ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ. ವೈದ್ಯಕೀಯ ಕ್ಷೇತ್ರದ ಏಳುಬೀಳುಗಳನ್ನು ಆತ್ಮಾವಲೋಕನ ಮಾಡಿಕೊಂಡು, ಸವಾಲುಗಳನ್ನು ಮೆಟ್ಟಿನಿಂತು ವೈದ್ಯ ವೃತ್ತಿಯ ಪಾವಿತ್ರ್ಯವನ್ನು ಕಾಪಾಡಲು ಸಂಕಲ್ಪ ಮಾಡುವ ದಿನವಾಗಿ ಈ ದಿನ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ ಅವರು ಬರೆದಿದ್ದಾರೆ.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಸಂಪತ್ತು ಎಂಬುದು ಸಾರ್ವಕಾಲಿಕ ಮಾತು. Health is wealth. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಔಷಧಿ ನೀಡಿ ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ವೈದ್ಯೋನಾರಾಯಣೋಹರಿ (ವೈದ್ಯ ದೇವರಿಗೆ ಸಮಾನ) ಎಂಬುದು ಭಾರತೀಯರ ಪುರಾತನ ನಂಬಿಕೆ. ಅನಾರೋಗ್ಯಕ್ಕೆ ತುತ್ತಾದ ರೋಗಿಯನ್ನು ಚಿಕಿತ್ಸೆ ಮೂಲಕ ಗುಣಪಡಿಸುವುದು ವೈದ್ಯರ ಮಹಾನ್ ಕಾಯಕ. ಅವರಿಗೆ ಗೌರವ, ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಭಾರತದಲ್ಲಿ ವೈದ್ಯರು ಮತ್ತು ವೈದ್ಯರ ಪ್ರಮುಖ ಕೊಡುಗೆಗಳನ್ನು ಗುರುತಿಸುವ, ಅವರ ಮಾನವೀಯತೆಯ ನಿರಂತರ ಸೇವೆ, ಕಾಳಜಿಗಾಗಿ ವೈದ್ಯ ವೃತ್ತಿಗೆ ಗೌರವ ಸಲ್ಲಿಸುವ ಸಲುವಾಗಿ ಅವರಿಗೊಂದು ದಿನ ಮೀಸಲಿಡಬೇಕೆನ್ನುವ ಚಿಂತನೆಗೆ ನಾಂದಿ ಹಾಕಿದ್ದು ಆಗಿನ ಪ್ರಧಾನಿ ಪಿ.ವಿ. ನರಸಿಂಹರಾಯರು. ಅದರಂತೆ, ಒಬ್ಬ ಮಾದರಿ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ಬಿಧನ್ ಚಂದ್ರರಾಯ್ ಅವರ ಜನ್ಮ ಮತ್ತು ಮರಣ ದಿನದ ಸ್ಮರಣೆಗಾಗಿ ಭಾರತದಲ್ಲಿ ಜುಲೈ ೧ ನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲು ಭಾರತ ಸರಕಾರವು 1991ರಲ್ಲಿ ಕರೆ ಕೊಟ್ಟಿತು. ವೈದ್ಯಕೀಯ ಕ್ಷೇತ್ರದ ಏಳುಬೀಳುಗಳನ್ನು ಆತ್ಮಾವಲೋಕನ ಮಾಡಿಕೊಂಡು, ಸವಾಲುಗಳನ್ನು ಮೆಟ್ಟಿನಿಂತು ವೈದ್ಯ ವೃತ್ತಿಯ ಪಾವಿತ್ರ್ಯವನ್ನು ಕಾಪಾಡಲು ಸಂಕಲ್ಪ ಮಾಡುವ ದಿನವಾಗಿ ಈ ದಿನ ಮುಖ್ಯವಾಗಿದೆ.
ಡಾ. ಬಿ.ಸಿ. ರಾಯ್ ಅವರ ಹಿನ್ನಲೆ
ಡಾ. ಬಿಧನ್ ಚಂದ್ರರಾಯ್ ಮಾನವೀಯತೆ, ಸಾಮಾಜಿಕ ಕಳಕಳಿ, ಅದ್ವಿತೀಯ ವೈದ್ಯಕೀಯ ಜ್ಞಾನದ ಅರಿವು, ಶಿಕ್ಷಣತಜ್ಞ, ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹೀಗೆ ಬಹುಮುಖ ಪ್ರತಿಭೆಯುಳ್ಳ ಅಂತರರಾಷ್ಟ್ರೀಯ ಖ್ಯಾತಿಯ ಶ್ರೇಷ್ಠ ವೈದ್ಯರು. ದೇಶಪ್ರೇಮದ ಹಿನ್ನಲೆಯುಳ್ಳ ಸಾಮಾನ್ಯ ಕುಟುಂಬವೊಂದರಲ್ಲಿ 1882 ಜುಲೈ 1 ರಂದು ಪಾಟ್ನಾದಲ್ಲಿ ಜನಿಸಿದರು. 1962 ಜುಲೈ 1 ರಂದು ತಮ್ಮ 80ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಹುಟ್ಟು ಮತ್ತು ಸಾವು ಒಂದೇ ದಿನಾಂಕವಾಗಿದ್ದ ವಿಶೇಷ ವ್ಯಕ್ತಿಯಾದ ಇವರು ವೈದ್ಯಲೋಕದ ಆದರ್ಶನೀಯ ಪ್ರಾತಃಸ್ಮರಣೀಯರು. ಸ್ವ-ಪ್ರತಿಭೆಯಿಂದ ಅವಕಾಶಗಳನ್ನು ಅನ್ವೇಷಿಸಿಕೊಂಡು, ಅವುಗಳನ್ನು ಗಿಟ್ಟಿಸಿಕೊಂಡು ತಾವು ಅಲಂಕರಿಸಿದ ಪ್ರತಿಯೊಂದು ಹುದ್ದೆಗೂ ಹೊಸಛಾಪನ್ನು ಮುದ್ರಿಸಿ ಆ ಹುದ್ದೆಗಳಿಗೆ ಮತ್ತಷ್ಟು ಗೌರವ ತಂದರು. ಇಂದಿನ ವೈದ್ಯ ಪೀಳಿಗೆಗೆ ಡಾ. ಬಿ.ಸಿ. ರಾಯ್ ಅವರ ಆದರ್ಶನೀಯ ವ್ಯಕ್ತಿತ್ವವನ್ನು ಪರಿಚಯಸುವುದಲ್ಲದೆ, ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಮೈಲುಗಲ್ಲುಗಳು ಮತ್ತು ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಈ ದಿನ ಸಹಕಾರಿಯಾಗಿದೆ.
ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ…
ಡಾ. ರಾಯ್ ಪಾಟ್ನಾದಲ್ಲಿ ಜನಿಸಿದರೂ ಪಶ್ಚಿಮ ಬಂಗಾಳವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ದೂರದ ಊರಿನಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆ, ಹಾಗೂ ಜನಮೆಚ್ಚುಗೆ ಗಳಿಸಿದರು. ಕಲ್ಕತ್ತಾದಲ್ಲಿ 1905ರಲ್ಲಿ ವೈದ್ಯಕೀಯ ಪದವಿ ಪಡೆದು ಆನಂತರ ವೈದ್ಯಶಾಸ್ತ್ರದ ಅತ್ಯುನ್ನತ ಪದವಿಯಾದ ಎಂ.ಆರ್.ಸಿ.ಪಿ. ಮತ್ತು ಶಸ್ತ್ರಕ್ರಿಯಾ ಶಾಸ್ತ್ರದ ಅತ್ಯುನ್ನತ ಪದವಿಯಾದ ಎಫ್.ಆರ್.ಸಿ.ಪಿ. ಗಳೆರಡೂ ಪದವಿಗಳನ್ನು ಎರಡೇ ವರ್ಷಗಳಲ್ಲಿ ಏಕಕಾಲಕ್ಕೆ ಇಂಗ್ಲೆಡಿನ ಪ್ರತಿಷ್ಠಿತ ರಾಯಲ್ ಕಾಲೇಜಿನಲ್ಲಿ ಪಡೆದ ಅಪ್ರತಿಮ ಪ್ರತಿಭಾವಂತರು. 1911ರಲ್ಲಿ ಭಾರತಕ್ಕೆ ಹಿಂದಿರುಗಿ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದರು. ಬಳಿಕ ಕ್ಯಾಂಪ್ಬೆಲ್ ಮೆಡಿಕಲ್ ಸ್ಕೂಲ್, ಕಾರ್ ಮೆಡಿಕಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸಾವಿರಾರು ವೈದ್ಯರ ಸೃಷ್ಟಿಗೆ ನಾಂದಿಯಾದವರು.
ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ..
ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ 1928ರಲ್ಲಿ ಭಾರತೀಯ ವೈದ್ಯಕೀಯ ಸಂಘ (IMA), ವೈದ್ಯಕೀಯ ಶಿಕ್ಷಣದ ಗುಣಮಟ್ಟ ಮತ್ತು ಸೇವೆ ಹೆಚ್ಚಿಸಲು 1934ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತು (IMC) ಸ್ಥಾಪಿಸಿದರು. ಅದೀಗ ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (NMC ) ಆಗಿದೆ.
ಇಂತಹ ಮಹತ್ವದ ಸಂಸ್ಥೆಗಳನ್ನು ಹುಟ್ಟುಹಾಕಿ, ಆ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಭದ್ರವಾದ ಬುನಾದಿ ಹಾಕಿದ ವೈದ್ಯ ಸಂಘಟನೆಗಳ ಪಿತಾಮಹರು ಇವರು. ಜಾದವ್ಪುರ್ ಟಿ.ಬಿ. ಆಸ್ಪತ್ರೆ, ಚಿತ್ತರಂಜನ್ ಸೇವಾಸದನ, ಕಮಲಾನೆಹರು ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆಯಲ್ಲಿ ಡಾ. ಬಿ.ಸಿ. ರಾಯ್ರ ಪಾತ್ರ ಪ್ರಮುಖವಾಗಿದೆ. 1946ರಲ್ಲಿ ಭಾರತೀಯ ವೈದ್ಯಕೀಯ ಸಂಘ, ವಿಶ್ವ ವೈದ್ಯಕೀಯ ಸಂಘದ ಸಂಘಟನೆಯಲ್ಲಿ (ಡಬ್ಲ್ಯೂ.ಎಂ.ಎ) ಸಹಾಯ ಮಾಡಿತು. ಅದರ ಸ್ಥಾಪಕ ಸದಸ್ಯರು ಬಿ.ಸಿ. ರಾಯ್ ಅವರು. ಇದರ ಕೇಂದ್ರ ಕಛೇರಿ ಫ್ರಾನ್ಸ್ ನ ಲ್ಲಿದೆ. ಐ.ಎಂ.ಎ. ಕಛೇರಿ ನವದೆಹಲಿಯಲ್ಲಿದೆ.
ರಾಜಕಾರಣಿಯಾಗಿ..
ವೈದ್ಯರು, ಶಿಕ್ಷಣತಜ್ಞರು, ಪ್ರಾಧ್ಯಾಪಕರಾಗಿ ತಮ್ಮ ವೈದ್ಯಕೀಯ ಸೇವೆಯ ಜನಪ್ರಿಯತೆಯಿಂದಲೇ ಸಾಮಾಜಿಕ ರೋಗಗಳಿಗೂ ವೈದ್ಯರಾಗಲು ಅವರು ರಾಜಕೀಯವಾಗಿ ಗುರುತಿಸಿಕೊಂಡರು. ಭಾರತೀಯ ಕಾಂಗ್ರೆಸ್ನ ಸದಸ್ಯರಾದರು. ಕೊಲ್ಕತ್ತಾ ನಗರಸಭೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದರು. ತಮ್ಮ ಜನಪ್ರಿಯತೆಯಿಂದ ಪಶ್ಚಿಮ ಬಂಗಾಳದ ಎರಡನೆಯ ಮುಖ್ಯಮಂತ್ರಿಯಾಗಿ ಸುದೀರ್ಘವಾಗಿ 1948–1962ರ ವರೆಗೆ 14 ವರ್ಷಗಳ ಕಾಲ ಜನತೆಯ ಸೇವೆ ಮಾಡುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು, ಸುಧಾರಣೆಗಳನ್ನು ಜಾರಿಗೆ ತಂದರು. ವೈದ್ಯನೊಬ್ಬ ಶ್ರದ್ಧೆಯಿಂದ ಮಾಡುವ ಸೇವೆಯಿಂದ ಗಳಿಸುವ ಪ್ರೀತಿಯಿಂದಲೇ ಯಾವ ಬಗೆಯ ಉನ್ನತ ಅಧಿಕಾರದ ಮನ್ನಣೆಯನ್ನೂ ಪಡೆಯಬಹುದು ಎಂಬುದಕ್ಕೆ ಡಾ.ಬಿ.ಸಿ.ರಾಯ್ ಜ್ವಲಂತ ಸಾಕ್ಷಿಯಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪ್ರತಿ ನಿತ್ಯ ಒಂದು ಗಂಟೆ ಕೊಳೆಗೇರಿಗಳಲ್ಲಿ ರೋಗಿಗಳನ್ನು ಪರೀಕ್ಷಿಸಿ, ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ದೇಶದ ಸೇವೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ಅವರು ತಮ್ಮ ಕೊನೆಯ ದಿನಗಳಲ್ಲಿ ತಾವು ಸಂಪಾದಿಸಿದ ಆಸ್ತಿ-ಪಾಸ್ತಿಗಳನ್ನು ಸಾರ್ವಜನಿಕ ಸಂಸ್ಥೆಗೆ ದಾನ ಮಾಡಿದ ಆದರ್ಶಪ್ರಾಯರು.
ಗಾಂಧೀಜಿಯವರಿಗೆ ವೈದ್ಯರಾಗಿ…
ಮಹಾತ್ಮ ಗಾಂಧೀಜಿಯವರೊಂದಿಗೆ ಆತ್ಮೀಯರಾಗಿದ್ದ ಇವರು 1930ರಲ್ಲಿ ಅಸಹಕಾರ ಚಳುವಳಿಯ ನೇತೃತ್ವ ವಹಿಸಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ (ಭಾರತಬಿಟ್ಟು ತೊಲಗಿ) ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬ್ರಹ್ಮಸಮಾಜದ ಅನುಯಾಯಿಗಳಾಗಿದ್ದ ಇವರು ಮಹಾತ್ಮ ಗಾಂಧೀಜಿಯವರಿಗೆ ವೈಯಕ್ತಿಕ ವೈದ್ಯರಾಗಿದ್ದ ಅಪ್ರತಿಮ ದೇಶಭಕ್ತರು.
ʼಭಾರತರತ್ನʼ ಪ್ರಶಸ್ತಿ ಪರಸ್ಕೃತರು
ಮಾನವೀಯ ಮೌಲ್ಯವುಳ್ಳ ಶ್ರೇಷ್ಠ ವೈದ್ಯರಾಗಿ, ಜ್ಞಾನದಾಹಿ ಶಿಕ್ಷಣ ತಜ್ಞರಾಗಿ, ಸಂಘಟನಾ ಚತುರರಾಗಿ, ರಾಷ್ಟ್ರಪ್ರೇಮಿ ರಾಜಕಾರಣಿಯಾಗಿ, ಸರಳ ಜೀವಿಯಾಗಿ, ಮುಖ್ಯಮಂತ್ರಿಯಾಗಿ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಭಾರತ ಸರ್ಕಾರವು ಫೆಬ್ರವರಿ 4, 1961ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲನೇ ವೈದ್ಯರು ಇವರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘದಿಂದ 1973 ರಿಂದ ಡಾ. ಬಿ.ಸಿ.ರಾಯ್ ಹೆಸರಿನಲ್ಲಿ ಪ್ರತಿಭಾವಂತ ವೈದ್ಯರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮೊದಲನೆ ಪ್ರಶಸ್ತಿಯನ್ನು ಡಾ. ಸಂದೀಪ್ ಮುಖರ್ಜಿ ಯವರಿಗೆ ನೀಡಲಾಯಿತು.
ವೈದ್ಯಕೀಯ ಶಿಕ್ಷಣದಲ್ಲಿ ವಿಜ್ಞಾನದ ಸೌಲಭ್ಯಗಳು
ಡಾ. ಬಿ.ಸಿ. ರಾಯ್ ಕಾಲದಲ್ಲಿ ವೈದ್ಯಕೀಯ ವಿಜ್ಞಾನ ಇಂದಿನಷ್ಟು ಬೆಳೆಯದೇ ಇದ್ದರೂ ಮತ್ತು ಆಧುನಿಕ ರೋಗ ಪತ್ತೆಯ ತಂತ್ರಜ್ಞಾನದ (ಸಿ.ಟಿ., ಎಂ.ಆರ್.ಐ., ಪೆಟ್, ಕ್ಯಾಥ್ ಲ್ಯಾಬ್ ಇತ್ಯಾದಿ) ಸೌಲಭ್ಯಗಳು ಲಭ್ಯವಿಲ್ಲದಿದ್ದರೂ ರೋಗಿ ನೀಡುವ ಮಾಹಿತಿ ಮತ್ತು ದೈಹಿಕ ಪರೀಕ್ಷೆಗಳಾಧಾರಿತ ಕ್ಲಿನಿಕಲ್ ಜ್ಞಾನದಿಂದಲೇ ರೋಗ ಪತ್ತೆಯನ್ನು ಮಾಡಿ ಸಮರ್ಥವಾಗಿ ಚಿಕಿತ್ಸೆ ನೀಡುತ್ತಿದ್ದ ಕಾಲವದು. ಇಂದು ಕ್ಲಿನಿಕಲ್ ಜ್ಞಾನ ಕಡಿಮೆಯಾಗಿ ಆಧುನಿಕ ತಂತ್ರಜ್ಞಾನದ ಸಲಕರಣೆಗಳಿಂದ ನಿರ್ದಿಷ್ಟವಾಗಿ ರೋಗ ಪತ್ತೆ ಮಾಡುವ ವಿಧಾನಗಳು ಮೇಲುಗೈ ಪಡೆದಿವೆ. ಉತ್ಕೃಷ್ಟ ಸೂಕ್ಷ್ಮಜೀವಿ ನಿರೋಧಕಗಳ, ರೋಬಾಟಿಕ್ ಶಸ್ತ್ರಕ್ರಿಯೆ, ಸೈಬರ್ನೈಪ್, ಲೆಪ್ರೋಸ್ಕೋಪಿ, ಒಳಾಂಗ ದರ್ಶನ ಶಸ್ತ್ರಕ್ರಿಯೆ, ಲೇಸರ್ ಚಿಕಿತ್ಸೆ, ಬ್ರೇಕಿಥೆರಪಿ, ರೆಡಿಯೇಶನ್ ಥೆರಪಿ ಇತ್ಯಾದಿ ಹೊಸಹೊಸ ಆತ್ಯಾಧುನಿಕ ಚಿಕಿತ್ಸಾ ವಿಧಾನಗಳ ಅನ್ವೇಷಣೆಯಿಂದ ರೋಗಗಳನ್ನು ನಿಯಂತ್ರಿಸಿ ಜೀವಾವಧಿಯನ್ನು ಮುಂದೂಡಲಾಗಿದೆ.
ಬದಲಾದ ವೈದ್ಯರ ಮನೋವೃತ್ತಿ
ವೈದ್ಯಕೀಯ ಕ್ಷೇತ್ರವೂ ಸಮಾಜದ ಒಂದು ಅಂಗವಾಗಿದ್ದು ಆಯಾಯ ಕಾಲಘಟ್ಟದಲ್ಲಿ ಆದ ಬದಲಾವಣೆಗಳು ವೈದ್ಯಕೀಯ ಕ್ಷೇತ್ರದ ಮೇಲೂ ಬೀರಿರುವ ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ. ಮಾನವೀಯತೆ ಮತ್ತು ಸೇವಾದೃಷ್ಟಿಗಳು ಮೇಲುಗೈ ಪಡೆದಿದ್ದ ಅಂದಿನ ವೈದ್ಯಕೀಯ ಕ್ಷೇತ್ರ ಇಂದು ವಾಣಿಜ್ಯಮಯವಾಗಿ, ವ್ಯಾವಹಾರಿಕ ಸೇವೆಯಾಗಿ ಪರಿವರ್ತನೆಗೊಂಡಿದೆ. ‘ಯಮಹರತಿ ಪ್ರಾಣವೈದ್ಯ ಧನಾನಿಚ’ ಯಮ ಪ್ರಾಣವನ್ನು ಮಾತ್ರ ಕಸಿದರೆ ವೈದ್ಯ ಪ್ರಾಣದ ಜೊತೆಗೆ ಹಣವನ್ನೂ ಕಸಿಯುತ್ತಾನೆ ಎಂಬ ಅಭಿಪ್ರಾಯ ಇಂದು ಮೇಲುಗೈ ಪಡೆಯುತ್ತಿದೆ. ಇದಕ್ಕೆ ಸಮಾಜದ ವ್ಯವಸ್ಥೆ ಹೊಣೆಯೇ ವಿನಃ ಯಾರೊಬ್ಬರನ್ನು ಬೊಟ್ಟುಮಾಡಿ ತೋರಿಸುವಂತಿಲ್ಲ. ಭೌತಿಕ ಸುಖ ಆಕರ್ಷಣೆಯ ಮನೋಸ್ಥಿತಿ, ದುಬಾರಿಯಾದ ಆಧುನಿಕ ವೈದ್ಯ ತಂತ್ರಜ್ಞಾನದ ಸಲಕರಣೆಗಳು ವ್ಯಾಪಾರೀಕರಣಗೊಂಡ ವೈದ್ಯಕೀಯ ಶಿಕ್ಷಣ, ವೈದ್ಯ-ರೋಗಿಯ ನಡುವಿನ ಆತ್ಮವಿಶ್ವಾಸದ ಕೊರತೆ, ವೈದ್ಯಕೀಯ ಜ್ಞಾನ, ಅಂಗಾಂಗಗಳ ವಿಶೇಷ ತಜ್ಞತೆಯ ಜ್ಞಾನವಾಗಿ ವಿಂಗಡಣೆಗೊಂಡು ಅಂಗಾಂಗಕ್ಕೊಬ್ಬ ವಿಶೇಷ ತಜ್ಞರು ಹುಟ್ಟಿಕೊಂಡಿದ್ದು, ಸಮಗ್ರ ದೃಷ್ಟಿಯಿಂದ ರೋಗಿಯನ್ನು ನೋಡದಿರುವುದು ಪ್ರಮುಖ ಕಾರಣಗಳು ಎನ್ನಬಹುದು. ಈ ವಿಷಮ ಸ್ಥಿತಿಯ ಕುರಿತು ಆತ್ಮಾವಲೋಕನ ಅತ್ಯಗತ್ಯ.
ವೈದ್ಯ-ರೋಗಿಯ ಸಂಬಂಧ
ರೋಗವನ್ನು ವಾಸಿಮಾಡುವಲ್ಲಿ ವೈದ್ಯ-ರೋಗಿಯ ನಡುವಿನ ವಿಶ್ವಾಸಾರ್ಹತೆ ಮಹತ್ವದ್ದು. ವೈದ್ಯರು ರೋಗಿಗೆ ತೋರುವ ಬದ್ಧತೆ, ಪ್ರೀತಿ, ಮಾನವೀಯ ಕಾಳಜಿಗಳು ಅವರಿಬ್ಬರ ನಡುವಿನ ವಿಶ್ವಾಸಾರ್ಹತೆಯನ್ನು ವೃದ್ಧಿಸುತ್ತವೆ. ಇವಿಲ್ಲದೆ ವೈದ್ಯರು ಪರಿಣಾಮಕಾರಿಯಾದ ಚಿಕಿತ್ಸೆ ನೀಡಿದರೂ ಆಪೇಕ್ಷಿತ ಫಲಸಿಗದು. ಇಂದು ಈ ವಿಶ್ವಾಸಾರ್ಹತೆ ಸಡಿಲಗೊಳ್ಳಲು ನುರಿತ ವೈದ್ಯರುಗಳ ಕೊರತೆ, ವಾಣಿಜ್ಯಮಯವಾದ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ, ಮೂಲಭೂತ ಶಿಕ್ಷಣ ಸೌಲಭ್ಯವಿಲ್ಲದ ವೈದ್ಯಕೀಯ ಕಾಲೇಜುಗಳು, ಖಾಸಗಿಯವರಿಂದ ಆರಂಭವಾಗಿ ಅದಕ್ಷ ವೈದ್ಯರು ಹೊರ ಬರುತ್ತಿರುವ ಕಾರಣಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ವೈದ್ಯಕೀಯ ವೃತ್ತಿಯ ಸೇವಾಗುಣ ಮತ್ತು ಲೋಪದೋಷಗಳನ್ನು ಕಾನೂನಿನಡಿ ತಂದು ಪರಿಹಾರ ನೀಡುವ ಮತ್ತು ಶಿಕ್ಷಿಸುವ ಕಾನೂನುಗಳು ಸಬಲಗೊಂಡಿರುವುದನ್ನು ಗಮನಿಸಬಹುದು.
ಈ ಎಲ್ಲಾ ಸವಾಲುಗಳ ಹಿನ್ನಲೆಯಲ್ಲೂ ವೈದ್ಯರುಗಳು ಡಾ. ಬಿ.ಸಿ. ರಾಯ್ ಅವರ ವ್ಯಕ್ತಿತ್ವ, ಸೇವಾಗುಣ, ಜನಪ್ರಿಯತೆ, ಅವರಿಗಿದ್ದ ಕಾಳಜಿ-ಕಳಕಳಿಗಳನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕಲ್ಲವೆ? ಅಂದಾಗ ಸುಸ್ಥಿರ ಆರೋಗ್ಯವಂತ ಸಮಾಜ ನಿರ್ಮಾಣವಾಗಬಲ್ಲದು.
ಡಾ. ಗಂಗಾಧರಯ್ಯ ಹಿರೇಮಠ
ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613