ಅಧಿಕಾರದ ಪಿತ್ತ ನೆತ್ತಿಗೆ : ಅಕಾಡೆಮಿಗಳು ಪಕ್ಷದ ಗುತ್ತಿಗೆಗೆ

Most read

ಮೊದಲಾಗಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಕ್ಷವೊಂದರ ಊಳಿಗಕ್ಕಿಲ್ಲ ಎಂಬುದನ್ನು ಮನಗಾಣಬೇಕಿದೆ. ಈ ಎಲ್ಲಾ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆಯುತ್ತವೆಯೇ ಹೊರತು ರಾಜಕೀಯ ಪಕ್ಷದ ಹಣದಿಂದಲ್ಲ. ಈ ಸರಕಾರದ ಹಣ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದೇ ಜನರ ತೆರಿಗೆಯಿಂದ ಬಂದ ಹಣವಾಗಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

“ಏನ್ರೀ ಈವಾಗ? ಅಕಾಡೆಮಿ ಅಧ್ಯಕ್ಷರ ಸಭೆಯನ್ನ ನಾನೇ ಕರೆದಿದ್ದು. ಇದು ಸರಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳಲ್ಲ. ನೇಮಕ ಮಾಡೋದು ಸರಕಾರದ ಇಚ್ಛೆ. ಅದರಲ್ಲೇನಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರು ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

ದುರಹಂಕಾರದ ಪರಮಾವಧಿ ಅಂದ್ರೆ ಇದು. ಅಧಿಕಾರದ ಪಿತ್ತ ನೆತ್ತಿಗೇರಿದವರು ಮಾತಾಡೋದೇ ಹೀಗೆ. ಕಲೆ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅರಿವಿಲ್ಲದೇ ಎಲ್ಲವನ್ನೂ ರಾಜಕೀಯದ ಕನ್ನಡಕ ಹಾಕಿಕೊಂಡು ನೋಡುವ ಜಗಮೊಂಡರ ಬಾಯಲ್ಲಿ ಬರುವುದೇ ಇಂತಹ ಅನಪೇಕ್ಷಿತ ಅತಿರೇಕದ ಮಾತುಗಳು.

“ಪಕ್ಷದ ಪದಾಧಿಕಾರಿಗಳನ್ನು, ರಾಜಕಾರಣಿಗಳನ್ನು ಬೇರೆ ಬೇರೆ ನಿಗಮ ಮಂಡಳಿಗಳಿಗೆ ನೇಮಿಸುವುದಿಲ್ಲವೇ. ಹೀಗೆ ನೇಮಕಾತಿ ಸರಕಾರದ ಇಚ್ಛೆ” ಎಂದು ಹೇಳುವ ಡಿಕೆಶಿಯವರಿಗೆ ನಿಗಮ ಮಂಡಳಿಗಳಿಗೂ ಸಾಂಸ್ಕೃತಿಕ ಸಂಸ್ಥೆಗಳಿಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲ. ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಮಾಡುವುದು ಆಯಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರನ್ನೇ ಹೊರತು ರಾಜಕೀಯ ಸಕ್ರಿಯ ಕಾರ್ಯಕರ್ತರನ್ನಲ್ಲ ಎನ್ನುವ ಅರಿವೂ ಈ ಡಿಸಿಎಂ ಸಾಹೇಬರಿಗೆ ಇದ್ದಂತಿಲ್ಲ.

“ಸಾಹಿತಿ, ಕಲಾವಿದರು ರಾಜಕಾರಣಿಗಳು ಆಗಬಾರದು ಎನ್ನೋದೇನಿಲ್ಲ. ಎಲ್ಲರೂ ರಾಜಕಾರಣಿಗಳೇ. ಅವರದ್ದೇ ಆದ ಸಿದ್ಧಾಂತ ಇಟ್ಟುಕೊಂಡು ಅವರೂ ರಾಜಕಾರಣ ಮಾಡುತ್ತಾರೆ” ಎಂದ ಡಿಕೆಶಿ ಯವರಿಗೆ ಎಲ್ಲದರಲ್ಲೂ ರಾಜಕಾರಣವನ್ನೇ ಕಾಣುವ ವ್ಯಸನವ್ಯಾಧಿ ಉಲ್ಬಣಿಸಿದಂತಿದೆ.

ಕಲೆ ಸಾಹಿತ್ಯಾದಿ ಸಾಂಸ್ಕೃತಿಕ ಮಾಧ್ಯಮಗಳು ಇರುವುದೇ ಪ್ರಭುತ್ವದ ಜನವಿರೋಧಿ ನೀತಿಗಳನ್ನು ವಿರೋಧಿಸಲು. ನಿಜವಾದ ಸಾಹಿತಿ ಕಲಾವಿದರು ಇರುವುದೇ ಆಳುವ ವರ್ಗಗಳ ಜನವಿರೋಧಿತನದ ವಿರುದ್ಧ ಜನರನ್ನು ಎಚ್ಚರಿಸಲು. ಹೀಗಿರುವಾಗ ಜನರ ಪರವಾದ ಎಚ್ಚರದ ಧ್ವನಿಯಾಗಿರುವವರನ್ನು ರಾಜಕಾರಣಿಗಳು ಎಂದು ಆರೋಪಿಸುವ ಪ್ರಯತ್ನವೇ ಅಕ್ಷಮ್ಯ.

ಹೋಗಲಿ.. ಈ ರಾಜಕಾರಣಿಗಳು ಇರೋದೇ ಹೀಗೆ. ಎಲ್ಲದರಲ್ಲೂ ಎಲ್ಲರಲ್ಲೂ ರಾಜಕಾರಣವನ್ನೇ ಬಯಸುತ್ತಾರೆ. ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳನ್ನೂ ಸಹ ಪಕ್ಷದ ಶಾಖೆಗಳಾಗಿ ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಇಂತಹ ವಿಕ್ಷಿಪ್ತತೆಯನ್ನು ವಿರೋಧಿಸ ಬೇಕಾದವರೇ ಸಾಹಿತಿ ಕಲಾವಿದರು. ಆದರೆ ಅದ್ಯಾಕೋ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳು ( ಇಬ್ಬರನ್ನು ಹೊರತು ಪಡಿಸಿ) ಈ ಫುಲ್‌ ಟೈಂ ರಾಜಕಾರಣಿಯ ಮಾತಿಗೆ ಸ್ಪಂದಿಸಿದ್ದು ನಿಜಕ್ಕೂ ಪ್ರಶ್ನಾರ್ಹ.

“ಕಾಂಗ್ರೆಸ್ ಅಧ್ಯಕ್ಷರು ನಿಗಮ ಮಂಡಳಿಗಳ ಅಧ್ಯಕ್ಷರ ಸಭೆ ಕರೆದಿದ್ದು ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಅವರ ಕಾರ್ಯದರ್ಶಿ ತಪ್ಪಾಗಿ ಅರ್ಥ ಮಾಡಿಕೊಂಡು ವಾಟ್ಸಾಪ್ ಮೂಲಕ ಆಹ್ವಾನಿಸಿದ್ದರು. ಇದರಲ್ಲಿ ಡಿಕೆಶಿ ಯವರ ತಪ್ಪೇನಿಲ್ಲ” ಎಂದೇ ಕೆಲವರು ವಾದಿಸಿ ಡಿಕೆಶಿಯವರನ್ನು ಆರೋಪ ಮುಕ್ತರನ್ನಾಗಿಸುವ ಪ್ರಯತ್ನ ಮಾಡಿದರು. ಆದರೆ ಇವತ್ತು ಸ್ವತಃ ಡಿಕೆಶಿಯವರೇ ” ಹೌದು ಕಾಂಗ್ರೆಸ್ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ. ಇದರಲ್ಲಿ ತಪ್ಪೇನಿದೆ” ಎಂದು ಹೇಳುವ ಮೂಲಕ ಅಕಾಡೆಮಿಗಳ ಅಧ್ಯಕ್ಷರ ವ್ಯರ್ಥ ಸಮರ್ಥನೆಗಳಿಗೆ ತಣ್ಣೀರೆರಚಿದ್ದಾರೆ. “ಯಾರನ್ನು ಎಲ್ಲಿಬೇಕಾದರೂ ಕರೆಸಿಕೊಳ್ಳಬಹುದು, ಎಲ್ಲಿ ಬೇಕಾದರೂ ಸಭೆ ಮಾಡಬಹುದು. ಸಾಹಿತಿಗಳು ರಾಜಕಾರಣಿಗಳು ಆಗಬಾರದಾ? ಎಂಬುದು ಡಿಕೆಶಿ ಯವರ ವಿತಂಡವಾದ. ಹಿಂದಿನ ಸಲ ಕಾಂಗ್ರೆಸ್ ಸರಕಾರ ಇದ್ದಾಗ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಇದೇ ಡಿಕೆಶಿ ಮಹಾತ್ಮರು ” ಕಲಾವಿದರು ಸಂಘಟಕರನ್ನೆಲ್ಲಾ ಕಳ್ಳರು” ಎಂದು ಆರೋಪಿಸಿದ್ದರು. ಈಗ ರಾಜಕಾರಣಿಗಳು ಎನ್ನುತ್ತಿದ್ದಾರೆ.

ಹೋಗಲಿ ಇಂತಹ ರಾಜಕಾರಣಿಗಳು ಇರುವುದೇ ಹೀಗೆ ಎಂದುಕೊಳ್ಳೋಣ. ಆದರೆ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರುಗಳಿಗೆ ಏನಾಗಿದೆ? “ಇವರೂ ರಾಜಕಾರಣಿಗಳೇ” ಎಂದು ಡಿಕೆಶಿ ಯವರು ಹೇಳಿದ್ದನ್ನು ನಿಜ ಮಾಡುವಂತೆ ಇವರ ವರ್ತನೆ ಯಾಕಿದೆ?. ಈ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನೇಮಕಾತಿ ಮಾಡುವುದು ಸರಕಾರ ಎನ್ನುವುದು ನಿಜ. ಇಷ್ಟು ದಿನಗಳ ಕಾಲ ಈ ಸಂಸ್ಥೆಗಳು ಸರಕಾರಿ ಕೃಪಾ ಪೋಷಿತವಾಗಿದ್ದವು. ಆದರೆ ಈಗ ಸರಕಾರಿ ಸಂಸ್ಥೆಗಳನ್ನು ಪಕ್ಷವೊಂದರ ಕೃಪಾ ಪೋಷಿತ ಸಂಸ್ಥೆಗಳನ್ನಾಗಿಸುವ ಅನಿಷ್ಟ ಸಂಪ್ರದಾಯವೊಂದನ್ನು ಕಾಂಗ್ರೆಸ್ ಹುಟ್ಟು ಹಾಕಿದೆ. ಇದನ್ನು ಅರಿಯದ, ಅರಿತರೂ ಯೋಚಿಸದ ಅಕಾಡೆಮಿ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಪಕ್ಷದ ಅಧ್ಯಕ್ಷರು ಕರೆದ ಸಭೆಯಲ್ಲಿ ಭಾಗಿಯಾಗಿ ತಮ್ಮ ಪಕ್ಷ ನಿಷ್ಠೆಯನ್ನು ಸಾಬೀತು ಪಡಿಸಿದ್ದಾರೆ ಮತ್ತು ಕೆಲವರು ಹೋಗಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಹಾಗಾದರೆ ಡಿಕೆಶಿ ಯವರು ಹೇಳಿದಂತೆ ಅಕಾಡೆಮಿ ಅಧ್ಯಕ್ಷರುಗಳೂ ಸಹ ರಾಜಕಾರಣಿಗಳಾ? ರಾಜಕೀಯ ಪಕ್ಷದ ಕಾರ್ಯಕರ್ತರಾಗಿರಲೇಬೇಕಾ? ಸಾಂಸ್ಕೃತಿಕ ಲೋಕದ ಸಾಧಕರು ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಆಗಬೇಕೆಂದರೆ ಪ್ರಭುತ್ವದ ಗುಲಾಮರಾಗಲೇ ಬೇಕಾ?  ರಾಜಕೀಯದ ಹಿಡಿತದಿಂದ ಅಕಾಡೆಮಿ ಪ್ರಾಧಿಕಾರಗಳು ಬಿಡಿಸಿಕೊಳ್ಳಲು ಸಾಧ್ಯವೇ ಇಲ್ವಾ?

ಮೊದಲಿನಿಂದಲೂ ಎಲ್ಲರೂ ನಂಬಿರುವುದು ಹಾಗೂ ಹೇಳುತ್ತಲೇ ಬಂದಿರುವುದು ಅಕಾಡೆಮಿ  ಪ್ರಾಧಿಕಾರಗಳೆಲ್ಲಾ ಸ್ವಾಯತ್ತ ಸಂಸ್ಥೆಗಳು ಎಂದು. ಆದರೆ ಇದೊಂದು ಮಿಥ್ಯ ಪರಿಕಲ್ಪನೆ. “ಅವೆಲ್ಲಾ ಸ್ವಾಯತ್ತ ಸಂಸ್ಥೆಗಳಲ್ಲ” ಎಂದು ಮಾನ್ಯ ಉಪಮುಖ್ಯಮಂತ್ರಿಗಳು ಇವತ್ತು ಸ್ಪಷ್ಟನೆ ಕೊಟ್ಟು ಅನೇಕರ ನಂಬಿಕೆಗಳನ್ನು ಹುಸಿಗೊಳಿಸಿದ್ದಾರೆ. ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಎಂಬುದು ಮರೀಚಿಕೆ ಎಂಬುದು ಅವರ ಮಾತಿನಿಂದ ಖಚಿತ ಆಗುವಂತಿದೆ.

ಆದರೆ ಈ ಪಕ್ಷಾಧೀಶರು ಮೊದಲು ಪ್ರೊ.ಬರಗೂರರ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಹಾಗೂ ಸಚಿವ ಸಂಪುಟವೇ ಒಪ್ಪಿರುವ, ಆಗ  ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರೇ ಆದೇಶಿಸಿದ ” ಕರ್ನಾಟಕ ಸಾಂಸ್ಕೃತಿಕ ನೀತಿ”ಯ ಆದೇಶ ಪ್ರತಿಯನ್ನು ಒಮ್ಮೆ ಓದಬೇಕಿದೆ. ಅದರಲ್ಲಿ ಸರಕಾರಿ ಸಂಸ್ಥೆಗಳಿಗೆ ಒಂದಷ್ಟು ಸ್ವಾಯತ್ತತೆಯನ್ನೂ ಕೊಡಲಾಗಿದೆ. ರಾಜಕಾರಣಿಗಳ ಉದ್ದೇಶಪೂರ್ವಕ ನಿರ್ಲಕ್ಷ ಹಾಗೂ ಅಧಿಕಾರಿಗಳ ಉಪೇಕ್ಷೆಯಿಂದಾಗಿ ಸರಕಾರಿ ಆದೇಶ ಅನುಷ್ಠಾನಕ್ಕೆ ಬರದೇ ಮೂಲೆಗುಂಪಾಗಿದೆ. ಸಾಂಸ್ಕೃತಿಕ ಲೋಕದವರು ಈ ಕೂಡಲೇ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಬೇಕೆಂದು ಸರಕಾರವನ್ನು ಆಗ್ರಹಿಸಿ ರಾಜಕಾರಣಿಗಳ ನಿಯಂತ್ರಣದಿಂದ ಅಕಾಡೆಮಿ ಪ್ರಾಧಿಕಾರಗಳನ್ನು ಕಾಪಾಡಬೇಕಿದೆ.

ಮೊದಲಾಗಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಕ್ಷವೊಂದರ ಊಳಿಗಕ್ಕಿಲ್ಲ ಎಂಬುದನ್ನು ಮನಗಾಣಬೇಕಿದೆ. ಈ ಎಲ್ಲಾ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆಯುತ್ತವೆಯೇ ಹೊರತು ರಾಜಕೀಯ ಪಕ್ಷದ ಹಣದಿಂದಲ್ಲ. ಈ ಸರಕಾರದ ಹಣ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದೇ ಜನರ ತೆರಿಗೆಯಿಂದ ಬಂದ ಹಣವಾಗಿದೆ. ಹೀಗಾಗಿ ಈ ಸಂಸ್ಥೆಗಳ ಪದಾಧಿಕಾರಿಗಳು ಯಾವುದೇ ರಾಜಕೀಯ ಪಕ್ಷದ ಇಲ್ಲವೇ ನಾಯಕರ ಹಂಗಿಗೊಳಗಾಗಿ ಕಾರ್ಯ ನಿರ್ವಹಿಸುವ ಅಗತ್ಯವಿಲ್ಲ. ತಮ್ಮ ಸ್ವಾಭಿಮಾನವನ್ನು ಪಕ್ಷಕ್ಕೆ ಅಡಮಾನವಿಡುವುದೂ ಬೇಕಿಲ್ಲ. ಪಕ್ಷದ ಸೇವೆ ಮಾಡಲೇಬೇಕೆಂದರೆ ಅಧಿಕಾರದಲ್ಲಿರುವುದಕ್ಕಿಂತ ರಾಜೀನಾಮೆ ಕೊಟ್ಟು ತಮ್ಮ ಸ್ವಾಭಿಮಾನ ಹಾಗೂ ಅಕಾಡೆಮಿಗಳ  ಗೌರವ ಉಳಿಸಿಕೊಳ್ಳುವುದು ಅಪೇಕ್ಷಣೀಯ.

ಇಷ್ಟಕ್ಕೂ ಒಂದು ಪಕ್ಷದ ಅಧ್ಯಕ್ಷರಿಗೆ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರ ಸಭೆ ಕರೆಯಲು ಅಧಿಕೃತ ಅನುಮತಿ ಇಲ್ಲ. ಅದೂ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಕರೆದರೆ ಅಧ್ಯಕ್ಷರುಗಳು ಓಡಿ ಹೋಗಬೇಕಾದದ್ದೂ ಇಲ್ಲ. ನಿರಾಕರಿಸಿದರೆ ಕಳೆದುಕೊಳ್ಳಲು ಅಧ್ಯಕ್ಷಗಿರಿ ರಾಜಪಟ್ಟವೇನಲ್ಲ. ಸಾಂಸ್ಕೃತಿಕ ಸಂಸ್ಥೆಗಳ ಸಭೆ ಕರೆಯಬೇಕಾದದ್ದು ಸರಕಾರಿ ಕಟ್ಟಡಗಳಲ್ಲಿಯೇ ಹೊರತು ಪಕ್ಷದ ಕಚೇರಿಯಲ್ಲಲ್ಲ. “ಅಧ್ಯಕ್ಷರುಗಳನ್ನು ಎಲ್ಲಿಗೆ ಬೇಕಾದರೂ ಕರೆಸಿಕೊಂಡು ಸಭೆ ಮಾಡಬಹುದು” ಎನ್ನುವ ಪಕ್ಷಾಧ್ಯಕ್ಷರ ದುರಹಂಕಾರಕ್ಕೆ, ಅಸಾಂವಿಧಾನಿಕ ನಡೆಗೆ  ಮದ್ದರೆಯಬೇಕೆಂದರೆ ನಿರಾಕರಿಸುವುದೇ ಸರಿಯಾದ ಕ್ರಮ. ಅದನ್ನೇ ಪುರುಷೋತ್ತಮ ಬಿಳಿಮಲೆಯಂತವರು ಮಾಡಿದ್ದು.

ಇದನ್ನೂ ಓದಿ- ಸಾಂಸ್ಕೃತಿಕ ಪರಿಚಾರಕರ ರಾಜಕೀಯ ಚಹರೆ

ಹೋಗಲಿ, ಇನ್ನು ಮೇಲೆಯಾದರೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಲಿ. ಪಕ್ಷಕ್ಕೂ ಸರಕಾರಕ್ಕೂ ಇರುವ ಭಿನ್ನತೆಯ ಬಗ್ಗೆ ಅರಿವಿರಲಿ. ಸಂಸ್ಕೃತಿ ಇಲಾಖೆಯ ಸಚಿವರು ಕರೆಯುವ ಸಭೆಗೂ ಹಾಗೂ ಪಕ್ಷವೊಂದರ ಅಧ್ಯಕ್ಷ ಕರೆಯುವ ಸಭೆಗೂ ನಡುವೆ ಇರುವ ಅಂತರದ ಬಗ್ಗೆ ಗಮನವಿರಲಿ. ಯಾವ ಒಂದು ಪಕ್ಷ ಇಲ್ಲವೇ ಪಕ್ಷಾಧ್ಯಕ್ಷರಿಗೆ ನಿಷ್ಠೆ ತೋರುವ ಬದಲು ಸಾಹಿತಿ ಕಲಾವಿದರಾಗಿ ತಮ್ಮ ಸ್ವಾಭಿಮಾನಕ್ಕೆ ಬದ್ಧರಾಗಿರಲಿ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ, ಪ್ರಭುತ್ವದ ಪಾತಕಗಳನ್ನು ವಿರೋಧಿಸಬೇಕಾದ ಪ್ರಜ್ಞಾವಂತರು ಎಂದೆನಿಸಿಕೊಂಡ, ಕಲೆ ಹಾಗೂ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾದ ಸಾಂಸ್ಕೃತಿಕ ಸಂಸ್ಥೆಗಳ  ಅಧ್ಯಕ್ಷರುಗಳು ತಾವು ಪ್ರತಿನಿಧಿಸುವ ಅಕಾಡೆಮಿ ಪ್ರಾಧಿಕಾರಗಳ ಗೌರವವನ್ನು ಉಳಿಸಲು ಶ್ರಮಿಸಲಿ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ ಹಾಗೂ ಪತ್ರಕರ್ತ

More articles

Latest article