ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಶಾಸಕ ಜಿ.ಟಿ ದೇವೇಗೌಡರ ವಿಚಾರವಾಗಿ, ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ಮುಡಾ ಹಗರಣ ದೂರುದಾರ ಸ್ನೇಹಮಯಿ ಕೃಷ್ಣ ಟೀಕಿಸಿದ್ದಾರೆ.
ಲೋಕಾಯುಕ್ತ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ ದೇವೇಗೌಡ ಸಹ 50:50 ಅನುಪಾತದ ಫಲಾನುಭವಿಯಾಗಿದ್ದಾರೆ. ಅವರಿಗೂ ತನಿಖೆಯ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಭಯದಿಂದ ಹೀಗೆ ಮಾತಾಡ್ತಿದ್ದಾರೆ. ಮತ್ತೊಂದಿಷ್ಟು ಕಳ್ಳರು ಮುಂದಿನ ದಿನಗಳಲ್ಲಿ ಇದೇ ರೀತಿ ಮಾತಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಕಳ್ಳರು ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಜಿಟಿಡಿ 3 ತಿಂಗಳಿನಿಂದ ಏನು ಮಾಡುತ್ತಿದ್ದರು? ದಸರಾದಂತ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿ.ಟಿ ದೇವೇಗೌಡರ ಅಕ್ರಮ ಇರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.