ನಾಗಮಂಗಲದಲ್ಲಿ ಹೊತ್ತಿ ಉರಿದ ಕೋಮು ವಿವಾದದ ಬಗ್ಗೆ ಪ್ರಧಾನಿಗಳು ಮಾತಾಡಲಿಲ್ಲ. ಗಲಭೆಯ ಬೆಂಕಿಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರ ಸಂಕಷ್ಟದ ಕುರಿತು ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಪೊಲೀಸರ ವೈಫಲ್ಯ, ಹಿಂದೂ ಮತಾಂಧರ ಅತಿರೇಕ ಹಾಗೂ ಮುಸ್ಲಿಂ ಮತಾಂಧರ ಪ್ರತೀಕಾರಗಳ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ‘ಗಣೇಶನ ವಿಗ್ರಹವನ್ನು ಕಾಂಗ್ರೆಸ್ ಪಕ್ಷ ಕಂಬಿ ಹಿಂದೆ ದೂಡಿದೆ” ಎಂದು ನಡೆಯದೇ ಇರುವ ಘಟನೆಯನ್ನು ಘಟಿಸಿದೆ ಎಂಬಂತೆ ಹರಿಯಾಣದ ಜನತೆಗೆ ಸುಳ್ಳು ಹೇಳಿ ಮತ ಪಡೆಯುವ ಹುನ್ನಾರ ನಡೆಸಿದ ಮೋದಿಯವರ ನಡೆ ಹಿಂದೂಗಳ ತುಷ್ಟೀಕರಣ ಅಲ್ಲವೇ? -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳಲು ನಾಚಿಕೆಯೇ ಆಗುತ್ತಿಲ್ಲ” ಎಂದು ಪ್ರಧಾನ ಮಂತ್ರಿಗಳು ಸೆಪ್ಟಂಬರ್ 13 ರಂದು ಹರಿಯಾಣದ ಕುರುಕ್ಷೇತ್ರದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಹೇಳಿದ್ದು ಕರ್ನಾಟಕದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಲಿಲ್ಲ. ಯಾಕೆಂದರೆ ಪ್ರಧಾನಿಗಳೇ ನಡೆಯದ ಘಟನೆಯನ್ನು ಊಹಿಸಿಕೊಂಡು ಯಥಾಪ್ರಕಾರ ಸುಳ್ಳನ್ನೇ ಹೇಳಿ ಜನರನ್ನು ನಂಬಿಸಲು ಭಾಷಣಿಸಿದ್ದರು. ಅಂತಹ ಹಸಿ ಸುಳ್ಳನ್ನು ಪ್ರಚಾರ ಮಾಡಿ ಜೀರ್ಣಿಸಿಕೊಳ್ಳುವುದು ಕರ್ನಾಟಕದ ಗೋದಿ ಮಾಧ್ಯಮಗಳಿಗೆ ಕಷ್ಟದ ಕೆಲಸವಾಗಿತ್ತು.
ಇಷ್ಟಕ್ಕೂ ಆಗಿದ್ದೇನು ಅಂದರೆ, ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಎರಡೂ ಕೋಮಿನ ಯುವಕರ ನಡುವೆ ಸಂಘರ್ಷವಾಗಿತ್ತು. ಗಲಭೆಯಲ್ಲಿ ಭಾಗಿದಾರರಾಗಿದ್ದ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದನ್ನು ವಿರೋಧಿಸಲು ಹಿಂದೂಗಳ ಪರವಾಗಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಸಂಘ ಪರಿವಾರದ ಗುಂಪೊಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಗುಂಪಿನವರು ಗಣೇಶ ಮೂರ್ತಿಯನ್ನೂ ತಂದಿಟ್ಟು ಪ್ರತಿಭಟನೆ ಭಾಷಣ ಘೋಷಣೆ ಶುರುಮಾಡಿದ್ದರು. ಪೊಲೀಸರು ಆ ಗಣೇಶನ ಮೂರ್ತಿಯನ್ನು ವಶಪಡಿಸಿಕೊಂಡು ತಮ್ಮ ಜೀಪಿನಲ್ಲಿಟ್ಟುಕೊಂಡು ನಂತರ ವಿಸರ್ಜನೆಯನ್ನೂ ಮಾಡಿ ತಮ್ಮ ಕರ್ತವ್ಯ ಮಾಡಿದ್ದರು.
ನಡೆದಿದ್ದು ಇಷ್ಟೇ.. ಆದರೆ ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಮೋದಿಯವರಿಗೆ ಈ ಸುದ್ದಿ ತಲುಪಿದ್ದೇ ತಡ ವಿಷಯವನ್ನು ತಿರುಚಿ ಕಾಂಗ್ರೆಸ್ ವಿರುದ್ಧ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸ ಮಾಡಿದರು. ಅದಕ್ಕೆ ಅವರು ಬಳಸಿದ್ದು ಸುಳ್ಳಾಸ್ತ್ರ.
ಇಷ್ಟಕ್ಕೂ ಪ್ರಧಾನಿಗಳು ಹೇಳಿದ್ದೇನೆಂದರೆ.. “ತುಷ್ಟೀಕರಣ ರಾಜಕಾರಣ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಗುರಿಯಾಗಿದೆ. ಈಗ ಪರಿಸ್ಥಿತಿ ಏನಾಗಿದೆ ಎಂದರೆ, ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಗಣೇಶನ ಮೂರ್ತಿಯನ್ನೂ ಕಂಬಿಯ ಹಿಂದೆ ದೂಡಲಾಗುತ್ತದೆ” ಎಂದು ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ತಮ್ಮ ಮಿಥ್ಯಾರೋಪ ಶುರುಮಾಡಿದ್ದರು.
ನಾಗಮಂಗಲದಲ್ಲಿ ಹೊತ್ತಿ ಉರಿದ ಕೋಮು ವಿವಾದದ ಬಗ್ಗೆ ಪ್ರಧಾನಿಗಳು ಮಾತಾಡಲಿಲ್ಲ. ಗಲಭೆಯ ಬೆಂಕಿಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರ ಸಂಕಷ್ಟದ ಕುರಿತು ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಪೊಲೀಸರ ವೈಫಲ್ಯ, ಹಿಂದೂ ಮತಾಂಧರ ಅತಿರೇಕ ಹಾಗೂ ಮುಸ್ಲಿಂ ಮತಾಂಧರ ಪ್ರತೀಕಾರಗಳ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ‘ಗಣೇಶನ ವಿಗ್ರಹವನ್ನು ಕಾಂಗ್ರೆಸ್ ಪಕ್ಷ ಕಂಬಿ ಹಿಂದೆ ದೂಡಿದೆ” ಎಂದು ನಡೆಯದೇ ಇರುವ ಘಟನೆಯನ್ನು ಘಟಿಸಿದೆ ಎಂಬಂತೆ ಹರಿಯಾಣದ ಜನತೆಗೆ ಸುಳ್ಳು ಹೇಳಿ ಮತ ಪಡೆಯುವ ಹುನ್ನಾರ ನಡೆಸಿದ ಮೋದಿಯವರ ನಡೆ ಹಿಂದೂಗಳ ತುಷ್ಟೀಕರಣ ಅಲ್ಲವೇ? ಘಟನೆಯೊಂದನ್ನು ತಮಗೆ ಬೇಕಾದಂತೆ ತಿರುಚಿ ಕೋಮುಭಾವನೆ ಕೆರಳಿಸಿ ಮತಗಳ ಕ್ರೋಢೀಕರಣ ಮಾಡುವ ಮೋದಿಯವರದ್ದು ಮತಬ್ಯಾಂಕ್ ರಾಜಕಾರಣ ಅಲ್ಲವೇ?
ಇರಲಿ.. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಮತಕ್ಕಾಗಿ ಆ ಸಮುದಾಯದವರನ್ನು ತುಷ್ಟೀಕರಣ ಮಾಡುತ್ತಿದೆ ಎಂದೇ ನಂಬೋಣ. ಆದರೆ ಈ ಮೋದಿ ಹಾಗೂ ಅವರ ಪರಿವಾರ ಮಾಡುತ್ತಿರುವುದಾದರೂ ಏನು? ಕಾಂಗ್ರೆಸ್ ಮುಸಲ್ಮಾನರ ತುಷ್ಟೀಕರಣ ಮಾಡುತ್ತಿದ್ದರೆ ಈ ಬಿಜೆಪಿ ಹಿಂದುತ್ವದ ಹೆಸರಲ್ಲಿ ಹಿಂದೂಗಳ ತುಷ್ಟೀಕರಣ ಮಾಡಿ ಮತಗಳನ್ನು ಕ್ರೋಢೀಕರಣ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆಯಲ್ಲವೇ?
“ಕರ್ನಾಟಕದಲ್ಲಿ ವಿಘ್ನ ನಿವಾರಕನ ಪೂಜೆಗೂ ವಿಘ್ನ ಸೃಷ್ಟಿಸಲಾಗುತ್ತಿದೆ” ಎಂದು ಮೋದೀಜಿ ಹೇಳಿರುವುದರಲ್ಲೂ ಸತ್ಯವೇನಿಲ್ಲ. ಯಾಕೆಂದರೆ ಕರ್ನಾಟಕದಾದ್ಯಂತ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ. ನಗರಗಳ ಬೀದಿ, ಗಲ್ಲಿ, ಸರ್ಕಲ್ ಗಳಲ್ಲಿ ಬೇರೆ ಬೇರೆ ಗುಂಪುಗಳಿಂದ ಒಂದು ತಿಂಗಳುಗಳ ಕಾಲ ಗಣೇಶನನ್ನು ಕೂಡಿಸಿ ವಿಜೃಂಭಿಸಲಾಗುತ್ತಿದೆ. ಇದಕ್ಕೆ ಬೇಕಾದ ಅನುಕೂಲಗಳನ್ನು ಸ್ಥಳೀಯ ಆಡಳಿತಾಂಗದಿಂದ ಮಾಡಿಕೊಡಲಾಗುತ್ತಿದೆ. ಹೀಗಿರುವಾಗ ಯಾವುದೋ ಒಂದು ಘಟನೆಯನ್ನು ಆಧರಿಸಿ ಇಡೀ ಕರ್ನಾಟಕದಲ್ಲಿ ವಿಘ್ನೇಶ್ವರನ ಪೂಜೆಗೆ ವಿಘ್ನ ಸೃಷ್ಟಿಸಲಾಗುತ್ತಿದೆ ಹಾಗೂ ಅದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ ಎನ್ನುವ ಹೇಳಿಕೆಯೇ ಕೋಮು ಭಾವನೆ ಪ್ರಚೋದಿಸುವಂತಹುದ್ದಾಗಿದೆ.
ಈ ಹಿಂದುತ್ವವಾದಿಗಳು ಧರ್ಮದ ಹೆಸರಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಕೋಮು ವಿಷವನ್ನು ತುಂಬಿದ ದುಷ್ಪರಿಣಾಮವೇ ನೆಲಮಂಗಲದ ಘಟನೆಗೆ ಮುಖ್ಯ ಕಾರಣವಾಗಿದೆ. ಮಸೀದಿ ಮುಂದೆಯೇ ಗಣೇಶನ ಮೆರವಣಿಗೆ ಹೊರಡಬೇಕು, ದರ್ಗಾ ಮುಂದೆಯೇ ಡಿಜೆ ಸೌಂಡ್ ಹಾಕಿ ಪಟಾಕಿ ಹೊಡೆದು ಕುಣಿಯಬೇಕು ಎನ್ನುವುದು ಹಿಂದುತ್ವವಾದಿ ನಶೆ ಏರಿಸಿಕೊಂಡ ಹಿಂದೂ ಸಂಜಾತ ಯುವಕರ ಹಠ. ಈ ಪ್ರಚೋದನಾ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂಸಾತ್ಮಕ ಪ್ರತಿರೋಧ ತೋರಿದ್ದು ಮುಸ್ಲಿಂ ಮತಾಂಧತೆಯ ವಿಷ ತಲೆಗೆ ತುಂಬಿಕೊಂಡ ಯುವಕರ ಆಕ್ರೋಶ. ಸೌಹಾರ್ದಯುತವಾಗಿ ಸಾಗಬೇಕಾಗಿದ್ದ ಗಣೇಶನ ಮೆರವಣಿಗೆಯಲ್ಲಿ ಸಂಘರ್ಷ ಉಂಟಾಗಲು ಪ್ರಮುಖ ಕಾರಣವೇ ಈ ಸಂಘಿಗಳು ಆರಂಭಿಸಿದ ಕೋಮು ವಿಭಜನಾ ಸಿದ್ಧಾಂತ. ಹೀಗೆ ಸ್ವಧರ್ಮ ಶ್ರೇಷ್ಠತೆ ಹಾಗೂ ಅನ್ಯಧರ್ಮ ದ್ವೇಷವನ್ನು ಈ ದೇಶದಲ್ಲಿ ಬಿತ್ತಿ ಬೆಳೆದಿದ್ದೇ ಈ ಸಂಘಿ ನಾಯಕರುಗಳು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಮೋದಿಯವರು ತಮ್ಮ ಸ್ಥಾನಮಾನದ ಎಲ್ಲಾ ಎಲ್ಲೆಗಳನ್ನೂ ಮೀರಿ ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಮುಸ್ಲಿಂ ಸಮುದಾಯದ ಮೇಲಿನ ದ್ವೇಷವನ್ನು ಬಳಸಿಕೊಂಡರು. ಮೋದಿ ಭಕ್ತರು ಹಾಗೂ ಹಿಂದುತ್ವವಾದಿ ಸಮರ್ಥಕರು ಮುಸ್ಲಿಂ ಸಮುದಾಯ ಎಂದರೆ ಹಿಂದೂಗಳ ವಿರೋಧಿಗಳು ಎಂದು ನಂಬಿ ಈರ್ಷೆ ಪಡುವಂತೆ ಮಾಡಿದ್ದೂ ಇದೇ ಸಂಘ ಪರಿವಾರ ಹಾಗೂ ಮೋದಿಯವರು. ನಾಗಮಂಗಲದ ಕೋಮು ಗಲಭೆಗೆ ಪೊಲೀಸ್ ವೈಫಲ್ಯ ಎಷ್ಟು ಕಾರಣವೋ ಅದಕ್ಕಿಂತ ಹೆಚ್ಚು ಕಾರಣ ಈ ಎರಡೂ ಸಮುದಾಯಗಳ ಯುವಕರಲ್ಲಿ ಹಾಸುಹೊಕ್ಕಾಗಿರುವ ಕೋಮುದ್ವೇಷ. ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡವರು ಹಾಗೂ ಧರ್ಮದ ಆಧಾರದಲ್ಲಿ ದೇಶ ಕಟ್ಟಬೇಕೆಂದು ಹೊರಟಿರುವವರು ಈ ಹಿಂದುತ್ವ ಸಿದ್ಧಾಂತವಾದಿ ಸಂಘಿಗಳು. ದೇಶವಾಳುವ ಅಧಿಕಾರಕ್ಕಾಗಿ ಹಿಂದುಗಳಲ್ಲಿ ಮುಸ್ಲಿಂ ದ್ವೇಷವನ್ನೂ, ಮುಸಲ್ಮಾನರಲ್ಲಿ ಹಿಂದೂ ದ್ವೇಷವನ್ನೂ ಹುಟ್ಟು ಹಾಕಿದವರೂ ಇದೇ ಮೋದಿಯಾದಿಯಾಗಿ ಸಂಘಿ ನಾಯಕರುಗಳು.
ಹೀಗಾಗಿ ದೇಶದಲ್ಲಿ ಎಲ್ಲಿಯೇ ಕೋಮುಗಲಭೆಗಳಾದರೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಈ ಹಿಂದುತ್ವವಾದಿ ಸಂಘಿ ಸಿದ್ಧಾಂತದ ಪ್ರಭಾವ ಇದ್ದೇ ಇರುತ್ತದೆ. ನಾಗಮಂಗಲ ಗಣೇಶ ಮೆರವಣಿಗೆಯಲ್ಲಾದ ಕೋಮು ಸಂಘರ್ಷದ ಹಿಂದೆಯೂ ಸಹ ಎರಡೂ ಕೋಮುಗಳ ಯುವಕರಲ್ಲಿ ಬಿತ್ತಲಾದ ಧರ್ಮಾಂಧತೆಯೇ ಕಾರಣವಾಗಿದೆ. ವಿಘ್ನೇಶ್ವರನಿಗೆ ವಿಘ್ನ ಬರಲು ಮೋದಿಯಂತವರು ಹುಟ್ಟು ಹಾಕಿದ ಕೋಮುದ್ವೇಷ ಹಾಗೂ ಧರ್ಮಾಧಾರಿತ ಪ್ರಚೋದನೆಯೇ ಪ್ರಮುಖ ಕಾರಣವಾಗಿದೆ.
ಮೋದಿಯವರು ಹೇಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳಲು ನಾಚಿಕೆ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಘಟನೆಯೊಂದನ್ನು ತಿರುಚಿ ಸುಳ್ಳನ್ನು ಸಾರ್ವಜನಿಕವಾಗಿ ಹೇಳಿ ಭಾವಪ್ರಚೋದನೆ ಹುಟ್ಟಿಸಲು ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿರುವ ಮೋದಿಯವರಿಗೆ ಸ್ವಲ್ಪವೂ ನಾಚಿಕೆ ಆಗುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಜನರು ಕೇಳಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ | ನೆನೆಯಬೇಕಾದ ವೈರುಧ್ಯಗಳ ಮಹಿಳೆ- ಕೊರಜಾನೋ ಸಿ. ಆಕ್ವಿನೋ