ಬೆಂಗಳೂರು: ಒಳ ಮೀಸಲಾತಿ ಕುರಿತು ಏಕ ಸದಸ್ಯ ಆಯೋಗ ಮೂರು ತಿಂಗಳಲ್ಲಿ ವರದಿ ನೀಡಲಿದ್ದು ನಾಲ್ಕನೇ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೆ ಬರುತ್ತದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಜಾರಿಗೊಳಿಸಿದ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಉಪಚುನಾವಣೆಯ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವುದಾಗಿ ಹೇಳಿದರು.
ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಬರುವುದಿಲ್ಲ ಎಂದು ಅನೇಕ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಂದಷ್ಟು ಜನ ವಾಟ್ಸಪ್ ನಲ್ಲಿ ಸರ್ಕಾರದ ವಿರುದ್ಧ ನಿಂದನೆಯ ಮಾತನ್ನು ಆಡುತ್ತಿದ್ದಾರೆ. ಯಾವುದೇ ಆತಂಕ ಬೇಡ ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಬಂದೇ ಬರುತ್ತದೆ. 30 ವರ್ಷಗಳ ಕಾಲ ಕಾದಿರುವ ನಾವು ಇನ್ನು ಕೇವಲ ಮೂರು ತಿಂಗಳ ಕಾಲ ಕಾಯಬೇಕು. ತಾಳ್ಮೆ ವಹಿಸಿದರೆ ಸಿಹಿ ಖಂಡಿತ ಎಂದರು.
ಹಳೆ ಮೈಸೂರು ಭಾಗದಲ್ಲಿ ಒಂದೇ ಜಾತಿಯವರು ಎರಡು ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದಲ್ಲಿ ಆದಿ ಕರ್ನಾಟಕ ಎಂದು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೊಲೆಯರಲ್ಲಿ ಚಲವಾದಿ ಸಮುದಾಯದವರು ಸಹ ಆದಿ ಕರ್ನಾಟಕ ಎಂದು ಪ್ರಮಾಣ ಪತ್ರ ಬರೆಯುತ್ತಿದ್ದಾರೆ. ಇದರಲ್ಲಿ ಜನಸಂಖ್ಯೆಯನ್ನು ನಿಖರವಾಗಿ ಬೇರ್ಪಡಿಸಲು ಆಗಿಲ್ಲ. ಈ ಕಾರಣಕ್ಕಾಗಿ ದತ್ತಾಂಶ ವಿಂಗಡಣೆಗೆ, ಆಯೋಗವನ್ನು ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಾದಿಗ ಸಮುದಾಯಕ್ಕೆ ತನ್ನ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ. ಒಳ ಮೀಸಲಾತಿ ಸಿಗುತ್ತಿಲ್ಲ. ಮುಖ್ಯ ಮೀಸಲಾತಿ ಇದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಉನ್ನತ ಶಿಕ್ಷಣ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಿಯಾದ ಸ್ಥಾನ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕಳೆದ 30 ವರ್ಷಗಳಿಂದ ನಾನು ಸೇರಿದಂತೆ ಅನೇಕ ಮುಖಂಡರು ಹೋರಾಟ ಮಾಡುತ್ತಾ ಇದ್ದೇವೆ. ಎಸ್. ಎಂ ಕೃಷ್ಣ ಅವರು ಮಾದಿಗ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ನಮ್ಮ ಮನವಿಗೆ ಸ್ಪಂದಿಸಿ ಒಳ ಮೀಸಲಾತಿ ನೀಡಲು ಸದಾಶಿವ ಆಯೋಗ ರಚನೆ ಮಾಡಿದ್ದರು. ಈ ಆಯೋಗ ಕರ್ನಾಟಕದ ಮೂಲೆ, ಮೂಲೆ ತಿರುಗಿ ವರದಿ ಸಿದ್ದ ಮಾಡಿತ್ತು. ಇದನ್ನು ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಲಿಲ್ಲ ಎಂದರು.
ಒಳ ಮೀಸಲಾತಿ ಜಾರಿಗೆ ಆರ್ಟಿಕಲ್ 341 ಗೆ ತಿದ್ದುಪಡಿಯಾಗಬೇಕು. ಇದನ್ನು ಕೇಂದ್ರದಲ್ಲಿ ಯಾವ ಸರ್ಕಾರವೂ ಮಾಡಲಿಲ್ಲ. ಆದರೆ ಆಂಧ್ರದಲ್ಲಿ 2004 ರಲ್ಲಿ ಒಳ ಮಿಸಲಾತಿಯನ್ನು ಜಾರಿಗೆ ತರಲಾಯಿತು. ಆದರೆ ಚನ್ನಯ್ಯ ಎಂಬುವರು ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತಂದರು. ಸಂತೋಷ್ ಹೆಗಡೆ ಅವರ ಪಂಚ ಪೀಠ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿದೆ. ಈಗ ಇರುವ ಶೇ 15 ರಷ್ಟು ಮೀಸಲಾತಿಯನ್ನು ಹೆಚ್ಚು ಅಥವಾ ಕಡಿಮೆ ಮಾಡುವಂತಿಲ್ಲ. ಹೊಸದಾಗಿ ಯಾರನ್ನೂ ಸೇರಿಸುವಂತಿಲ್ಲ. ಯಾರಿಗೆ ಅನ್ಯಾಯವಾಗಿದೆ ಅದನ್ನು ರಾಜ್ಯ ಸರ್ಕಾರ ಪರಿಶೀಲಿಸಿ ನೀಡಬಹುದು ಎಂದು ಮತ್ತೊಂದು ಪೀಠ ನಮ್ಮ ಮೇಲ್ಮವಿಗೆ ಅಭಿಪ್ರಾಯ ವ್ಯಕ್ತಪಡಿಸಿತು ಎಂದರು.