ಗಾಝಾ ನರಮೇಧ – ಮಾನವ ಕುಲದ ಕ್ರೌರ್ಯಕ್ಕೆ ಹಿಡಿದ ಕನ್ನಡಿ

Most read

ಗಾಜಾ ನರಮೇಧ ಕಾರ್ಯಾಚರಣೆ ಆರಂಭವಾಗಿ ಇಂದಿಗೆ (ಅಕ್ಟೋಬರ್‌ 8, 2024) ಒಂದು ವರ್ಷ. ಮಾನವನಲ್ಲಿ ಇಷ್ಟೊಂದು ಕ್ರೌರ್ಯ ಎಲ್ಲಿಂದ ಬಂತು? ಶಿಕ್ಷಣ,  ನಾಗರಿಕತೆ ನಮ್ಮಲ್ಲಿ ಏನು ಬದಲಾವಣೆ ತಂದಿದೆ? ೧೯೩೦ರ ಹಿಟ್ಲರ್‌ ನಡೆಸಿದ ಕ್ರೌರ್ಯಕ್ಕೂ ೨೦೨೪ ರ ನೆತನ್ಯಾಹು ನಡೆಸುತ್ತಿರುವ ಕ್ರೌರ್ಯಕ್ಕೂ ಏನು ವ್ಯತ್ಯಾಸ? ಯಾಕೆ ಇಂತಹ ಒಂದು ನರಮೇಧವನ್ನು ಕಂಡೂ ಜಗತ್ತಿನ ಬಲಿಷ್ಠ ದೇಶಗಳಿಗೆ ಇದನ್ನು ನಿಲ್ಲಿಸಬೇಕು ಅನಿಸುತ್ತಿಲ್ಲ? _ ಶ್ರೀನಿವಾಸ ಕಾರ್ಕಳ

ಅದು ಅಕ್ಟೋಬರ್‌ 8,2023. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸುದ್ದಿಗಾಗಿ ಬಿಬಿಸಿ ಮತ್ತು ಅಲ್‌ ಜಜೀರಾ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ನನಗೆ ಆದಿನ ಇಸ್ರೇಲ್‌ ಮೇಲೆ ಹಮಾಸ್‌ ಹೋರಾಟಗಾರರು ನಡೆಸಿದ ಧಾಳಿಯ ಮಾಹಿತಿ ಸಿಕ್ಕಿತು. ಸಾವಿರಕ್ಕೂ ಅಧಿಕ ಮಂದಿಯ ಹತ್ಯೆಯಾಗಿತ್ತು ಮತ್ತು ನೂರಾರು ಮಂದಿಯನ್ನು ಒತ್ತೆಯಾಳಾಗಿ ಹಿಡಿದುಕೊಂಡು ಹೋಗಲಾಗಿತ್ತು.

ನಿರೀಕ್ಷೆಯಂತೆಯೇ ಈ ಘಟನೆಯನ್ನು ಇಸ್ರೇಲ್‌ ತನ್ನ ಪರವಾಗಿ ಬಳಸಿಕೊಂಡಿತು. ಜಗತ್ತಿನ ಅನೇಕ ದೇಶಗಳು ಘಟನೆಯನ್ನು ಖಂಡಿಸಿದವು (ಈ ನಡುವೆ ಏಕಾಏಕಿ ಹಮಾಸ್‌ ಇಂತಹ ಕೃತ್ಯ ನಡೆಸಿದ್ದರೆ ಅದಕ್ಕೆ ಇದ್ದ ಐತಿಹಾಸಿಕ ಹಿನ್ನೆಲೆಯನ್ನು ಯೋಚಿಸುವ ವ್ಯವಧಾನ ಯಾರಿಗೂ ಇರಲಿಲ್ಲ). ಪಶ್ಚಿಮದ ಮಾಧ್ಯಮಗಳು ತಮ್ಮ ಮುಖವಾಡ ಕಳಚಿಕೊಂಡು ಒಂದು ಮಗ್ಗುಲಿನ ಕತೆಯನ್ನು ಮಾತ್ರ ಹೇಳತೊಡಗಿದವು. ಅತ್ಯಂತ ನಿಷ್ಪಕ್ಷಪಾತ ಮತ್ತು ದಿಟ್ಟ ವರದಿಗಾರಿಕೆಗೆ ಹೆಸರಾಗಿದ್ದ ಬಿಬಿಸಿಯೂ ಇದಕ್ಕೆ ಹೊರತಾಗಿರಲಿಲ್ಲ. ಮುಂದೆ ಅದರ ಮುಖವಾಡ ಇನ್ನಷ್ಟು ಕಳಚಿಬೀಳುತ್ತ ಹೋದಂತೆ ನಾನು ಬಿಬಿಸಿ ನೋಡುವುದನ್ನೇ ನಿಲ್ಲಿಸಿದೆ.

ದಿಟ್ಟ ವರದಿಗಾರಿಕೆ ಮಾಡಿದ ಅಲ್‌ ಜಜೀರಾ

ಇಡೀ ಜಗತ್ತು ಇಸ್ರೇಲ್‌ ನ ಕತೆ ಹೇಳತೊಡಗಿದಾಗ ಪ್ಯಾಲೆಸ್ಟೈನ್‌ ನ ಕತೆ ಹೇಳತೊಡಗಿದ್ದು ಅಲ್‌ ಜಜೀರಾ ಮಾತ್ರ. ಭಾರತದ ಅನೇಕ ಪತ್ರಕರ್ತರು ಇಸ್ರೇಲ್‌ ನ ಆತಿಥ್ಯ ಸ್ವೀಕರಿಸಿ ಅಲ್ಲಿಗೆ ಓಡಿದರು. ಇಸ್ರೇಲ್‌ ಇಲ್ಲಿನ ಬಲಿಪಶು ಎಂದು ಬಿಂಬಿಸಿದರು. ಮಕ್ಕಳ ರುಂಡ ಕತ್ತರಿಸಿದ ಸುಳ್ಳು ಸುದ್ದಿಯನ್ನು ಅವರೂ ನಂಬಿದರು; ಇತರರನ್ನೂ ನಂಬಿಸಲು ಯತ್ನಿಸಿದರು. ಇಡೀ ಜಗತ್ತು ತನ್ನ ಪರ ಇದೆ ಎಂಬುದು ತಿಳಿಯುತ್ತಲೇ ಇಸ್ರೇಲ್ ‍ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಗಾಜಾವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ತನ್ನ ಹಳೆಯ ಅಜೆಂಡಾ ಹಿಡಿದು ಕ್ರಿಯಾಶೀಲರಾದರು. ಗಾಜಾದ 15 ಲಕ್ಷ ಮಂದಿಯ ಮೇಲೆ ಪ್ರತೀಕಾರ ತೀರಿಸುವ ಕಾರ್ಯಸೂಚಿ ಬಹಿರಂಗ ಪಡಿಸಿದರು. ನಿಮಗೆ ನೀರು, ವಿದ್ಯುತ್‌ ಯಾವುದೂ ಇಲ್ಲದಂತೆ ಮಾಡುತ್ತೇನೆ ಎಂದು ಇಸ್ರೇಲ್‌ ಅಧಿಕಾರಿಗಳು ಬಹಿರಂಗವಾಗಿಯೇ ಹೇಳಿದರು.

ಸಂಪೂರ್ಣವಾಗಿ ಇಸ್ರೇಲ್‌ ನಿಂದ ಆವರಿಸಿಕೊಂಡಿರುವ, ಮತ್ತು ʼಜಗತ್ತಿನ ಅತಿದೊಡ್ಡ ಬಯಲು ಬಂಧೀಖಾನೆʼ ಎಂದು ಹೆಸರಾದ ಗಾಜಾದಲ್ಲಿ ನರಕವನ್ನೇ ಸೃಷ್ಟಿಸಿದರು. ನೀರು, ವಿದ್ಯುತ್‌, ಆಹಾರ ಯಾವುದೂ ಇಲ್ಲದಂತೆ ಮಾಡಿದರು. ಉತ್ತರ ಗಾಜಾದ ಜನರನ್ನು ದಕ್ಷಿಣಕ್ಕೆ ಹೋಗುವಂತೆ ಆದೇಶ ಹೊರಡಿಸಿದರು. ಉತ್ತರ ಗಾಜಾದ ಮೇಲೆ ಬಾಂಬ್‌ ನ ಮಳೆ ಸುರಿಸಲಾರಂಭಿಸಿತು ಇಸ್ರೇಲ್‌ ಪಡೆ. ಜನರು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸುವಾಗ ಅವರ ಮೇಲೇ ಬಾಂಬ್‌ ಹಾಕಲಾಯಿತು. ಅನ್ನಕ್ಕಾಗಿ ಬಟ್ಟಲು ಹಿಡಿದು ನಿಂತವರನ್ನೂ ಕೊಲ್ಲಲಾಯಿತು. ಉತ್ತರದ ಕಾರ್ಯಾಚರಣೆ ಮುಗಿಯುತ್ತಿದ್ದಂತೆ ದಕ್ಷಿಣದಲ್ಲಿ ಕಾರ್ಯಾಚರಣೆ ಆರಂಭವಾಯಿತು. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಲಕ್ಷ ಲಕ್ಷ ಜನ ಮತ್ತೆ ಮತ್ತೆ ಪಲಾಯನ ಮಾಡುವಂತೆ ಮಾಡಲಾಯಿತು.

ಹತ್ಯೆಗಳು ನೂರು, ಸಾವಿರ, ಎರಡು ಸಾವಿರ, ಐದು ಸಾವಿರ ಹೀಗೆ ಏರುತ್ತಲೇ ಹೋಯಿತು. ವೈದ್ಯಕೀಯ ಸಿಬ್ಬಂದಿ, ಪತ್ರಕರ್ತರು, ವಿಶ್ವಸಂಸ್ಥೆಯ ಕಾರ್ಯಕರ್ತರು, ಯಾರಿಗೂ ರಿಯಾಯಿತಿ ಇರಲಿಲ್ಲ. ಆಸ್ಪತ್ರೆಗಳು, ಶಾಲೆಗಳು, ವಿಶ್ವಸಂಸ್ಥೆಯ ಅಧೀನದ ನಿರಾಶ್ರಿತ ಶಿಬಿರಗಳು ಎಲ್ಲದರ ಮೇಲೂ ಬಾಂಬು.

ಭೀಭತ್ಸ ದೃಶ್ಯ!

ಬಾಂಬುಗಳಿಗೆ ಬೆಂದು ಹೋದ ದೇಹಗಳು, ಉರುಳಿದ ಕಟ್ಟಡಗಳ ಅಡಿಯಲ್ಲಿ ನರಳುವ ಜೀವಗಳು, ಕೈಕಾಲು ಛಿದ್ರಗೊಂಡ ಹಸುಳೆಗಳು, ಮಕ್ಕಳು, ಭಯಭೀತಗೊಂಡು ನಡುಗುವ ಎಳೆಯ ಜೀವಗಳು. ಕೈಕಾಲು ಇಲ್ಲವಾದ ಮಕ್ಕಳು, ಕೆಲವೊಮ್ಮೆ ಬಾಂಬ್‌ ದಾಳಿಗೆ ಇಡೀ ಕುಟುಂಬ ನಾಶ. ನೂರಾರು ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ. ನರಮೇಧ ನಿಲ್ಲಿಸಿ ಎಂಬ ವಿಶ್ವಸಂಸ್ಥೆಯ ಕೂಗು ಇಸ್ರೇಲ್‌ ಗೆ ಕೇಳಿಸಲೇ ಇಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶಕ್ಕೆ ಇಸ್ರೇಲ್‌ ಸೊಪ್ಪು ಹಾಕಲಿಲ್ಲ. ಯಾಕೆಂದರೆ ಅದಕ್ಕೆ ಅಮೆರಿಕದ ಬೆಂಬಲವಿತ್ತು. ಬರೇ ವಿಶ್ವಸಂಸ್ಥೆಯಲ್ಲಿ ಬೆಂಬಲವಲ್ಲ. ಬಾಂಬು, ಕ್ಷಿಪಣಿಗಳ ಬೆಂಬಲವೂ ಇತ್ತು. ಈ ಧೈರ್ಯದಲ್ಲಿಯೇ ಇಸ್ರೇಲ್‌ ಎಲ್ಲ ಯುದ್ಧಾಪರಾಧಗಳನ್ನೂ ನಡೆಸಲಾರಂಭಿಸಿತು. ಎರಡನೆ ಮಹಾಯುದ್ಧ ಕಾಲದ ಅನ್ಯಾಯಗಳ ಬಗ್ಗೆ ಕೇಳಿದ್ದೆವು. ಆದರೆ ಅದರ ಸಾವಿರ ಪಟ್ಟು ಕ್ರೌರ್ಯವನ್ನು ಜಗತ್ತು ಗಾಜಾದಲ್ಲಿ ನೋಡಿತು. ಗಾಜಾದಲ್ಲಿ ಮಾತ್ರವಲ್ಲ, ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಅದು ಮಾರಣ ಹೋಮ ನಡೆಸಲಾರಂಭಿಸಿತು.

ಇಸ್ರೇಲ್‌ ನಲ್ಲಿ ಅಲ್‌ ಜಜೀರಾ ದ ಮೇಲೆ ನಿಷೇಧ ಹೇರಿದ ಮೇಲೆ ಅಲ್ಲಿನ ಸ್ಪಷ್ಟ ಸುದ್ದಿಗಳು ದೊರೆಯದಾದವು. ಆದರೆ ನೂರಾರು ಪತ್ರಕರ್ತರನ್ನು ಇಸ್ರೇಲ್‌ ಕೊಂದರೂ, ಕಚೇರಿಯ ಮೇಲೆ ದಾಳಿ ನಡೆಸಿದರೂ ಗಾಜಾದ ಘಟನೆಗಳನ್ನು ವರದಿ ಮಾಡುವುದನ್ನು ಅಲ್‌ ಜಜೀರಾ ನಿಲ್ಲಿಸಲೇ ಇಲ್ಲ.

ನಾನು ನಿತ್ಯವೂ ಗಾಜಾ ದೃಶ್ಯಗಳನ್ನು ನೋಡುತ್ತಿದ್ದೆ. ಸಾವಿರ, ಹತ್ತು ಸಾವಿರ, ಇಪ್ಪತ್ತು ಸಾವಿರ ಹೀಗೆ ಸಾವಿನ ಸಂಖ್ಯೆ ಏರುತ್ತ ಹೋದಂತೆ, ಮತ್ತು ಇಸ್ರೇಲ್‌ ಭೂ ಕಾರ್ಯಾಚರಣೆ ಆರಂಭಿಸಿದ ಬಳಿಕ ದೃಶ್ಯ ಇನ್ನಷ್ಟು ಭೀಕರವಾಗುತ್ತ ಹೋಯಿತು. ಹಾಗಾಗಿ ಅನೇಕ ದಿನ ಟಿವಿ ನೋಡುವುದನ್ನೇ ಬಿಟ್ಟುಬಿಟ್ಟೆ. ಒಮ್ಮೊಮ್ಮೆ ಅನಿಸುತ್ತಿತ್ತು, ಮಾನವನಲ್ಲಿ ಇಷ್ಟೊಂದು ಕ್ರೌರ್ಯ ಎಲ್ಲಿಂದ ಬಂತು? ಶಿಕ್ಷಣ,  ನಾಗರಿಕತೆ ನಮ್ಮಲ್ಲಿ ಏನು ಬದಲಾವಣೆ ತಂದಿದೆ?1930 ರ ಹಿಟ್ಲರ್‌ ನಡೆಸಿದ ಕ್ರೌರ್ಯಕ್ಕೂ2024 ರ ನೆತನ್ಯಾಹು ನಡೆಸುತ್ತಿರುವ ಕ್ರೌರ್ಯಕ್ಕೂ ಏನು ವ್ಯತ್ಯಾಸ? ಇವರಲ್ಲಿ ಇಷ್ಟೊಂದು ಬಾಂಬು ಎಲ್ಲಿಂದ ಬಂತು? ಯಾಕೆ ಇಂತಹ ಒಂದು ನರಮೇಧವನ್ನು ಕಂಡೂ ಜಗತ್ತಿನ ಬಲಿಷ್ಠ ದೇಶಗಳಿಗೆ ಇದನ್ನು ನಿಲ್ಲಿಸಬೇಕು ಅನಿಸುತ್ತಿಲ್ಲ? ಈ ಹಿಂಸಾಕಾಂಡವನ್ನು ನಿಲ್ಲಿಸುವುದು ಅಮೆರಿಕಾಗೆ ನಿಮಿಷಗಳ ಕೆಲಸ. ಆದರೆ ಅತ್ಯಂತ ಶಿಕ್ಷಿತರ ಅಮೆರಿಕಾ ಯಾಕೆ ಅದನ್ನು ಮಾಡುತ್ತಿಲ್ಲ?

ಗಾಜಾ ನರಮೇಧ ಕಾರ್ಯಾಚರಣೆ ಆರಂಭವಾಗಿ ಇಂದಿಗೆ (ಅಕ್ಟೋಬರ್‌ 8 2024) ಒಂದು ವರ್ಷ ಆಯಿತು. ಈ ಒಂದು ವರ್ಷದಲ್ಲಿ ಗಾಜಾವನ್ನು ಮಾನವ ವಾಸಕ್ಕೆ ಅಯೋಗ್ಯ ಮಾಡಲಾಗಿದೆ. ಬಹುತೇಕ ಕಟ್ಟಡಗಳು ಧ್ವಂಸವಾಗಿವೆ. ಅಧಿಕೃತವಾಗಿ 41,000 ಮಂದಿ ಸತ್ತಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿರುವವರ ಸಂಖ್ಯೆ ಬೇರೆಯೇ ಇದೆ. ಅದು ಹಲವು ಸಾವಿರ. ಗಾಯಗೊಂಡವರ ಅಧಿಕೃತ ಸಂಖ್ಯೆ95,000. ಕೈ ಕಾಲು ಕಳೆದುಕೊಂಡವರು ಹಲವು ಸಾವಿರ. ಗಮನಿಸಿ ಗಾಜಾದ ಒಟ್ಟು ಜನಸಂಖ್ಯೆಯೇ ಕೇವಲ 15 ಲಕ್ಷ.

ಲೆಬನಾನ್‌ ಮೇಲೂ ಬಾಂಬು

ಗಾಜಾವನ್ನು ನೆಲ ಸಮಗೊಳಿಸಿ ಕೊಲ್ಲುವ ಕೆಲಸವನ್ನು ಮುಂದುವರಿಸಿರುವಂತೆಯೇ ಯುದ್ಧದಾಹಿ ಇಸ್ರೇಲ್‌ ಈಗ ಲೆಬನಾನ್‌ ಮೇಲೂ ಬಾಂಬ್‌ ಸುರಿಸುತ್ತಿದೆ. ಅಲ್ಲಿ ಈಗಾಗಲೇ 2000 ಮಂದಿ ಸತ್ತಿದ್ದಾರೆ. ಹಮಾಸ್‌, ಹಿಜ್ಬುಲ್ಲಾದ ದೊಡ್ಡ ದೊಡ್ಡ ನಾಯಕರನ್ನು ಇಸ್ರೇಲ್‌ ಕೊಂದು ಮುಗಿಸಿದೆ. ಸಿರಿಯಾದ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ಹಾಕಿ ರಾಜತಾಂತ್ರಿಕರನ್ನು ಕೊಂದಿದೆ. ಇರಾನ್‌ ನಲ್ಲಿಯೇ ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆಯನ್ನು ಕೊಂದಿದೆ. ಮುಸ್ಲಿಂ ಜಗತ್ತಿನ ಅತಿ ದೊಡ್ಡ ನಾಯಕ ಹಸನ್‌ ನಸರೆಲ್ಲಾ ನನ್ನು ಲೆಬನಾನ್‌ ನಲ್ಲಿ ಕೊಂದಿದೆ.

ಪ್ರತೀಕಾರವಾಗಿ ಇರಾನ್‌ ಎರಡು ಬಾರಿ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಇರಾನ್‌ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್‌ ಹೇಳಿರುವ ಹಿನ್ನೆಲೆಯಲ್ಲಿ ಯುದ್ಧ ಇನ್ನಷ್ಟು ಭೀಕರವಾಗುವ ವಿಸ್ತಾರವಾಗುವ ಲಕ್ಷಣ ಗೋಚರಿಸುತ್ತಿದೆ. ಈಗಿನ ಕಾಲದ ಯುದ್ಧದಲ್ಲಿ ನಷ್ಟ ಅನುಭವಿಸುವುದು ಎರಡು ದೇಶಗಳಲ್ಲ, ಇಡೀ ಜಗತ್ತು.

ವಿಶ್ವಸಂಸ್ಥೆ ಒಂದು ನಿರರ್ಥಕ ಸಂಸ್ಥೆ

ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಮಾರಕ ದಾಳಿಯಿಂದ ಎರಡು ಅಂಶಗಳು ಸ್ಪಷ್ಟವಾದವು. ವಿಶ್ವಸಂಸ್ಥೆ ಒಂದು ಹಲ್ಲಿಲ್ಲದ ಹಾವು, ನಿರರ್ಥಕ ಸಂಸ್ಥೆ. ಕೇವಲ ಐದು ಬಲಾಢ್ಯ ರಾಷ್ಟ್ರಗಳಿಗೆ ವೀಟೋ ಅಧಿಕಾರ ಇರುವ ಈ ಸಂಸ್ಥೆಯ ಯಾವುದೇ ನಿರ್ಧಾರ ಕಾರ್ಯರೂಪಕ್ಕೆ ಬರುವುದು ಅಸಂಭವ (ಜಗತ್ತಿನ ಎಲ್ಲೇ ಯುದ್ಧ ನಡೆಯಲಿ ಅಲ್ಲಿ ಅಮೆರಿಕಾ ಇದೆ. ಗಾಜಾದಲ್ಲಿ ಪರೋಕ್ಷವಾಗಿ ಬಾಂಬ್‌ ಹಾಕುತ್ತಿರುವುದು ಅಮೆರಿಕಾವೇ. ಇಸ್ರೇಲ್‌ ನೆಪ ಮಾತ್ರ). ಇಸ್ರೇಲ್‌ ಗೆ ಅಮೆರಿಕಾ ಬೆಂಬಲದಿಂದಾಗಿ ವಿಶ್ವಸಂಸ್ಥೆ ಏನೂ ಮಾಡದಂತಾಗಿದೆ. ಹಾಗಾಗಿ ಜಗತ್ತಿನಲ್ಲಿ ಇನ್ನು ಮುಂದೆಯೂ ಇಂತಹ ಘಟನೆಗಳು ನಡೆದಾಗ ಪರಿಹಾರದ ಒಂದು ದಾರಿ ಎಂಬುದಿಲ್ಲ ಎಂಬುದು ಸ್ಪಷ್ಟವಾಯಿತು. ಈ ಒಟ್ಟು ಘಟನೆಗಳು ವಿಶ್ವಸಂಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸಿದವು.

ಭಾರತದ ಅಸ್ಪಷ್ಟ, ಅಸ್ಥಿರ ವಿದೇಶ ನೀತಿ

ಎರಡನೆಯದಾಗಿ ಭಾರತದ ನಿಲುವು. ಹಿಂದೆ ದೇಶದ ನಾಯಕತ್ವ ವಹಿಸಿಕೊಂಡವರು ದೇಶಕ್ಕೊಂದು ಸ್ಪಷ್ಟ ವಿದೇಶಾಂಗ ನೀತಿ ಹಾಕಿ ಕೊಟ್ಟಿದ್ದರು. ಸರಕಾರ ಯಾವುದೇ ಬರಲಿ ನೀತಿ ಅದೇ ಇರುತ್ತಿತ್ತು. ನೆಹರೂ ಅವರಂತೂ ಅಲಿಪ್ತ ನೀತಿಯ ಕಾರಣವಾಗಿ ಭಾರತವನ್ನು ಹೆಚ್ಚು ಸುರಕ್ಷಿತವಾಗಿಸಿದ್ದರು. ಆದರೆ ಕಳೆದ ಹತ್ತು ವರ್ಷಗಳಿಂದ ಭಾರತ ಅನುಸರಿಸುತ್ತಿರುವ ನೀತಿಗೆ ಒಂದು ಸ್ಪಷ್ಟತೆಯೇ ಇಲ್ಲವಾಗಿದೆ. ಉಕ್ರೇನ್‌ ರಶ್ಯಾ ಯುದ್ಧ ಸಂದರ್ಭದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಉಕ್ರೇನ್‌ ಪರ ನಿಂತರೆ, ಮೋದಿಯವರು ಸರ್ವಾಧಿಕಾರಿ ಪುಟಿನ್‌ ರ ಆಪ್ತ ಗೆಳೆಯನಾಗಿಯೇ ಮುಂದುವರಿದಿದ್ದಾರೆ. ರಶ್ಯಾದಿಂದ ಅಗ್ಗದ ಕಚ್ಚಾ ತೈಲ ಖರೀದಿಸುತ್ತಲೇ ಇದ್ದಾರೆ. ಅತ್ತ ಪುಟಿನ್‌ ರನ್ನೂ ಅಪ್ಪಿಕೊಳ್ಳುತ್ತಾರೆ ಇತ್ತ ಉಕ್ರೇನ್‌ ನ ಜಲೆನ್ಸ್ಕಿಯನ್ನೂ ಅಪ್ಪಿಕೊಳ್ಳುತ್ತಾರೆ.!

ಪ್ಯಾಲೆಸ್ಟೈನ್‌ ನಾಯಕ ಯಾಸರ್‌ ಅರಾಫತ್‌ ಕಾಲದಿಂದಲೂ ಭಾರತ ಪ್ಯಾಲೆಸ್ಟೈನ್‌ ಪರವೇ ನಿಂತಿತ್ತು. ಆದರೆ ಮೋದಿಯವರು ಈಗ ಇಸ್ರೇಲ್‌ ಪರ ನಿಂತಿದ್ದಾರೆ. ಪ್ಯಾಲೆಸ್ಟೈನ್‌ ಮೇಲೆ ಬಾಂಬು ಹಾಕುತ್ತಿರುವ ಇಸ್ರೇಲ್‌ ಗೆ ಭಾರತವೂ ಶಸ್ತ್ರ ಕಳುಹಿಸುತ್ತಿದೆ ಎನ್ನಲಾಗಿದೆ. ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧದ ಮತದಾನ ಸಂದರ್ಭದಲ್ಲಿ ಭಾರತ ಎಡಬಿಡಂಗಿ ನೀತಿ ಅನುಸರಿಸುತ್ತ ಇಸ್ರೇಲ್‌ ಗೆ ಅನುಕೂಲವಾಗುವ ರೀತಿಯಲ್ಲಿಯೇ ಹೆಜ್ಜೆ ಇರಿಸುತ್ತಿದೆ. ಇದರಿಂದ ಅರಬ್‌ ರಾಷ್ಟ್ರಗಳಲ್ಲಿ ಭಾರತಕ್ಕೆ ಆಗಲಿರುವ ತೊಂದರೆಗಳ ಬಗ್ಗೆ ಭಾರತ ಸರಕಾರ ಎಚ್ಚರಿಕೆ ವಹಿಸಿದಂತೆ ಕಾಣುತ್ತಿಲ್ಲ.

ಸರಕಾರಗಳು ಬರುತ್ತವೆ ಹೋಗುತ್ತವೆ. ಆದರೆ ವಿದೇಶ ನೀತಿಯಂತಹ ಬಹುಮುಖ್ಯ ವಿಷಯಗಳಲ್ಲಿ ದೇಶದ ನಿಲುವು ಸ್ಥಿರವಿರಬೇಕು ಮತ್ತು ದೇಶದ ಹಿತಾಸಕ್ತಿಗೆ ಅದು ಪೂರಕವಾಗಿ ಸ್ಪಷ್ಟವಿರಬೇಕು. ಒಂದೆಡೆ ನೆತನ್ಯಾಹು ಅವರನ್ನೂ ತಬ್ಬಿಕೊಳ್ಳುವ, ʼಇನ್ನೊಂದೆಡೆ ನಿಮ್ಮೊಡನೆʼ ನಾವಿದ್ದೇವೆ ಎಂದು ಪ್ಯಾಲೆಸ್ಟೈನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ ರಿಗೂ ಹೇಳುವ ಮೋದಿಯವರ ನಿಲುವನ್ನು, ಹಾಗೆಯೇ ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ಭಾರತದಲ್ಲಿ ಪ್ಯಾಲೆಸ್ಟೈನ್‌ ಪರ ಶಾಂತಿಯುತ ಪ್ರತಿಭಟನಾ ಪ್ರದರ್ಶನಕ್ಕೂ ಅವಕಾಶ ಕೊಡದಿರುವುದನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಇಂತಹ ವಿಚಿತ್ರ, ಎಡಬಿಡಂಗಿ ಮತ್ತು ದೀರ್ಘಾವಧಿಯಲ್ಲಿ ಭಾರತದ ಜಾಗತಿಕ ಹಿತಾಸಕ್ತಿಗೆ ಧಕ್ಕೆಯಾಗುವ ವಿದೇಶ ನೀತಿ ಅನುಸರಿಸುವ ಭಾರತ ಯಾವ ಸೀಮೆಯ ಗ್ಲೋಬಲ್‌ ಲೀಡರ್‌, ವಿಶ್ವಗುರು?!

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ- ಆ ದಿನಗಳು ಕರ್ನಾಟಕದಲ್ಲಿ ಬರಬಾರದೇ…?

More articles

Latest article