ಪಂಚೆ ತೊಟ್ಟ ರೈತನಿಗೆ ಮಾಲ್‌ ಪ್ರವೇಶ ನಿಷೇಧ | ಮಾರಿಕೊಂಡ ಮಾಧ್ಯಮಗಳ ಮೊಸಳೆ ಕಣ್ಣೀರು

Most read

ಒಂದರಡು ದಿನ ಸುದ್ದಿವಾಹಿನಿಗಳ ತೀರದ ಸುದ್ದಿ ದಾಹಕ್ಕೆ ಪಕೀರಪ್ಪ ಪ್ರಕರಣ ಆಹಾರ ಒದಗಿಸಿದಂತಾಗುತ್ತದೆ. ಆಳುವ ವರ್ಗಗಳು ಅದು ಹೇಗೆ ರೈತ ವಿರೋಧಿಯಾಗಿವೆಯೋ ಹಾಗೆಯೇ ಪರೋಕ್ಷವಾಗಿ ಪ್ರಭುತ್ವದ ನಿಯಂತ್ರಣದಲ್ಲಿರುವ ಮಾರಿಕೊಂಡ ಮಾಧ್ಯಮಗಳೂ ಸಹ ರೈತ ವಿರೋಧಿಗಳಾಗಿವೆ. ಪಕೀರಪ್ಪನಂತವರು ಸುದ್ದಿಯ ಸರಕಾಗುತ್ತಾರೆ, ಸೆಕ್ಯೂರಿಟಿ ಗಾರ್ಡ್ ನಂತಹ ಬಡವರು ಕೆಲಸ ಕಳೆದುಕೊಳ್ಳುತ್ತಾರೆ. ಮಾಲ್ ಮಾಲೀಕರು ಹಾಗೂ ಚಾನೆಲ್ ಮಾಲೀಕರುಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದರಲ್ಲಿ ತಲ್ಲೀನರಾಗಿರುತ್ತಾರೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಬೆಂಗಳೂರಿನ ಜಿಟಿ ಮಾಲ್ ನ ಒಳಗೆ ಹೋಗಲು ಪಂಚೆ ತೊಟ್ಟು ಬಂದ ರೈತ ಫಕೀರಪ್ಪನಿಗೆ ಅವಕಾಶ ಕೊಡದೇ ಅಪಮಾನ ಮಾಡಿದ್ದು ಅಕ್ಷಮ್ಯ. ಅನ್ನದಾತನಿಗಾದ ಅವಮಾನ ಖಂಡನೀಯ.

ಈ ವಿಷಯವನ್ನಿಟ್ಟುಕೊಂಡು ಕೆಲವು  ವಾಹಿನಿಗಳು ದೊಡ್ಡದಾಗಿ ಸುದ್ದಿ ಮಾಡುತ್ತಿವೆ, ಮಾಡಲಿ. ಇಷ್ಟು ದಿನ ಸುಮ್ಮನಿದ್ದ ಕೆಲವು ರೈತ ಸಂಘಟನೆಗಳು ಮಾಲ್ ಸಂಸ್ಕೃತಿಯನ್ನು ವಿರೋಧಿಸುತ್ತಿವೆ, ವಿರೋಧಿಸಲಿ. ಅವಮಾನಿತರಾದ ಫಕೀರಪ್ಪನವರಿಗೆ ಸನ್ಮಾನ ಮಾಡುತ್ತಿವೆ ಅದೂ ಆಗಲಿ.

ಆದರೆ.. ಕಾರ್ಪೋರೇಟ್ ಕುಳಗಳ ಹಿತಾಸಕ್ತಿಗೆ ಅನುಗುಣವಾಗಿ ರೈತಾಪಿ ಜನರ ಮೇಲೆ ಕೇಂದ್ರದ ಮೋದಿ ಸರಕಾರವು ಮೂರು ಕರಾಳ ಕಾಯ್ದೆಯನ್ನು ಹೇರಿಕೆ ಮಾಡಿ ಜಾರಿಮಾಡಿದಾಗ ಮಾರಿಕೊಂಡ ಮಾಧ್ಯಮಗಳು ವಿರೋಧಿಸಬೇಕಿತ್ತು, ವಿರೋಧಿಸಲಿಲ್ಲ. ಈ ರೈತವಿರೋಧಿ ಕಾಯ್ದೆಗಳ ರದ್ದತಿಗಾಗಿ ಪ್ರತಿಭಟಿಸಿ ದೆಹಲಿ ಗಡಿಯಲ್ಲಿ ಲಕ್ಷಾಂತರ ರೈತರು ವರ್ಷಗಳ ಕಾಲ ಚಳಿ ಮಳೆ ಬಿಸಿಲಲ್ಲಿ ಧರಣಿ ಕೂತಿದ್ದಾಗ, ಆ ರೈತ ಚಳುವಳಿಯಲ್ಲಿ ಏಳುನೂರಕ್ಕೂ ಹೆಚ್ಚು ಅನ್ನದಾತರು ಪ್ರಾಣತ್ಯಾಗ ಮಾಡಿದಾಗ ಈ ಗೋದಿ ಮಾಧ್ಯಮಗಳು ಹೀಗೇ ಆ ಅನ್ನದಾತರ ಆಂದೋಲನ ಬೆಂಬಲಿಸಿ ಸುದ್ದಿ ಪ್ರಸಾರ ಮಾಡಬಹುದಾಗಿತ್ತು, ಮಾಡಲಿಲ್ಲ. ರೈತರು ದೆಹಲಿಯ ಗಡಿಯಲ್ಲಿ ಪ್ರವೇಶಿಸಬಾರದೆಂದು ರಸ್ತೆಗೆ ಮೊಳೆ ಹೊಡೆದು ಕಾಂಕ್ರೀಟ್ ತಡೆಗೋಡೆ ಹಾಕಿ ಪೊಲೀಸ್ ಕಾವಲು ಇಟ್ಟಾಗ, ರೈತರ ಮೇಲೆ ಡ್ರೋನ್ ಗಳ ಮೂಲಕ ಟೀಯರ್ ಗ್ಯಾಸ್ ಬಿಟ್ಟಾಗಲಾದರೂ ಮಾಧ್ಯಮಗಳು ರೈತರ ಪರ ನಿಲ್ಲಬಹುದಾಗಿತ್ತು, ನಿಲ್ಲಲಿಲ್ಲ. ಬಿಜೆಪಿ ನಾಯಕರುಗಳು ಹೋರಾಟ ನಿರತ ರೈತರಿಗೆ ಆತಂಕವಾದಿಗಳು, ಖಾಲಿಸ್ತಾನಿಗಳು, ಭಯೋತ್ಪಾದಕರು, ವಿದೇಶಿ ಏಜಂಟರುಗಳು ಎಂದು ನಿಂದಿಸಿದಾಗಲಾದರೂ ಮಾಧ್ಯಮಗಳು ಎಚ್ಚರಗೊಂಡು ನಿಂದಿಸಿದವರ ಜಾತಕ ಜಾಲಾಡಬೇಕಿತ್ತು, ಜಾಲಾಡಲಿಲ್ಲ. ದೆಹಲಿ ಗಡಿ ಪ್ರವೇಶ ಸಾಧ್ಯವಾಗದೇ ಅವಮಾನಿತರಾಗಿ ಬಂದ ಕರ್ನಾಟಕದ ರೈತರನ್ನು ಕರೆದು ಕಷ್ಟ ಕೇಳಲಿಲ್ಲ, ಸನ್ಮಾನಿಸಿ ಮಾತಾಡಿಸಲಿಲ್ಲ.

ಫಕೀರಪ್ಪ

ಆದರೆ ಈಗ ಫಕೀರಪ್ಪನ ಮೇಲೆ ಮಾಧ್ಯಮಗಳಿಗೆ ಎಲ್ಲಿಲ್ಲದ ಪ್ರೀತಿ ಉಕ್ಕುತ್ತಿದೆ. ಅನ್ನದಾತನಿಗಾದ ಅಪಮಾನಕ್ಕೆ ಪ್ರತಿಯಾಗಿ ಮಾಧ್ಯಮಗಳೇ ತಮ್ಮ ಸ್ಟುಡಿಯೋಗೆಫಕೀರಪ್ಪನನ್ನು ಕರೆಸಿ ಸನ್ಮಾನಿಸುತ್ತಿವೆ. ರೈತನೊಬ್ಬನಿಗಾದ ಅಪಮಾನದ ಸಂಗತಿಯನ್ನೇ ಸರಕು ಮಾಡಿಕೊಂಡು ಟಿಆರ್ಪಿ ಹೆಚ್ಚಿಸಿಕೊಳ್ಳಲು ಹಾಗೂ ತಾವೂ ರೈತರ ಪರ ಎಂದು ತೋರಿಸಿಕೊಳ್ಳಲು ಈ ಗೋದಿ ಮಾಧ್ಯಮಗಳು ಹರಸಾಹಸ ಪಡುತ್ತಿವೆ.

ಇದಕ್ಕೆ ಹಿಪಾಕ್ರಸಿ ಎನ್ನುವುದು. ಸರ್ವಾಧಿಕಾರಿ ಸರಕಾರದ ರೈತ ವಿರೋಧಿತನದ ವಿರುದ್ಧ ಉಸಿರೆತ್ತದ ಮುಖ್ಯವಾಹಿನಿಯ ಮಾಧ್ಯಮಗಳು ಸೆಲೆಕ್ಟಿವ್ ಆಗಿ ಒಂದು ಬಿಡಿ ಪ್ರಕರಣವನ್ನು ವೈಭವೀಕರಿಸುವ ಮೂಲಕ ತಮ್ಮ ರೈತ ವಿರೋಧಿತನದ ಪಾಪವನ್ನು ತೊಳೆದುಕೊಳ್ಳಲು ಪರದಾಡುತ್ತಿವೆ.  ಒಬ್ಬ ಫಕೀರಪ್ಪ ಅಷ್ಟೇ ಅಲ್ಲಾ, ಫಕೀರಪ್ಪನಂತಹ ಅನೇಕ ರೈತ ಸಮುದಾಯದವರು ಪ್ರತಿ ನಿತ್ಯ ಅಪಮಾನಿತರಾಗುತ್ತಿದ್ದಾರೆ. ಅವರು ಕಷ್ಟ ಪಟ್ಟು ಬೆಳೆದ ಫಸಲಿಗೆ ಬೆಲೆ ಸಿಗದೆ ದಲ್ಲಾಳಿಗಳಿಂದ ನಿತ್ಯ ವಂಚನೆಗೆ ಒಳಗಾಗುತ್ತಿದ್ದಾರೆ. ಕೃಷಿಗಾಗಿ ಮಾಡಿದ ಸಾಲ ಕಟ್ಟಲಾಗದೆ ಸಾಲಕೊಟ್ಟವರು ಮಾಡುವ ಅಪಮಾನದಿಂದ ಪಾರಾಗಲು ಆತ್ಮಹತ್ಯೆಯ ದುರಂತಕ್ಕೆ ಈಡಾಗುತ್ತಿದ್ದಾರೆ. ರೈತ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದೆ ಅವಮಾನದಿಂದಲೇ ಬದುಕುತ್ತಿದ್ದಾರೆ. ಅನ್ನದಾತ ಬೆಳೆದ ಎಲ್ಲಾ ಬೆಳೆಗಳಿಗೂ ಸರಕಾರಗಳು ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸದೆ ರೈತಾಪಿ ಸಮುದಾಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಹೋಗಲಿ.. ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಗ್ಯಾರಂಟಿ ಯೋಜನೆಗಳನ್ನು ಸರಕಾರ ಹಮ್ಮಿಕೊಂಡರೆ ಅದನ್ನೂ ಲೇವಡಿ ಮಾಡುವ, ಉಚಿತವಾಗಿ ಪಡೆಯುವವರನ್ನು ಭಿಕ್ಷುಕರಂತೆ ನೋಡುವ ಮೂಲಕ ಅವಮಾನಿಸಲಾಗುತ್ತಿದೆ.

ಇಷ್ಟೆಲ್ಲಾ ಸಮಸ್ಯೆಗಳ ಸುಳಿಯಲ್ಲಿ ರೈತ ಸಮುದಾಯ ಸಿಕ್ಕು ನರಳುತ್ತಿರುವಾಗ ಸಮಾಜದ ಆಗುಹೋಗುಗಳ ಗುತ್ತಿಗೆ ಪಡೆದವರಂತೆ ಆರ್ಭಟಿಸುತ್ತಿರುವ ಮಾಧ್ಯಮಗಳು ಫಕೀರಪ್ಪನಂತಹ ಕೋಟ್ಯಂತರ ರೈತ ಬಾಂಧವರ ಅಪಮಾನಕ್ಕೆ ಯಾಕೆ ಸ್ಪಂದಿಸುವುದಿಲ್ಲ?. ಅದಕ್ಕೆಲ್ಲಾ ಕಾರಣೀಕರ್ತರಾದ ಆಳುವ ಸರಕಾರಗಳನ್ನು ಯಾಕೆ ದಿನ ನಿತ್ಯ ತರಾಟೆಗೆ ತೆಗೆದುಕೊಳ್ಳುವುದಿಲ್ಲ?. ಯಾಕೆಂದರೆ ಆಳುವ ಸರಕಾರ ಹಾಗೂ ಆ ಸರಕಾರವನ್ನು ಪೋಷಿಸುವ ಬಂಡವಾಳಿಗ ಕಾರ್ಪೋರೇಟ್ ಶ್ರೀಮಂತರ ನಿಯಂತ್ರಣದಲ್ಲಿಯೇ ಬಹುತೇಕ ಮಾಧ್ಯಮಗಳು ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಚಾನೆಲ್ ಗಳು ಪ್ರಭುತ್ವದ ಹಿತಾಸಕ್ತಿಗೆ ಪೂರಕವಾಗಿಯೇ ಸುದ್ದಿ ಬಿತ್ತರಿಸುತ್ತವೆ. ಆಗಾಗ ತಮಗೂ ರೈತಪರ ಕಾಳಜಿ ಇದೆ ಎಂದು ತೋರಿಸಲು ಫಕೀರಪ್ಪನವರಂತಹ ಪ್ರಕರಣಗಳನ್ನು ಜಿದ್ದಿಗೆ ಬಿದ್ದಂತೆ ಪ್ರಸಾರ ಮಾಡಿ ತಮ್ಮ ಪ್ರಭುತ್ವ ಪರ ಭಟ್ಟಂಗಿತನವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತವೆ.

ರೈತ ಫಕೀರಪ್ಪನವರಿಗೆ ಸನ್ಮಾನ

ರೈತ ಫಕೀರಪ್ಪನವರಿಗಾದ ಅಪಮಾನಕ್ಕೆ ಜಿಟಿ ಮಾಲ್ ಗಾಗಲೀ ಇಲ್ಲವೇ ಅದರ ಮಾಲೀಕರಿಗಾಗಲೀ ಯಾವುದೇ ತೊಂದರೆಯಂತೂ ಆಗುವುದಿಲ್ಲ. ಹಲವಾರು ಮಾಧ್ಯಮಗಳನ್ನು ಸಾಕುತ್ತಿರುವವರೇ ಈ ಮಾಲ್ ಸಂಸ್ಕೃತಿಯ ಜನಕರಾದ ಬಂಡವಾಳಿಗರು. ಈ ಮಾಲ್ ಗಳಿಗೆ ಪೂರೈಕೆಯಾಗುವ ಪ್ರಾಡಕ್ಟ್ ಗಳ ಜಾಹೀರಾತುಗಳಿಂದಲೇ ಮುಖ್ಯ ವಾಹಿನಿಯ ಬಹುತೇಕ ಮಾಧ್ಯಮಗಳ ಹೊಟ್ಟೆ ತುಂಬುವುದು. ಹೀಗಾಗಿ ಬಂಡವಾಳಶಾಹಿಗಳ ವಿರುದ್ಧವಾಗಲೀ, ಕಾರ್ಪೋರೇಟ್ ಸೆಕ್ಟರ್ ಗಳ ಹಿತಾಸಕ್ತಿಗೆ ವಿರುದ್ಧವಾಗಲೀ ದ್ವನಿ ಎತ್ತುವ ಶಕ್ತಿಯಾಗಲೀ ಹಾಗೂ ವಿರೋಧಿಸುವ ತಾಕತ್ತಾಗಲೀ ಮಾರಿಕೊಂಡ ಮಾಧ್ಯಮಗಳಿಗೆ ಇರಲು ಸಾಧ್ಯವೇ ಇಲ್ಲ.

ಹೆಚ್ಚೆಂದರೆ ಮಾಲೀಕರ ಮ್ಯಾನೇಜರುಗಳ ಆದೇಶದಂತೆ  ಫಕೀರಪ್ಪನವರ ಪ್ರವೇಶವನ್ನು ನಿರ್ಬಂಧಿಸಿದ ಸೆಕ್ಯೂರಿಟಿ ಗಾರ್ಡ್ ಕೆಲಸ ಕಳೆದು ಕೊಳ್ಳಬಹುದಷ್ಟೇ. ಒಂದರಡು ದಿನ ಸುದ್ದಿವಾಹಿನಿಗಳ ತೀರದ ಸುದ್ದಿ ದಾಹಕ್ಕೆ ಫಕೀರಪ್ಪ ಪ್ರಕರಣ ಆಹಾರ ಒದಗಿಸಿದಂತಾಗುತ್ತದೆ. ಆಳುವ ವರ್ಗಗಳು ಅದು ಹೇಗೆ ರೈತ ವಿರೋಧಿಯಾಗಿವೆಯೋ ಹಾಗೆಯೇ ಪರೋಕ್ಷವಾಗಿ ಪ್ರಭುತ್ವದ ನಿಯಂತ್ರಣದಲ್ಲಿರುವ ಮಾರಿಕೊಂಡ ಮಾಧ್ಯಮಗಳೂ ಸಹ ರೈತ ವಿರೋಧಿಗಳಾಗಿವೆ. ಫಕೀರಪ್ಪನಂತವರು ಸುದ್ದಿಯ ಸರಕಾಗುತ್ತಾರೆ, ಸೆಕ್ಯೂರಿಟಿ ಗಾರ್ಡ್ ನಂತಹ ಬಡವರು ಕೆಲಸ ಕಳೆದುಕೊಳ್ಳುತ್ತಾರೆ. ಮಾಲ್ ಮಾಲೀಕರು ಹಾಗೂ ಚಾನೆಲ್ ಮಾಲೀಕರುಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದರಲ್ಲಿ ತಲ್ಲೀನರಾಗಿರುತ್ತಾರೆ. ಸಂಕಷ್ಟಕ್ಕೊಳಗಾದ ಅನ್ನದಾತರು ಸಾಯುತ್ತಲೇ ಇರುತ್ತಾರೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು



More articles

Latest article