ಇಸ್ರೇಲ್ ಇರಾನ್ ವಾರ್ – ಇರಾನ್ ಚರಿತ್ರೆ!

Most read

ಅಸಾಮಾನ್ಯ ಭೌಗೋಳಿಕತೆ, ವಿಶ್ವದ ಅನಿವಾರ್ಯತೆಯ ಜಲಸಂಧಿಗಳು, ಅತ್ಯಾಧುನಿಕ ತಂತ್ರಜ್ಞಾನ, ಅಪಾಯಕಾರಿ ಶಸ್ತ್ರಾಸ್ತ್ರಗಳು, ಅಣ್ವಸ್ತ್ರ ಬಲ, ಬಂಡುಕೋರರ ಗುಂಪುಗಳು, ನೇರವಾಗಿ ಬಲಿಷ್ಠ ರಷ್ಯಾ, ಚೀನಾ ದೇಶಗಳ ಮುಕ್ತ ಬೆಂಬಲ  ಈಗ ಹೇಳಿ ಇಸ್ರೇಲ್ – ಇರಾನ್ ಯುದ್ಧ ನಡೆಯಲು ಸಾಧ್ಯವೇ?- ರಾ. ಚಿಂತನ್‌, ಪತ್ರಕರ್ತರು

ಗಾಝಾ ವಿರುದ್ಧ ಇಸ್ರೆಲ್ ದಾಳಿಗಿಳಿದು ಒಂದು ವರ್ಷವಾದ ಈ ಹೊತ್ತಿಗೆ ಸಂಘರ್ಷ ಲೆಬನಾನ್ ದಾಟಿ ಇರಾನ್‌ವರೆಗೂ ಬಂದು ನಿಂತಿದೆ. ಈ ಸಂದರ್ಭದಲ್ಲಿ ಇಸ್ರೆಲ್ ಹಾಗೂ ಇರಾನ್ – ಇಬ್ಬರಲ್ಲಿ ಯಾರು ಬಲಿಷ್ಠರು ಎಂದು ಚರ್ಚೆಯಾಗುತ್ತಿದೆ. ಅದರ ಜೊತೆಗೆ ಇರಾನ್ ಅನ್ನು ಯಾರೂ ಇಲ್ಲಿಯವರೆಗೆ ಮುಟ್ಟಲು ಸಾಧ್ಯವಾಗಲಿಲ್ಲ, ಅಥವಾ ಸಾಧ್ಯವಿಲ್ಲ ಎಂಬುದಕ್ಕೆ ಉದಾಹರಣೆಯ ಸಮೇತ ಚರ್ಚೆಗಳು ಆರಂಭವಾಗಿವೆ. ಇವತ್ತು ಶತ್ರುಗಳು ತಟ್ಟಲು ಸಾಧ್ಯವಿಲ್ಲದಂಥ ಇರಾನ್ ದೇಶಕ್ಕೆ Nature’s Gift ಎನ್ನಲಾಗುತ್ತಿರುವ ಅದರ ಅಸಾಮಾನ್ಯ ಭೌಗೋಳಿಕತೆ, ಅತ್ಯಾಧುನಿಕ ತಂತ್ರಜ್ಞಾನ, ಅವರ ಬಳಿಯಿರುವ ಅಣ್ವಸ್ತ್ರ, ಸುಧಾರಿತ ಅಪಾಯಕಾರಿ ಶಸ್ತ್ರಾಸ್ತ್ರ

ಗಳು, ಅನೇಕ ರಾಷ್ಟ್ರಗಳಲ್ಲಿ ಇರಾನ್ ಸಾಕಿ ಸಲಹಿರುವ ಬಂಡುಕೋರರ ಗುಂಪುಗಳು, ಮೂರು ಖಂಡಗಳ ಆರ್ಥಿಕತೆಯ ಬೆನ್ನೆಲುಬಾಗಿರುವ ಜಲಸಂಧಿಗಳ ಇರಾನಿನ ಬಹುದೊಡ್ಡ ಶಕ್ತಿಯಾಗಿದೆ. ಇರಾನಿನ ಮೇಲಿನ ಯುದ್ಧವೆಂದರೇ ಹಮಾಸ್, ಹಿಜ್ಬುಲ್ಲಾಗಳ ಮೇಲೆ ಬಾಂಬು ಸುರಿಸಿದಷ್ಟೇ ಸೋಬಿ,  ಶೆಡ್ಡಿನಲ್ಲಿ ನಡೆಯುವ ಕುಸ್ತಿ ಎಂದುಕೊಂಡಿರುವ ನಮ್ಮ ಮಾಧ್ಯಮ, ಅಜ್ಞಾನಿ, ಅತೃಪ್ತ ಆತ್ಮಗಳಿಗೆ ಇವತ್ತಿನ ಈ ವಸ್ತುನಿಷ್ಠ ವರದಿಯನ್ನು ಅರ್ಪಿಸುತ್ತಿದ್ದೇನೆ.

ಹಮಾಸ್ ಇಸ್ರೆಲ್ ಯುದ್ಧ ನೋಟ

ಇವತ್ತಿಗೆ ಹಮಾಸ್ ಇಸ್ರೆಲ್ ಮೇಲೆ ಕ್ಷಿಪಣಿ ಹಾರಿಸಿದ್ದು, ಅದಕುತ್ತರವಾಗಿ ಇಸ್ರೆಲ್ ಯುದ್ಧೋಪಾದಿಯಲ್ಲಿ ಗಾಜಾದ ಮೇಲೆ ಬಾಂಬು ಸುರಿಸಿ ಕ್ರೌರ್ಯಕ್ಕೆ ಇಳಿದು ಒಂದು ವರ್ಷವಾಯಿತು. ಇಲ್ಲಿಯವರೆಗೆ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಅಂಗವಿಕಲರಾಗಿದ್ದಾರೆ. ಹಸುಗೂಸೆನ್ನದೆ ಸಾವಿರಾರು ಮಕ್ಕಳು ಬಲಿಯಾಗಿದ್ದಾರೆ. ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಇವತ್ತಿನ ದುರಂತ, ಅಸಾಧ್ಯ ಕಥೆಯನ್ನು ಶುರು ಮಾಡುವ ಮುನ್ನ, ಪ್ಯಾಲೆಸ್ಟಿನ್ ನೆಲೆದ ಮೇಲೆ ಇಸ್ರೆಲ್ ಬಂದು ನಿಂತ ಸಣ್ಣ ಹಿನ್ನೆಲೆಯನ್ನು ತಿಳಿಯೋಣ. 

19ನೇ ಶತಮಾನದಿಂದಲೂ ಬ್ರಿಟೀಷರು, ಫ್ರೆಂಚರ ವಸಾಹತುಗಳಿಗೆ ಭರಪೂರ್ತಿ ಹಣಕಾಸಿನ ನೆರವು ನೀಡುತ್ತಿದ್ದ ವ್ಯಾಪಾರಸ್ಥ ಯುರೋಪಿಯನ್ ಜಿಯೋನಿಸ್ಟರ ಋಣ ತೀರಿಸಲು ಅವರಿಗೆ ಪ್ಯಾಲೆಸ್ತೀನ್ ನೆಲದಲ್ಲಿ ಜಾಗ ಮಾಡಿಕೊಟ್ಟು ಪೌರಾಣಿಕ ಕಥೆಯನ್ನು ಕಟ್ಟಿ ಇಸ್ರೆಲ್ ದೇಶವನ್ನು ಸ್ಥಾಪಿಸಲಾಯಿತು. ಪ್ಯಾಲೆಸ್ತೀನ್ ರಾಷ್ಟ್ರೀಯತೆ ಬಹುಸಂಸ್ಕೃತಿಯ ಅಸ್ಮಿತೆ. ಅದು ಅರಬ್ ಮುಸ್ಲೀಮರು, ಅರಬ್ ಕ್ರಿಶ್ಚಿಯನ್ನರು, ಅರಬ್ ಯಹೂದಿಗಳನ್ನು ಒಳಗೊಂಡ ರಾಷ್ಟ್ರೀಯ ಅಸ್ಮಿತೆ. ಹಾಗಾಗಿ ಅರಬ್ ಯಹೂದಿಗಳೂ ಅವತ್ತು ಇಸ್ರೆಲ್ ಸ್ಥಾಪನೆಯ ವಿರುದ್ಧ ಪ್ರತಿಭಟಿಸಿದ್ದರು. 

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅರಬ್ ಪ್ರಾಂತ್ಯಗಳನ್ನು ಆಳುತ್ತಿದ್ದ ಆಟೋಮನ್ ಟರ್ಕರ ವಿರುದ್ಧ 1917ರಲ್ಲಿ ಶುರುವಾಗಿದ್ದ ಅರಬ್ ದಂಗೆಯನ್ನು ಹೈಜಾಕ್ ಮಾಡಿದ ಬ್ರಿಟೀಷ್ ಮತ್ತು ಫ್ರೆಂಚರು ತಮ್ಮ ಶತ್ರುವಾಗಿದ್ದ ಟರ್ಕರನ್ನು ಅರಬ್ಬರ ಬೆಂಬಲದೊಂದಿಗೆ ಹಿಮ್ಮೆಟ್ಟಿಸಿದರು. ಅರಬ್ ಪ್ರಾಂತ್ಯಗಳನ್ನು ಆಟೋಮನ್ ಟರ್ಕರ ಸಾಮ್ರಾಜ್ಯದಿಂದ ಮುಕ್ತಗೊಳಿಸಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಯುದ್ಧ ಗೆದ್ದ ನಂತರ ಅರಬ್ಬರಿಗೆ ಗೊತ್ತಾಗದಂತೆ ಬ್ರಿಟೀಷರು ಮತ್ತು ಫ್ರೆಂಚರು ಸೈಕ್ಸ್ -ಪೈಕೋಟ್ ರಹಸ್ಯ ಒಪ್ಪಂದ ಮಾಡಿಕೊಂಡು, ಆಟೋಮನ್ ಆಡಳಿತದಲ್ಲಿದ್ದ ಭೂಭಾಗಗಳನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇರಾಕ್ ಮತ್ತು ಪ್ಯಾಲೆಸ್ಟೈನ್ ಬ್ರಿಟಿಷ್‌ ರಿಗೆ, ಸಿರಿಯಾ ಮತ್ತು ಲೆಬನಾನ್ ಫ್ರೆಂಚರಿಗೆ ಎಂದು ತಮ್ಮೊಳಗೆ ನಿರ್ಣಯ ಮಾಡಿಕೊಂಡರು. 1917ರ ನವೆಂಬರ್ ತನಕವೂ ಈ ಒಪ್ಪಂದದ ಬಗ್ಗೆ ಅರಬ್‌ರಿಗೆ ಗೊತ್ತಾಗಲಿಲ್ಲ. ಆಗತಾನೆ ರಷ್ಯಾದಲ್ಲಿ ಕ್ರಾಂತಿ ಮಾಡಿ ವಿಜಯಿಯಾಗಿದ್ದ ಬೊಲ್ಷೆವಿಕರು, ಈ ಒಪ್ಪಂದದ ಮಾಹಿತಿಯನ್ನು  ಅವರ ಪತ್ರಿಕೆಯಾದ “ಪ್ರಾವಡಾ” ದಲ್ಲಿ ಪ್ರಕಟಿಸಿದರು.

1917ರ  ಬಾಲ್ಫರ್ ಡಿಕ್ಲೆರೇಶನ್  ಪ್ರಕಾರ  ಪೌರಾಣಿಕ ನೆಲೆಯಲ್ಲಿ ಪ್ಯಾಲೆಸ್ತೀನ್ ನಲ್ಲಿ “ಯಹೂದಿಗಳ ರಾಜ್ಯ ” ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಯಿತು. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಅರ್ಥರ್ ಬಾಲ್ಫರ್ ಹಾಗೂ ಬ್ರಿಟಿಷ್ ಯಹೂದಿ ಗುಂಪಿನ ನಾಯಕನಾಗಿದ್ದ ರೋಥ್ಸ್ಚೈಲ್ಡ್ ಬರೆದ ಈ ಡಿಕ್ಲೆರೇಶನ್ ಇವತ್ತಿನ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಘರ್ಷಣೆಯ ಮೂಲವಾಗಿದೆ. 

ಮೊದಲನೆ ಮಹಾಯುದ್ಧದ ಪೂರ್ವ 1890ರ ಆಸುಪಾಸು ಯಹೂದಿಗಳಿಗೆ ಒಂದು ದೇಶ ಬೇಕೆಂದು ಬ್ರಿಟಿಷ್‌ರಿಗೆ ಬೇಡಿಕೆಯಿಟ್ಟಿದ್ದರು, ಅದರ ಭಾಗವಾಗಿ ಇವರು ಮೊದಲು ಬೇಡಿಕೆ ಇಟ್ಟ ದೇಶ ಪ್ಯಾಲೆಸ್ತೀನ್ ಅಲ್ಲ, ಅದು ಸೈಪ್ರಸ್. ಮೊದಲು ಈ ದೇಶವನ್ನು ಕೊಂಡುಕೊಂಡು ತದನಂತರ ಪ್ಯಾಲೆಸ್ಟೈನ್ ಭೂಮಿಯನ್ನು ಖರೀದಿಸಬೇಕೆಂಬ ಇರಾದೆ ಇವರದ್ದಾಗಿತ್ತು. ಒಂದು ಅಧಿವೇಶನದಲ್ಲಿ ಇಸ್ರೇಲ್ ದೇಶದ ಮೂಲ ಪರಿಕಲ್ಪನೆಯನ್ನು ನೀಡಿದ್ದ  ಥಿಯೋಡರ್ ಹರ್ಜಲ್ ಉಗಾಂಡಾದಲ್ಲಿ ಇಸ್ರೇಲ್ ದೇಶವನ್ನು ಸ್ಥಾಪಿಸುವ ಪ್ರಸ್ತಾಪ ಕೂಡ ಮಾಡಿದ್ದರು. ಅದನ್ನು  ಜಿಯೋನಿಸ್ಟರು ವಿರೋಧಿಸಿದರು.  20ನೇ ಶತಮಾನದ ಆರಂಭದಲ್ಲಿ ಜಿಯೋನಿಸ್ಟರು ಪ್ಯಾಲೆಸ್ಟೈನ್‌ನಲ್ಲಿ ಇಸ್ರೇಲ್ ಸ್ಥಾಪಿಸಬೇಕೆಂದು ನಿರ್ಧಾರ ಮಾಡಿದರು. ನಂತರ ಬಾಲ್ಫರ್ ಡಿಕ್ಲೆರೇಶನ್ ಇದನ್ನು ಅನುಮೋದಿಸಿತು. ಫ್ರೆಂಚರು ಮತ್ತು ಬ್ರಿಟಿಷರ ಈ ಎರಡು ಮಹಾದ್ರೋಹಗಳ ವಿರುದ್ಧ ಅರಬ್ಬರು ದಂಗೆಯೆದ್ದರು. 

ಏಕೆಂದರೆ ಅರಬ್ಬರ ನೆಲೆಗಳು ಫ್ರೆಂಚರು ಮತ್ತು ಬ್ರಿಟಿಷರ ವಸಾಹತುಶಾಹಿ ನೆಲೆಗಳಾಗಿ ಬದಲಾಗಿದ್ದವು. ಅದಲ್ಲದೆ ಅವರದೇ ಭೂಮಿಯಾದ ಪ್ಯಾಲೆಸ್ಟೈನ್‌ನನ್ನು ಜಿಯೋನಿಸ್ಟರಿಗೆ ಮಾರಾಟ ಮಾಡಲಾಗಿತ್ತು.  ಅರಬ್ಬರ ನಾಯಕತ್ವ ವಹಿಸಿದ್ದ ಹುಸೆನ್ ಬಿನ್ ಅಲಿ ಈ ಒಪ್ಪಂದಗಳ ವಿರುದ್ಧ ಹಲವಾರು ಬಾರಿ ಬ್ರಿಟಿಷ್ ಮತ್ತು ಫ್ರೆಂಚರ ಜೊತೆ ಮಾತುಕತೆ ನಡೆಸಿದರು, ಆದರೆ ಯಶಸ್ವಿಯಾಗಲಿಲ್ಲ. ಒಂದು ಮಾತುಕತೆಯಲ್ಲಿ ಹುಸೆನ್ ಬಿನ್ ಅಲಿ ಯುರೋಪಿನಲ್ಲಿ ಯಹೂದಿಗಳಿಗೆ ಸಮಸ್ಯೆ ಆಗಿದ್ದಲ್ಲಿ ಅವರು ಅರಬ್ ನಾಡಿನಲ್ಲಿ ಬಂದು ನೆಲೆಸಲಿ ಅವರು ನಮ್ಮ ಸಹೋದರರು ಇದ್ದಂತೆ, ಆದರೆ ಇಸ್ರೇಲ್ ದೇಶವನ್ನು ಸ್ಥಾಪಿಸಲು ನಾವು ಒಪ್ಪುವುದಿಲ್ಲವೆಂದೂ ಹೇಳಿದ್ದರು.  ಆದರೆ ಬ್ರಿಟಿಷ್ ಮತ್ತು ಫ್ರೆಂಚರು ಇಸ್ರೇಲ್ ದೇಶ ಸ್ಥಾಪಿಸಲು ಯರೋಪಿನ ಜಿಯೋನಿಸ್ಟರಿಗೆ ಬೆನ್ನೆಲುಬಾಗಿ ನಿಂತರು. ಬಲವಂತವಾಗಿ ಪ್ಯಾಲೆಸ್ತೀನ್ ಜನರನ್ನು ಒಕ್ಕಲೆಬ್ಬಿಸಲಾಯಿತು, ಅವರ ಭೂಮಿಯನ್ನು ಕಸಿಯಲಾಯಿತು. ಕ್ರೌರ್ಯ ಮತ್ತು ಹಿಂಸೆಯಿಂದ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಪ್ರತಿಭಟಿಸಿದವರಲ್ಲಿ  ಅರಬ್ ಮುಸ್ಲಿಮರು, ಅರಬ್ ಕ್ರಿಶ್ಚಿಯನರು, ಅರಬ್ ಯಹೂದಿಗಳು ಇದ್ದರು. 

1948ರಲ್ಲಿ ಇಸ್ರೇಲ್ ಸ್ಥಾಪನೆಯಾದ ನಂತರ ಯರೋಪಿನ ಬೈಬಲ್ ಗಳಲ್ಲಿ ಪ್ಯಾಲೆಸ್ತೀನ್ ಪದ ತೆಗೆದು ಇಸ್ರೇಲ್ ಎಂದು ನಾಮಕರಣ ಮಾಡಿದರು. ಇದನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಯಿತು. ವಸಾಹತುಶಾಹಿ ದೇಶಗಳ ಮಾಧ್ಯಮಗಳು, ವಿಶ್ವವಿದ್ಯಾಲಯದ ಸಂಶೋಧಕರು ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷವನ್ನು ಧರ್ಮಗಳ ದೃಷ್ಟಿಕೋನದಲ್ಲಿ ಬಂಧಿಸಿದರು. 

ಇವಿಷ್ಟು ಇಸ್ರೆಲ್ ದೇಶ ಹೇಗೆ ಸ್ಥಾಪನೆಯಾಯ್ತು ಎನ್ನುವುದರ ಸ್ಫುಟವಾದ ವಿವರಣೆಯಾದರೇ, ಅವತ್ತು ಇಸ್ರೆಲ್ ಅಸ್ತಿತ್ವಕ್ಕೆ ಮಾನ್ಯತೆ ನೀಡಿದ ಎರಡನೇ ಅತಿದೊಡ್ಡ ದೇಶವಾಗಿತ್ತು ಇರಾನ್ ಎಂಬುದು ಅವಶ್ಯವಾಗಿ ಗಮನಿಸಬೇಕಾದ ವಿಚಾರವಾಗಿದೆ. ಅವತ್ತಿನ ಇಸ್ರೆಲ್ ಅಸ್ತಿತ್ವದ ವಿರುದ್ಧದ ಸಂಘರ್ಷ ಇವತ್ತು ಇರಾನ್ v/s ಇಸ್ರೆಲ್ ಎನ್ನುವಲ್ಲಿಗೆ ಬಂದು ಮುಟ್ಟಲು ಕಾರಣವೇನು? ಹಮಾಸ್, ಹಿಜ್ಬುಲ್ಲಾರನ್ನು ಕೊಡವಿದಷ್ಟು ಸುಲಭವಾಗಿ ಇರಾನ್ ಅನ್ನು ಮುಟ್ಟಲು ಸಾಧ್ಯವೇ? ಇಸ್ರೇಲ್ ಅಂತಲ್ಲ, ಇರಾನ್ ಎಂಬ ಭೂಮಿ ಸೃಷ್ಟಿಯಾದಾಗಿನಿಂದಲೂ ಯಾರೂ ಆ ನೆಲದ ಮೇಲೆ ಒಂದು ಪಟಾಕಿಯನ್ನು ಸಿಡಿಸಲು ಧೈರ್ಯ ಮಾಡುತ್ತಿಲ್ಲ ಏಕೆ? ಒಂದು ವೇಳೆ ಭಂಡತನದಿಂದ ಇರಾನ್ ಮೇಲೆ ದಾಳಿಗಿಳಿದರೆ ಜಾಗತಿಕವಾಗಿ ಆಗುವ ಅನಾಹುತವೇನು? ಆ ಕುರಿತ ಅಚ್ಚುಕಟ್ಟಾದ ಮಾಹಿತಿ ಇಲ್ಲಿದೆ.

ಇರಾನ್ ವಿಶ್ವದ ಅತ್ಯಂತ ಹಳೆಯ ನಾಗರೀಕತೆಯಾಗಿದೆ, ಒಂದೇ ರೀತಿಯ ಭೌಗೋಳಿಕ ಏಕತೆಯನ್ನು ಕಾಯ್ದಿರಿಸಿಕೊಂಡಿದೆ. ಈ ಕಾರಣಕ್ಕೆ ಈಗಿನ ಇಸ್ರೇಲ್ ಇರಲಿ, ಅವತ್ತಿನ ರೋಮನ್ನರಾಗಲಿ, ಅರಬ್ಬರಾಗಲಿ, ಮಂಗೋಲಿಯನ್, ಟರ್ಕರಾಗಲಿ, ರಷ್ಯನ್ನರು, ಬ್ರಿಟೀಷರಾಗಲಿ- ಇರಾನ್ ತಂಟೆಗೆ ಹೋಗಲಿಲ್ಲ. ಇರಾನ್ ಭೂಮಿಯ ಸೃಷ್ಟಿ ಹೇಗಿದೆಯೆಂದರೆ, ಜಗತ್ತಿನ ಮೂರು ಖಂಡಗಳಾದ ಯುರೋಪ್, ಆಫ್ರಿಕಾ ಮತ್ತು ಏಷ್ಯಾ ಖಂಡಗಳನ್ನು ಜೋಡಿಸುವ ಏಕೈಕ ಭೂಮಾರ್ಗವಾಗಿದೆ ಇರಾನ್. ಹಾಗೆಯೇ ಪಾಕಿಸ್ತಾನ, ಅಫ್ಘಾನಿಸ್ತಾನ, ತುರ್ಕ್ ಮೆನಿಸ್ತಾನ, ಇರಾಕ್, ಟರ್ಕಿ, ಅರ್ಮೇನಿಯ, ಅಜರ್ ಬೈಜಾನ್ ದೇಶಗಳ ಜೊತೆ ಗಡಿ ಹಂಚಿಕೊಂಡಿದೆ. ಉತ್ತರದಲ್ಲಿ ಕ್ಯಾಸ್ಪಿಯನ್ ಸಮುದ್ರ, ದಕ್ಷಿಣದಲ್ಲಿ ಪರ್ಶಿಯನ್ ಗಲ್ಫ್ ಹಾಗೂ ಒಮನ್ ಕೊಲ್ಲಿ ಸಮುದ್ರ ತಟಗಳನ್ನು ಹೊಂದಿದೆ. ದಕ್ಷಿಣದಲ್ಲಿರುವ Strait of Hormuz ಅಂದರೇ ಹರ‍್ಮುಜ್ ಜಲಸಂಧಿ ಜಗತ್ತಿನ ಶೇಕಡಾ 20ರಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಕೇಂದ್ರಬಿಂದುವಾಗಿದೆ. ಇಲ್ಲಿರುವ ಸಣ್ಣಪುಟ್ಟ ದ್ವೀಪಗಳು ಇರಾನ್ ಹಿಡಿತದಲ್ಲಿವೆ. ಇವಿಷ್ಟನ್ನೇ ನೀವು ತಲೆಯಲ್ಲಿಟ್ಟುಕೊಂಡು AIRSTRIKE ಮೂಲಕ  ಇರಾನ್ ಮೇಲೆ ಬಾಂಬು ಸುರಿಸಿದರೆ ಜಾಗತಿಕವಾಗಿ ಆಗುವ ಅನಾಹುತವನ್ನು ಗ್ರಹಿಸಬಹುದು. ಆದರೆ ಇಷ್ಟಕ್ಕೇ ಇರಾನ್ ಮೇಲಿರುವ ಪ್ರಾಕೃತಿಕ ಅನುಗ್ರಹದ ಕತೆ ಇಲ್ಲಿಗೆ ಮುಗಿದಿಲ್ಲ. 

ಇರಾನ್ ದೇಶಕ್ಕೆ ಅದರ ಭೌಗೋಳಿಕತೆಯೇ ವರದಾನವಾಗಿದೆ. ಆ ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿರುವ ಜಾಗ್ರೋಸ್ ಮೌಂಟೇನ್ಸ್ ( Zagros Mountains ) ದಕ್ಷಿಣ ಸಮುದ್ರ ತೀರದಿಂದ ಶುರುವಾದರೆ ಇರಾಕ್ ಅನ್ನು ದಾಟಿ ಟರ್ಕಿಯವರೆಗೆ ಹೆಬ್ಬರ್ವತವಾಗಿ ನಿಂತುಬಿಟ್ಟಿದೆ. ಆ ಬದಿಯಿಂದ ಯುದ್ಧ ಮಾಡ್ತೀವಿ ಅಂತ ಭೂಸೇನೆ ಗನ್ನು, ಬಾಂಬು ಹಿಡಿದು ಬಂದರೆ ಈ ಪರ್ವತ ದಾಟಲು ಸಾಧ್ಯವಿಲ್ಲ. 1980ರಲ್ಲಿ ಇರಾನ್ ವಿರುದ್ಧ ಯುದ್ಧಕ್ಕಿಳಿದ ಸದ್ದಾಂ ಹುಸೈನ್ ಅವರ ಇರಾಕ್ ಪಡೆ ಜಾಗ್ರೋಸ್ ಶಿಖರ ದಾಟಿ ಕುರ್ದಿಸ್ತಾನ ಮುಟ್ಟೋದಕ್ಕೂ ಸಾಧ್ಯವಾಗಲಿಲ್ಲ. ಹಾಗೆಯೇ ಈ ಪರ್ವತದ ಕಾರಣಕ್ಕೆ ಇರಾನ್ ದೇಶವೂ ಇರಾಕ್ ಅನ್ನು ತಟ್ಟಲು ಸಾಧ್ಯವಾಗಲಿಲ್ಲ. ಇದು ದಕ್ಷಿಣದ ಜಾಗ್ರೋಸ್ ಪರ್ವತದ ಕಥೆಯಾದರೆ, ಉತ್ತರಕ್ಕೆ ಕ್ಯಾಸ್ಪಿಯನ್ ಸಮುದ್ರದೊಂದಿಗೆ ಅಲ್‌ಬರ‍್ಜ್ ಪರ್ವತ ಶ್ರೇಣಿಗಳಿವೆ. ಇದು ಇರಾನ್ ಪಾಲಿಗೆ ಕೇವಲ ರಕ್ಷಣಾತ್ಮಕ ಪರ್ವತವಲ್ಲ, ಆ ದೇಶದ ಖನಿಜ ಸಂಪತ್ತಿನ ಮೂಲವಾಗಿದೆ. 20ನೇ ಶತಮಾನದಲ್ಲಿ ಇರಾನ್ ನೆಲದಲ್ಲಿ ನೈಸರ್ಗಿಕ ಅನಿಲ, ತೈಲದ ನಿಕ್ಷೇಪಗಳು ಪತ್ತೆಯಾದವು. ಜಗತ್ತಿಗೆ 10% ದಷ್ಟು ತೈಲ, 15% ದಷ್ಟು ನೈಸರ್ಗಿಕ ಅನಿಲ ನಿಕ್ಷೇಪಗಳು ಇಲ್ಲಿಂದಲೇ ಪೂರೈಕೆಯಾಗುತ್ತವೆ. ೨,೫೦೦ ಕಿಲೋಮೀಟರ್ ಸಮುದ್ರ ತೀರ ಪ್ರದೇಶ ಹೊದಿರುವ ಇರಾನಿನ ಪ್ರಮುಖ ಬಂದರು; ಬಂದರ್ ಅಬ್ಬಾಸ್. ಇದು ಹರ್ಮುಜ್ ಜಲಸಂಧಿಯಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ. ಒಂದು ವೇಳೆ ಯುದ್ಧ ಅಂತ ಯಾರಾದರೂ ಎಗರಿ ಬಂದರೆ, ಇರಾನ್ ತನ್ನ ನೌಕಾಬಲದಿಂದ ಜಲಸಂಧಿಯನ್ನು ಮುಚ್ಚಿತು ಎಂದುಕೊಳ್ಳಿ, ಯುರೋಪ್ ಹಾಗೂ ಏಷ್ಯಾ ರಾಷ್ಟ್ರಗಳಿಗೆ ಶೇಕಡಾ 15% ದಷ್ಟು ಇಂಧನ ಪೂರೈಕೆ ನಿಲ್ಲಲಿದೆ. ಇದರಿಂದ ವಿಶ್ವದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. 

ಈ ಅತ್ಯಮೂಲ್ಯವಾದ ವಿಚಾರವನ್ನು ನಮ್ಮ ಮಾಧ್ಯಮಗಳು ಹೇಳುವುದಿಲ್ಲ. ಅವರಿಗೆ ಇರಾನ್ ಮುಸ್ಲಿಂ ರಾಷ್ಟ್ರ, ಅದು ನಾಶವಾಗಬೇಕು ಎಂಬುದಷ್ಟೇ ಅಸಾಧ್ಯ ಬಯಕೆ. ಆದರೆ ಇದರಿಂದ ಇವರ ಬುಡಕ್ಕೆ ಬೆಂಕಿ ಬೀಳುತ್ತೆ ಎಂಬ ಸತ್ಯ ಅರಿಯದಷ್ಟು ಅಜ್ಞಾನ. ಒಂದು ವೇಳೆ ಇಸ್ರೇಲ್ ಅಥವಾ ಶತ್ರು ರಾಷ್ಟ್ರಗಳು ಇವೆಲ್ಲವನ್ನೂ ಮೀರಿಯೂ ಇರಾನಿಗೆ ನುಗ್ಗಿ ಅವರನ್ನು ಬಡಿಯುತ್ತೇವೆ ಎಂದು ಭಂಡತನಕ್ಕಿಳಿಯಿತು ಎಂದುಕೊಳ್ಳಿ; ಆಗಲೂ ಆಟ ಸುಲಭವಿಲ್ಲ. 

ಇರಾನಿನ ಪೂರ್ವ ಮಧ್ಯಭಾಗದಲ್ಲಿ ದಾಶ್ಟ್ ಇ ಲುತ್, ದಾಶ್ಟ್ ಇ ಕವಿರ್ ಎಂಬ ಮರುಭೂಮಿಯಿದೆ. ಇದನ್ನು ಭೂಲೋಕದ ಕುಲುಮೆ ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿಯ ತಾಪಮಾನ ಕನಿಷ್ಠ  70 ಡಿಗ್ರಿಯಷ್ಟಿರುತ್ತದೆ. ಇಲ್ಲಿ ನಿಂತು ಕುಸ್ತಿ ಮಾಡ್ತೀನಿ ಅನ್ನೋದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇಂತಹ ಭೌಗೋಳಿಕ ಲಕ್ಷಣಗಳ ಕಾರಣಕ್ಕೆ ಇಂದಿಗೂ ಇರಾನ್ ಅಜೇಯವಾಗುಳಿದಿದೆ. 

ಇವಿಷ್ಟು ಇರಾನ್ ದೇಶಕ್ಕೆ ಪ್ರಕೃತಿ ಕೊಟ್ಟ ರಕ್ಷಣೆಯ ಕಥೆಯಾದರೇ, ಅಣ್ವಸ್ತ್ರ, ಶಸ್ತ್ರಾಸ್ತ್ರಗಳೊಂದಿಗೆ ಇರಾನ್ ಯುದ್ಧಕ್ಕೆ ನಿಂತರೆ ಅದು ಎಷ್ಟು ಬಲಿಷ್ಟವಾಗಿದೆ, ಅಷ್ಟಕ್ಕೂ ಈ ಇಸ್ರೆಲ್ ದೇಶದ ಮಾನ್ಯತೆಯ ಪರವಾಗಿದ್ದ ಇರಾನ್ ಅವರ ವಿರುದ್ಧ ತಿರುಗಿಬಿದ್ದಿದ್ದೇಕೆ? ಆ ವಿವರವನ್ನು ನೋಡೋಣ. 

1979ರವರೆಗೆ ಇರಾನ್ ತನ್ನ ಉದಾರವಾದ ನೀತಿಯ ಕಾರಣಕ್ಕೆ, ಇಸ್ರೆಲ್ ಹಾಗೂ ಅಮೆರಿಕಾ ಜೊತೆ ಉತ್ತಮ ಬಾಂಧವ್ಯ ಹೊಂದಿತ್ತು. 1948ರಲ್ಲಿ ಇಸ್ರೆಲ್ ದೇಶದ ಮಾನ್ಯತೆಯನ್ನು ಒಪ್ಪಿಕೊಂಡಿತ್ತು. ಆದರೆ 1979ರಲ್ಲಿ ಶಿಯಾ ಕ್ಷಿಪ್ರ ಕ್ರಾಂತಿಯ ನಂತರ ರುಹೊಲ್ಲ ಕೊಮೆನಿ ಅಧಿಕಾರಕ್ಕೆ ಬಂದರು. ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಇಸ್ರೆಲ್ ಇರಾನಿನ ಮೊದಲ ಶತ್ರು ಎಂದು ಘೋಷಿಸಿ ಪ್ಯಾಲೆಸ್ತೀನ್ ಪರವಾಗಿ ನಿಂತರು. ಇರಾನ್ ಇಸ್ರೆಲ್ ಜೊತೆಗಿನ ಎಲ್ಲಾ ರಾಜಕೀಯ ಸಂಬಂಧವನ್ನು ಕಡಿದುಕೊಂಡಿತು. ವಿಮಾನಯಾನ ಸೇವೆ ರದ್ದುಪಡಿಸಿತು. ಇಸ್ರೆಲ್ ರಾಯಬಾರಿ ಕಛೇರಿಯನ್ನು ಎತ್ತಂಗಡಿ ಮಾಡಿ ಪ್ಯಾಲೆಸ್ತೀನ್ ಹೈಕಮಿಷನ್ ಕಚೇರಿ ತೆರೆಯಿತು. ಈ ಕಾರಣಕ್ಕೆ ಇಸ್ರೆಲಿನ ಅಪ್ಪ ಅಮೆರಿಕಾ ಜೊತೆಗಿನ  ಇರಾನ್ ಸಂಬಂಧ ಹಳಸತೊಡಗಿತು. 

ಈ ಬೆಳವಣಿಗೆಯಿಂದ ನಿಜಕ್ಕೂ ತಲೆಕೆಡಿಸಿಕೊಂಡಿದ್ದು ಅರಬ್ ರಾಷ್ಟ್ರಗಳು. ತೈಲ ವ್ಯಾಪಾರವನ್ನೇ ನೆಚ್ಚಿಕೊಂಡ ಆ ದೇಶಗಳಿಗೆ ಇರಾನ್ ಆಗಲಿ ಪಾಶ್ಚಾತ್ಯ ದೇಶವನ್ನಾಗಲಿ ಎದುರು ಹಾಕಿಕೊಳ್ಳುವುದು ಸುಲಭವಿರಲಿಲ್ಲ. ಹೀಗಾಗಿ 1980ರಲ್ಲಿ ಇರಾಕ್ ಅನ್ನು ಇರಾನ್ ವಿರುದ್ಧ ಎತ್ತಿಕಟ್ಟಿತ್ತು. ಆದರೆ ಅದೇನು ವರ್ಕೌಟ್ ಆಗಲಿಲ್ಲ. ಇದರಿಂದ ಇರಾನ್ ರಣತಂತ್ರ ಹೂಡುವಂತಾಯಿತು. ಅಮೆರಿಕಾ, ಇಸ್ರೆಲ್ ಹಾಗೂ ಅರಬ್ ರಾಷ್ಟ್ರಗಳ ಮೇಲೆ ತನ್ನ ಒತ್ತಡ ನಿರಂತರವಾಗಿರುವಂತೆ ನೋಡಿಕೊಳ್ಳಲು, ಪ್ಯಾಲೆಸ್ತೀನ್ ನಲ್ಲಿ ಹಮಾಸ್, ಲೆಬನಾನ್ ನಲ್ಲಿ ಹಿಜ್ಬುಲ್ಲಾ, ಸಿರಿಯಾದಲ್ಲಿ ಲಿವ ಫತೆಮಿಯೋನ್, ಇರಾಕ್‌ನಲ್ಲಿ ಬದ್ರ್ ಬ್ರಿಗೇಡ್, ಯೆಮೆನ್‌ನಲ್ಲಿ ಹೌತಿ ಗುಂಪುಗಳಿಗೆ ಅಪಾರ ಪ್ರಮಾಣದಲ್ಲಿ ಹಣಕಾಸು, ಶಸ್ತ್ರಾಸ್ತ್ರಗಳ ನೆರವು ನೀಡತೊಡಗಿತು. ಇದನ್ನು ಇರಾನ್ Proxy War ಎಂದು ಕರೆಯಲಾಗುತ್ತದೆ. ಇಸ್ರೆಲ್ ಇಲ್ಲಿಯವರೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದೆಲ್ಲಾ ಇರಾನ್ ಸಾಕಿದ್ದ ಗುಂಪುಗಳ ಜೊತೆಗೆ ಮಾತ್ರ. ಒಂದಿಡೀ ದೇಶದ ಮೇಲೆ ಇಸ್ರೆಲ್ ಇಲ್ಲಿಯವರೆಗೂ ಕಾದಾಡಿಲ್ಲ, ಹಾಗಾಗಿ ಇರಾನ್ ಮೇಲೆ ಇಸ್ರೇಲ್ ಯುದ್ಧ ಮಾಡಿದರೆ ಆಗುವ ಅನಾಹುತದ ಅರಿವು ಇಸ್ರೇಲ್‌ಗಿದೆ; ಆದರೆ ಭಾರತದಲ್ಲಿ ತೌಡು ಕುಟ್ಟುತ್ತಿರುವ ಮಾಧ್ಯಮಗಳಿಗಿಲ್ಲ.

ಕೊನೆಯದಾಗಿ, ನಿಮಗೆ ನೆನಪಿದ್ದರೆ, ರಷ್ಯಾ, ಯುಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ಅಪಾಯಕಾರಿ, ಅತ್ಯಾಧುನಿಕ ಡ್ರೋನ್ ಬಗ್ಗೆ ಚರ್ಚೆಯಾಯಿತು, ಇದರಿಂದ ಯುಕ್ರೇನ್ ಅಕ್ಷರಶಃ ನಡುಗಿಹೋಗಿದ್ದು ನಿಮಗೆ ತಿಳಿದಿದೆ. ಆ ಡ್ರೋನ್ ಅನ್ನು ಅವಿಷ್ಕಾರ ಮಾಡಿದ್ದು ಇರಾನ್. ಅಮೆರಿಕದ ಸೆಂಟ್ರಲ್ ಕಮಾಂಡ್ 2022ರ ವರದಿ ಪ್ರಕಾರ; ಮಧ್ಯಪ್ರಾಚ್ಯ ವಲಯದಲ್ಲಿ ಅಂದರೆ, ಮಿಡಲ್ ಈಸ್ಟ್‌ ನಲ್ಲಿ ಅತ್ಯಾಧುನಿಕ ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಇರಾನ್ ಹೊಂದಿದೆ. ಅಸಾಮಾನ್ಯ ಭೌಗೋಳಿಕತೆ, ವಿಶ್ವದ ಅನಿವಾರ್ಯತೆಯ ಜಲಸಂಧಿಗಳು, ಅತ್ಯಾಧುನಿಕ ತಂತ್ರಜ್ಞಾನ, ಅಪಾಯಕಾರಿ ಶಸ್ತ್ರಾಸ್ತ್ರಗಳು, ಅಣ್ವಸ್ತ್ರ ಬಲ, ಬಂಡುಕೋರರ ಗುಂಪುಗಳು, ನೇರವಾಗಿ ಬಲಿಷ್ಠ ರಷ್ಯಾ, ಚೀನಾ ದೇಶಗಳ ಮುಕ್ತ ಬೆಂಬಲ … 

ಈಗ ಹೇಳಿ ಇಸ್ರೇಲ್ – ಇರಾನ್ ಯುದ್ಧ ನಡೆಯಲು ಸಾಧ್ಯವೇ? ಖಂಡಿತಾ ಇಲ್ಲ. ಆ ಕಾರಣಕ್ಕೆ ಇಸ್ರೇಲ್ ಅಪ್ಪಂದಿರಾದ ಅಮೆರಿಕಾ, ಇಂಗ್ಲೆಂಡ್ – ಇರಾನ್ ಎಚ್ಚರ ಅಂತ ಕಾಲಿಂಗ್ ಬೆಲ್ ಹೊಡೆಯುತ್ತಿವೆ.

ಇವೆಲ್ಲವನ್ನೂ ಮೀರಿಯೂ ಯುದ್ಧವೇನಾದರೂ ನಡೆದರೆ ಅದು, ಭಾರತದ ಮಾಧ್ಯಮಗಳಲ್ಲಿ ಮಾತ್ರ!

ರಾ ಚಿಂತನ್

ಪತ್ರಕರ್ತರು

More articles

Latest article