ಸ್ವತಂತ್ರ ಭಾರತದಲ್ಲಿ ಮಹಿಳೆಯರು ನಿಜವಾಗಿಯೂ ಸ್ವತಂತ್ರರೇ?

Most read

ಮಹಿಳೆಯರ ಸಹಭಾಗಿತ್ವವಿಲ್ಲದ ಸ್ವಾತಂತ್ರ್ಯವು ನಿಜ ಅರ್ಥದಲ್ಲಿ ಅರ್ಥಹೀನ. ಸಮ-ಸಮಾಜವನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ  ಆದ್ಯ ಕರ್ತವ್ಯವೂ ಜವಾಬ್ದಾರಿಯೂ ಆಗಿದೆ – ಡಾ|| ದಿಲೀಪಕುಮಾರ ಎಸ್. ನವಲೆ, ಮನೋವಿಜ್ಞಾನಿ

ನಾವು -ನೀವುಗಳೆಲ್ಲ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದೇವೆ. ಮನುಷ್ಯ ಇತರ ಪ್ರಾಣಿಗಳಿಗಿಂತ ವಿಶಿಷ್ಟ ಮತ್ತು ವಿಭಿನ್ನವಾದ ಆಲೋಚನೆಗಳ ಶಕ್ತಿಯಿಂದ, ಆಕಾಶದಲ್ಲಿ ಹಕ್ಕಿಯ ಹಾಗೆ ಹಾರುವುದನ್ನು ಕಲಿತ, ಸಮುದ್ರಗಳಲ್ಲಿ ಮೀನುಗಳ ಹಾಗೆ ಈಜುವುದನ್ನು ಕಲಿತ, ಆದರೆ ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿಯುವಲ್ಲಿ ಎಡವಿದ್ದಾನೆಂದು ನನಗೆನಿಸುತ್ತದೆ. ಏಕೆ ಈ ಮಾತು ಹೇಳಬೇಕಾಗಿ ಬಂತು ಅಂದರೆ, ಸ್ವಾತಂತ್ರ್ಯದ ಪರಿಕಲ್ಪನೆ ಅರ್ಥೈಸಿಕೊಳ್ಳುವ, ಹುಡುಕುವ ಸಂಶೋಧಿಸುವ, ವಿವರಿಸಿ ಅನ್ವಯಿಸುವ ಬಗ್ಗೆ ವಿಚಾರ ವಿನಿಮಯ ಮಾಡಬೇಕೆಂದೆನಿಸಿತು. ಸ್ವಾತಂತ್ರ್ಯ ಎಲ್ಲಾರಿಗೂ ಒಂದೇ ಆಗಿರಬೇಕಲ್ಲವೇ?. ಆದರೆ ಒಬ್ಬೊಬ್ಬರಿಗೆ ಒಂದು ಸ್ವಾತಂತ್ರ್ಯವಿದೆ, ಅದಕ್ಕೆ ಕನ್ನಡದ ಶ್ರೇಷ್ಠ ಕವಿ ಸಿದ್ದಲಿಂಗಯ್ಯ ಬರೆಯುತ್ತಾರೆ. “ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?”  ಈ ವಿಚಾರಗಳನ್ನು  ಗಮನಿಸಿಕೊಂಡು ಜಗತ್ತಿನಾದ್ಯಂತ ಸ್ವಾತಂತ್ರ್ಯಕ್ಕಾಗಿ ಹಲವಾರು  ಕ್ರಾಂತಿಗಳು ಆಗಿರುವುದು ಕಾಣುತ್ತವೆ. ಈ ಹಿನ್ನೆಲೆಯಲ್ಲೇ ಈಗ ಭಾರತ ದೇಶದಲ್ಲಿ ಮಹಿಳೆಯರ ಸ್ವಾತಂತ್ರ್ಯದ ಕುರಿತು ಆಲೋಚಿಸಬೇಕಿದೆ.

ನೆಲ್ಸನ್‌ ಮಂಡೇಲಾರ ಪ್ರಕಾರ ಸ್ವಾತಂತ್ರ್ಯವೆಂದರೆ, “ಕಾನೂನು ಬದ್ಧ ಜೀವನವನ್ನು ನಡೆಸಲು ಬೇಕಾಗುವ ಸಮಾನ ಅವಕಾಶಗಳೇ, ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿಯೇ ಸ್ವಾತಂತ್ರ್ಯ” ಎಂದಿದ್ದಾರೆ. ಮೊದಲು ತನ್ನ ಸಂಘದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕೊಟ್ಟಿರುವುದು ಬುದ್ಧ. ಬಸವಣ್ಣ ಅನುಭವ ಮಂಟಪದಲ್ಲಿ. 12ನೇ ಶತಮಾನದಲ್ಲಿಯೇ ಲಿಂಗಬೇಧದ ಕುರಿತು ಮಾತುಗಳಿವೆ. “ಮಲೆ ಮೂಡಿಬಂದರೆ ಹೆಣ್ಣು ಎಂಬುವರು, ಗಡ್ಡ ಮೀಸೆ ಬಂದರೆ ಗಂಡೆಬುವರು ನಡುವೆ ಸುಳಿಯುವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ  ಕೇಳಾ ರಾಮನಾಥ”. ಈ ಮಾತುಗಳು ಹೆಣ್ಣು ಗಂಡುಗಳ  ನಡುವೆ ದೈಹಿಕ ರಚನೆಯಲ್ಲಿ ವ್ಯತ್ಯಾಸವಿರಬಹುದು ಆದರೆ-ಮನಸ್ಸು-ಭಾವನೆಗೆ, ಆಸೆಗೆ, ಅಭಿರುಚಿಗೆ, ಆಚಾರ-ವಿಚಾರ ವಿನಿಮಯಕ್ಕೆ, ಯಾವ ವ್ಯತ್ಯಾಸವಿಲ್ಲ. ಹಾಗೆಯೇ ಗಾಳಿ, ನೀರು, ಬೆಳಕು, ಭೂಮಿ, ಪ್ರಕೃತಿ ನಿಸರ್ಗದಲ್ಲಿ ಇರದ ವ್ಯತ್ಯಾಸವು ಮನಷ್ಯರಲ್ಲಿದ್ದು ಅವರೇಕೆ ಮಹಿಳೆಯನ್ನು ಒಂದು ಆಟದ ವಸ್ತುವಾಗಿ ಆಟಿಕೆಯಾಗಿ, ನೋಡುತ್ತಿರುವುದು? ನನಗಂತು ಅರ್ಥವಾಗದು.

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು

ಮಹಿಳೆಯರ ಮೇಲಿನ ದೌರ್ಜನ್ಯವು ಮಹಿಳೆಯರ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪ್ರಮುಖ ಸಮಸ್ಯೆಯಾಗಿದೆ. 2022 ರಲ್ಲಿ ಭಾತರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಹಿಳೆಯರ ವಿರುದ್ಧ 4,45,256 ಅಪರಾಧ  ಪ್ರಕರಣಗಳನ್ನು ವರದಿ ಮಾಡಿದೆ. ಅಂದರೆ ಪ್ರತಿ ಗಂಟೆಗೆ ಸುಮಾರು 51 ಪ್ರಕರಣಗಳು! ಇದು 2021 ರಲ್ಲಿ 4,28,278 ಪ್ರಕರಣಗಳು ಮತ್ತು 2020 ರಲ್ಲಿ 3,71,503 ಪ್ರಕರಣಗಳಿಗಿಂತ ಹೆಚ್ಚಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯದ ಕೆಲವು ಸಾಮಾನ್ಯ  ರೂಪಗಳು:

ಕೌಟುಂಬಿಕ ದೌರ್ಜನ್ಯ- ಕಪಾಳಮೋಕ್ಷ ,ಉಸಿರುಗಟ್ಟಿಸುವುದು, ಸುಡುವುದು, ಹಣಕಾಸಿನ ಬೇಡಿಕೆ, ವರದಕ್ಷಿಣೆ, ಲೈಂಗಿಕ  ಕಿರುಕುಳ, ಕೊಲೆ, ಮರ್ಯಾದಾ ಹತ್ಯೆಗಳು ಇತ್ಯಾದಿಗಳು. ಹಾಗೆ ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 30% ಮಹಿಳೆಯರು ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ, ನಿಕಟ ಪಾಲುದಾರ ಅಥವಾ ಪಾಲುದಾರರಲ್ಲದವರಿಂದ ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ. ಈ ಹಿಂಸಾಚಾರವು ಮಹಿಳೆಯರ ದೈಹಿಕ, ಮಾನಸಿಕ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಹಲವಾರು ವರದಿಗಳು, ಅಧ್ಯಯನಗಳಿಂದ ತಿಳಿದು ಬರುವುದೇನೆಂದರೆ ಇದಕ್ಕೆಲ್ಲ ಕಾರಣ ಮಹಿಳೆಯನ್ನು ಸಮಾನವಾಗಿ ಪರಿಗಣಿಸದೆ ಇರುವುದು. ಆದರೆ ಮಹಿಳೆ ಅಧಮ್ಯವಾದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಂದಿದಾಳೆ. ಅವಳು  ತಾಯಿಯಾಗಿ-ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಪತ್ನಿಯಾಗಿ ವಿವಿಧ ತರಹದ ಸಂದರ್ಭಕ್ಕನುಗುಣವಾಗಿ ವಿವಿಧ ತರಹದ ಪಾತ್ರಗಳನ್ನು ನಿರ್ವಹಿಸುವ ಶಕ್ತಿ ಸಾಮರ್ಥ್ಯಗಳನ್ನು ಹೊಂದಿರುವುದು ವಿಶಿಷ್ಟವೆನಿಸುತ್ತದೆ. ಮಹಿಳೆಯು ಹಲವಾರು ಕ್ಷೇತ್ರಗಳಲ್ಲಿ ತನ್ನದೆ ಛಾಪು ಮೂಡಿಸಿದ್ದಾಳೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ, ಕ್ರೀಡೆ, ಸಂಗೀತ, ಔದ್ಯೋಗಿಕ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ ಮಾಡಿರುವ ಉದಾರಣೆಗಳಿವೆ. ಕೇವಲ ಕೆಲವೇ ಮಹಿಳೆಯರಿಗೆ  ಇದಕ್ಕೆ ಪೂರಕವಾದ ಸಮಾನವಾದ ಅವಕಾಶಗಳಿವೆ ಎಂಬುದನ್ನು ಇಲ್ಲಿ ಗಮನಿಸಬೇಕು. ಇದರೊಂದಿಗೆ ತನ್ನ ಕುಟುಂಬದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಹೊರಗೆ ದುಡಿಯುವ ಎಷ್ಟೋ ಮಹಿಳೆಯರಿದ್ದಾರೆ. ಇವರಿಗೂ ತಾವು ಸ್ವತಂತ್ರರು ಎಂದನಿಸುವುದಿಲ್ಲ. ಮಹಿಳೆ ವಿದ್ಯೆ ಕಲಿತು, ಆಧುನಿಕ ರಂಗದಲ್ಲಿ ಬಹು ಎತ್ತರಕ್ಕೆ ಬೆಳೆದಿದ್ದರೂ ಸಹ  ಬಹುತೇಕರು ಸ್ವತಂತ್ರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ಪುರುಷರ ಪ್ರಭಾವವಿದೆ ಎನ್ನುವುದು ವಿಪರ್ಯಾಸ.

ಪುರುಷ ಪ್ರಧಾನವಾದ ಸಮಾಜವು ನೇರ ಹಾಗೂ ಪರೋಕ್ಷವಾಗಿ ಅವಳ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ನಾವು ಕಾಣುತ್ತೇವೆ.

1) ಸ್ವತಂತ್ರ ಭಾರತದಲ್ಲಿ ಮಹಿಳೆಯರು ಸ್ವಾತಂತ್ರ್ಯದ ಕಡೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಅದರೂ ಇನ್ನೂ ಅವರು ಬಹಳ ದೂರು ಸಾಗಬೇಕಾಗಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದರೂ ಅವರು  ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ  ಸವಾಲುಗಳು “ಅಸಮಾನತೆಗಳನ್ನು ಎದುರಿಸುತ್ತಲೆ ಇದ್ದಾರೆ.

1) ಸಾಮಾಜಿಕ ಸಾಂಸ್ಕೃತಿಕ ರೂಢಿಗಳು:- ಪಿತೃಪ್ರಭುತ್ವದ ವರ್ತನೆಗಳು, ಸಾಮಾಜಿಕ ನಿರೀಕ್ಷೆಗಳು ಸಾಮಾನ್ಯವಾಗಿ ಮಹಿಳೆಯರ ಆಯ್ಕೆಗಳು ಸ್ವಾಯತ್ತತೆಯನ್ನು ನಿರ್ಬಂಧಿಸುತ್ತವೆ.

2) ಲಿಂಗ ಆಧಾರಿತ ಹಿಂಸೆ:- ಮಹಿಳೆಯರು ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ ಇತರೆ ರೀತಿಯ ಲಿಂಗ ಆಧಾರಿತ ಹಿಂಸೆಯನ್ನು ಎದುರಿಸುತ್ತಾರೆ..

3) ಆರ್ಥಿಕ ಅವಲಂಬನೆ:- ಮಹಿಳೆಯರು ಸಾಮಾನ್ಯವಾಗಿ ಹಣಕಾಸಿನ ಕೆಲಸಕ್ಕಾಗಿ ಪುರುಷರ ಮೇಲೆ ಅವಲಂಬಿತರಾಗಿರುವುದು.

4) ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಪ್ರವೇಶದಲ್ಲಿ ಅಡತಡೆಗಳು

5) ಆರೋಗ್ಯ “ಸಂತಾನೋತ್ಪತ್ತಿ ಹಕ್ಕುಗಳು:- ಮಹಿಳೆಯರು ಸಂತಾನೋತ್ಪತ್ತಿ ಆರೋಗ್ಯವನ್ನು ಪ್ರವೇಶಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಾರೆ.

6) ರಾಜಕೀಯ ಪ್ರಾತಿನಿಧ್ಯಿ: ರಾಜಕೀಯ “ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ.

7) ಕುಟುಂಬ “ಮದುವೆ: ಮಹಿಳೆಯರು ಸಾಮಾನ್ಯವಾಗಿ ವೈಯಕ್ತಿಕ ಗುರಿಗಳಿಗಿಂತ ಕುಟುಂಬದ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಾರೆ.

ಆದಾಗ್ಯೂ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಹಲವು ಉದಾಹರಣೆಗಳಿವೆ ಎಂಬುದನ್ನು ಮರೆಯುವಂತಿಲ್ಲ.

ಈ ಲೇಖನವನ್ನು ಬರೆಯಲು ನಾನು ಅಂತರ್ಜಾಲದ ಮೂಲಕ ಸಂಶೋಧನಾತ್ಮಕ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು, ಹಲವು ಶಿಕ್ಷಿತ ಹಾಗು ಉದೋಗಸ್ಥ ಮಹಿಳೆಯರನ್ನು ಸಂಪರ್ಕಿಸಿದೆ. ಅವರ ಮನದಾಳದ ಮಾತುಗಳು ಹೀಗಿವೆ-

ಶಿಕ್ಷಕಿಯ ಅಭಿಪ್ರಾಯ

ಸ್ವತಂತ್ರ ಅನ್ನುವ ಮಾತು ಎಷ್ಟೋ ಜನ ಮಹಿಳೆಯರ ಆಲೋಚನೆಗೆ ದೂರವಾದುದು. ಏಕೆಂದರೆ ತಾನು ಸ್ವತಂತ್ರಳೋ ಅಲ್ಲವೋ ಅನ್ನುವ ವಿಚಾರ ತಿಳಿಯದೆ ಇರುವ ಎಷ್ಟೋ ಜನ ಮಹಿಳೆಯರಿದ್ದಾರೆ. ತಿಳಿದರೂ ಅದನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವೂ ಮಹಿಳೆಯರಿಗಿಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿನ್ನೂ ಬಂಧನದಲ್ಲಿಯೇ ಇದ್ದಾರೆ. ಇದು ಅವಳ ಬಲಹೀನತೆಯಲ್ಲ.  ಅವಳಿಗೆ ಹೇರಲ್ಪಟ್ಟ ಸಂಸ್ಕಾರಗಳು, ಅವಳ ಬದುಕಿನ ರೀತಿ-ನೀತಿ, ಅವಳ ಸುತ್ತಲಿನ ಸಮಾಜ, ಪರಿಸರ, ನೀತಿ-ನಿಯಮಗಳಿಂದಾಗಿ ಆಗಿದೆ. ಹೆಣ್ಣುಮಕ್ಕಳು ಯಾವಾಗ ಬೇಕೋ  ಊಟಮಾಡುವ ಹಾಗೆ ಇಲ್ಲ, ನಿದ್ದೆ ಮಾಡುವಂತಿಲ್ಲ, ತಡಮಾಡಿ ಏಳುವಂತಿಲ್ಲ, ಕೆಲಸ ಮಾಡದೆ ಇರುವಂತಿಲ್ಲ, ವಾದ ಮಾಡುವಂತಿಲ್ಲ, ಹೇಳದೆ ಎಲ್ಲಿಯೂ ಹೋಗುವಂತಿಲ್ಲ, ತಾನು ನಿರ್ಧಾರ ತೆಗೆದುಕೊಳ್ಳುವಂತಿಲ್ಲ, ತಾನು ದುಡಿದ ಹಣವನ್ನು ಖರ್ಚು ಮಾಡುವಂತಿಲ್ಲ ಹೀಗೆ ಹತ್ತು ಹಲವಾರು ನಿರ್ಬಂಧಗಳು ಅವಳಿಗಾಗಿಯೇ ಮೀಸಲಿರುವುದು. ಮಕ್ಕಳನ್ನು ನೋಡಿಕೊಳ್ಳುವುದು, ಮನೆ ಕೆಲಸ, ಮನೆ ನಿರ್ವಹಣೆ.. ಇಷ್ಟೆಲ್ಲಾ ಜವಾಬ್ದಾರಿಗಳ ನಡುವೆ ಅವಳು ಸ್ವತಂತ್ರಳಾಗಿರಲು ಹೇಗೆ ಸಾಧ್ಯ?

 ಸಮಾಜಶಾಸ್ತ್ರ ಉಪನ್ಯಾಸಕಿ

ಈ ಸಮಾಜದಲ್ಲಿ ಮಹಿಳೆ ಸ್ವತಂತ್ರಳಲ್ಲ. ಹೆಣ್ಣು ಹುಟ್ಟಿದರೆ, ಹುಣ್ಣು ಹುಟ್ಟಿದೆ ಎನ್ನುವ ಈ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಬಾಹ್ಯವಾಗಿ ಬದಲಾವಣೆ ಆಗಿದೆ ವಿನ: ಮಾನಸಿಕವಾಗಿ ಜಾತಿ ತಾರತಮ್ಯ ಮತ್ತಷ್ಟು ಜಾಸ್ತಿ ಆಗ್ತಿದೆ. ಅದೇ ರೀತಿ ಮಹಿಳೆ ನಾಲ್ಕು ಗೋಡೆಗಳಿಂದ ಹೊರಬಂದಿದ್ದಾಳೆಯೇ ವಿನಃ ಅವಳು ಮತ್ತಷ್ಟು ಮಾನಸಿಕ, ದೈಹಿಕ ಶೋಷಣೆಗೆ ಒಳಗಾಗಿದ್ದಾಳೆ. ಕೆಲವು ಸ್ಯಾಂಪಲ್ಸ್‌ ಹೀಗಿವೆ-

1) ಉದ್ಯೋಗದ ಸ್ಥಳದಲ್ಲಿ ಶೋಷಣೆ

2) ಎಲ್ಲ  ಕ್ಷೇತ್ರಗಳಲ್ಲಿ ಪುರುಷರ ನಾಯಕತ್ವಕ್ಕೆ ಮನ್ನಣೆ, ಮಹಿಳೆಯರ ನಿರ್ಲಕ್ಷ್ಯ.

3) ಹೆಚ್ಚಿನ ಕುಟುಂಬಗಳಲ್ಲಿ ಮಹಿಳಾ ಸಲಹೆಗಳ ನಿರ್ಲಕ್ಷ್ಯ.

4) ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ಕಡಿಮೆ

5) ಚಲನಾ ಸ್ವಾತಂತ್ರ್ಯಕ್ಕೆ ಅಡ್ಡಿ.

ಮಹಿಳಾ ಮನೋವಿಜ್ಞಾನಿ

ಆಧುನಿಕ ಭಾರತೀಯ ಮಹಿಳೆ ನಿಜವಾಗಿಯೂ ಸ್ವತಂತ್ರಳೇ ಎಂಬ ಪ್ರಶ್ನೆಯು ಉದ್ಭವಿಸಿದಾಗ, ಒಬ್ಬರನ್ನು ಅಧೀನ ಸ್ಥಿತಿಯಲ್ಲಿಡುವುದನ್ನು ನಿವಾರಿಸುವ ಅಗತ್ಯವಿದೆ ಎಂಬುದನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಮಹಿಳಾ ಮನೋವಿಜ್ಞಾನಿ.

ಹೋರಾಟಗಾರ್ತಿ

ದೇಶದ 7೮ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೂ ಮಹಿಳೆಯರಿಗೆ ಅದರಲ್ಲೂ ದಲಿತ ಮಹಿಳೆಯರಿಗೆ ಅಸುರಕ್ಷಿತ ವಾತವರಣವಿದೆ. ಮಹಿಳೆಯರು ಶಿಕ್ಷಣ ಪಡೆದು ಹಲವು ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದರೂ ಪೂರ್ಣ ಅಧಿಕಾರದಿಂದ ಕಾರ್ಯನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಹಿಳೆಯರಲ್ಲಿ ರಾಜಕೀಯ ಅರಿವು ಹೆಚ್ಚಬೇಕು. ದೇಶದ ಮುಖ್ಯಸ್ಥೆಯಾಗಿ, ದೇಶದ ಪ್ರಧಾನಿಯಾಗಿ ಮಹಿಳೆಯರು ಬಂದರೂ ದೇಶದ ಅಗುಹೋಗುಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಎಂಬುದು ಬೇಸರದ ಸಂಗತಿ. ರಾಜಕೀಯದಂತಹ ಪ್ರಬಲ ಸ್ಥಾನದಲ್ಲಿರುವ ಮಹಿಳೆಯರು ಸಮಾನತೆ ಮತ್ತು  ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವಾಗ ಪುರುಷರಿಂದ ದಬ್ಬಾಳಿಕೆಗೆ ಒಳಗಾಗುತ್ತಾರೆ ಎಂಬುದು ಅಲಗಳೆಯಲಾಗದ ಸತ್ಯ. ಹಾಗಾಗಿ ಮಹಿಳೆಯರು ಸಾಗಬೇಕಾದ ದಾರಿ ಇನ್ನೂ ದೂರವಿದೆ ಎನ್ನುತ್ತಾರೆ.

 ಟೆಕ್ಕಿ

ನನಗೆ ಅಭ್ಯಾಸ ಮಾಡಲು ಉದ್ಯೋಗ ಮಾಡಲು ಹಾಗೂ ಹೊರಗಡೆ ಪ್ರವಾಸ ಮಾಡಲು ಯಾವ ನಿರ್ಬಂಧವೂ ಇರಲಿಲ್ಲ. ಆದರೆ ಯಾವಾಗ ವರನ ಆಯ್ಕೆಯ ವಿಷಯ ಬಂತೋ ಆಗ  ನನ್ನ ಆಲೋಚನೆಗೆ  ಮಾನ್ಯತೆಯೇ ಇರಲಿಲ್ಲ ಎನ್ನುತ್ತಾರೆ ಮಹಿಳಾ ಇಂಜಿನೀಯರ್‌.

ಮಹಿಳಾ ಪೋಲಿಸ್ ಅಧಿಕಾರಿ‌

ಭಾರತದಲ್ಲಿ ನಮ್ಮ ಮಹಿಳೆಯರಿಗೆ ಅತ್ಯಾಚಾರವು ಗಂಭೀರ ಬೆದರಿಕೆಯಾಗಿದೆ. ಬಾಲ್ಯದಲ್ಲಿ ಲಿಂಗ ತಾರತಮ್ಯ ಮಾಡುವುದು, ಹೆಣ್ಣು ಮಗುವನ್ನು ಮನೆಗೆ ಆರ್ಥಿಕ ಹೊರೆಯಾಗಿ ಕಾಣುವುದು ನಿಲ್ಲಬೇಕು. ಮಹಿಳೆಗೆ ಯಾರೋ ಸ್ವಾತಂತ್ರ್ಯ ಕೊಡಬೇಕಿಲ್ಲ,  ಅದು ಅವಳ ಹಕ್ಕು, ಅವಳು ಅದನ್ನು ಅನುಭವಿಸಬೇಕು ಎನ್ನುತ್ತಾರೆ.

ಸ್ರ್ತೀರೋಗ ತಜ್ಞೆಯೊಬ್ಬರು, ಪುರುಷರಿಗೆ ಹೋಲಿಸಿದರೆ ನಮಗೆ ಹುಸಿ ಸ್ವಾತಂತ್ರ್ಯವಿದೆ ಎಂದು ಹೇಳಿದರೆ ವಕೀಲೆಯೊಬ್ಬರು ಮಹಿಳಾ ಸ್ವಾತಂತ್ರ್ಯವು ಕಾನೂನಿನ ಪುಸ್ತಕದಲ್ಲಷ್ಟೇ ಇದೆ,  ಅದು ಎಲ್ಲರ ಮಸ್ತಕದಲ್ಲಿ ದಾಖಲಾಗಬೇಕು ಎಂದು ಹೇಳಿದರು.

ಈ ಮೇಲಿನ ಎಲ್ಲಾ ಸಮಸ್ಯೆಗಳು, ಸವಾಲುಗಳು, ಸಂಘರ್ಷಗಳು, ಅಧ್ಯಯನಗಳು, ಸಂಶೋಧನೆಗಳು, ಅಭಿಪ್ರಾಯಗಳಿಂದ ತಿಳಿದು ಬರುವುದೇನೆಂದರೆ ಮಹಿಳೆ ಮೇಲ್ನೋಟಕ್ಕೆ ಪುರುಷರಿಗೆ ಸಮಾನಳೆನಿಸಿದರೂ, ಆಕೆ ಸ್ವತಂತ್ರಳಾಗಿಲ್ಲ, ಸಮಾಜವು ಅವಳನ್ನು ಸಂಕೋಲೆಯೊಳಗೆ ಸಿಲುಕಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಅನಿಸುತ್ತದೆ.

ಹೀಗಾಗಿಯೆ ಡಾ|| ಬಿ.ಆರ್.ಅಂಬೇಡ್ಕರ್ ಅವರು  ಹೇಳಿದ ಮಾತು ಸತ್ಯವೆನಿಸುತ್ತದೆ. “ಒಂದು ದೇಶದ ಪ್ರಗತಿ, ಅಭಿವೃದ್ಧಿ ಬೆಳವಣಿಗೆ, ಅಳತೆಗೋಲು, ಆ ದೇಶದ ಮಹಿಳೆ ಸಾಧಿಸಿದ ಸಾಧನೆ, ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ” ಎಂಬ ಮಾತು ಈ ಸಂದರ್ಭದಲ್ಲಿ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ. ಹಾಗೆಯೇ ಮಹಿಳೆಯರ ಸಹಭಾಗಿತ್ವವಿಲ್ಲದ ಸ್ವಾತಂತ್ರ್ಯವು  ನಿಜ ಅರ್ಥದಲ್ಲಿ ಅರ್ಥಹೀನ. ಒಟ್ಟಿನಲ್ಲಿ  ಸಮ-ಸಮಾಜವನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ  ಆದ್ಯ ಕರ್ತವ್ಯವೂ ಜವಾಬ್ದಾರಿಯೂ ಆಗಿದೆ.

ಡಾ|| ದಿಲೀಪಕುಮಾರ ಎಸ್. ನವಲೆ

ಕಲಬುರಗಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಮನೋವಿಜ್ಞಾನ ವಿಭಾಗದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿದ್ದಾರೆ

ಇದನ್ನೂ ಓದಿ-ಸ್ವಾತಂತ್ರ್ಯ, ಚರಿತ್ರೆ ಮತ್ತು ವರ್ತಮಾನ

More articles

Latest article