ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕನ್ನಡ ನಟ ದರ್ಶನ್ ತೂಗುದೀಪಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಒದಗಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉನ್ನತ ಮಟ್ಟದ ಕೈದಿಗಳಿಗೆ ನೀಡಲಾಗುವ ಆದ್ಯತೆ ಮತ್ತು ಸೌಲಭ್ಯಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೂನ್ 11 ರಂದು ದರ್ಶನ್ ಬಂಧನವಾಗಿದ್ದು, ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಸೋರಿಕೆಯಾದ ಫೋಟೋಗಳಲ್ಲಿ, ದರ್ಶನ್ ಜೈಲಿನ ಗಾರ್ಡನ್ ಪ್ರದೇಶದಲ್ಲಿ ಕುಳಿತುಕೊಂಡು, ಒಂದು ಕೈಯಲ್ಲಿ ಕಾಫಿ ಮಗ್ ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು, ಅವರ ಮ್ಯಾನೇಜರ್ ನಾಗರಾಜ್ ಮತ್ತು ಕುಖ್ಯಾತ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಇತರ ಕೈದಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಸುರಕ್ಷಿತ ಪ್ರದೇಶವಾದ ಕಾರಾಗೃಹದಲ್ಲಿ ದರ್ಶನ್ಗೆ ಸಿಗರೇಟ್ಗಳು ಹೇಗೆ ಸಿಕ್ಕಿದವು? ಇತರ ಕೈದಿಗಳಿಗೆ ಹೋಲಿಸಿದರೆ ಅವರು ಹೆಚ್ಚಿನ ಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿವೆ.
ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕರಾದ ಮಾಲಿನಿ ಕೃಷ್ಣಮೂರ್ತಿ ಅವರು TNM ಮಾತನಾಡಿಸಿದಾಗ, “ಈ ಪೋಟೋ ಬಗ್ಗೆ ನನಗೆ ಅರಿವಿಗೆ ಬಂದಿದೆ. ಈಗಾಗಲೇ ಹೆಚ್ಚುವರಿ ಐಜಿ ಆನಂದ್ ರೆಡ್ಡಿ ಮತ್ತು ಡಿಐಜಿ (ಕಾರಾಗೃಹಗಳು) ಎಂ ಸೋಮಶೇಖರ್ ಅವರನ್ನು ಕಾರಾಗೃಹಕ್ಕೆ ಕಳುಹಿಸಿದ್ದೇವೆ. ಅಲ್ಲಿಗೆ ತೆರಳಿ ವಿಚಾರಣೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಚಿತ್ರವು ನಿಜವೇ ಎಂದು ನಾವು ಮೊದಲು ತಿಳಿದುಕೊಳ್ಳಬೇಕಿದೆ. ಇದು ನಿಜವಾಗಿದ್ದರೆ, ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕ್ರೂರ ಹತ್ಯೆಯ ಆರೋಪ ಹೊತ್ತಿರುವ ದರ್ಶನ್ ಅಂತಹ ಸವಲತ್ತುಗಳನ್ನು ಅನುಭವಿಸುತ್ತಿರುವಂತೆ ಕಂಡುಬಂದಿರುವುದು ಸಾರ್ವಜನಿಕರ ಆಕ್ರೋಶ ಮತ್ತು ಕಾರಾಗೃಹ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ದರ್ಶನ್ ಅವರ ಬಹುಕಾಲದ ಸಂಗಾತಿ ಪವಿತ್ರಾ ಗೌಡ ಅವರನ್ನು ಕೂಡ ಬಂಧಿಸಲಾಗಿದೆ. ಇಬ್ಬರ ಜೊತೆ ಇನ್ನು 14 ಆರೋಪಿಗಳನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಸೇರಿಸಿದ್ದಾರೆ.