ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಿಂದ 2 ಕಿ.ಮೀ, ವಿಮಾನ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿರುವ 13 ಎಕರೆ ರೈಲ್ವೇ ಕ್ವಾಟ್ರಸ್ ಅನ್ನು ಏಕಾಏಕಿ ನೆಲಸಮ ಮಾಡಿ ಅದನ್ನು ಇ-ಟೆಂಡರ್ ಮೂಲಕ 99 ವರ್ಷ ಲೀಸ್ ಕೊಡಲು ಅಂದರೆ ಪರೋಕ್ಷವಾಗಿ ಮಾರಾಟ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಯಮದ ಪ್ರಕಾರ ಸರ್ಕಾರದ ಆಸ್ತಿಗಳನ್ನು 30 ವರ್ಷಕ್ಕಿಂತ ಹೆಚ್ಚಿನ ಕಾಲಾವಧಿಗೆ ನೀಡುವಂತಿಲ್ಲ. ಮೊದಲ ಬಾರಿಗೆ ಲೀಸ್ ನೀಡುವಾಗ 30 ವರ್ಷಕ್ಕೆ ನೀಡಬೇಕು. ನಂತರ ಅದನ್ನು 15 ವರ್ಷಗಳಿಗೆ ವಿಸ್ತರಣೆ ಮಾಡಲು ಅವಕಾಶವಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕ್ಷೇತ್ರಕ್ಕೆ ಈ ಪ್ರದೇಶ ಸಂಬಂಧಿಸಿದ್ದಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈ ಜಮೀನಿಗೆ ಮಾರುಕಟ್ಟೆ ದರದ ಪ್ರಕಾರ ಒಂದು ಚದರ ಅಡಿಗೆ 25 ಸಾವಿರ ಇದೆ. ಎಸ್ ಆರ್ ಮೌಲ್ಯ ಒಂದು ಚದರ ಅಡಿಗೆ 12,500 ರೂ. ಇದೆ. ಎಸ್ ಆರ್ ಮೌಲ್ಯದ ಪ್ರಕಾರ ಪ್ರತಿ ಎಕರೆಗೆ 52.22 ಕೋಟಿ ಆಗಲಿದೆ. 13 ಎಕರೆಗೆ 679.53 ಕೋಟಿ ಆಗಲಿದೆ. 13 ಎಕರೆಗೆ ಮಾರುಕಟ್ಟೆ ಮೌಲ್ಯ ಪರಿಗಣಿಸಿದರೆ 1359 ಕೋಟಿ ಆಗಲಿದೆ.
ನಾ ಖಾವೂಂಗಾ ನಾ ಖಾನೇದೂಂಗ ಎನ್ನುವ ಸರ್ಕಾರದ ಪ್ರತಿನಿಧಿಗಳು ಇ-ಟೆಂಡರ್ ಮೂಲಕ ಕೇವಲ 83 ಕೋಟಿ ರೂಪಾಯಿಗೆ 99 ವರ್ಷಗಳ ಕಾಲ ಲೀಸ್ ಗೆ ನೀಡಲಾಗುತ್ತಿದೆ. ಇದರ ಪ್ರಕ್ರಿಯೆ ಆರಂಭವಾಗಿದೆ. 1359 ಕೋಟಿ ಮೊತ್ತದ ಆಸ್ತಿಯನ್ನು ಕೇವಲ 83 ಕೋಟಿಗೆ ಕೊಡಲು ಪ್ರಕ್ರಿಯೆ ನಡೆಯುತ್ತಿದ್ದರೆ ಆ ಕ್ಷೇತ್ರದ ಸಂಸದರು ಹಾಗೂ ಹಾಲಿ ಸಚಿವರು ಬಾಯಿ ಬಿಡುತ್ತಿಲ್ಲ. ಯಾಕೆ? ಮೌನಂ ಸರ್ವ ಸಮ್ಮತಂ ಎಂಬ ಅವರ ನಡೆ ನೋಡಿದರೆ ಇವರ ತಮ್ಮ ಬೋಪಾಲ್ ಜೋಷಿ ಅವರ ಕೈವಾಡ ವ್ಯಕ್ತವಾಗುತ್ತದೆ. ಇವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ಇವರ ವಿರುದ್ಧ ನೂರಾರು ಕೋಟಿ ಅವ್ಯವಹಾರದ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದಿದ್ದ ಬಗ್ಗೆ ನಾನು ಈ ಹಿಂದೆ ಮಾಧ್ಯಮಗೋಷ್ಠಿ ನಡೆಸಿದ್ದೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಆರು ತಿಂಗಳಲ್ಲಿ ಈ ಸಿಬಿಐ ಪ್ರಕರಣ ಮುಚ್ಚಿ ಹಾಕಿತ್ತು.
ಬೆಂಗಳೂರಿನ ಅಶೋಕ ಹೊಟೇಲ್ ಅನ್ನು ಕೇವಲ 33 ಕೋಟಿಗೆ ನೀಡಿದ್ದಾರೆ. ಇದು ಬಿಜೆಪಿಯ ಪ್ರವೃತ್ತಿ. ಈ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ ಮಾಡಿಕೊಡಲು ಇಂದು ಓಪನ್ ಮಾಡಬೇಕಿದ್ದ ಬಿಡ್ ಅನ್ನು ಈಗ ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿದ್ದಾರೆ. ನನ್ನ ಪ್ರಕಾರ ಇದರಲ್ಲಿ ಪ್ರಹ್ಲಾದ್ ಜೋಷಿ ಮತ್ತು ಅವರ ತಂಡದ ಕೈವಾಡವಿದೆ. ಮೂರನೇ ವ್ಯಕ್ತಿ ಮೂಲಕ ರೈಲ್ವೇ ಇಲಾಖೆ ಕಬಳಿಸುವ ಹುನ್ನಾರ ಮಾಡಲಾಗಿದೆ. ಇದರಲ್ಲಿ ಸಚಿವ ಪ್ರಹ್ಲಾದ್ ಜೋಷಿ ಅವರೂ ಫಲಾನುಭವಿಯಾಗಿರುವಂತೆ ಕಾಣುತ್ತಿದೆ.
ಮಿಸ್ಟರ್ ಮೋದಿ ಚೌಕಿದಾರ್ ಕೆಲಸ ಮಾಡುತ್ತಿದ್ದೀರಾ? ರೈಲ್ವೆ ಇಲಾಖೆ ಆಸ್ತಿಯನ್ನು ಕಬಳಿಸುವ ಪ್ರಕರಣದಲ್ಲಿ ನಿಮ್ಮ ಸಚಿವ ಸಂಪುಟದ ಸದಸ್ಯರ ಹಸ್ತಕ್ಷೇಪದ ಬಗ್ಗೆ ಆರೋಪವಿದೆ. ನಿಮಗೆ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಬದ್ಧತೆ ಇದ್ದರೆ ಈ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ. ಇದಕ್ಕೆ ಕುಮ್ಮಕ್ಕು ನೀಡಿರುವ ಪ್ರಹ್ಲಾದ್ ಜೋಷಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಈ ಪ್ರಕರಣದಲ್ಲಿ ಕೈವಾಡವಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ನಿಯಮ ಮೀರಿ 100 ವರ್ಷಗಳ ಲೀಸ್ ನೀಡಲು ಮುಂದಾಗಿದ್ದು ಯಾಕೆ ಎಂದು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.