ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ

Most read

ಗಾಂಧಿಯವರು ಪ್ರತಿಪಾದಿಸಿದ ಸತ್ಯ ಸ್ವಾತಂತ್ರ್ಯ ಸಹಬಾಳ್ವೆ ಹಾಗೂ ಮತೀಯ ಸೌಹಾರ್ದತೆಯನ್ನು ಸ್ಮರಿಸಿಕೊಂಡು ಅವರ ತತ್ವಗಳನ್ನು ಅನುಸರಿಸುವ ದಿನವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕೆ ಹೊರತು, ತಿನ್ನುವ ಆಹಾರ ಕ್ರಮದ ಮೇಲೆ ಹೇರಿಕೆ ಮಾಡುವುದಲ್ಲ– ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಗಾಂಧಿ ಜಯಂತಿಯ ದಿನ ನಿಜವಾಗಿಯೂ ನಿರ್ಬಂಧಿಸಬೇಕಾದದ್ದು ದೇವರು ಧರ್ಮ ಜಾತಿ ಮತಗಳ ಹೆಸರಲ್ಲಿ ನಿತ್ಯ ನಡೆಯುತ್ತಿರುವ ಹಿಂಸೆಯನ್ನೇ ಹೊರತು, ಹಸಿವು ನೀಗಿಸಿಕೊಳ್ಳಲು ತಿನ್ನುವ ಮಾಂಸಾಹಾರವನ್ನಲ್ಲ. ಗಾಂಧಿಯವರು ಪ್ರತಿಪಾದಿಸಿದ ಸತ್ಯ ಸ್ವಾತಂತ್ರ್ಯ ಸಹಬಾಳ್ವೆ ಹಾಗೂ ಮತೀಯ ಸೌಹಾರ್ದತೆಯನ್ನು ಸ್ಮರಿಸಿಕೊಂಡು ಅವರ ತತ್ವಗಳನ್ನು ಅನುಸರಿಸುವ ದಿನವಾಗಿ ಗಾಂಧಿ ಜಯಂತಿ ಆಚರಿಸಬೇಕೆ ಹೊರತು, ತಿನ್ನುವ ಆಹಾರ ಕ್ರಮದ ಮೇಲೆ ಹೇರಿಕೆ ಮಾಡುವುದಲ್ಲ.,

ಈ ಸಲ ಮೊದಲ ಬಾರಿಗೆ ಗಾಂಧಿ ಜಯಂತಿ ಹಾಗೂ ಪಿತೃಪಕ್ಷ ಮಹಾಲಯ ಅಮವಾಸ್ಯೆ ಒಂದೇ ದಿನ ಬಂದಿವೆ. ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿವಧೆಗೆ ಸರಕಾರಿ ನಿಷೇಧ ಇರುವುದರಿಂದ ಮಾಂಸಾಹಾರಿಗಳಿಗೆ ಧರ್ಮಸಂಕಟದ ಪೀಕಲಾಟ ತಂದಿದೆ.

ಯಾಕೆಂದರೆ, ಮಹಾಲಯ ಅಮಾವಾಸ್ಯೆಯ ದಿನದಂದು ಪಿತೃ ಪಕ್ಷದ ದಿನ ತೀರಿಹೋದ ಕುಟುಂಬಸ್ಥರು ಭೂಮಿಗೆ ಪ್ರಾಣಿ ಪಕ್ಷಿಗಳ ರೂಪದಲ್ಲಿ ಭೇಟಿ ಕೊಡುತ್ತಾರೆ. ಅವರಿಗೆ ಪೂಜೆ ಸಲ್ಲಿಸಿ ಸತ್ತವರಿಗೆ ಇಷ್ಟವಾದ ಭಕ್ಷಭೋಜನ ತಯಾರಿಸಿ ನೈವೇದ್ಯ ಮಾಡುವುದು ವೈದಿಕರು ಹುಟ್ಟುಹಾಕಿದ ಪರಂಪರಾಗತ ಆಚರಣೆಯಾಗಿದೆ. ತೀರಿಕೊಂಡವರು ಮಾಂಸಪ್ರಿಯರಾಗಿದ್ದರೆ ವಿವಿಧ ಬಗೆಯ ಮಾಂಸದಡುಗೆ ಮಾಡಿ ಪಿತೃಗಳ ಆತ್ಮಗಳನ್ನು ಸಂತೃಪ್ತಿಪಡಿಸುವ ನಂಬಿಕೆ ರೂಢಿಗತವಾಗಿ ಬಂದಿದೆ. ಆದರೆ ಗಾಂಧಿ ಜಯಂತಿಯಂದು ಸರಕಾರ ಪ್ರಾಣಿವಧೆ ಹಿಂಸೆಯನ್ನು ನಿರ್ಬಂಧಿಸಿರುವುದರಿಂದ ಮಾಂಸಾಹಾರ ಇಲ್ಲದೇ ಹೇಗೆ ಪಿತೃಗಳ ಆತ್ಮಗಳನ್ನು ತೃಪ್ತಿಪಡಿಸುವುದು ಎನ್ನುವ ಸಂದಿಗ್ಧತೆಯಲ್ಲಿ ನಾನ್ ವೆಜ್ಜಿಗರಿದ್ದಾರೆ. 

ಕೆಲವರು ಒಂದು ದಿನ ಮುಂಚೆಯೇ  ಪಿತೃಪಕ್ಷ ಆಚರಿಸಿ ಮುಂಗಡವಾಗಿ ಪಿತೃಗಳ ಆತ್ಮಗಳನ್ನು ಆಹ್ವಾನಿಸಿ ನೈವೇದ್ಯ ಅರ್ಪಿಸಿ ತಾವೂ ತಿಂದುಂಡು ತೃಪ್ತರಾಗಿದ್ದಾರೆ. ಇನ್ನು ಕೆಲವರು ಒಂದು ದಿನ ಮುಂಗಡವಾಗಿಯೇ ಮಾಂಸ ಖರೀದಿಸಿ ತಂದು ಫ್ರಿಜ್ಜಿನಲ್ಲಿಟ್ಟುಕೊಂಡು ಪಿತೃಪಕ್ಷದ ದಿನದಂದೇ ಸಂತೃಪ್ತಿ ಪಡೆಯುವ ಉದ್ದೇಶ ಹೊಂದಿದ್ದಾರೆ. ಒಟ್ಟಾರೆಯಾಗಿ ಗಾಂಧಿ ಜಯಂತಿಯ ದಿನ ಪ್ರಾಣಿವಧೆ ಮಾಡುವಂತಿಲ್ಲ, ಮಾಂಸದ ಮಾರಾಟ ಮಾಡುವಂತಿಲ್ಲ ಆದರೆ ತಿನ್ನುವುದಕ್ಕೇನೂ ನಿರ್ಬಂಧವಿಲ್ಲವಲ್ಲಾ. ಹೀಗಾಗಿ ಅಕ್ಟೋಬರ್ ಎರಡರ ಬದಲಾಗಿ ಒಂದರಂದೇ ಪ್ರಾಣಿಗಳ ಹತ್ಯೆ ಅವ್ಯಾಹತವಾಗಿ ನಡೆದು ಗಾಂಧಿ ಜಯಂತಿಯಂದು ತೀರಿಕೊಂಡವರ ಹೆಸರಲ್ಲಿ ಮಾಡಲಾಗುವ ಮಾಂಸಾಹಾರ ಸೇವನೆ ಶಾಸ್ತ್ರೋಕ್ತವಾಗಿ ನೆರವೇರುವುದು ಶತಸಿದ್ಧ.

ಗಾಂಧಿಯವರ ಅಹಿಂಸಾವಾದವನ್ನು ಪ್ರಾಣಿವಧೆಗೆ ಮಾತ್ರ ಸೀಮಿತಗೊಳಿಸಿ ಬಹುಸಂಖ್ಯಾತರ ಆಹಾರ ಕ್ರಮವನ್ನು ನಿಯಂತ್ರಿಸುವುದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ. ಆಹಾರ ಎನ್ನುವುದು ಅವರವರ ಅಭೀಷ್ಟೆಯಾಗಿರುವಾಗ ಇಂತಹುದನ್ನೇ ತಿನ್ನಬೇಕು, ಇದನ್ನು ಬಿಡಬೇಕು ಎನ್ನುವುದು ಆಹಾರ ಸಂಸ್ಕೃತಿಯ ಮೇಲೆ ಮಾಡುವ ಅಪಚಾರ ಅಲ್ಲವೇ? ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕೀಳು ಎನ್ನುವ ಸಂಕಥನ ಯಾರಿಂದ ಯಾಕೆ ಹುಟ್ಟುಹಾಕಲಾಗಿದೆ? ಇಂತಹ ಕೆಲವಾರು ಪ್ರಶ್ನೆಗಳು ಕಾಡದೇ ಇರದು.

ಗಾಂಧಿಯವರು ಪ್ರತಿಪಾದಿಸಿದ್ದು ಅಹಿಂಸಾ ಚಳುವಳಿ. ಅಂದರೆ ಯಾರಿಗೂ ಯಾರೂ ಹಿಂಸೆ ಮಾಡದೇ, ಹತ್ಯೆ ರಕ್ತಪಾತವಿಲ್ಲದೇ ಸತ್ಯ ಹಾಗೂ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುವುದೇ ಗಾಂಧೀಜಿಯವರ ಅಹಿಂಸಾ ಹೋರಾಟದ ತಿರುಳಾಗಿತ್ತು. ಹಿಂಸೆಯಿಂದ ಹಿಂಸೆಯೇ ಸೃಷ್ಟಿಯಾಗುತ್ತದೆ ಹೀಗಾಗಿ ಎದುರಾಳಿಗಳು ಹಿಂಸೆಗೆ ಇಳಿದರೂ ಅಪಾರವಾದ ತಾಳ್ಮೆ ಹಾಗೂ ಅಹಿಂಸೆಯಿಂದ ಅವರನ್ನು ಎದುರಿಸಬೇಕು ಎನ್ನುವುದೇ ಗಾಂಧೀಜಿಯವರ ಆಶಯವಾಗಿತ್ತು.  ಮನುಷ್ಯರ ಮೇಲೆ ಮನುಷ್ಯರು ಮಾಡುವ ಹಿಂಸೆಯನ್ನು ಗಾಂಧೀಜಿ ಪ್ರಭಲವಾಗಿ ವಿರೋಧಿಸಿ, ಹಿಂಸೆಯನ್ನು ಅಹಿಂಸೆಯಿಂದ ಎದುರಿಸಬೇಕು ಎಂದು ತಮ್ಮ ಆಚರಣೆ ಹಾಗೂ ವಿವೇಚನೆಗಳಿಂದ  ಅಹಿಂಸಾ ಪರಂಪರೆಯನ್ನು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ್ದರು.

ಆದರೆ ಗಾಂಧಿಯೋತ್ತರ ಕಾಲದ ಜನರು ಹಾಗೂ ನಾಯಕರುಗಳು ಗಾಂಧೀಜಿ ಪ್ರಾಣಿಹಿಂಸೆಯನ್ನು ವಿರೋಧಿಸಿದ್ದರು, ಮಾಂಸಾಹಾರದ ವಿರುದ್ಧವಾಗಿದ್ದರು ಎಂಬರ್ಥದಲ್ಲಿ ಪ್ರಚಾರಕ್ಕಿಳಿದರು. ವೈದಿಕಶಾಹಿಗಳು ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹವನ್ನು ಆಹಾರ ಸಂಸ್ಕೃತಿಗೆ ಸಮೀಕರಿಸಿ ಪ್ರಾಣಿಹಿಂಸೆಯನ್ನು ಖಂಡಿಸುವ, ಮಾಂಸಾಹಾರವನ್ನು ಕೀಳೆಂದು ದೂಷಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಗೋಹತ್ಯೆ ಹಾಗೂ ಗೋಮಾಂಸ ಭಕ್ಷಣೆಯನ್ನೇ  ನಿಷೇಧಿಸುವ ಕಾನೂನನ್ನೇ ಜಾರಿಯಾಗುವಂತೆ ಮಾಡಿದರು.

ಇದು ನಿಜಕ್ಕೂ ಮನುಕುಲಕ್ಕೆ ಮಾಡುವ ಅಪಚಾರ. ಯಾಕೆಂದರೆ ಆಹಾರ ಸಂಸ್ಕೃತಿ ಎನ್ನುವುದು ತೀರಾ ವ್ಯಕ್ತಿಗತವಾದದ್ದು. ಅದರಲ್ಲಿ ಮೇಲು ಕೀಳು ಎನ್ನುವ ತಾರತಮ್ಯವೇ ಹಿಂಸಾತ್ಮಕವಾದದ್ದು. ಜಗತ್ತಿನಲ್ಲಿ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳ ಸಂಖ್ಯೆಯೇ ಹೆಚ್ಚಿದೆ. ಧರ್ಮ ಕರ್ಮದ ಹೆಸರಲ್ಲಿ ಪುರೋಹಿತಶಾಹಿ ವರ್ಗ ಮಾಂಸಾಹಾರಿಗರ ಮೇಲೆ ಹಿಂಸೆಯ ಆರೋಪವನ್ನು ಮಾಡುವುದು, ಮಾಂಸಾಹಾರಿಗಳನ್ನು ನೈತಿಕತೆಯ ನ್ಯಾಯಾಲಯದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪಾಪಪ್ರಜ್ಞೆಯನ್ನುಂಟುಮಾಡುವುದು ಅಕ್ಷಮ್ಯ. 

ಅಹಿಂಸಾವಾದಿ ಗಾಂಧೀಜಿಯನ್ನೇ ಹಿಂಸಾತ್ಮಕವಾಗಿ ಕೊಲೆ ಮಾಡಿದ ಹಾಗೂ ಮಾಡಿಸಿದ ಸನಾತನಿಗಳೇ ಪ್ರಾಣಿವಧೆಯನ್ನು ಖಂಡಿಸುವ ಹಾಗೂ ಮಾಂಸಾಹಾರವನ್ನು ವಿರೋಧಿಸುವ ನಿಲುವನ್ನು ಸಮರ್ಥಿಸಿಕೊಳ್ಳುವುದೇ ವಿಪರ್ಯಾಸ. ಗಾಂಧಿಯವರು ಮನುಷ್ಯರ ಮೇಲೆ ಮನುಷ್ಯರು ಮಾಡುವ ಹಿಂಸೆಯನ್ನು ವಿರೋಧಿಸಿ ಅಹಿಂಸಾ ತತ್ವವನ್ನು ಅನುಷ್ಠಾನಕ್ಕೆ ತಂದರು. ಆದರೆ ಈ ಪುರೋಹಿತಶಾಹಿ ವರ್ಗದವರು ಪ್ರಾಣಿಹಿಂಸೆಯನ್ನೇ ಹಿಂಸೆಯೆಂದು ಪ್ರಚಾರಪಡಿಸಿ ದೇವರು ಹಾಗೂ ಧರ್ಮರಕ್ಷಣೆಯ ಹೆಸರಲ್ಲಿ ಮನುಷ್ಯರ ಮೇಲೆ ಹಲ್ಲೆ ಹತ್ಯೆ ಹಿಂಸೆಗಳನ್ನು ಬೆಂಬಲಿಸಿದರು. ಗಾಂಧಿಯಂತಹ ಗಾಂಧಿಯನ್ನೇ ಕೊಂದರು.

ಗಾಂಧಿಯವರ ಆಶ್ರಮವಾಸಿಯೊಬ್ಬರಿಗೆ ಕ್ಯಾನ್ಸರ್ ಉಲ್ಬಣಗೊಂಡು ಬಳಲುತ್ತಿದ್ದಾಗ ದಯಾಮರಣ ನೀಡಬೇಕೋ ಬೇಡವೋ ಎನ್ನುವ ಚರ್ಚೆ ಬಂದಾಗ ಗಾಂಧೀಜಿಯವರು ದಯಾಮರಣವೇ ಸೂಕ್ತವೆಂದು ತೀರ್ಮಾನಿಸಿದರು. ಇಲ್ಲಿ ಹಿಂಸೆ ಅಹಿಂಸೆಗಿಂತಲೂ ಗಾಂಧೀಜಿಗೆ ಮಾನವೀಯತೆ ಮುಖ್ಯವೆನಿಸಿತ್ತು. ಸ್ವಾತಂತ್ರ್ಯ ಘೋಷಣೆಯಾದಾಗ ಎರಡೂ ಧರ್ಮದ ಮತಾಂಧರೆಲ್ಲಾ ಅಪಾರ ಪ್ರಮಾಣದಲ್ಲಿ ಹಿಂಸೆಗಿಳಿದಾಗ ಗಾಂಧಿ ಅದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಮನುಷ್ಯರಿಂದ ಮನುಷ್ಯರ ಮೇಲಾಗುವ ಹಿಂಸೆಯ ವಿರುದ್ಧ ಗಾಂಧಿ ಸತ್ಯಾಗ್ರಹದ ಹಾದಿ ಹಿಡಿದಿದ್ದರೇ ಹೊರತು ಆಹಾರಕ್ಕಾಗಿ  ಪ್ರಾಣಿಹತ್ಯೆ ಮಾಡುವವರ ವಿರುದ್ಧವಲ್ಲ. ಮಾಂಸಾಹಾರಿಗಳ ವಿರುದ್ಧವೂ ಅಲ್ಲ. ಆದರೆ ಗಾಂಧಿ ಕಾಲವಶರಾದ ನಂತರ ಪುರೋಹಿತಶಾಹಿ ವರ್ಗವು ಹಿಂಸೆಯನ್ನು ಪ್ರಾಣಿಹತ್ಯೆಗೆ ಸೀಮಿತಗೊಳಿಸಿತು. ಹಾಗೂ ಮಾಂಸಾಹಾರಿ ಮನುಷ್ಯರನ್ನು ಕೀಳಾಗಿ ಕಾಣುವ ಮಾನಸಿಕ ಹಿಂಸಾತ್ಮಕತೆಯನ್ನು ಧರ್ಮದ ಹೆಸರಲ್ಲಿ ಸೃಷ್ಟಿಸಿತು. 

ವೈದಿಕಶಾಹಿಗಳ ಇಚ್ಚೆಯಂತೆ ದೇಶವಾಸಿಗಳೆಲ್ಲಾ ಕಡ್ಡಾಯವಾಗಿ ಸಸ್ಯಾಹಾರಿಗಳಾದರೆ ದೇಶಾದ್ಯಂತ ಆಹಾರದ ಅಭಾವ ಉಂಟಾಗಿ ಅರ್ಧಕ್ಕರ್ಧ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಉದ್ಭವವಾಗುತ್ತದೆ. ಪೃಕೃತಿ ಸೃಷ್ಟಿಸಿದ ಆಹಾರದ ಸರಪಳಿಯನ್ನು ವಿಕೃತ ಗೊಳಿಸಿದಷ್ಟೂ ಅನಾಹುತಗಳೇ ಹೆಚ್ಚಾಗುತ್ತವೆ. ಮಾಂಸಾಹಾರ ಪ್ರಕೃತಿದತ್ತವಾದದ್ದು, ಸಸ್ಯಾಹಾರ ಮನುಷ್ಯ ರೂಢಿಸಿಕೊಂಡದ್ದು. ಹಾಗಂತ ಸಸ್ಯಾಹಾರವನ್ನಾಗಲೀ ಇಲ್ಲವೇ ಮಾಂಸಾಹಾರವನ್ನಾಗಲೀ ಸಮರ್ಥಿಸಿಕೊಳ್ಳುವುದೇ ತಪ್ಪು. ಅವರವರ ಆಹಾರ ಅವರವರಿಗೆ. ವೆಜ್ ದೇವರುಗಳನ್ನು ಸೃಷ್ಟಿಸಿದ ಹಾಗೆಯೇ ನಾನ್ವೆಜ್ ದೇವರುಗಳನ್ನೂ ಹುಟ್ಟಿಸಲಾಗಿದೆ. ಹಾಗೆ ನೋಡಿದರೆ ವೆಜ್ ದೇವರುಗಳೇ ಅಲ್ಪಸಂಖ್ಯಾತವಾಗಿವೆ. ಮೇಲ್ವರ್ಗದ ಮೇಲ್ಜಾತಿಯ ದೇವರುಗಳು, ಪುರೋಹಿತರು ಹಾಗೂ ಭಕ್ತರುಗಳು ಸಸ್ಯಾಹಾರಿಗಳಾಗಿದ್ದರೆ, ಬಹುಸಂಖ್ಯಾತ ಕೆಳ ತಳ ಸಮುದಾಯದ ದೇವರುಗಳು, ಅರ್ಚಕರು, ಭಕ್ತರುಗಳು ಮಾಂಸಾಹಾರಿಗಳಾಗಿದ್ದಾರೆ. ಆದರೂ ಈ ಅಲ್ಪಸಂಖ್ಯಾತ ವೈದಿಕಶಾಹಿವರ್ಗ ಬಹುಸಂಖ್ಯಾತರ ಆಹಾರ ಪದ್ದತಿಯನ್ನು ಹೀಗಳೆಯುವ, ತಿರಸ್ಕರಿಸುವ ಇಲ್ಲವೇ ಬಹಿಷ್ಕರಿಸುವ ಮನಸ್ಥಿತಿಯೇ ಅಮಾನವೀಯವಾಗಿದೆ. ಹಿಂದೂ ಧರ್ಮದಲ್ಲಿರುವ ಬಹುಸಂಖ್ಯಾತ ಮಾಂಸಾಹಾರಿಗಳಲ್ಲೂ ಒಂದು ರೀತಿಯ ಅಪರಾಧಿ ಮನೋಭಾವವನ್ನು ಬಿತ್ತಲಾಗಿದೆ. ಸೋಮವಾರ ಶನಿವಾರ ಮಾಂಸ ತಿನ್ನಬಾರದು, ದೇವರ ಕಾರ್ಯಗಳಿದ್ದಾಗ ನಾನ್ ವೆಜ್ ತ್ಯಜಿಸಬೇಕು, ಶ್ರಾವಣ ಮಾಸದಲ್ಲಿ ಮಾಂಸವನ್ನು ಮುಟ್ಟಲೇಬಾರದು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಲೇಬಾರದು.. ಎಂಬಂತಹ ನಿರ್ಬಂಧಗಳನ್ನು ಹೇರಿ  ಮಾಂಸಾಹಾರಿಗರಲ್ಲೂ ಭಯಾತಂಕಗಳನ್ನು ಹುಟ್ಟುಹಾಕಲಾಗಿದೆ. ಸಸ್ಯಾಹಾರ ಪವಿತ್ರ ಹಾಗೂ ಮಾಂಸಾಹಾರ ಅಪವಿತ್ರ ಎನ್ನುವ ವಿಕ್ಷಿಪ್ತ ಅತಾರ್ಕಿಕ  ಮೌಢ್ಯವನ್ನು ಬಿತ್ತಲಾಗಿದೆ. ಪ್ರಾಣಿಗಳ ಹತ್ಯೆ ಮಾಡಿ ಹಸಿವು ತೀರಿಸಿಕೊಳ್ಳುವುದು ಹಿಂಸೆಯಾದರೆ, ಮನುಷ್ಯರು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಹೇರಿಕೆ ಮಾಡುವುದು, ತಿನ್ನುವ ಆಹಾರದಲ್ಲೂ ತಾರತಮ್ಯಮಾಡುವುದು, ಆಹಾರಕ್ರಮವನ್ನು ಆಧರಿಸಿ ಮೇಲುಕೀಳು ನಿರ್ಧರಿಸುವುದು ನಿಜವಾದ ಅರ್ಥದಲ್ಲಿ ಹಿಂಸೆಯಾಗಿದೆ.

ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ

ಇದನ್ನೂ ಓದಿ- ಗಾಂಧಿ ಸ್ಮರಣೆ | ಗಾಂಧಿ, ದೇಶದ ಜನರ ಹೃದಯದ ಸ್ಥಾಯೀಭಾವ

More articles

Latest article