ಕನ್ನಡ ನುಡಿ ಸಪ್ತಾಹ
ಇಂದು ವಿಶ್ವದಲ್ಲಿ ಸುಮಾರು 6,000 ಭಾಷೆಗಳು ಬಳಕೆಯಲ್ಲಿ ಇವೆಯಾದರೂ ಜಗತ್ತಿನ ಅರ್ಧದಷ್ಟು ಜನರು ಚೀನೀ, ಇಂಗ್ಲೀಷ್, ಸ್ಪಾನಿಷ್, ಹಿಂದಿ, ಅರೇಬಿಕ್, ಮಲಯ್, ರಷ್ಯನ್, ಬೆಂಗಾಲಿ, ಪೋರ್ಚುಗೀಸ್, ಮತ್ತು ಫ್ರೆಂಚ್ ಭಾಷೆಗಳನ್ನು ಮಾತ್ರ ಮಾತನಾಡುತ್ತಾರೆ. ಈ ಶತಮಾನದ ಅಂಚಿಗೆ ಅರ್ಧದಷ್ಟು ಭಾಷೆಗಳು ಕಣ್ಮರೆಯಾಗುತ್ತವೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಅಂದಾಜು ಪ್ರತಿ ಎರಡು ವಾರಗಳಿಗೆ ಒಂದು ಭಾಷೆ ನಾಶವಾಗುತ್ತಿದೆ – ಹೆಚ್.ಮಾರುತಿ, ಹಿರಿಯ ಪತ್ರಕರ್ತರು.
ರಾಜ್ಯೋತ್ಸವ ಎಂದರೆ ಪಕ್ಕನೆ ನೆನಪಾಗುವುದು ಕನ್ನಡ, ಕನ್ನಡಿಗ, ಕರ್ನಾಟಕ. ವಿಶಾಲ ಅರ್ಥದಲ್ಲಿ ಹೇಳುವುದಾದರೆ ಭಾಷೆ, ನೆಲ, ಜಲ, ಗಡಿ, ಸಾಹಿತ್ಯ, ಉದ್ಯೋಗ ಇತ್ಯಾದಿ. ಸಾಹಿತ್ಯ ಸಮೃದ್ಧಿಯಾಗಿ ಬೆಳೆಯುತ್ತಿದೆ. ಜಲಾಶಯಗಳು ಭರ್ತಿಯಾಗುವುದು ವರುಣ ದೇವನ ಕೃಪೆ. ಕನ್ನಡಿಗರಿಗೆ ಉದ್ಯೋಗ ಕೊಡಿಸುವುದು ಸರ್ಕಾರದ ಜವಾಬ್ದಾರಿ. ಹಾಗೆಯೇ ಮಾತೃಭಾಷೆ ಕನ್ನಡವನ್ನು ಸದಾ ಜೀವಂತವಾಗಿಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಆದರೂ ಭಾಷೆಯ ವಿಷಯದಲ್ಲಿ ಒಂದಿಷ್ಟು ಆತಂಕ ಸಹಜವಾಗಿದೆ. ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾನ್ವೆಂಟ್‍ಗಳಲ್ಲಿ ಕನ್ನಡ ಮಾತನಾಡುವುದು ದಂಡಕ್ಕೆ ದಾರಿ ಮಾಡಿಕೊಡುತ್ತಿದೆ. ಮಾಲ್, ವಿಮಾನ ನಿಲ್ದಾಣ, ತಾರಾ ಹೋಟೆಲ್‍ಗಳಲ್ಲಿ ಕನ್ನಡ ಬಳಕೆ ಅವಮಾನ ಅನ್ನಿಸಿದೆ. ಇನ್ನು ಐಟಿ, ಬಿಟಿ ವಲಯದಲ್ಲಿ ಕನ್ನಡಿಗರು ಕನ್ನಡ ಮಾತನಾಡುವುದು ನಿಷೇಧವಾಗಿದೆಯೇ ಎಂಬ ಶಂಕೆ ಉಂಟಾಗುತ್ತಿದೆ.
ಮಾತೃಭಾಷೆ ಏಕೆ ಬೇಕು ಗೊತ್ತೇ?
ಕನ್ನಡ, ಕನ್ನಡಿಗರ ಸ್ವತ್ತಾಗಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಕನ್ನಡದ ಅಳಿವು ಉಳಿವು ಬೆಳವಣಿಗೆ ಎಲ್ಲವೂ ಸಾಹಿತಿ ಮತ್ತು ಹೋರಾಟಗಾರರ ಸ್ವತ್ತಾಗಿರುವುದೇ ಸಮಸ್ಯೆಯಾಗಿದೆ. ಕನ್ನಡ, ಕನ್ನಡಿಗರ ಭಾಷೆ, ಇಲ್ಲಿ ನೆಲೆಸಿರುವವರ ಆಸ್ತಿ ಎಂಬ ಭಾವನೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ. ತಮ್ಮ ಮಕ್ಕಳನ್ನು ಹೊರತುಪಡಿಸಿ ಇಂಗ್ಲೀಷ್ ಮಾಧ್ಯಮದಲ್ಲಿ ಬೇರೆಯವರ ಮಕ್ಕಳು ಓದುವುದೇ ಕನ್ನಡದ ಬೆಳವಣಿಗೆಗೆ ಅಡ್ಡಿ ಎಂಬಂತೆ ವ್ಯಂಗ್ಯವಾಡುತ್ತಿರುವುದೇ ಕನ್ನಡಿಗರಲ್ಲಿ ಮಾತೃಭಾಷೆ ಕುರಿತು ಅಸಡ್ಡೆ ಬೆಳೆಯಲು ಮೂಲ ಕಾರಣವಾಗಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ ಓದಿಯೂ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ, ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಓದಿಯೂ ಇತರೆ ಭಾಷೆಗಳನ್ನು ಕಲಿಯಲು ಸಾಧ್ಯ ಎನ್ನುವ ವೈಜ್ಞಾನಿಕ ಸತ್ಯವನ್ನು ತಿಳಿಸಿಕೊಡಲಾಗುತ್ತಿಲ್ಲ. ಮಾತೃಭಾಷೆಯ ಕಲಿಕೆ ಮತ್ತು ಸಂವಹನದಿಂದ ಅಸಂಖ್ಯಾತ ಪ್ರಯೋಜನಗಳಿವೆ. ಮಾತೃಭಾಷೆಯ ಬಳಕೆಯಿಂದ ಯಾವುದೇ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬ ಸತ್ಯವನ್ನು ತಿಳಿಸಿಕೊಡುವಲ್ಲಿ ಕನ್ನಡದ ಗುತ್ತಿಗೆದಾರರು ವಿಫಲರಾಗಿದ್ದಾರೆ. ಜೀವನೋಪಾಯಕ್ಕೆ ಇಂಗ್ಲೀಷ್ ಅನಿವಾರ್ಯ ಆಗಿರಬಹುದು. ಇದರ ಹೊರತಾಗಿಯೂ ಕನ್ನಡವೇ ಜೀವನ ಎನ್ನುವುದನ್ನು ನಾವು ಮರೆತಿದ್ದೇವೆ.
ಸಾಂಸ್ಕೃತಿಕ ಸಂಪರ್ಕ ಕೊಂಡಿ
ಸ್ಥಳೀಯ ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಯಾವುದೇ ಮಾತೃಭಾಷೆ ಪ್ರಧಾನ ಪಾತ್ರ ವಹಿಸುತ್ತದೆ. ನಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದಷ್ಟು ಸಲೀಸಾಗಿ ಪರಕೀಯ ಭಾಷೆಯಲ್ಲಿ ಅಸಾಧ್ಯ. ಅದು ಕೃತಕ ಮತ್ತು ನಕಲು ಆಗುತ್ತದೆಯೇ ಹೊರತು ಸಹಜವಾಗಿರುವುದಿಲ್ಲ. ಒಂದು ನೆಲದ ಸಸ್ಯ ಭೂಮಿಯೊಳಗಿನ ಬೇರುಗಳ ಜತೆ ಸಾಧಿಸಿದಷ್ಟು ಸಂಬಂಧವನ್ನು ಭೂಮಿಯ ಮೇಲಿನಿಂದ ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಭಾಷೆಯೂ ಕೂಡ! ಒಂದು ನೆಲದ ಹಬ್ಬ, ಹುಣ್ಣಿಮೆ, ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಕಲೆ, ಪೌರಾಣಿಕ, ಐತಿಹಾಸಿಕ ಮತ್ತು ಚಾರಿತ್ರಿಕ ಸಂಗತಿಗಳು ದಾಖಲಾಗುವುದು ಮತ್ತು ಈ ಮಾಹಿತಿಗಳು ಬಾಯಿಂದ ಬಾಯಿಗೆ ಹರಿದಾಡುವದೂ ಸಹ ಮಾತೃಭಾಷೆಯಲ್ಲಿ. ಉದಾಹರಣೆಗೆ ನಮ್ಮ ಜನಪದ ಇಂದಿಗೂ ಗಟ್ಟಿಯಾಗಿ ನೆಲೆಯೂರಿರುವುದಕ್ಕೆ ಮಾತೃಭಾಷೆಯೇ ಕಾರಣ.
ಸ್ಥಳಿಯ ವಿಜ್ಞಾನ, ನೈಸರ್ಗಿಕ ಚಿಕಿತ್ಸೆ ಔಷಧಿ ರಹಸ್ಯಗಳು, ಪರಿಸರ ಜ್ಞಾನ, ಪ್ರಾಣಿ ಸಂಕುಲ, ಹವಾಮಾನ ಮಾದರಿ ಇವುಗಳೆಲ್ಲವೂ ದಾಖಲಾಗಿರುವುದು ಮಾತೃಭಾಷೆಯಲ್ಲಿ. ಉದಾಹರಣೆಗೆ ಸ್ಥಳೀಯ ಆಯುರ್ವೇದದ ಮಾಹಿತಿಯೊಂದು ಸುಲಭವಾಗಿ ಸಿಗುವುದು ಸ್ಥಳಿಯ ಭಾಷೆಯಲ್ಲಿ ಮಾತ್ರ. ಅತಿ ಹೆಚ್ಚು ಹಿಂದಕ್ಕೆ ಹೋಗುವುದು ಬೇಡ, ಕಳೆದ ಐದಾರು ಶತಮಾನಗಳ ಹಿಂದಿನ ಸ್ಥಳೀಯ ಜ್ಞಾನ ಇಂದು ನಮಗೆ ಲಭ್ಯವಿಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಂದಿನ ವರ್ತಮಾನವನ್ನೂ ಭವಿಷ್ಯದ ಪೀಳಿಗೆಗಳು ಮರೆತು ಹೋಗುತ್ತವೆ. ಭಾಷೆ ಕಣ್ಮರೆಯಾದರೆ ನಮ್ಮ ಗುರುತೂ ಸಹ ಅಳಿಸಿಹೋಗುವ ಎಚ್ಚರ ಇರಬೇಕು.
ಮಾತೃಭಾಷೆಯ ಉಳಿವು ಹೇಗೆ?
ಮಾತೃಭಾಷೆಯಲ್ಲಿ ಹಿಡಿತ ಹೊಂದಿರುವವರು ಸುಲಭವಾಗಿ ಬೌದ್ಧಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಎನ್ನುವುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಿದ್ದರೆ ಯಾವುದೇ ಭಾಷೆಯನ್ನು ಕಲಿಯುವುದು ಸುಲಭ. ವ್ಯಕ್ತಿತ್ವ ವಿಕಸನದಲ್ಲಿ ಮಾತೃಭಾಷೆ ಪ್ರಧಾನ ಪಾತ್ರ ವಹಿಸುತ್ತದೆ. ಇಂಗ್ಲೀಷ್ ಮಾಧ್ಯಮದಿಂದ ಧನ ಸಂಪಾದನೆಯ ಮಾರ್ಗಕ್ಕೆ ದಾರಿಯಾದರೆ ಮಾತೃಭಾಷೆಯ ಕಲಿಕೆ ಜೀವನವನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಗ ಮಾತ್ರ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯ.
ಇಂದು ವಿಶ್ವದಲ್ಲಿ ಸುಮಾರು 6,000 ಭಾಷೆಗಳು ಬಳಕೆಯಲ್ಲಿವೆಯಾದರೂ ಜಗತ್ತಿನ ಅರ್ಧದಷ್ಟು ಜನರು ಚೀನೀ, ಇಂಗ್ಲೀಷ್, ಸ್ಪಾನಿಷ್, ಹಿಂದಿ, ಅರೇಬಿಕ್, ಮಲಯ್, ರಷ್ಯನ್, ಬೆಂಗಾಲಿ, ಪೋರ್ಚುಗೀಸ್, ಮತ್ತು ಫ್ರೆಂಚ್ ಭಾಷೆಗಳನ್ನು ಮಾತ್ರ ಮಾತನಾಡುತ್ತಾರೆ. ಈ ಶತಮಾನದ ಅಂಚಿಗೆ ಅರ್ಧದಷ್ಟು ಭಾಷೆಗಳು ಕಣ್ಮರೆಯಾಗುತ್ತವೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಅಂದಾಜು ಪ್ರತಿ ಎರಡು ವಾರಗಳಿಗೆ ಒಂದು ಭಾಷೆ ನಾಶವಾಗುತ್ತಿದೆ. ಭಾಷೆಗಳ ನಾಶದಿಂದ ಉಂಟಾಗುವ ನಷ್ಟವನ್ನು ಯಾವುದೇ ಮಾರ್ಗದಿಂದಲೂ ತುಂಬಿಕೊಳ್ಳುವುದು ಅಸಾಧ್ಯ ಎಂದು ಖ್ಯಾತ ಭಾಷಾ ತಜ್ಞೆ ಪರೋಮ ಬಸು ಎಚ್ಚರಿಕೆ ನೀಡುತ್ತಾರೆ. ಹಾಗೆಂದು ಭಾಷೆಗಳನ್ನು ಉಳಿಸಲು ಸಾಧ್ಯವೇ ಇಲ್ಲವೆಂದು ಅರ್ಥವಲ್ಲ. ಆಯಾ ಭಾಷೆಗಳನ್ನು ಮಾತನಾಡುವ ಜನರು ಮನಸ್ಸು ಮಾಡಿದರೆ ಇದು ಸಾಧ್ಯ.
ಕನ್ನಡ ಭಾಷೆಯ ಮಟ್ಟಿಗೆ ಹೇಳುವುದಾದರೆ ಇಂಗ್ಲೀಷ್ ಶಿಕ್ಷಣದ ಶಾಲೆಗಳಿಗೆ ಸರಿ ಸಮನಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಉನ್ನತೀಕರಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಲು ಖಾಸಗಿ ಸಂಸ್ಥೆಗಳಿಗೆ ಭೂಮಿ ಖರೀದಿ, ವಿದ್ಯುತ್ ಸೇರಿದಂತೆ ಹಲವು ರಿಯಾಯಿತಿಗಳನ್ನು ನೀಡಬೇಕು. ಬಜೆಟ್‍ನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಗರಿಷ್ಠ ಅನುದಾನವನ್ನು ಮೀಸಲಿಡಬೇಕು. ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಇಂಗ್ಲೀಷಿನಲ್ಲಿ ಮಾಹಿತಿ ಲಭ್ಯವಾಗುವಂತೆ ಕನ್ನಡ ಭಾಷೆಯಲ್ಲಿಯೂ ಎಲ್ಲ ಮಾಹಿತಿಗಳು ಲಭ್ಯವಾಗಬೇಕು. ಸರಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗಬೇಕು. ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಕನ್ನಡವನ್ನು ಬಳಸಬೇಕು. ಹೊರ ರಾಜ್ಯ ಅಥವಾ ಹೊರ ದೇಶಗಳಿಗೆ ಪ್ರವಾಸ ತೆರಳಿದಾಗ ಉಕ್ಕುವ ಮಾತೃಭಾಷೆ ಅಭಿಮಾನ ರಾಜ್ಯದಲ್ಲಿ ಇದ್ದಾಗಲೂ ಸದಾ ಜೀವಂತವಾಗಿರಬೇಕು. ಒಟ್ಟಾರೆ ವರ್ಷದ 365 ದಿನಗಳಲ್ಲೂ ಕನ್ನಡ ಬಳಕೆ ಅನಿವಾರ್ಯ ಆಗಬೇಕು. ತಡ ಏಕೆ? ಬನ್ನಿ ಕನ್ನಡದಲ್ಲಿ ಮಾತನಾಡೋಣ, ಕನ್ನಡದಲ್ಲಿ ವ್ಯವಹರಿಸೋಣ, ಕನ್ನಡದಲ್ಲಿ ಉಸಿರಾಡೋಣ, ಕನ್ನಡದಲ್ಲಿ ಜೀವಿಸೋಣ!
ಹೆಚ್.ಮಾರುತಿ
ಹಿರಿಯ ಪತ್ರಕರ್ತರು
ಇದನ್ನೂ ಓದಿ- http://“ದೂರದೂರಿನಲ್ಲಿ ಕನ್ನಡ ಕಾಯಕ” https://kannadaplanet.com/kannada-work-in-faraway-places/