Wednesday, October 16, 2024

ಹಸಿವಿನ ಸೂಚ್ಯಂಕವೂ, ಭಕ್ತಾಸುರನ ಸಮರ್ಥನೆಯೂ

Most read

ನಮ್ಮ ದೇಶದ ಜಿಡಿಪಿ ಅಂದರೆ ಆಂತರಿಕ ಉತ್ಪನ್ನ ನೋಡಿ ಹೇಗೆ ಹೆಚ್ಚಾಗಿದೆ. ಚಿನ್ನದ ಬೆಲೆ ಅತಿಯಾಗಿ ಏರಿದೆ ಆದರೂ ಖರೀದಿ ಕಡಿಮೆಯಾಗಿಲ್ಲ, ಯಾಕಂದ್ರೆ ಜನರಲ್ಲಿ ಖರೀದಿಸುವ ತಾಕತ್ತು ಹೆಚ್ಚಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ, ಆದರೂ ಯಾರೂ ಬಳಸೋದನ್ನ ನಿಲ್ಲಿಸಿಲ್ಲವಾದ್ದರಿಂದ ಜನರ ಸಂಪಾದನೆ ಹೆಚ್ಚಾಗಿದೆ. ಹೌದು ಎಲ್ಲದರ ಬೆಲೆ ಏರಿದ್ರೂ ಜನರೇನೂ ಕೇಳ್ತಿಲ್ಲವಲ್ಲಾ… ಮತ್ಯಾಕೆ ಈ ಸಮೀಕ್ಷೆ ಮಾಡೋರು ಹಸಿವು ಹಸಿವು ಅಂತಾ ಬಾಯಿಬಡ್ಕೋತಿದ್ದಾರೆ …. ಶಶಿಕಾಂತ ಯಡಹಳ್ಳಿಯವರ ವಿಡಂಬನೆ ಇಲ್ಲಿದೆ.

ಈ ವಿದೇಶಿಯರು ಭಾರತದ ವಿರುದ್ಧ, ವಿಶ್ವಗುರು ಮೋದಿ ಮಹಾರಾಜರ ವಿರುದ್ಧ ಸದಾ ಸಂಚು ರೂಪಿಸುತ್ತಲೇ ಇರುತ್ತಾರೆ ಎಂಬುದಕ್ಕೆ ಈ  ಜಾಗತಿಕ ಹಸಿವಿನ ಸೂಚ್ಯಂಕದ ವರದಿಯೇ ಸಾಕ್ಷಿ.

ಅಲ್ಲಾ, ನಮ್ಮ ದೇಶ ಎಷ್ಟೊಂದು ಅಭಿವೃದ್ಧಿಯಾಗಿದೆ. ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಸನಾತನಿಗಳ ಶ್ರೀರಕ್ಷೆಯಲ್ಲಿ ಸುಖವಾಗಿದೆ. ಆದರೂ ಹಸಿವಿನ ಸೂಚ್ಯಂಕದಲ್ಲಿ ಕೆಳಗಿದೆ ಎಂದು ಸಮೀಕ್ಷೆಯ ವರದಿ ಪ್ರಕಟಿಸಲಾಗಿದೆಯಲ್ಲಾ, ಇದು ಅಪಚಾರ. ಘನಘೋರ ಅಪಪ್ರಚಾರ.

ಕಳೆದ ವರ್ಷ 127 ದೇಶಗಳ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನದಲ್ಲಿತ್ತು. ಆದರೆ ವಿಶ್ವಗುರುಗಳ ಪರಿಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಈ ವರ್ಷ 105 ನೇ ಸ್ಥಾನಕ್ಕೆ ಇಳಿದಿದೆ. ಇದು ಸಾಧನೆ ಅಲ್ವಾ? ಇದರ ಬಗ್ಗೆ ಯಾಕೆ ಪ್ರಧಾನಿಗಳಿಗೆ ಯಾರೂ ಶಹಬ್ಬಾಸ್ ಹೇಳುತ್ತಿಲ್ಲ?. ಹಸಿವಿನ ಸಮಸ್ಯೆ ಗಂಭೀರವಾಗಿರುವ 42 ದೇಶಗಳಲ್ಲಿ ಭಾರತವೂ ಇದೆಯಂತೆ. ಇದ್ದರೇನಾಯ್ತು? ಇರಲಿ ಬಿಡಿ. ಇವರ ಕಣ್ಣಿಗೆ ಬರೀ ಇಂತಹುದೇ ಯಾಕೆ ಬೀಳುತ್ತವೆ?. ಮೋದಿ ಆಡಳಿತದಲ್ಲಿ ಶತಕೋಟಿ ಶ್ರೀಮಂತರ ಸಂಖ್ಯೆ ಹೆಚ್ಚುತ್ತಲೇ ಇದೆಯಲ್ವಾ? ಜಗತ್ತಿನಲ್ಲಿಯೇ ಟಾಪೆಸ್ಟ್ ಕುಬೇರರ ಪಟ್ಟಿಯಲ್ಲಿ ನಮ್ಮ ಅಂಬಾನಿ ಆದಾನಿಗಳೇ ವಿರಾಜಮಾನರಾಗಿದ್ದಾರಲ್ವಾ? ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಬದಲು ಹಸಿವಿನಿಂದ ಬಳಲುವ ಯಕಶ್ಚಿತ್ ವೇಸ್ಟ್ ಬಾಡಿ ಜನರ ಬಗ್ಗೆ ಹೀಗೆಲ್ಲಾ ಸಮೀಕ್ಷೆ ಮಾಡುವುದೇ ಮಹಾತಪ್ಪು. 

ಶೇಕಡಾ 18.7 ರಷ್ಟು ಮಕ್ಕಳು ಕೃಶಕಾಯರಾಗಿದ್ದಾರಂತೆ. ದೇಶದ ಜನಸಂಖ್ಯೆಯ ಶೇ. 13.7 ರಷ್ಟು ಜನತೆ ಪೌಷ್ಟಿಕಾಂಶದ ಕೊರತೆ ಹೊಂದಿದ್ದಾರಂತೆ. ಎಲ್ಲಾ ಅಂತೆ ಕಂತೆ. ಈ ಎಲ್ಲದರ ಹಿಂದೆಯೂ ಮೋದಿಯವರ ಲೆಕ್ಕಾಚಾರ ಇದ್ದೇ ಇರುತ್ತೆ ಅನ್ನೋದು ಈ ಹೊಟ್ಟೆಯುರಿ ಹೆಚ್ಚಾದವರಿಗೆ ಹೇಗೆ ಗೊತ್ತಾಗೋದು?

 ಅದೇನೆಂದರೆ ಜನಸಂಖ್ಯೆ ಸರ್ ಜನಸಂಖ್ಯೆ. ಈ ದೇಶದ ಜನಸಂಖ್ಯೆ ವಿಪರೀತ ಆಗಿದೆ. ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಅದರಲ್ಲೂ ಈ ಸಾಬರಿದ್ದಾರಲ್ಲಾ  ಭಯೋತ್ಪಾದಕ ದೇಶದ್ರೋಹಿಗಳು, ಅವರಂತೂ ಮಕ್ಕಳನ್ನು ಹುಟ್ಟಿಸೋ ಫ್ಯಾಕ್ಟರಿಗಳಾಗಿದ್ದಾರೆ. ಒಂದಿಷ್ಟಾದರೂ ಜನಸಂಖ್ಯೆ ಕಡಿಮೆ ಮಾಡದೇ ಹೋದರೆ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಬುಲೆಟ್ ಟ್ರೇನು, ಬೃಹತ್ ಟೋಲ್ ರಸ್ತೆಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ದೇಶಾದ್ಯಂತ ನಿರ್ಮಿಸಲು ಆಗೋದೇ ಇಲ್ಲ. ಅದಕ್ಕೇ ಜನಸಂಖ್ಯಾ ನಿರ್ಮೂಲನಾ ಯೋಜನೆಯ ಭಾಗವಾಗಿ ದೇಶದ ಜನಸಂಖ್ಯೆ ಕಡಿಮೆ ಮಾಡಲೇಬೇಕಿದೆ. ಎಲ್ಲರಿಗೂ ಪೊಗದಸ್ತಾದ ಆಹಾರ ಕೊಟ್ಟರೆ ಇನ್ನೂ ಮಕ್ಕಳೋತ್ಪಾದನೆ ಹೆಚ್ಚಾಗುತ್ತದೆ. ಅದಕ್ಕೆ ನಮ್ಮ ಪ್ರಧಾನಿಗಳು ಒಂದಿಷ್ಟು ಜನರು ಹಸಿವೆಯಿಂದ, ಅಪೌಷ್ಟಿಕತೆಯಿಂದ ಬಳಲಿ ನಶಿಸಲಿ ಎಂದೇ ಸುಮ್ಮನಿದ್ದಾರೆ. ಈ ಹಸಿದವರ ಬಗ್ಗೆ ಕಾಳಜಿ ಮಾಡ್ತಾ ಇದ್ರೆ ಈ ದೇಶವನ್ನು ಹಾಗೂ ದೇಶವಾಳುವವರನ್ನು ಸಾಕಿ ಸಲಹುತ್ತಿರುವ ಕಾರ್ಪೋರೇಟ್ ದಿಗ್ಗಜರ ಹಿತಾಸಕ್ತಿ ಕಾಪಾಡುವವರು ಯಾರು?

ನಮ್ಮ ದೇಶದ ಜಿಡಿಪಿ ಅಂದರೆ ಆಂತರಿಕ ಉತ್ಪನ್ನ ನೋಡಿ ಹೇಗೆ ಹೆಚ್ಚಾಗಿದೆ. ಚಿನ್ನದ ಬೆಲೆ ಅತಿಯಾಗಿ ಏರಿದೆ ಆದರೂ ಖರೀದಿ ಕಡಿಮೆಯಾಗಿಲ್ಲ, ಯಾಕಂದ್ರೆ ಜನರಲ್ಲಿ ಖರೀದಿಸುವ ತಾಕತ್ತು ಹೆಚ್ಚಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ, ಆದರೂ ಯಾರೂ ಬಳಸೋದನ್ನ ನಿಲ್ಲಿಸಿಲ್ಲವಾದ್ದರಿಂದ ಜನರ ಸಂಪಾದನೆ ಹೆಚ್ಚಾಗಿದೆ. ಹೌದು ಎಲ್ಲದರ ಬೆಲೆ ಏರಿದ್ರೂ ಜನರೇನೂ ಕೇಳ್ತಿಲ್ಲವಲ್ಲಾ. ಮತ್ಯಾಕೆ ಈ ಸಮೀಕ್ಷೆ ಮಾಡೋರು ಹಸಿವು ಹಸಿವು ಅಂತಾ ಬಾಯಿಬಡ್ಕೋತಿದ್ದಾರೆ. ಇದೆಲ್ಲಾ ವಿದೇಶಿಗರ ಶಡ್ಯಂತ್ರ. ಕಾಂಗ್ರೆಸ್ಸಿಗರ ಕುತಂತ್ರ. ಕಮ್ಯುನಿಸ್ಟರ ಒಳಸಂಚು. ಸಾಬರ ಮಹಾಸಂಚು.

ಹಸಿವು ಮುಖ್ಯವಲ್ಲಾ ವಿಶ್ವಗುರು ಎನ್ನುವ ಹೆಸರು ಮುಖ್ಯ. ಬಡತನ ಇಂಪಾರ್ಟೆಂಟ್ ಅಲ್ಲವೇ ಅಲ್ಲಾ, ರಾಮಮಂದಿರ ಕಟ್ಟೋದು ಇಂಪಾರ್ಟೆಂಟ್. ಶಾಲೆ ಆಸ್ಪತ್ರೆಗಳಿಗಿಂತಲೂ ಹೈವೇ, ಏರ್ಪೋರ್ಟ್, ಐಶಾರಾಮಿ ರೈಲುಗಳೇ ಈ ದೇಶದ ಹೆಮ್ಮೆ. ಹಸಿವು ಇರಲಿ, ಅಪೌಷ್ಟಿಕತೆ ಬರಲಿ, ಬಡತನ ನಿವಾರಣೆ ಅಸಾಧ್ಯವಾದ್ದರಿಂದ ಬಡವರ ನಿವಾರಣೆ ದೇಶವಾಳುವವರ ಧ್ಯೇಯವಾಗಲಿ. ಆಗ ಮಾತ್ರ ಈ ದೇಶ ಬ್ರಹ್ಮಾಂಡಕ್ಕೆ ಗುರುವಾಗಬಲ್ಲುದು. ಪ್ರಪಂಚಕ್ಕೆ ಮೋದಿಯೊಬ್ಬರೇ ವಿಶ್ವಗುರು ಆಗಬಲ್ಲರು. 

ಜೈ ಮೋದೀಜಿ.. ಜೈ ವಿಶ್ವಗುರುಜಿ

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಕನ್ನಡ ಉಳಿಸಿ ಬೆಳೆಸುವ ಪ್ರಯತ್ನ ಮತ್ತು ಪ್ರಯೋಗ

More articles

Latest article