ಶಾಲೆಗಳಲ್ಲಿ ʼನಿರ್ದಿಗಂತʼ ರಂಗಚಟುವಟಿಕೆ: ಕಲ್ಲುಹಾಕುವವರಿಗೆ ಪ್ರಶ್ನೆಗಳು

Most read

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ ‘ಶಾಲಾರಂಗ’ ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ನಿರ್ದಿಗಂತ ಸಂಸ್ಥೆಗೆ ಪಾವತಿಸಿರುವ ಹಣದ ದಾಖಲೆಯನ್ನು ʼದಿ ಫೈಲ್‌ʼ ಸಾರ್ವಜನಿಕರಿಗೆ ತೆರೆದಿಟ್ಟಿದೆ. ಈ ಸುದ್ದಿಯನ್ನು ಆಧರಿಸಿ ರಂಗಕರ್ಮಿ ಶಶಿಕಾಂತ ಯಡಹಳ್ಳಿಯವರು ಕೆಲ ಪ್ರಶ್ನೆಗಳನ್ನು ಇಲ್ಲಿ ಎತ್ತಿದ್ದಾರೆ.

ನಿಸ್ವಾರ್ಥವಾಗಿ ಬೇರೆ ಬೇರೆ ಆಯಾಮಗಳಲ್ಲಿ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ, ರಂಗಶಿಕ್ಷಣದಲ್ಲಿ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಮುಂದುವರೆಯುತ್ತಿರುವ ‘ನಿರ್ದಿಗಂತ’ ಸಾಂಸ್ಕೃತಿಕ ಸಂಸ್ಥೆ ಕುರಿತು ಅನಗತ್ಯ ಅಪಸ್ವರಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಈ ಕುರಿತು ವರದಿಗಳನ್ನು ಪ್ರಕಟಿಸಿರುವವರ ತಕರಾರುಗಳೇನು? ಅವುಗಳಲ್ಲಿ ಸತ್ಯಗಳೆಷ್ಟು, ಮಿಥ್ಯೆಗಳೆಷ್ಟು, ಊಹಾಪೋಹಗಳೆಷ್ಟು ಎನ್ನುವುದನ್ನು ವಿಶ್ಲೇಷಿಸಬೇಕಿದೆ. ಇಲ್ಲದೇ ಹೋದರೆ ಅವರು ಹೇಳುವ ಅರ್ಧಸತ್ಯಗಳನ್ನೇ ನಿಜ ಎಂದು ಜನತೆ ನಂಬುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.  ದಿ ಫೈಲ್ ಪೋರ್ಟಲ್ ಕೆಲವು ದಾಖಲೆಗಳೊಡನೆ ಎತ್ತಿರುವ ಪ್ರಶ್ನೆಗಳ ಸತ್ಯಾಸತ್ಯತೆಗಳ ಕುರಿತು ಸಹ ಚರ್ಚೆ ನಡೆಯಬೇಕಿದೆ.

ಕೆಲವು ವಾಸ್ತವಾಂಶಗಳನ್ನು ಗಮನಿಸೋಣ:

      ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ ‘ಶಾಲಾರಂಗ’ ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ಆದರೆ 2024ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಇದ್ದ ಕಾರಣ ‘ಶಾಲಾರಂಗ’ ಕಾರ್ಯಕ್ರಮವನ್ನು ಮುಂದೂಡಿ 2024ರ ಮೇ ತಿಂಗಳ ಆನಂತರ ಮುಂದುವರೆಸುವುದಾಗಿ ಹೇಳಲಾಗಿತ್ತು. ಅದೇ ರೀತಿ “ಈಗಾಗಲೇ ಪ್ರಸ್ತುತ ಪಡಿಸಿದ್ದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಯಾ ಶಾಲೆಗಳಿಂದ ಒಪ್ಪಂದದ ಪ್ರಕಾರ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಬೇಕು” ಎಂದು ನಿರ್ದಿಗಂತ ಸಂಸ್ಥೆಯು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರವನ್ನು 21-01-2024 ರಂದು ಬರೆದಿತ್ತು ಎಂಬುದು ನಿಜ. ಈ ಪತ್ರಕ್ಕೆ ಪೂರಕವಾಗಿ ಎರಡು ವಸತಿ ಶಾಲೆಯ ಪ್ರಾಂಶುಪಾಲರು 50ಸಾವಿರ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಕ್ಕೆ ಪತ್ರ ಬರೆದು ಆಗ್ರಹಿಸಿದ್ದೂ ಸತ್ಯ.

•      ಹೀಗೆ 18 ಶಾಲೆ ಕಾಲೇಜುಗಳ ಪೈಕಿ ಮೈಸೂರು ಹಾಗೂ ಹೆಚ್.ಡಿ.ಕೋಟೆಯ ಶಾಲೆಗಳಿಗೆ ತಲಾ 44 ಸಾವಿರದಂತೆ ಒಟ್ಟು 88 ಸಾವಿರ ಹಣ ಬಿಡುಗಡೆಯಾಗಿದ್ದರಲ್ಲೂ ಸಂದೇಹವಿಲ್ಲ. ಯಾವಾಗ ಅನಗತ್ಯ ವಿವಾದ ಸೃಷ್ಟಿಸಲಾಯ್ತೋ ಆಗ “ಆರ್ ಟಿ ಜಿ ಎಸ್ ಮೂಲಕ ಪಾವತಿಸಲಾದ ಹಣ ನಮಗೆ ಬೇಕಾಗಿಲ್ಲ ಸರಕಾರಕ್ಕೆ ವಾಪಸ್ ಮಾಡುತ್ತೇವೆ” ಎಂದು ಪ್ರಕಾಶ್ ರಾಜ್ ಅವರು  ಇಲಾಖಾ ಆಯುಕ್ತರಿಗೆ ಹೇಳಿದ್ದು ಸತ್ಯ. “ಸರಕಾರಿ ಇಲಾಖೆಯಿಂದ ಪಾವತಿಸಿದ ಹಣವನ್ನು ಮತ್ತೆ ಮರಳಿ ಪಡೆಯಲು ಅವಕಾಶವಿಲ್ಲ, ಇದೊಂದು ಸಲ ಸ್ವೀಕರಿಸಿ, ಇನ್ನು ಮುಂದೆ ಯಾವುದೇ ಹಣವನ್ನೂ ನಿರ್ದಿಗಂತಕ್ಕೆ ಪಾವತಿಸುವುದಿಲ್ಲ” ಎಂದು ಆಯುಕ್ತರು ಮನವಿ ಮಾಡಿಕೊಂಡಿದ್ದೂ ನಿಜ. ಹಾಗೆ ಬಂದ ಹಣವನ್ನು ಇಬ್ಬರು ಕಲಾವಿದರ ಸಂಬಳಕ್ಕೆ ನಿರ್ದಿಗಂತ ಪಾವತಿಸಿದ್ದೂ ಅಷ್ಟೇ ಸತ್ಯ. ಹೀಗಾಗಿ  ಹಿಂದೆ ಮುಂದೆ ಪರಿಶೀಲಿಸದೇ, ಅನುಮಾನ ಬಂದಾಗ ಸಂಬಂಧಿಸಿದವರಿಗೆ ಕಾಲ್ ಮಾಡಿ ಸ್ಪಷ್ಟೀಕರಣವನ್ನೂ ಕೇಳದೇ ನಿಸ್ವಾರ್ಥವಾಗಿ ರಂಗಸೇವೆ ಮಾಡುತ್ತಿರುವ ಸಂಸ್ಥೆ ಹಾಗೂ ಅದರ ರೂವಾರಿಗಳ ಮೇಲೆ ಹೀಗೆ ಆರೋಪಗಳನ್ನು ಮಾಡುವುದು ಎಷ್ಟು ನ್ಯಾಯ ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ.

•      ಇಲ್ಲಿ ಮೊದಲನೆಯದಾಗಿ ಗಮನಿಸಬೇಕಾದದ್ದು ಕೇವಲ 18 ಶಾಲೆಗಳಲ್ಲಿ ಮಾತ್ರ ‘ಶಾಲಾರಂಗ’ ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆ ಅನುಷ್ಠಾನಗೊಳಿಸಿದೆಯೇ ಹೊರತು ಜಿ ಮಹಾಂತೇಶ್ ಅವರ ದಿ-ಫೈಲ್ ಎಪ್ರಿಲ್ ತಿಂಗಳಲ್ಲಿ ಪ್ರಕಟಿಸಿದಂತೆ 833 ಶಾಲೆಗಳಲ್ಲಿ ಸಿಂಹಪಾಲು ಪಡೆದಿಲ್ಲ. ಅಷ್ಟೂ ಶಾಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇನೆಂದು ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ. 18 ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾದ ರಂಗಕಾರ್ಯಕ್ಕೆ ಹಣ ಬಿಡುಗಡೆ ಮಾಡಲು ನಿರ್ದಿಗಂತವು ಸರಕಾರಕ್ಕೆ ಪತ್ರ ಬರೆದಿದ್ದೂ ನಿಜ. ಮಾಡಿದ ಕೆಲಸಕ್ಕೆ ಒಪ್ಪಂದದಂತೆ ಅನುದಾನ ಬಿಡುಗಡೆ ಮಾಡುವುದು ಕ್ರೈಸ್ ಸಂಸ್ಥೆಯ ಕೆಲಸ ಹಾಗೂ ಕೇಳುವುದು ಕೆಲಸ ಮಾಡಿ ಮುಗಿಸಿದ ಸಂಸ್ಥೆಯ ಹಕ್ಕು. ಹಣ ಬಿಡುಗಡೆ ಮಾಡಿ ಎಂದು ಪತ್ರವನ್ನು ನಿರ್ದಿಗಂತ ಬರೆದದ್ದು ಜನವರಿ 21 ರಂದು. ಆದರೆ ಏಪ್ರಿಲ್ ತಿಂಗಳಲ್ಲಿ ಮಹಾಂತೇಶ್ ರವರು ‘ನಿರ್ದಿಗಂತ ಸಿಂಹಪಾಲು ಪಡೆದಿದೆ’ ಎಂದು ದಿ-ಪೈಲ್ ಮೂಲಕ ಗುಲ್ಲೆಬ್ಬಿಸಿದರು. ಅದನ್ನು ನಂಬಿದ ಹಲವರು ಒಂದೇ ಸಂಸ್ಥೆಗೆ ಸಿಂಹಪಾಲು ಕೊಟ್ಟಿದ್ದನ್ನು ವಿರೋಧಿಸಿದರು. ಈ ಅನಪೇಕ್ಷಿತ ಮಾತುಗಳಿಂದ ನೊಂದು ಬೇಸರಗೊಂಡ ಪ್ರಕಾಶ್ ರಾಜ್  ‘ಇನ್ನುಮುಂದೆ ಸರಕಾರಿ ಸಂಸ್ಥೆಗಳಿಂದ ಯಾವುದೇ ಅನುದಾನವನ್ನು ಪಡೆಯುವುದಿಲ್ಲ’ವೆಂದು ಘೋಷಿಸಿದರು. ಕೋಟಿ ಕೋಟಿಗಳನ್ನು ಸಿನೆಮಾ ಕ್ಷೇತ್ರದಲ್ಲಿ ಸಂಪಾದಿಸುವ ಪ್ರಕಾಶ್ ರಾಜ್ ರವರಿಗೆ 18 ಶಾಲೆಗಳಲ್ಲಿ ಮಾಡಿದ ರಂಗಕಾರ್ಯದಿಂದ ಬರಬಹುದಾಗಿದ್ದ 9 ಲಕ್ಷ ರೂಪಾಯಿ ಹಣ ಯಾವ ಲೆಕ್ಕಕ್ಕೂ ಇಲ್ಲವಾದದ್ದು. ಆದರೆ “ಅನುದಾನಕ್ಕಾಗಿಯೇ ಶಾಲಾರಂಗ ಪ್ರಾಜೆಕ್ಟ್ ಮಾಡಲಾಗಿದೆ. 4.2 ಕೋಟಿ ರೂಪಾಯಿಗಳ ಯೋಜನೆಯಲ್ಲಿ ಬಹುಪಾಲನ್ನು ನಿರ್ದಿಗಂತವೇ ಪಡೆಯುತ್ತಿದೆ. ಬೇರೆ ಸಾಂಸ್ಕೃತಿಕ ಸಂಸ್ಥೆಗಳಿಗೂ ದೊರೆಯಬೇಕಾಗಿದ್ದ ಅವಕಾಶವನ್ನು ಇದೊಂದೇ ಸಂಸ್ಥೆ ಕಬಳಿಸುತ್ತಿದೆ” ಎಂದು ದಿ-ಫೈಲ್ ಲೇಖನದಿಂದ ಪ್ರೇರಿತವಾದ ಕೆಲವರು ಇನ್ನಷ್ಟು ಬಣ್ಣ ಹಚ್ಚಿ ಅಪಪ್ರಚಾರ ಮಾಡಲು ಶುರುಮಾಡಿದ್ದು ವಿಪರ್ಯಾಸ.

•      ಕನ್ನಡ ರಂಗಭೂಮಿಯಲ್ಲಿ ತನ್ನ ಪಾಡಿಗೆ ತಾನು ತನಗನ್ನಿಸಿದಂತೆ ಕೆಲಸ ಮಾಡುತ್ತಿರುವ ‘ನಿರ್ದಿಗಂತ’ ಸಂಸ್ಥೆ ತನ್ನ ಕೆಲಸಗಳ ಬಗ್ಗೆ ಪ್ರಚಾರ ಮಾಡದೇ ಇರುವುದರಿಂದ ಬಹುತೇಕರಿಗೆ ಅದೊಂದು ನಿಗೂಢ ಸಂಸ್ಥೆ ಎನ್ನುವ ಅನುಮಾನ ಬರಲು ಕಾರಣವಾಗಿತ್ತು. ಈ ಅನುಮಾನವನ್ನು ಬಗೆಹರಿಸಿಕೊಳ್ಳಲೆಂದೇ ನಾನೂ ಸಹ ಬಿ.ಸುರೇಶರವರ ಜೊತೆ ನಿರ್ದಿಗಂತಕ್ಕೆ ಭೇಟಿಕೊಟ್ಟೆ. ಅಲ್ಲಿಯ ರಂಗತರಬೇತಿ ಕ್ರಮಗಳನ್ನು ನೋಡಿ, ಸ್ವತಃ ಪ್ರಕಾಶ್ ರಾಜ್  ಹಾಗೂ ಶ್ರೀಪಾದ ಭಟ್ ರವರಿಂದ ಮಾಹಿತಿಗಳನ್ನು ಪಡೆದೆ. ಆಗಲೇ ನಿರ್ದಿಗಂತದ ಆಶಯ ಹಾಗೂ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಮೂಡಿತು. ಅಪಪ್ರಚಾರಗಳೆಲ್ಲಾ ಅಸೂಯೆಯ ಅತಿರೇಕಗಳು ಎಂದು ಅರಿವಾಯಿತು.

•      ಯಾವಾಗ ನಿರ್ದಿಗಂತ ಸಂಸ್ಥೆ ಸರಕಾರಿ ಅನುದಾನವನ್ನು ಪಡೆಯುವುದಿಲ್ಲವೆಂದು ನಿರ್ಧರಿಸಿದೆಯೋ, ಸ್ವ-ಇಚ್ಚೆಯಿಂದ ಸರಕಾರಿ ವಸತಿ ಶಾಲೆಗಳಲ್ಲಿ ಉಚಿತ ರಂಗಶಿಕ್ಷಣ ಚಟುವಟಿಕೆಗಳನ್ನು ಮುನ್ನಡೆಸುವುದಾಗಿ ನಿರ್ಧರಿಸಿದೆಯೋ ಆಗ ದಿ-ಫೈಲ್ ಮಾಡಿದ ಎಲ್ಲಾ ಆರೋಪಗಳೂ ಬೆಲೆಕಳೆದುಕೊಳ್ಳುತ್ತವೆ. ಯಾಕೆಂದರೆ ದಿ-ಫೈಲ್ ಮಾಡಿದ ಪ್ರಮುಖ ಆರೋಪಗಳೇನೆಂದರೆ ನಿರ್ದಿಗಂತ ಸಂಸ್ಥೆಯು ‘ಶಾಲಾರಂಗ’ ಯೋಜನೆಯಲ್ಲಿ ಸಿಂಹಪಾಲು ಪಡೆಯುತ್ತಿದೆ ಹಾಗೂ ಅನುದಾನ ಪಡೆಯಲೆಂದೇ ಯೋಜನೆ ಹಾಕಿಕೊಂಡಿದೆ ಎಂಬುದು. ಆದರೆ 833 ಶಾಲೆಗಳಲ್ಲಿ ಕೇವಲ 18 ಶಾಲೆಗಳಲ್ಲಿ ಮಾತ್ರ ಅದು ರಂಗಕಾರ್ಯ ಮಾಡಿದೆ ಹಾಗೂ ಅನುದಾನವನ್ನು ಪಡೆಯುವುದಿಲ್ಲವೆಂದು ನಿರ್ಧರಿಸಿದೆ. ಅದನ್ನು ಎಪ್ರಿಲ್ ತಿಂಗಳಲ್ಲೇ ಸ್ವತಃ ಪ್ರಕಾಶ್ ರವರೇ ಸ್ಪಷ್ಟೀಕರಿಸಿದ್ದರು. ವಿಷಯ ಹೀಗಿರುವಾಗ ಮತ್ತೆ ಮಹಾಂತೇಶ್ ದಿ-ಫೈಲ್ ಮೂಲಕ ಇಲ್ಲದ್ದನ್ನು ಕೆದಕಿ ರಾಡಿ ಮಾಡಿ ಅಪನಂಬಿಕೆಯನ್ನು ಹುಟ್ಟಿಸುವ ರಂಗವಿರೋಧಿ ಕೆಲಸ ಮಾಡಬಾರದಿತ್ತು. ಮಾಡಿಯಾಯಿತು.

•   ಈ ಸಲ ಆಯ್ದ ಶಾಲೆಗಳಲ್ಲಿ ತಮ್ಮ ಶಾಲಾರಂಗ ಚಟುವಟಿಕೆಗಳನ್ನು ಮುಂದುವರೆಸಲು ಸರಕಾರಕ್ಕೆ ಮತ್ತೆ ನಿರ್ದಿಗಂತ ಪ್ರಸ್ತಾವನೆ ಸಲ್ಲಿಸಿ ಯಾವುದೇ ಹಣ ಅನುದಾನ ಫಲಾಪೇಕ್ಷೆಗಳಿಲ್ಲದೇ ಶಾಲಾಕಾಲೇಜು ರಂಗಕಾರ್ಯವನ್ನು ಮಾಡುವುದಾಗಿ ಕೋರಿಕೊಂಡಿತು. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು 14-06-2024 ರಂದು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿ “ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕತಿಕ ಮತ್ತು ರಂಗಭೂಮಿ  ಕಾರ್ಯಚಟುವಟಿಕೆಗಳನ್ನು (Theatre and Cultural activities) ವಸತಿ ಶಾಲೆಯಲ್ಲಿ ಅನುಷ್ಠಾನಕ್ಕೆ ತರುವುದನ್ನು ಸಂಘದ 80ನೇ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ. ನಿರ್ದಿಗಂತ ಸಂಸ್ಥೆಯವರಿಂದ ಪ್ರಸ್ತುತ ಪಡಿಸುವ ‘ಶಾಲಾರಂಗʼ (ಹಾಡು, ಕತೆ, ಪ್ರಹಸನ, ನಾಟಕ, ಬೊಂಬೆಗಳ ನಡಿಗೆ ಶಾಲೆಯ ಕಡೆಗೆ) ಕಾರ್ಯಕ್ರಮವನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಧೀನದಲ್ಲಿ ಬರುವ ವಿವಿಧ ವಸತಿ ಶಾಲೆಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಸ್ತುತ ಪಡಿಸಲು ಅನುಮತಿ ನೀಡಿದೆ” ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಅಧಿಕೃತ ಜ್ಞಾಪನ ಪತ್ರದಲ್ಲಿ “ಉಚಿತವಾಗಿ ಪ್ರಸ್ತುತ ಪಡಿಸಲು” ಎನ್ನುವುದನ್ನು ದಿ-ಫೈಲ್ ಸೃಷ್ಟಿಕರ್ತರು ಯಾಕೆ ಗಮನಿಸುತ್ತಿಲ್ಲ?

ನಿರ್ದಿಗಂತ’ದ ವಿರುದ್ಧ ಆರೋಪ ಮಾಡುತ್ತಿರುವ “ದಿ-ಫೈಲ್” ಗೆ ಕೇಳಲು ಪ್ರಶ್ನೆಗಳಿವೆ..

1. 4.2 ಕೋಟಿಯ ‘ಶಾಲಾರಂಗ’ ಯೋಜನೆಯಲ್ಲಿ ನಿರ್ದಿಗಂತವು ಸಿಂಹಪಾಲು ಪಡೆದಿದೆ ಎಂದು ಹೇಳಲಾಗಿದೆಯಲ್ಲ  ಆ ಸಿಂಹಪಾಲು ಎಷ್ಟು?

2. “ನಿರ್ದಿಗಂತ” ವು ತಾನು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಕ್ರೈಸ್ ಸಂಸ್ಥೆಯ ಜೊತೆಗಿನ ಒಪ್ಪಂದದಂತೆ ಹಣ ಬಿಡುಗಡೆ ಮಾಡಲು ಪತ್ರ ಬರೆದಿದ್ದರಲ್ಲಿ ತಪ್ಪೇನಿದೆ?. ಏನೂ ರಂಗಕ್ರಿಯೆ ಮಾಡದೇ ಹಣ ಕೇಳಿ ಪಡೆದು ಭ್ರಷ್ಟಾಚಾರವನ್ನೇನೂ ಮಾಡಿಲ್ಲವಲ್ಲ? ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಿ ಹಣವನ್ನು ದುರುಪಯೋಗವನ್ನೂ ಮಾಡಿಲ್ಲವಲ್ಲಾ?

3. ನಿರ್ದಿಗಂತ ಮಾಡಿದ ಕೆಲಸಕ್ಕೆ ಹಣ ಪಾವತಿಯಾಗಿದ್ದರೆ ಇನ್ನೂ ಹೆಚ್ಚು ಶಾಲೆಗಳಲ್ಲಿ ಶಾಲಾರಂಗ ಯೋಜನೆ ವಿಸ್ತರಿಸಲು ಅನುಕೂಲವಾಗುತ್ತಿತ್ತು. ಅದಕ್ಕೂ ‘ದಿ-ಫೈಲ್’ ಕಲ್ಲು ಹಾಕಿದಂತೆ ಆಗಲಿಲ್ಲವೆ?

4. ‘ದಿ-ಫೈಲ್’ ಹುಟ್ಟು ಹಾಕಿದ ವ್ಯರ್ಥ ವಿವಾದದಿಂದ ಬೇಸರಗೊಂಡ ಪ್ರಕಾಶ್ ರಾಜ್‌ ಅವರು ಇನ್ನು ಮೇಲೆ ಸರಕಾರದಿಂದ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲವೆಂದು ಎಪ್ರಿಲ್ ತಿಂಗಳಲ್ಲೇ ಘೋಷಿಸಿದ ಮೇಲೂ ಮತ್ತೆ ನಿರ್ದಿಗಂತದ ಬಗ್ಗೆ ನಕಾರಾತ್ಮಕವಾಗಿ ಬರೆಯುವ ಅಗತ್ಯವೇನಿತ್ತು?

5. ಪ್ರಕಾಶ್ ರಾಜ್‌ ಅವರು ಸರಕಾರಿ ಅನುದಾನ ನಿರಾಕರಿಸುವ ಮುನ್ನವೇ ನಿರ್ದಿಗಂತದ ಅಕೌಂಟಿಗೆ 88 ಸಾವಿರ ಜಮೆಯಾಗಿತ್ತು. ಅದೂ ಸಹ ಬೇಕಿಲ್ಲಾ ವಾಪಸ್ ಪಡೆಯಿರಿ ಎಂದರೂ ಆಯುಕ್ತರು ಅದು ಸಾಧ್ಯವಿಲ್ಲವೆಂದರು. ಇದರಲ್ಲಿ ನಿರ್ದಿಗಂತದ ಪ್ರಮಾದವೇನಿದೆ?

6. ಆರ್‌ ಟಿ ಐನಲ್ಲಿ ಪಡೆದ ಪತ್ರಗಳನ್ನು ಪ್ರಕಟಿಸುವ ಜೊತೆಗೆ ಉಚಿತ ಶಾಲಾರಂಗ ಯೋಜನೆ ಕುರಿತು ಕ್ರೈಸ್ ಸಂಸ್ಥೆಯು 14-06-2024 ರಂದು ಬರೆದ ಜ್ಞಾಪನಾ ಪತ್ರವನ್ನು ಯಾಕೆ ದಿ ಫೈಲ್‌ ನ ಜಿ ಮಹಾಂತೇಶ್‌ ಅವರು ಪ್ರಕಟಿಸಲಿಲ್ಲ? ತಪ್ಪು ಅಭಿಪ್ರಾಯ ಮೂಡಿಸುವುದೇ ನಿಮ್ಮ ಉದ್ದೇಶವೇ?

7. ದಿ- ಫೈಲ್ ಹುಟ್ಟಿಸಿದ ಅನಗತ್ಯ ವಿವಾದದಿಂದಾಗಿ ನಿರ್ದಿಗಂತವು ಈ ವರ್ಷ ಶಾಲಾರಂಗ ಕಾರ್ಯಕ್ರಮದಲ್ಲಿ ಕಡಿತ ಮಾಡಿದೆ. ಇದರಿಂದಾಗಿ ಬಡ ಶಾಲಾ ಮಕ್ಕಳಿಗೆ, ಆ ಶಾಲೆಯ ಶಿಕ್ಷಕರಿಗೆ ಹಾಗೂ ಮಕ್ಕಳ ರಂಗಭೂಮಿಗೆ ಆದ ಸಾಂಸ್ಕೃತಿಕ ನಷ್ಟವನ್ನು ತುಂಬಿಕೊಡುವವರು ಯಾರು?

8. ದಾಖಲೆಗಳನ್ನು ತಪ್ಪಾಗಿ ಅರ್ಥೈಸಿ ಸಿಂಹಪಾಲು ಅಂದೆಲ್ಲಾ ಕಪೋಲಕಲ್ಪಿತ ಕಥೆ ಸೃಷ್ಟಿಸುವುದು ಎಷ್ಟು ಸರಿ? ಈ ಬಗ್ಗೆ ನಿಮ್ಮ ಆತ್ಮಾವಲೋಕನವೇ ಇಲ್ಲವೇ?

9. ನಿರ್ದಿಗಂತ ಹಣ ಪಡೆದಿಲ್ಲವೆಂದು ಯಾರು ಎಲ್ಲಿ ವಾದಿಸಿದ್ದಾರೆ? ‘ನಿರ್ದಿಗಂತ’ಕ್ಕೆ ಎರಡು ಶಾಲೆಗಳ ‘ಶಾಲಾರಂಗ’ ಯೋಜನೆಯ ಹಣ ಸಂದಾಯವಾಗಿದೆ ಹಾಗೂ ಅದನ್ನು ಪಡೆಯಲು ನಿರ್ದಿಗಂತ ನಿರಾಕರಿಸಿದೆ ಎಂದು ನಾನೇ ಲೇಖನ ಬರೆದಿದ್ದೆ. ಆರ್‌ ಟಿ ಜಿ ಎಸ್ ಬದಲು ಚೆಕ್ ಎಂದು ನಮೂದಿಸಿದ್ದೆ ಅಷ್ಟೇ. ಯಾವ ಹಣವೂ ಬೇಡ ವಾಪಸ್ ಪಡೆಯಿರಿ ಎಂದು ಪ್ರಕಾಶ ರಾಜ್‌ ಅವರೇ ಕ್ರೈಸ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು ತಿಳಿದುಕೊಂಡು ನಂತರ ಆರೋಪ ಮಾಡಬೇಕಿತ್ತಲ್ಲವೆ?

10. ನಿಸ್ವಾರ್ಥತೆಯಿಂದ ತಮ್ಮ ಸಂಪಾದನೆಯ ಹಣವನ್ನು ವ್ಯಯಮಾಡಿ ರಂಗಕಾರ್ಯನಿರತರಾದವರ ಮೇಲೆ ಸಿಂಹಪಾಲು ಅದು ಇದು ಎಂದು ಗೂಬೆ ಕೂರಿಸಿ ಅಪಪ್ರಚಾರ ಮಾಡಿದ್ದು  ದ್ವೇಷಪೂರಿತ ಫೇಕ್ ನ್ಯೂಸ್ ಅನಿಸಿಕೊಳ್ಳುವುದಿಲ್ಲವೆ? ರಂಗ ಕರ್ಮಿಗಳ ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸ ಮಾಡಿದಂತಾಗಿಲ್ಲವೆ?

11. ಸಾಂವಿಧಾನಿಕ ವ್ಯವಸ್ಥೆಯಲ್ಲಿ ‘ದಿ-ಫೈಲ್’ ಪ್ರಶ್ನಾತೀತವಾ? ತಪ್ಪು ವರದಿ ಪ್ರಕಟಿಸಿ ರಂಗಕ್ರಿಯೆಗೆ ಹಾನಿಯನ್ನುಂಟು ಮಾಡಿದರೆ ಬಾಯಿಗೆ ಬೀಗ ಹಾಕಿಕೊಂಡಿರಲು ಸಾಧ್ಯವೇ? ರಂಗಭೂಮಿಗೆ ಅನ್ಯಾಯವಾದರೆ, ರಂಗಕ್ರಿಯೆಗೆ ಅಪಚಾರವಾದರೆ, ರಂಗಕರ್ಮಿಗಳಿಗೆ ಅಪಮಾನವಾದರೆ ನಾವು ಸುಮ್ಮನಿರಬೇಕೆ?

12. ಕೇವಲ ಸರಕಾರಿ ಪತ್ರಗಳನ್ನು ಆಧರಿಸಿ ‘ದಿ-ಫೈಲ್’ ಪ್ರಕಟಿಸಿದ ಏಕಪಕ್ಷೀಯ ಕಲ್ಪಿತ ವರದಿ ಖಂಡಿತಾ ಪತ್ರಿಕೋದ್ಯಮವಲ್ಲ. ರಂಗಕ್ರಿಯೆಗೆ ಅಪಪ್ರಚಾರ ಮಾಡುವುದು ಸಮರ್ಥನೀಯವಲ್ಲ. ಮೊದಲು ‘ದಿ-ಫೈಲ್’ ತನ್ನ ಈ ಪ್ರಮಾದಗಳಿಗೆ ಕ್ಷಮೆಕೋರುತ್ತದಾ? ಇಲ್ಲಾ ಮತ್ತೆ ವ್ಯರ್ಥ ಸಮರ್ಥನೆಗೆ ಇಳಿಯುತ್ತದಾ?

13. ನಿಜವಾದ ಪತ್ರಿಕೋದ್ಯಮ ಎನ್ನುವುದು ಕಟ್ಟುವ ಕೆಲಸಕ್ಕೆ, ಕ್ರಿಯಾಶೀಲ ಅಭಿವ್ಯಕ್ತಿಗೆ ಬೆಂಬಲವಾಗಿರಬೇಕಲ್ಲವೇ? ಮೊಸರಲ್ಲಿ ಮುಳ್ಳು ಹುಡುಕಿ ಕಾರ್ಯನಿರತರಾದವರ ಕಾಲೆಳೆಯುವ ದುಷ್ಟ ಕೆಲಸ ಮಾಡಬಾರದಲ್ಲವೇ? ಹೀಗೆಲ್ಲಾ ಪತ್ರಗಳಾಧಾರಿತ ಫೇಕ್ ಸುದ್ದಿ ಪ್ರಸಾರ ಮಾಡುವುದು ಮಾಹಿತಿ ಹಕ್ಕಿನ ದುರುಪಯೋಗವಲ್ಲವೇ?

ಈ ಮೇಲೆ ಕೇಳಲಾದ ಪ್ರಶ್ನೆಗಳಿಗೆ ಮೊದಲು ದಿ-ಫೈಲ್ ಸಮರ್ಪಕವಾಗಿ ಸಾಕ್ಷಿ ಸಮೇತ ಉತ್ತರಿಸಲಿ, ಉತ್ತರಿಸಲು ಆಗದಿದ್ದರೆ ನಿರ್ದಿಗಂತ ಸಂಸ್ಥೆಯವರಲ್ಲಿ ಕ್ಷಮಾಪಣೆ ಕೋರಿ ತಮ್ಮ ಪ್ರಮಾದವನ್ನು ತಿದ್ದಿಕೊಳ್ಳಲಿ.

ಬೇರೆ ಯಾರಾದರೂ ಹೀಗೆ ಲಕ್ಷಾಂತರ ಹಣವನ್ನು ಖರ್ಚು ಮಾಡಿ ಕಲಾವಿದರು ಹಾಗೂ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಉಚಿತ ಊಟ ವಸತಿ ಹಾಗೂ 30ಸಾವಿರದಷ್ಟು ಸಂಬಳ ಜೊತೆಗೆ ಶಿಸ್ತುಬದ್ಧ  ತರಬೇತಿಯನ್ನೂ ಕೊಟ್ಟು, ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಲು ಮುಂದೆ ಬರುವವರು ಇದ್ದಾರಾ? ಉಚಿತವಾಗಿ ರಂಗಪರಿಕರಗಳನ್ನು ಒದಗಿಸಿ, ರಂಗಪಠ್ಯಗಳ ಮಾಡ್ಯೂಲ್ ಗಳನ್ನು ಕೊಟ್ಟು ಮಕ್ಕಳು ಹಾಗೂ ಅವರ ಶಿಕ್ಷಕರಿಗೆ ರಂಗತರಬೇತಿ ಕೊಡುವ ಮಹನೀಯರು ಎಲ್ಲಿಯಾದರೂ ಇದ್ದಾರಾ? ಅಂತಹ ಒಬ್ಬರೇ ಒಬ್ಬರ ಹೆಸರನ್ನು  ಮಹಾಂತೇಶ ಅವರು ಸಂಶೋಧನೆ ಮಾಡಿ ತಿಳಿಸಲಿ, ಆ ನಂತರ ಬೇಕಾದಷ್ಟು ಆರೋಪ ಮಾಡಲಿ. ಇಲ್ಲವೇ ಒಂದು ಸಲ ನಿರ್ದಿಗಂತಕ್ಕೆ ಭೇಟಿ ನೀಡಿ ಅಲ್ಲಿ ನಡೆಯುವ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಸತ್ಯಸಂಗತಿಯನ್ನು ವರದಿ ಮಾಡಲಿ. ವರದಿ ಮಾಡುವಾಗ ಯಾವತ್ತೂ ಮತ್ತೊಂದು ಕಡೆಯ ಅಭಿಪ್ರಾಯವನ್ನೇ ಕೇಳದಿರುವುದು ಪತ್ರಿಕೋದ್ಯಮ ನೀತಿಯಲ್ಲ. ಅದಲ್ಲದೇ ಹೀಗೆ ಅರೆಬರೆ ಸತ್ಯಗಳನ್ನು ಪರಮ ಸತ್ಯ ಎನ್ನುವಂತೆ ಪ್ರಕಟಿಸಿದರೆ ಅದು ದಿ-ಫೈಲ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡುತ್ತದೆ. ಹೀಗೆ ಆಗದಿರಲಿ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳು)

ಶಶಿಕಾಂತ ಯಡಹಳ್ಳಿ

ಇವರು ರಂಗಕರ್ಮಿಗಳಾಗಿದ್ದು ರಂಗಭೂಮಿಗೆ ಕೊಡಮಾಡುವ ಆರ್ಯಭಟ ಪ್ರಶಸ್ತಿಯನ್ನು ಇತ್ತೀಚೆಗೆ ಮುಡಿಗೇರಿಸಿಕೊಂಡಿದ್ದಾರೆ.

More articles

Latest article