ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಕೋಲಾರದಲ್ಲೂ ಪ್ರತಿಭಟನೆ ನಡೆದಿದ್ದು, ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಕೋಲಾರ ನಗರದ ಕಾಂಗ್ರೆಸ್ ಕಚೇರಿಯಿಂದ ಮೆಕ್ಕೆ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ನಡೆ ಖಂಡಿಸಿ ಘೋಷಣೆಯನ್ನು ಕೂಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಜಾರಿ ಮಾಡಿದ ಪ್ರಾಸಿಕ್ಯೂಷನ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ನಡೆಯನ್ನು ಅನುಸರಿಸಿದ್ದಾರೆ. ಕಳಂಕರಹಿತರಾದ ಸಿಎಂ ಸಿದ್ದರಾಮಯ್ಯ ಮೇಲೆ ಮಾಡಿರುವ ಮೈತ್ರಿ ಪಕ್ಷಗಳ ಆರೋಪ ಜನತೆ ಒಪ್ಪುವುದಿಲ್ಲ ಎಂದು ಪ್ರತಿಭಟನೆ ಉದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಜೆಡಿಎಸ್, ಬಿಜೆಪಿ ವಿರುದ್ಧ ದಿಕ್ಕಾರ ಕೂಗಿದ್ದಾರೆ.
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಭಾಗಿ.