಾಗಿದ್ದರು. ಇವರು ಶ್ರೀರಂಗಪಟ್ಟಣ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್ ಮುಖಂಡರಾಗಿದ್ದುಕೊಂಎಉ, ಶ್ರೀರಂಗಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಆರೋಪಿಯ ಪರವಾಗಿ ಹಾಜರಾಗಿದ್ದು, ಕಾಂಗ್ರೆಸ್ ಮುಖಂಡರಿಗೆ ಮುಜುಗರ ತರಿಸಿತ್ತು.

ಜ.17ರಂದು ನ್ಯಾಯಾಲಯ ಪ್ರಭಕರ ಭಟ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ನಂತರ ವಕೀಲ ಡಿ.ಚಂದ್ರೇಗೌಡರ ನಿರ್ಧಾರಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಗೌರಿಶಂಕರ್ ಅವರು ಡಿ.ಚಂದ್ರೇಗೌಡರನ್ನು ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

ಪ್ರಭಾಕರ ಭಟ್ ಡಿಸೆಂಬರ್ 24 ರಂದು ಹನುಮಾನ್ ಸಂಕೀರ್ತನಾ ಯಾತ್ರೆಯ ಸಂದರ್ಭದಲ್ಲಿ ಭಾಷಣ ಮಾಡುವಾಗ ತ್ರಿವಳಿ ತಲಾಖ್ ನಿಷೇಧವನ್ನು ಉಲ್ಲೇಖಿಸಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದು, ಮುಸ್ಲಿಂ ಮುಖಂಡರು ಸೇರಿದಂತೆ ಹಲವರು ಖಂಡಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಶ್ರೀರಂಗಪಟ್ಟಣ ಪೊಲೀಸರು ಐಪಿಸಿ ಸೆಕ್ಷನ್ 354, 294, 509, 153A, 295, 295A, 298 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಭಾಕರ ಭಟ್ ವಿಚಾರಣೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

More articles

Latest article