ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ 15 ಸುತ್ತುಗಳ ಮತ ಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಸತ್ಯದ ಗೆಲುವು ನಿಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದು ಗೆದ್ದ ನಂತರ ವಿನೇಶ್ ಫೋಗಟ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದು, “ಇದು ಸತ್ಯದ ಗೆಲುವು” ಎಂದು ಗೆದ್ದ ನಂತರ ಫೋಗಟ್ ಹೇಳಿದರು. ಕಾಂಗ್ರೆಸ್ ಸೋಲಿನ ಬಗ್ಗೆ ಕೇಳಿದಾಗ, “ಇನ್ನೂ ಸ್ವಲ್ಪ ಸಮಯ ಕಾಯೋಣ. ಎಣಿಕೆ ಇನ್ನೂ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಮುಂದುವರೆದು, ಇದು ಎಲ್ಲಾ ಯುವತಿಯರ ಗೆಲುವು. ಹೋರಾಟಕ್ಕೆ ನಿರ್ಧರಿಸಿದ ಎಲ್ಲಾ ಮಹಿಳೆಯರ ಗೆಲುವು. ಈ ದೇಶ ಕೊಟ್ಟ ಪ್ರೀತಿ ಹಾಗೂ ನಂಬಿಕೆಯನ್ನು ಉಳಿಸುತ್ತೇನೆ. ನಾನು ಹರಿಯಾಣದ ಜನರಿಗಾಗಿ ಕೆಲಸ ಮಾಡುತ್ತೇನೆ. ಜೂಲಾನಾ ಜನರು ನನಗೆ ತಮ್ಮ ಆಶೀರ್ವಾದವನ್ನು ನೀಡಿದ್ದಾರೆ ಎಂದಿದ್ದಾರೆ.
ವಿನೇಶ್ ಫೋಗಟ್ ಅವರು ಒಟ್ಟು 65,080 ಮತಗಳನ್ನು ಪಡೆದು 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಭಿನಂದನೆ ಕೋರಿದ ಬಜರಂಗ್ ಪೂನಿಯಾ
ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಅವರು ಕುಸ್ತಿಪಟು ವಿನೇಶ್ ಫೋಗಟ್ ಅವರ ಚೊಚ್ಚಲ ಚುನಾವಣೆಯಲ್ಲಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ಈ ಹೋರಾಟವು ಒಂದು ಕ್ಷೇತ್ರವನ್ನು ಗೆಲ್ಲುವು ಉದ್ದೇಶವಲ್ಲ, ಅಭ್ಯರ್ಥಿಯ ವಿರುದ್ದವಲ್ಲ, ಕೇವಲ ಪಕ್ಷಗಳ ನಡುವಿನ ಹೋರಾಟವಲ್ಲ. ಈ ಹೋರಾಟ ದೇಶದ ಕೆಲ ದಬ್ಬಾಳಿಕೆಯ ಶಕ್ತಿಯ ವಿರುದ್ಧ. ಇದರಲ್ಲಿ ವಿನೇಶ್ ವಿಜಯಶಾಲಿಯಾಗಿದ್ದಾರೆ. ಫೋಗಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಕುಸ್ತಿ ಫೆಡರೇಶನ್ನ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ವಿರೋಧಿ ಪ್ರತಿಭಟನೆಯಲ್ಲಿ ಫೋಗಟ್ ಭಾಗವಹಿಸಿದ್ದು ಗಮನಾರ್ಹವಾಗಿದೆ.