ಹರಿಯಾಣ ವಿಧಾನಸಭಾ ಚುನಾವಣೆ; ಶೇ.ವಾರು ಮತ ಹೆಚ್ಚಿಸಿಕೊಂಡ ಕಾಂಗ್ರೆಸ್ ಸೀಟು ಗಳಿಕೆಯಲ್ಲಿ ಮುಗ್ಗರಿಸಿದ್ದು ಏಕೆ?

Most read

ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದು, ಮತದಾರರ ನಾಡಿ ಮಿಡಿತ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದರೆ ಬಿಜೆಪಿ ಯಶಸ್ವಿಯಾಗಿದೆ. 90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 48 ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕೆಲವೇ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 10 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಈ ಗೆಲುವನ್ನು ಮುಂದುವರೆಸುವ ಅವಕಾಶಗಳಿದ್ದರೂ ಮುಗ್ಗರಿಸಿದೆ.


ಎಂತಹುದೇ ಆಡಳಿತ ನೀಡಿದರೂ ಮೂರನೇ ಬಾರಿಗೆ ಅಧಿಕಾರ ಹಿಡಿಯುವುದು ಅಷ್ಟೊಂದು ಸುಲಭವಲ್ಲ. ದೇಶದ ಬಹುತೇಕ ರಾಜಕೀಯ ಪಕ್ಷಗಳು ಸ್ವಚ್ಛ ಆಡಳಿತ ನೀಡಿಯೂ ವಿರೋಧಿ ಅಲೆಯನ್ನು ಅನುಭವಿಸಿವೆ. ಆದರೆ ಬಿಜೆಪಿ ಅಪವಾದ ಎಂದು ಹೇಳಲೇಬೇಕಾಗುತ್ತದೆ. ಲೋಕಸಭಾ ಚುನಾವಣೆಯಲ್ಲೂ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ. ಆದರೆ ತನ್ನ ಪ್ರಾಮಾಣಿಕ ಆಡಳಿತ ಅಥವಾ ಶ್ರೀ ಸಾಮಾನ್ಯನನ್ನು ಮೇಲೆತ್ತಿದ ಕಾರಣಕ್ಕಾಗಿ ಅಲ್ಲ. ವಿಪಕ್ಷಗಳ ವೈಫಲ್ಯ ಮತ್ತು ಧರ್ಮ ಜಾತಿಗಳ ಕ್ರೋಢೀಕರಣ, ಒಗ್ಗಟ್ಟು ಪ್ರದರ್ಶನ ದಂತಹ ಕಾರಣಗಳಿಗಾಗಿ ಗೆಲುವು ದಾಖಲಿಸಿದೆ.


ಹರಿಯಾಣದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲಿ ಎರಡು ವರ್ಷಗಳಿಂದಲೇ ಬಿಜೆಪಿ ಚುನಾವಣೆಗೆ ತಯಾರಿ ನಡೆಸಿತ್ತು. ಸೋಲು ಖಚಿತ ಎಂದು ಭಾವಿಸುತ್ತಿದ್ದಂತೆ ಮುಖ್ಯಮಂತ್ರಿಯನ್ನೇ ಬದಲಾಯಿಸಿತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಯುದ್ದೋಪಾದಿಯಲ್ಲಿ ಕೆಲಸ ಮಾಡಿತು. ಇಂತಹ ಹುರುಪು ಹುಮ್ಮಸ್ಸು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಕಂಡು ಬರಲೇ ಇಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಮತಗಳಿಕೆಯಲ್ಲಿ ಮುನ್ನೆಡೆ ಸಾಧಿಸಿವೆ. ಆದರೆ ಸೀಟು ಗಳಿಕೆಯಲ್ಲಿ ಕಾಂಗ್ರೆಸ್ ಗೆ ಹಿಂದೆ ಬಿದ್ದಿದೆ. 2019ರಲ್ಲಿ ಬಿಜೆಪಿ ಶೇ.36.5 ರಷ್ಟು ಮತ ಗಳಿಸಿದ್ದರೆ ಕಾಂಗ್ರೆಸ್ ಶೇ.28ರಿಂದ ಶೇ.39 ಕ್ಕೆ ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರಗಳಲ್ಲಿ ಕೆಲವು ಸೀಟುಗಳಿಗೆ ಕೈ ಹಾಕಿದ್ದರೆ ಗೆಲುವು ಸಾದ್ಯವಿತ್ತು.


ಜಾಟ್ ಯೇತರ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಬಿಜೆಪಿ ಯಶಸ್ಸು ಸಾದಿಸಿದ್ದು ಗೋಚರಿಸುತ್ತಿದೆ. ಪಂಜಾಬಿ, ಓಬಿಸಿ, ಬ್ರಾಹ್ಮಣ, ರಜಪೂತ ಮೊದಲಾದ ಸಮುದಾಯಗಳನ್ನು ಕ್ರೋಡೀಕರಿಸುವಲ್ಲಿ ಬಿಜೆಪಿ ನಾಯಕರು ಗೆಲುವು ಸಾದಿಸಿದ್ದರು. 2014ರಲ್ಲಿ ಬಿಜೆಪಿ ಪಂಜಾಬಿ ಖತ್ರಿ ಸಮುದಾಯದ ಮನೋಹರ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿತ್ತು. ಇವರ ನಾಯಕತ್ವದಲ್ಲಿ ಮುಂದುವರೆದರೆ ಗೆಲುವು ಕಷ್ಟ ಎನ್ನುವುದನ್ನು ಊಹಿಸಿದ ಬಿಜೆಪಿ ಮುಖಂಡರು ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು. ಇದೂ ಫಲ ನೀಡಿದೆ. ರಾಜ್ಯದಲ್ಲಿ ಶೇ.40ರಷ್ಟಿರುವ 78 ಜಾತಿಗಳ ಒಬಿಸಿ ಮತಗಳ ಕ್ರೋಢೀಕರಣಕ್ಕೆ ಇವರ ಆಯ್ಕೆ ಸಹಾಯವಾಗಿದೆ. ರಾಜ್ಯದಲ್ಲಿ ಶೇ.25ರಷ್ಟಿರುವ ಜಾಟ್ ಸಮುದಾಯದ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಅವಲಂಬಿಸಿ ಓಬಿಸಿ ಸಮುದಾಯಗಳ ನಾಯಕರನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ. ಮತ್ತೊಂದು ಕಡೆ ಶೇ.70ರಷ್ಟಿರುವ ಒಬಿಸಿ ಸಮುದಾಯಗಳನ್ನು ಬಿಜೆಪಿ ಓಲೈಸಿ ಗೆಲುವು ಸಾಧಿಸಿದೆ.


ಲೋಕಸಭಾ ಚುನಾವಣೆಯ ಗೆಲುವಿನ ಗುಂಗಿನಿಂದ ಕಾಂಗ್ರೆಸ್ ನಾಯಕರು ಹೊರಬರಲೇ ಇಲ್ಲ. ಅತಿಯಾದ ಆತ್ಮವಿಶ್ವಾಸ ಮತ್ತು ಆಡಳಿತ ವಿರೋಧಿ ಅಲೆ ದಡ ಸೇರಿಸುತ್ತದೆ ಎಂಬ ನಂಬಿಕೆ ಸೋಲಿಗೆ ಪ್ರಮುಖ ಕೊಡುಗೆ ನೀಡಿದೆ. ಟಿಕೆಟ್ ಹಂಚಿಕೆಯಲ್ಲೂ ಕಾಂಗ್ರೆಸ್ ಮುಗ್ಗರಿಸಿದೆ. ಇದರಿಂದ ಭಿನ್ನಮತೀಯರ ಸಂಖ್ಯೆ ಹೆಚ್ಚಿತು. ಆದರೆ ಶಮನಕ್ಕೆ ಪ್ರಯತ್ನಪಡಲೇ ಇಲ್ಲ. ಆಂತರಿಕ ಭಿನ್ನಮತ ಹೊಗೆಯಾಡುತ್ತಲೇ ಇತ್ತು. ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಶೆಲ್ಜಾ ಅವರ ನಡುವೆ ಹೊಂದಾಣಿಕೆ ಸಾಧ್ಯವಾಗಲೇ ಇಲ್ಲ. ಶೆಲ್ಜಾ ಅವರು ಪ್ರಚಾರದಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೋಡೆತ್ತುಗಳಂತೆ ದುಡಿದರು. ಇದೇ ಮಾದರಿಯನ್ನು ಅನುಸರಿಸಿದ್ದರೂ ಅಧಿಕಾರ ಹಿಡಿಯಬಹುದಾಗಿತ್ತು. ದಲಿತ ನಾಯಕಿಯಾದ ಶೆಲ್ಜಾ ಅವರನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಬೆಲೆ ತೆತ್ತಿದೆ.


ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳನ್ನು ಅವಲೋಕಿಸುವುದಾದರೆ ಪ್ರಾದೇಶಿಕ ಪಕ್ಷಗಳ ಮತ ಬ್ಯಾಂಕ್ ಅನ್ನು ಛಿದ್ರಗೊಳಿಸಿತು. ಇದರ ಲಾಭ ಕಾಂಗ್ರೆಸ್ ಗೆ ಆಗಿದೆಯಾದರೂ ಬಿಜೆಪಿಯೂ ತನ್ನ ಪಾಲನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವುದರ ಜೊತೆಗೆ ತನ್ನ ಮೂಲ ಮತ ಬ್ಯಾಂಕನ್ನು ಕಾಪಾಡಿಕೊಂಡಿದ್ದು ಪ್ರಮುಖ ಕಾರಣವಾಗಿದೆ. ನಗರ ಪ್ರದೇಶಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದ್ದೂ ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣವಾಗಿದೆ. ಇಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಜಾಟರನ್ನು ಅವಲಂಬಿಸಿ ಇತರ ಸಮುದಾಯಗಳನ್ನು ಉದಾಸೀನ ಮಾಡಿದ್ದೂ ಬಿಜೆಪಿಗೆ ಸಹಕಾರಿಯಾಗಿದೆ.


ಶೇಕಡವಾರು ಮತ ಗಳಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ. ಬಹುತೇಕ ಸಮೀಪದಲ್ಲಿವೆ. ಕೆಲವೇ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಲಿದೆ. ಕಾಂಗ್ರೆಸ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಈಗಿನಿಂದಲೇ ತಯಾರಿ ನಡೆಸಿದರೆ ಗೆಲುವು ಮರೀಚಿಕೆಯೇನಲ್ಲ. ಆದರೆ ಅಂತಹ ಶ್ರಮವನ್ನು ಕಾಂಗ್ರೆಸ್ ಮುಖಂಡರು ಹಾಕಲಿದ್ದಾರೆಯೇ ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ.

More articles

Latest article