ಕೌಟುಂಬಿಕ ದೌರ್ಜನ್ಯ ಹೇಳಿಕೆಗಳು : ವಾಸ್ತವ ಏನು?

Most read

ಕೌಟುಂಬಿಕ ದೌರ್ಜನ್ಯದ ಕುರಿತು ಹೆಚ್ಚು ಮಾತನಾಡುವುದಿಲ್ಲವಾದ್ದರಿಂದ ಸಮಾಜದಲ್ಲಿ ಬೇಕಾದಷ್ಟು ಅಸತ್ಯವಾದ ಹೇಳಿಕೆಗಳು ಹರಿದಾಡುತ್ತಿವೆ. ಈ ಅಸತ್ಯಗಳು ದೌರ್ಜನ್ಯವನ್ನು ಗಟ್ಟಿಯಾಗಿ ನೆಲೆಯೂರಲು ಅನುವು ಮಾಡಿಕೊಟ್ಟು ಗಂಡ ದೌರ್ಜನ್ಯ ನಡೆಸುವುದು ಸಹಜ ಎಂಬಂತೆ ಸಮಾಜದಲ್ಲಿ ಚಾಲನೆಯಲ್ಲಿರಲು ನೋಡಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಕೆಲವು ತಪ್ಪು ಕಲ್ಪನೆಗಳ ಒಳಗೆ ಅಡಗಿರುವ ಸತ್ಯವನ್ನು ಗಮನಿಸಿ ಈ ಕುರಿತು ಹೆಚ್ಚು ಮಾತಾಡುವುದನ್ನು ರೂಢಿಸಿಕೊಳ್ಳಬೇಕು.

ಟಿವಿ ಶೋ ಒಂದು ನಡೆಯುತ್ತಿತ್ತು. ಅಲ್ಲಿದ್ದ ಪುರುಷ ವೀಕ್ಷಕರಿಗೆ ಹೆಂಗಸರು ಎಲ್ಲಿ ಹೆಚ್ಚು ಅಸುರಕ್ಷಿತರು ಎಂಬ ಪ್ರಶ್ನೆಯನ್ನು ನಿರೂಪಕರು ಕೇಳುತ್ತಾರೆ. ಪ್ರಯಾಣ ಮಾಡುವಾಗ, ಕತ್ತಲ ಹೊತ್ತು ಓಡಾಡುವಾಗ, ಜನವಸತಿ ಕಡಿಮೆ ಇರುವ ಕಡೆ ಈ ಮುಂತಾದ ಉತ್ತರಗಳು ಬಂದವು. ಆಗ ಕಾರ್ಯಕ್ರಮಕ್ಕೆಂದೇ ತಯಾರು ಮಾಡಿಕೊಂಡಿದ್ದ ಸಮೀಕ್ಷೆಯ ಫಲಿತಾಶವನ್ನು ತೋರಿಸಲಾಯಿತು. ಅದರ ಪ್ರಕಾರ ಸರಿ ಸುಮಾರು 50% ಪ್ರಕರಣಗಳು ಮನೆಯೊಳಗಿನ ಹಿಂಸೆಗೆ ಸಂಬಂಧಿಸಿದ್ದಾಗಿತ್ತು. ಅಂದರೆ ಮನೆಯೇ ಮಹಿಳೆಯರಿಗೆ ಅತೀ ಹೆಚ್ಚಿನ ಅಸುರಕ್ಷಿತ ತಾಣವಾಗಿತ್ತು!

ಕೌಟುಂಬಿಕ ಹಿಂಸೆ ಅಥವಾ ದೌರ್ಜನ್ಯ ಎನ್ನುವುದು ಹಲವು ಸಂದರ್ಭಗಳಲ್ಲಿ ಕಣ್ಣಿಗೆ ಗೋಚರಿಸುವ ರೂಪದಲ್ಲಿದ್ದರೆ ಅನೇಕ ಸಂದರ್ಭಗಳಲ್ಲಿ ಅಗೋಚರ ರೂಪದಲ್ಲಿರುತ್ತದೆ. ಇಂಥ ಅಗೋಚರ ಹಿಂಸೆಯ ಕೇಂದ್ರ ಸ್ಥಾನ ಕುಟುಂಬ ಅಂದರೆ ಅದು ನಂಬಲು ಕಷ್ಟವಾದ ಸತ್ಯ. ಕುಟುಂಬವು ಹೆಣ್ಣಿಗೆ ಭದ್ರತೆಯನ್ನು ಕೊಡುತ್ತದೆ, ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹಕಾರದಂತಹ ಆದರ್ಶ ಮೌಲ್ಯಗಳು ನೆಲೆ ಮಾಡಿವೆ ಎಂಬ ಕಲ್ಪನೆ ಪ್ರಚಲಿತದಲ್ಲಿದೆ. ವಾಸ್ತವ ಏನೆಂದರೆ ಕುಟುಂಬ ಎಂಬ ಸಂಸ್ಥೆಯೊಳಗೆ ನಾಗರಿಕ ಜಗತ್ತನ್ನು ದಿಗ್ಭ್ರಮೆಗೊಳಿಸುವಂತಹ ರೀತಿಯಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತವೆ. ಮೀನು ಸಾರು ಮಾಡಲಿಲ್ಲವೆಂದೋ, ಮುದ್ದೆ ಸರಿಯಾಗಿಲ್ಲವೆಂದೋ, ಹೆಣ್ಣು ಮಗು ಹೆತ್ತಳೆಂದೋ ಕ್ಷುಲ್ಲಕ ನೆಪ ತೆಗೆದು ಹೆಣ್ಣು ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದ ಘಟನೆಗಳಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ.  ಕೌಟುಂಬಿಕ ದೌರ್ಜನ್ಯವು ಗಂಡನಿಂದ ಮಾತ್ರವೇ ನಡೆಯುವುದಲ್ಲ. ಮನೆಯಲ್ಲಿ ಅಧಿಕಾರ ಹೊಂದಿದ ಯಾರಿಂದ ಬೇಕಾದರೂ ನಡೆಯಬಹುದು. ಹೆಣ್ಣಾಗಿ ಹುಟ್ಟಿದ ಮೇಲೆ ಹಿಂಸೆಯನ್ನು ಅನುಭವಿಸುವುದು ಅನಿವಾರ್ಯ ಎಂಬ ಕಲಿಕೆಗೆ ಬದ್ಧವಾಗಿರುವ ಕುಟುಂಬಗಳಲ್ಲಿ ಇಂತಹ ಹಿಂಸೆಯ ವಿರುದ್ಧ ಧ್ವನಿ ಎತ್ತಲು ಹೆಣ್ಣು ಮಕ್ಕಳನ್ನು ಯಾವುದೇ ರೀತಿಯಲ್ಲಿ ತಯಾರು ಮಾಡುವುದಿಲ್ಲ. ಎಂದೇ ಮನೆಯಂತಹ ಖಾಸಗಿ ಸ್ಥಳಗಳಲ್ಲಿ ನಡೆಯುವ ಹಿಂಸೆಯು ಸಾರ್ವಜನಿಕವಾಗಿ ಅತ್ಯಂತ ಕಡಿಮೆ ಚರ್ಚೆಗೆ ಒದಗುವ ಸಂಗತಿಯಾಗಿದೆ. ಒಂದೋ ಇಂಥವುಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಮುಚ್ಚಿಹಾಕಿ ಬಿಡಲಾಗುತ್ತದೆ, ಇಲ್ಲವೇ ಜಾಣತನದಿಂದ ಕ್ಷಮಿಸಿ ಬಿಡಲಾಗುತ್ತದೆ. ದೌರ್ಜನ್ಯ ಅನುಭವಿಸುವ ಬಹು ಮಂದಿಗೆ ಆ ಬಗ್ಗೆ ಮಾತನಾಡುವುದು, ಅದನ್ನು ವಿರೋಧಿಸುವುದು ಮುಜುಗರದ ವಿಷಯವಾಗಿದೆ. ಆದುದರಿಂದ ಅವುಗಳನ್ನು ಬದುಕಿನ ಸಹಜ ಸಂಗತಿಯೆಂದೇ ಪರಿಗಣಿಸಿಕೊಂಡು ಬಹುತೇಕರು ಮೌನವಾಗಿ ಸಹಿಸುತ್ತಲೇ ಬಂದಿದ್ದಾರೆ. ಹೀಗೆ ಮೌನವಾಗಿ ಸಹಿಸುವುದಕ್ಕೆ ಬದುಕಿನಲ್ಲಿ ತೆರುವ ಬೆಲೆ ಮಾತ್ರ ಘೋರವಾಗಿರುತ್ತದೆ.

ಕೌಟುಂಬಿಕ ದೌರ್ಜನ್ಯದ ಕುರಿತು ಹೆಚ್ಚು ಮಾತನಾಡುವುದಿಲ್ಲವಾದ್ದರಿಂದ ಸಮಾಜದಲ್ಲಿ ಬೇಕಾದಷ್ಟು ಅಸತ್ಯವಾದ ಹೇಳಿಕೆಗಳು ಹರಿದಾಡುತ್ತಿವೆ. ಈ ಅಸತ್ಯಗಳು ದೌರ್ಜನ್ಯವನ್ನು ಗಟ್ಟಿಯಾಗಿ ನೆಲೆಯೂರಲು ಅನುವು ಮಾಡಿಕೊಟ್ಟು ಗಂಡ ದೌರ್ಜನ್ಯ ನಡೆಸುವುದು ಸಹಜ ಎಂಬಂತೆ ಸಮಾಜದಲ್ಲಿ ಚಾಲನೆಯಲ್ಲಿರಲು ನೋಡಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಕೆಲವು ತಪ್ಪು ಕಲ್ಪನೆಗಳ ಒಳಗೆ ಅಡಗಿರುವ ಸತ್ಯವನ್ನು ಗಮನಿಸಿ ಈ ಕುರಿತು ಹೆಚ್ಚು ಮಾತಾಡುವುದನ್ನು ರೂಢಿಸಿಕೊಳ್ಳಬೇಕು. ಕೆಲವು ಉದಾಹರಣೆಗಳು ಹೀಗಿವೆ-

1. ಆತ ಮದ್ಯ ಸೇವಿಸಿದಾಗ ಯಾ ಮಾದಕ ದ್ರವ್ಯ ಸೇವಿಸಿದಾಗ ಮಾತ್ರ ಹೊಡೆಯುತ್ತಾನೆ.

ವಾಸ್ತವ:  ಇದೊಂದು ಹೊಡೆಯುವುದಕ್ಕೆ ಕಂಡುಕೊಂಡಿರುವ ನೆಪ. ಕುಡಿತವಾಗಲೀ, ಇನ್ನಿತರ ಯಾವುದೇ ರೀತಿಯ ಅಮಲು ಪದಾರ್ಥಗಳ ಸೇವನೆಯಾಗಲೀ ಹೊಡೆಯುವುದಕ್ಕೆ ಕಾರಣವಾಗುವುದಿಲ್ಲ. ಇಷ್ಟಕ್ಕೂ ಹೊಡೆಯುವ ಎಲ್ಲರೂ ಕುಡುಕರಾಗಿರುವುದಿಲ್ಲ ಮತ್ತು ಕುಡುಕರೆಲ್ಲರೂ ಹೊಡೆಯುವವರಾಗಿರುವುದಿಲ್ಲ ಎಂಬುದನ್ನು ಮುಖ್ಯವಾಗಿ ಇಲ್ಲಿ ಗಮನಿಸಬೇಕು. ಕುಡಿತವನ್ನು ಅವನ ದೌರ್ಬಲ್ಯವೆಂದು ಬಿಂಬಿಸಿ ಅವನ ಹಿಂಸಾತ್ಮಕ ನಡೆವಳಿಕೆಯನ್ನು ಮುಚ್ಚಿಹಾಕುವ ಪ್ರಯತ್ನ ಇದು.

2. ಕೋಪ ಬಂದಾಗ ಮಾತ್ರ ಹೊಡೆಯುತ್ತಾನೆ. ಆತನಿಗೆ ಕೋಪವನ್ನು ತಡೆದುಕೊಳ್ಳಲಾಗುವುದಿಲ್ಲ.

ವಾಸ್ತವ: ಕೌಟುಂಬಿಕ ದೌರ್ಜನ್ಯವು ಒಂದು ಉದ್ದೇಶ ಪೂರ್ವಕ ನಡೆವಳಿಕೆ ಮತ್ತು ಪೀಡಕರು ನಿಯಂತ್ರಣ ತಪ್ಪಿದವರಲ್ಲ. ನಿರ್ಧಿಷ್ಟ ಸಮಯದಲ್ಲಿ, ನಿರ್ಧಿಷ್ಟ ವ್ಯಕ್ತಿಯಮೇಲೆ, ನಿರ್ಧಿಷ್ಟ ಸ್ಥಳದಲ್ಲಿ ಅವರು ಹಿಂಸಾಚಾರವನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಅವರು ಕೋಪ ಬಂದಾಗ ತಮ್ಮ ಮೇಲಧಿಕಾರಿಗಳ ಮೇಲೆ, ಬೀದಿಯ ಜನರ ಮೇಲೆ ತಮ್ಮ ಕೋಪವನ್ನು ತೋರಿಸುವುದಿಲ್ಲ. ನಿಯಂತ್ರಣ ತಪ್ಪುವುದಿಲ್ಲ. ಅಂದರೆ ಅವರು ದೌರ್ಜನ್ಯವನ್ನು ತುಂಬಾ ಖಾಸಗಿಯಾಗಿ ಎಸಗುತ್ತಾರೆ. ಕೆಲವೊಮ್ಮೆ ದೌರ್ಜನ್ಯದ ಯಾವುದೇ ಕುರುಹುಗಳು ಉಳಿಯದಂತೆ ಜಾಗ್ರತೆ ವಹಿಸುತ್ತಾರೆ. ಕೆಲವು ಪೀಡಕರು ಸಿಕ್ಕಾಪಟ್ಟೆ ಸಿಟ್ಟುಗೊಂಡಾಗ ಹೆಚ್ಚು ಶಾಂತವಾಗಿರುತ್ತಾರೆ ಎಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ.

3. ಅವಳೇ ಅವನನ್ನು ಕೆಣಕಿರಬೇಕು.

ವಾಸ್ತವ: ಈ ಅಸತ್ಯವು ಸಮಾಜದಲ್ಲಿ ಆಳವಾಗಿ ಬೇರೂರಿರುವಂತದ್ದು ಮತ್ತು ಬಹಳಷ್ಟು ಅಪಾಯಕಾರಿಯಾದುದು.ʼಆಕೆʼ ಕೆಣಕಿದಳು ಎಂದು ಹೇಳಿದರೆ ಆಕೆಯನ್ನೇ ತಪ್ಪಿತಸ್ಥಳನ್ನಾಗಿಸಿ ಪೀಡಕನನ್ನು ಆತನ ಹಿಂಸಾತ್ಮಕ ಕ್ರಮಗಳಿಂದ ಬಿಡುಗಡೆ ಗೊಳಿಸಿದ ಹಾಗೆ ಆಗುತ್ತದೆ. ಮಹಿಳೆಯ ನಡತೆಯಾಗಲೀ, ಮಾತುಗಳಾಗಲೀ ಹಿಂಸೆಗೆ ಕಾರಣವಾಗುವುದಿಲ್ಲ. ಹಿಂಸೆಗೆ ಅವನೊಬ್ಬನೇ ಜವಾಬ್ದಾರ. ಪ್ರತಿಯೊಬ್ಬ ಪೀಡಕನೂ ಹಿಂಸೆಯ ಜವಾಬ್ದಾರಿಯನ್ನು ತಾನು ಹೊರದೆ ಬೇರೆಯರ ಮೇಲೆ ತೇಲಿ ಬಿಡುತ್ತಾನೆ. ಮೇಲಿನ ಮಾತನ್ನು ವಿಶ್ಲೇಷಿಸುವಾಗ ಈ ಎಲ್ಲ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬೇಕಾದುದು ಅವಶ್ಯ.

4. ಕುಟುಂಬದ ಯಜಮಾನನಾದ ಗಂಡಸು ತನ್ನ ಹೆಂಡತಿಗೆ ಬುದ್ಧಿ ಕಲಿಸಲು ಹೊಡೆಯಬಹುದು.

ವಾಸ್ತವ: ಯಾರು ಯಾರಿಗೂ ಹೊಡೆಯುವ ಹಕ್ಕು ಇಲ್ಲ. ಹೀಗಿರುವಾಗ ಹೆಂಡತಿಯನ್ನು ಹೊಡೆಯುವ ಹಕ್ಕು ಗಂಡನಾದವನಿಗೂ ಇಲ್ಲ. ಗಂಡಸು ಮನೆಯ ಯಜಮಾನ, ಹಾಗಾಗಿ ಆತನಿಗೆ ವಿರುದ್ಧವಾಗಿ ಹೆಂಡತಿ ಮಕ್ಕಳು ವರ್ತಿಸಿದರೆ ಆತನಿಗೆ ಅವರನ್ನು ಶಿಕ್ಷಿಸುವ ಹಕ್ಕಿದೆ ಎಂಬ ನಂಬಿಕೆಯೊಂದಿಗೆ ಇದು ತಳಕು ಹಾಕಿಕೊಂಡಿದೆ. ಕುಟುಂಬದ ಆಧಿಕಾರ ಪುರುಷರ ಕೈ ಸೇರಿದಾಗ ಮಹಿಳೆಯರನ್ನು ಅಡಿಯಾಳಾಗಿಸಲು ದೈಹಿಕ ಹಿಂಸೆಯೂ ಸೇರಿದಂತೆ ಏನು ಬೇಕಾದರೂ ಮಾಡಬಹುದು ಎಂಬುದು ಗಂಡಾಳ್ವಿಕೆಯ  ಮುಖ್ಯ ಲಕ್ಷಣ. ತಪ್ಪು ಮಾಡಿದಾಗ ಗಂಡ ಹೊಡೆಯಬಹುದು ಎಂಬುದನ್ನು ಸ್ವತ: ಹೆಣ್ಣು ಮಕ್ಕಳೇ ಒಪ್ಪಿಕೊಳ್ಳುವಂತೆ ಗಂಡಾಳ್ವಿಕೆ ವ್ಯವಸ್ಥೆ ನಾಜೂಕಾಗಿ ನೋಡಿಕೊಂಡಿದೆ. ಹೆಣ್ಣು ಮಕ್ಕಳು ಬುದ್ಧಿವಂತೆಯರೇ. ಇಷ್ಟಕ್ಕೂ ಹೊಡೆಯುವವರು ಬುದ್ಧಿಕಲಿಸಲೆಂದೇ ಹೊಡೆಯುವುದಿಲ್ಲ. ಹೆಣ್ಣು ಮಗು ಹೆತ್ತಳೆಂದು ಬಡಿವವರೂ ಇದ್ದಾರಲ್ಲ (ಮಗುವಿನ ಲಿಂಗ ನಿರ್ಧಾರವಾಗುವುದು ಗಂಡಿನಿಂದಲೇ ಎಂಬುದು ಸಾಬೀತಾಗಿರುವಾಗಲೂ). 

5. ಬಡವರು, ಅನಕ್ಷರಸ್ಥರು ಮಾತ್ರ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ

ವಾಸ್ತವ: ಕೌಟುಂಬಿಕ ದೌರ್ಜನ್ಯಕ್ಕೆ ಜಾತಿ, ಧರ್ಮ, ವಯಸ್ಸು ಆರ್ಥಿಕ ಸ್ಥಿತಿ, ದೇಶ, ವಿದ್ಯಾಭ್ಯಾಸ ಇತ್ಯಾದಿಗಳ  ಹಂಗಿಲ್ಲ. ಅಧಿಕ ಸಂಪತ್ತು ಅಥವಾ ವಿದ್ಯೆ ಮಹಿಳೆಯರಿಗೆ ಹಿಂಸೆಯಿಂದ ರಕ್ಷಣೆ ನೀಡುತ್ತದೆ ಎಂದು ನಂಬುವುದು ತಪ್ಪು.  ದೌರ್ಜನ್ಯದ ಬಗ್ಗೆ ಬರುವ ದೂರುಗಳಲ್ಲಿ ಉನ್ನತ ಹುದ್ದೆಯಲ್ಲಿರುವ ವೈದ್ಯೆಯರು, ಸರಕಾರೀ ಅಧಿಕಾರಿಗಳು, ಸಾಫ್ಟ್ವೇರ್ ಉದ್ಯೋಗಿಗಳು ನರ್ಸ್, ಟೀಚರ್ಸ್ ಶ್ರೀಮಂತ ಮಹಿಳೆಯರು ಬಡವರು, ಮುಂತಾದವರೆಲ್ಲರದೂ ಇರುತ್ತದೆ ಎಂಬುದನ್ನು ಕೌಟುಂಬಿಕ ದೌರ್ಜನ್ಯದ ಪ್ರಕರಣದ ದಾಖಲೆಗಳು ಹೇಳುತ್ತವೆ. ಆರ್ಥಿಕವಾಗಿ ಗಟ್ಟಿಯಾಗಿರುವವರಿಗಿಂತ ಎಲ್ಲದಕ್ಕೂ ಗಂಡನನ್ನೇ ಅವಲಂಬಿಸಿದವರ ಕಷ್ಟ ಹೆಚ್ಚಿನದು ಎನ್ನಬಹುದು ಅಷ್ಟೆ.

6. ಕೌಟುಂಬಿಕ ದೌರ್ಜನ್ಯ ಗಂಡ ಹೆಂಡಿರ ಸಮಸ್ಯೆ. ಮೂರನೆಯವರು ನಡುವೆ ಪ್ರವೇಶಿಸಬಾರದು

ವಾಸ್ತವ: ಮೊದಲಾಗಿ, ಕೌಟುಂಬಿಕ ದೌರ್ಜನ್ಯವು ಕೇವಲ ಗಂಡ ಹೆಂಡಿರ ಸಮಸ್ಯೆ ಅಲ್ಲ. ಅದು ಮೂಲಭೂತವಾಗಿರುವ ಮಹಿಳೆಯರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ದೌರ್ಜನ್ಯದ ಕೆಡುಕುಗಳು ಕೇವಲ ಗಂಡ ಹೆಂಡತಿಯರ ನಡುವೆ ಉಳಿದುಬಿಡುವಂಥದ್ದಲ್ಲ. ಅದು ವ್ಯಕ್ತಿಯಿಂದ ತೊಡಗಿ, ಕುಟುಂಬ, ಮಕ್ಕಳು, ಸಮುದಾಯ ದೇಶದ ಆರ್ಥಿಕತೆ ಇತ್ಯಾದಿಗಳನ್ನು ಗಾಢವಾಗಿ ಆವರಿಸುತ್ತದೆ. ಕೌಟುಂಬಿಕ ದೌರ್ಜನ್ಯಗಳ ಹೆಚ್ಚಳವು ಅಭಿವೃದ್ಧಿಹೊಂದಿದ ದೇಶಗಳನ್ನೂ ಬಿಡದೆ ಕಾಡುತ್ತಿದೆ .ಚೀನಾ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ತತ್ತರಿಸಿವೆ. ಯುರೋಪ್ ನಲ್ಲಿ ಕೋವಿಡ್ ದಿನಗಳಲ್ಲಿ, ಸ್ವೀಕರಿಸಲಾದ ಮಹಿಳಾ ದೌರ್ಜನ್ಯದ ಕರೆಗಳಲ್ಲಿ ಶೇ. 60 ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.  ಕೌಟುಂಬಿಕ ದೌರ್ಜನ್ಯವನ್ನು ತೀವ್ರವಾಗಿ ಇಳಿಸಲು ಸಾಧ್ಯವಾದರೆ ಯಾವುದೇ ದೇಶಕ್ಕೆ ಸಾಮಾಜಿಕವಾಗಿ ಆರ್ಥಿಕವಾಗಿ ಆಗುವ ಲಾಭ ಅಪಾರ. ಎಂದೇ ದೌರ್ಜನ್ಯವನ್ನು ತಡೆಯಲು ಮೂರನೆಯವರಾದ ಸಮುದಾಯ, ಸಂಸ್ಥೆಗಳು, ವ್ಯಕ್ತಿಗಳು, ನೆರೆಹೊರೆಯವರು ಮುಂತಾದವರ  ಪ್ರವೇಶ ಅಪೇಕ್ಷಣೀಯವಾದುದು.  

7. ಕೌಟುಂಬಿಕ ದೌರ್ಜನ್ಯ ಒಂದು ಖಾಸಗಿ ಸಂಗತಿ. ಅದನ್ನು ಬಹಿರಂಗ ಪಡಿಸಬಾರದು.

ವಾಸ್ತವ: ಕೌಟುಂಬಿಕ ದೌರ್ಜನ್ಯವು ಒಂದು ಖಾಸಗಿ ಸಂಗತಿಯಲ್ಲ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಿಂದ ವೈದ್ಯಕೀಯ ಶುಶ್ರೂಷೆ, ಕೋರ್ಟ್ ಖರ್ಚುಗಳು, ಮಾನಸಿಕ ಹಾಗು ದೈಹಿಕ ಪರಿಣಾಮಗಳು ಇಂಥವುಗಳಿಂದಾಗಿ ಸಮಾಜದ ಮೇಲೆ ಅತಿ ಹೆಚ್ಚು ಖರ್ಚು ಬೀಳುತ್ತದೆ. ಮನೆಯೊಳಗೆ ಗಂಡಸರು ನೀಡುವ ಹಿಂಸೆಯ ವಿರುದ್ಧ ಮಹಿಳೆಯರು ಬಹಿರಂಗವಾಗಿ ದೂರು ನೀಡುವುದನ್ನು ನಮ್ಮ ಸಮಾಜವು ಮಾನ್ಯ ಮಾಡುವುದಿಲ್ಲ. ಹಿಂಸೆಯನ್ನು ಬಹಿರಂಗ ಪಡಿಸಿದರೆ ಅದರಿಂದ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ತಿಳಿಯಲಾಗುತ್ತದೆ. ಸಾಮಾಜಿಕ ಒತ್ತಡ ಮತ್ತು ನಿರೀಕ್ಷೆಗಳಿಂದಾಗಿ ತನ್ನ ಮನೆಯೊಳಗಿನ ಹಿಂಸೆಯ ಕುರಿತು ಮಾತಾಡಲು ಮಹಿಳೆಯರಿಗೆ ಮುಜುಗರವಾಗುತ್ತದೆ. ಒಂದುವೇಳೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಂಡರೂ ಕೇಳಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ ಮತ್ತು ನಿನ್ನ ಮುಂದಿನ ನಡೆ ಏನು ಎಂದು ವಿಚಾರಿಸುವವರೂ ಇರುವುದಿಲ್ಲ. ಹಾಗಾಗಿ ಮನೆಯೊಳಗಿನ ದೌರ್ಜನ್ಯಗಳು ಸಾರ್ವಜನಿಕವಾಗದೆ ಖಾಸಗಿಯಾಗಿ ಉಳಿಯುವುದೇ ಹೆಚ್ಚು. ಈ ಕಾರಣದಿಂದಲೇ ಅನೇಕ ಹೆಣ್ಣು ಮಕ್ಕಳು, ಮಹಿಳೆಯರು ಆತ್ಮಹತ್ಯೆಯಂತಹ ವಿಪರೀತದ ಮಾರ್ಗವನ್ನು ಹಿಡಿಯುತ್ತಾರೆ. ಕೌಟುಂಬಿಕ ದೌರ್ಜನ್ಯದ ಕಾನೂನು ಬಂದ ಬಳಿಕ ಈ ಎಲ್ಲ ತಪ್ಪು ಕಲ್ಪನೆಗಳಿಗೆ ಒಂದಷ್ಟು ತೆರೆ ಬಿದ್ದಂತಾಗಿದೆ. ಅಂದರೆ ಕೌಟುಂಬಿಕ ದೌರ್ಜನ್ಯವು ಒಂದು ಖಾಸಗಿ ಸಂಗತಿಯಾಗದೆ ಸಾಮಾಜಿಕ ಸಮಸ್ಯೆಯಾಗಿ ಗುರುತಿಸಿಕೊಂಡಿದೆ.

8. ಪುರುಷರು ಕೂಡಾ ಮಹಿಳೆಯರಷ್ಟೇ ಕೌಟುಂಬಿಕ ದೌರ್ಜನ್ಯದ ಸಂತ್ರಸ್ರರು.

ವಾಸ್ತವ: ಪುರುಷರು ಕೂಡಾ ಚಿಕ್ಕ ಪ್ರಮಾಣದಲ್ಲಿ ಕೌಟುಂಬಿಕ ದೌರ್ಜನ್ಯದ ಸಂತ್ರಸ್ರರು ನಿಜ. ಮೃದು ಸ್ವಭಾವದ ಗಂಡಸರ ಮೇಲೆ ಗಡಸು ಸ್ವಭಾವದ ಮಹಿಳೆಯರಿಂದ ಅಲ್ಲೊಂದು ಇಲ್ಲೊಂದು ದೌರ್ಜನ್ಯಗಳು ನಡೆಯುವುದನ್ನು ಅಲ್ಲಗಳೆಯಲಾಗದು. ಪುರುಷರು ಕೂಡಾ ಪುರುಷಪ್ರಧಾನ ವ್ಯವಸ್ಥೆಯ ಸಂತ್ರಸ್ತರೇ ಆಗಿದ್ದಾರೆ. ತಮಗೆ ನಿಗದಿಪಡಿಸಿದ ಪಾತ್ರ ಮತ್ತು ಸ್ಥಾನವನ್ನು ಬಿಟ್ಟು ಕದಲಬಾರದೆಂಬ ಸಮಾಜದ ಮೌಲ್ಯಗಳು ಅವರಲ್ಲೂ ಹಲವು ಒತ್ತಡಗಳನ್ನು ಅನಿವಾರ್ಯಗೊಳಿಸಿವೆ. ಜಗತ್ತಿನ ಗಂಡಾಳ್ವಿಕೆ ಸಮಾಜದ ಅಧಿಕಾರ ಬಲದ ಪ್ರಶ್ನೆ ಇದು. ಆದರೆ, ಮಹಿಳೆಯರಷ್ಟೇ ಸಂತ್ರಸ್ತರು ಎಂಬುದು ಸುಂದರವಾಗಿ ಪೋಣಿಸಿದ ಅಪ್ಪಟ ಸುಳ್ಳು. ಸಂಶೋಧನೆಗಳು ಹೇಳುವಂತೆ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳಲ್ಲಿ 95% ಸಂತ್ರಸ್ತರು ಮಹಿಳೆಯರು. ಒಂದು ವೇಳೆ ಮಹಿಳೆಯರು ದೌರ್ಜನ್ಯ ಎಸಗಿದರೂ ಹೆಚ್ಚಿನ ಸಂದರ್ಭಗಳಲ್ಲಿ ಅದು ಅವರ ಆತ್ಮ ರಕ್ಷಣೆಗಾಗಿಯೇ ಆಗಿರುತ್ತದೆ. ಎಲ್ಲೋ ನಡೆಯುವ ಬೆರಳೆಣಿಕೆಯ ಪುರುಷರ ಮೇಲಿನ ದೌರ್ಜನ್ಯಗಳು ವೈಭವೀಕರಣಗೊಂಡು ಅವು ಬಹಳ ಬೇಗ ವ್ಯಾಪಕ ಪ್ರಚಾರವನ್ನು ಪಡೆದುಕೊಳ್ಳುತ್ತವೆ. ನಮ್ಮಲ್ಲಿ ʼಪತ್ನೀ ಪೀಡಕರ ಸಂಘʼ, ʼಭಾರತೀಯ ಕುಟುಂಬ ಸಂರಕ್ಷಣಾ ಪ್ರತಿಷ್ಠಾನʼ ದಂತಹ ಅನೇಕ ಪುರುಷ ಪರ ಸಂಘಟನೆಗಳು ದೇಶದಾದ್ಯಂತ ತಲೆ ಎತ್ತಿವೆ. ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ದುರುಪಯೋಗವಾಗುತ್ತಿದೆ, ಪುರುಷರೂ ದೌರ್ಜನ್ಯಕ್ಕೆ ಒಳಗಾ ಗುತ್ತಿದ್ದಾರೆ, ಪುರುಷರ ಮೇಲೆ ಸುಳ್ಳು ಮೊಕದ್ದಮೆಗಳನ್ನೇ ದಾಖಲಿಸುತ್ತಿದ್ದಾರೆಂದು ಇವು ಜೋರಾಗಿ ಬೊಬ್ಬೆ ಹೊಡೆಯುತ್ತಿವೆ. ಈ ಎಲ್ಲ ಅತಿರಂಜಿತ ವರದಿಗಳನ್ನು ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡುತ್ತವೆ. ಮಹಿಳೆಯರನ್ನು ಅವರ ಹೋರಾಟದಿಂದ ಹಿಮ್ಮೆಟ್ಟಿಸಲು ಗಂಡಾಳ್ವಿಕೆಯ ಸಮಾಜಕ್ಕೆ ಇದು ಒಂದು ಅಸ್ತ್ರವಾಗಿದೆ.

ಗೂಗಲ್‌ ಚಿತ್ರ

ಸಮಾಜದಲ್ಲಿ ಗಟ್ಟಿಯಾಗಿ ನೆಲೆ ನಿಂತಿರುವ ಇಂತಹ ಮಹಿಳಾ ವಿರೋಧಿ ನಿಲುವುಗಳನ್ನು ಪ್ರಶ್ನಿಸಬೇಕಾಗಿದೆ. ಹೊಡೆಯುವುದು ತಪ್ಪು ಎಂಬ ಮೌಲ್ಯವನ್ನು ಹೆಚ್ಚು ಹೆಚ್ಚು ವ್ಯಾಪಕ ಗೊಳಿಸಬೇಕಾಗಿದೆ. ಮಹಿಳಾ ಸಬಲೀಕರಣದ ಯಾನಕ್ಕೆ ಬಲು ದೊಡ್ಡ ತಡೆ ಗೋಡೆಗಳಾಗಿ ನಿಂತಿರುವ ಇಂತಹ ಮಹಿಳಾ ವಿರೋಧಿ ಚಿಂತನೆಗಳನ್ನು ಅಳಿಸಬೇಕಿದೆ.



 ಇದನ್ನೂ ಓದಿ- ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು…

More articles

Latest article