ಹಿರಿಯ ಪತ್ರಕರ್ತೆ ದಿ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಎನ್. ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ವಿರೋಧಿಸಿ ಗೌರಿ ಲಂಕೇಶ್ ಸಹೋದರಿ ಹಾಗೂ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅವರು ಸುಪ್ರೀಂ ಕೊರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
55 ವರ್ಷದ ಶೂಟರ್‌ಗಳಿಗೆ ಆಶ್ರಯ ನೀಡಲು ಮನೆ ಬಾಡಿಗೆ ಸೇರಿದಂತೆ ಲಾಜಿಸ್ಟಿಕ್ಸ್ ಒದಗಿಸಿದ ಆರೋಪ ಹೊತ್ತಿರುವ ಮೋಹನ್ ನಾಯಕ್‌ಗೆ ಜಾಮೀನು ನೀಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ ಕವಿತಾ ಲಂಕೇಶ್ ಅವರು ಡಿಸೆಂಬರ್ 15, 2023 ರಂದು ಅರ್ಜಿ ಸಲ್ಲಿಸಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಜಾಮೀನು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಈ ವಿಷಯವು ಕಾನೂನು ಇಲಾಖೆ ಸಮಿತಿಯ ಮುಂದಿದೆ ಎಂದು ದಿ ಇಂಡಿಯಾ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮೋಹನ್ ನಾಯಕ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ಡಿಸೆಂಬರ್ 7, 2023 ರಂದು ಅವರಿಗೆ ಜಾಮೀನಿನ ಮೇಲೆ ಬಿಡುಗಡೆಗೆ ಮಾಡಿ ಆದೇಶಿತ್ತು.
ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದ ಮೋಹನ್ ನಾಯಕ್‍ಗೆ ವಿಚಾರಣೆ ಮುಗಿಯುವವರೆಗೂ ಜಾಮೀನು ಪಡೆಯುವುದು ಕಷ್ಟವಾಗಲಿದೆ ಎನ್ನಲಾಗಿತ್ತು. 2018ರಲ್ಲಿ ಈತನ ವಿರುದ್ಧ ಕೋಕಾ ಕಾಯ್ದೆ ರದ್ದುಗೊಳಿ ಸಿದ ಬೆನ್ನಲ್ಲೇ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿತ್ತು. ಇದೀಗ ಮೋಹನ್ ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದರೂ ಜಾಮೀನು ಲಭಿಸಿರುವುದು ಆಶ್ಚರ್ಯ ಮೂಡಿಸಿದೆ. 56 ವರ್ಷದ ಮೋಹನ್ ನಾಯಕ್, ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿಯಾಗಿದ್ದಾನೆ.
2022ರ ಜುಲೈನಲ್ಲಿ ಆರಂಭವಾದ ವಿಚಾರಣೆಯಲ್ಲಿನ ವಿಳಂಬ, ಬಂಧನದ ನಾಲ್ಕು ವರ್ಷಗಳ ನಂತರವೂ ಅವರನ್ನು ಯಾಕೆ ಬಂಧಿದಸಲಾಗಿದೆ ಎಂದು ಹೇಳಲಾಗದ ಕಾರಣ, ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ನಿಯಮಗಳ ಅಡಿ ದಾಖಲಿಸಲಾದ ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಗೌರಿ ಸಹೋದರಿ ಕವಿತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 2021ರ ಅಕ್ಟೋಬರ್‌ನಲ್ಲಿ ಆದೇಶ ನೀಡಿದ್ದ ಸುಪ್ರೀಂ, ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯ್ದೆಯನ್ನು ಮರು ಸ್ಥಾಪಿಸುವಂತೆ ಸೂಚನೆ ನೀಡಿತ್ತು.