ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸಗಿರಿ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಿದ್ದ ನೈತಿಕ ಪೊಲೀಸಗಿರಿ ಈಗ ಹಾವೇರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದಿದ್ದು ಇಬ್ಬರ ಮೇಲೆ ಯುವಕರು ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.
ಹಾವೇರಿಯಲ್ಲಿ ನೈತಕ ಪೊಲೀಸ್ ಗಿರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜ.08ರಂದು ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿರುತ್ತಾರೆ.. ಆಟೋ ಚಾಲಕನೊಬ್ಬನ ಮಾಹಿತಿ ಮೇರೆಗೆ, ೫ ಜನರ ಯುವಕರ ಗುಂಪು ಏಕಾಏಕಿ ಲಾಡ್ಜ್ ಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈಗಾ ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ.
ನಂತರ ಯುವತಿಯನ್ನು ಅಜ್ಞಾತ ಸ್ಥಳವೊಂದಕ್ಕೆ ಕೊಂಡೊಯ್ದ ಯುವಕರು, ಮಾನಸಿಕ ಕಿರುಕುಳ ಸೇರಿದಂತೆ ದೈಹಿಕ ಹಲ್ಲೆ ನಡೆಸಿರುವುದಾಗಿ ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.
ಲಾಡ್ಜ್ ನ ಸಿಬ್ಬಂದಿ ವಿನಯ್ ಹಾನಗಲ್ಲ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಚಾಲಕನಾಗಿರುವ ಸೋಮಶೇಖರ ಎಂಬ ಯುವಕ ಯುವತಿಯೊಂದಿಗೆ ಆಗಮಿಸಿದ್ದಾಗ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ.
ಹಾವೇರಿ ಎಸ್ಪಿ ಅಂಶುಕುಮಾರ ಹಾನಗಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಸಿ ಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಲಾಗಿದೆ. ಸಂತ್ರಸ್ತ ಯುವತಿಯನ್ನು ವಿಚಾರಣೆಗೊಳಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.