ರಾಮಮಂದಿರಕ್ಕೆ ಬಾಂಬ್ ಬೆದರಿಕೆ; ಸಂಘಿ ನೇತಾರನಿಂದ ಮುಸ್ಲಿಂ ಹೆಸರು ಬಳಕೆ

Most read

ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘ ಪರಿವಾರದ ನಾಯಕರು ಯುವಕರನ್ನು ಪರಿಕರವಾಗಿ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಮುಸ್ಲಿಂ ಹೆಸರಲ್ಲಿ ಹಿಂದೂ ವಿರೋಧಿ ಶಡ್ಯಂತ್ರಗಳನ್ನು ಸಂಘಿಗಳೇ ರೂಪಿಸಿ ಧರ್ಮದ್ವೇಷವನ್ನು ಪ್ರಚೋದಿಸುತ್ತಿರುವುದು ಇನ್ನೂ ಹೆಚ್ಚು ಆತಂಕದ ವಿಷಯವಾಗಿದೆ ಶಶಿಕಾಂತ ಯಡಹಳ್ಳಿ

ರಾಮಮಂದಿರ ಉದ್ಘಾಟನೆಯ ದಿನಾಂಕ ಹತ್ತಿರ ಇರುವ ಸಂದರ್ಭದಲ್ಲಿ “ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರನ್ನು  ಹತ್ಯೆ ಮಾಡುತ್ತೇವೆ” ಎಂದು ಅಲಂ ಅನ್ಸಾರಿ ಮತ್ತು ಜುಬೈರ್ ಖಾನ್ ಎಂಬ ಮುಸ್ಲಿಂ ಯುವಕರ ಹೆಸರಲ್ಲಿ ಕಳುಹಿಸಲಾದ ಬೆದರಿಕೆಯ ಈಮೇಲ್ ನಲ್ಲಿರುವುದು ನಿಜವೇ ಆಗಿದ್ದರೆ ಏನಾಗುತ್ತಿತ್ತು? ಇಷ್ಟೊತ್ತಿಗೆ ದೇಶದ ಅಷ್ಟೂ ಗೋದಿ ಮೀಡಿಯಾಗಳು ಮುಸ್ಲಿಂ ವಿರೋಧಿ ಪ್ರಚಾರಕ್ಕೆ ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದವು. ಮುಸ್ಲಿಮರೆಲ್ಲಾ ಭಯೋತ್ಪಾದಕರು, ಆತಂಕವಾದಿಗಳು ಎಂದು ಸಂಘ ಪರಿವಾರದವರು ತಮ್ಮ ಧರ್ಮದ್ವೇಷದ ಪ್ರಪಗಂಡಾವನ್ನು ರಾಷ್ಟ್ರೀಕರಣಗೊಳಿಸುತ್ತಿದ್ದರು. ಯೋಗಿ ಆದಿತ್ಯನಾಥರವರು ಕಳುಹಿಸಿದ ಬುಲ್ಡೋಜರುಗಳು ಬೆದರಿಕೆಯೊಡ್ಡಿದ್ದ ಆಗುಂತಕರ ಮನೆಯನ್ನು ಧ್ವಂಸ ಮಾಡುತ್ತಿದ್ದವು. “ಹಿಂದೂಗಳ ಶ್ರದ್ಧಾಕೇಂದ್ರವನ್ನು ಹಿಂದೂ ವಿರೋಧಿಗಳಾದ ಮುಸ್ಲಿಮರು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ, ಈ ಹಿಂದೂ ದ್ರೋಹಿಗಳನ್ನು ಸುಮ್ಮನೇ ಬಿಡಬಾರದು, ಪಾಕಿಸ್ತಾನಕ್ಕೆ ಓಡಿಸಬೇಕು, ಹಿಂದೂ ಧರ್ಮ ಅಪಾಯದಲ್ಲಿದೆ, ಹಿಂದೂಗಳು ಆತಂಕಕ್ಕೊಳಗಾಗಿದ್ದಾರೆ ” ಎಂದೆಲ್ಲಾ ಧರ್ಮದ್ವೇಷದ ಭಾಷಣಗಳು ದೇಶಾದ್ಯಂತ ಪ್ರತಿಧ್ವನಿಸುತ್ತಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಪಕ್ಷವು ಹಿಂದೂ ಧರ್ಮೀಯರ ಭಾವ ಪ್ರಚೋದನೆ ಮಾಡಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಮತ ಕ್ರೋಢೀಕರಣ ಮಾಡಲು ಅಭಿಯಾನ ಶುರುಮಾಡುತ್ತಿತ್ತು. ಆದರೆ ಹಾಗಾಗಲಿಲ್ಲವಲ್ಲಾ ಎನ್ನುವುದೇ ಸಂಘ ಪರಿವಾರದವರಲ್ಲಿ ನಿರಾಸೆ ಹುಟ್ಟಿಸಿದೆ. ಈ ಬೆದರಿಕೆ ಪ್ರಕರಣ ಈಗ ಅರೆಸ್ಸೆಸ್ಸ್ ನವರ ಬುಡಕ್ಕೆ ಬಾಂಬಿಟ್ಟಂತಾಗಿದೆ. 

ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ. ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಎನ್ನುವ ಸಂಘಪರಿವಾರದ ವ್ಯಕ್ತಿಗೆ ದೊಡ್ಡ ನಾಯಕ ಎನ್ನಿಸಿಕೊಳ್ಳುವ ಉಮೇದು ಆರಂಭವಾಯ್ತು. ಸರಕಾರದ ಭದ್ರತೆ ಪಡೆದು ದೊಡ್ಡವನೆನಿಸಿಕೊಳ್ಳುವ ಬಯಕೆ ಉಲ್ಬಣಿಸಿತು. ಅದಕ್ಕೆ ಮಾಸ್ಟರ್ ಪ್ಲಾನ್ ಸಿದ್ಧವಾಯಿತು. ತನ್ನ ಉದ್ಯೋಗಿಗಳಾಗಿದ್ದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎನ್ನುವ ಯುವಕರಿಬ್ಬರನ್ನು ಈ ಬಾಂಬ್ ಬೆದರಿಕೆ ಶಡ್ಯಂತ್ರದಲ್ಲಿ ಶಾಮೀಲಾಗಿಸಲಾಯ್ತು. ಈ ಇಬ್ಬರೂ ಯುವಕರು ಮುಸ್ಲಿಂ ಹೆಸರಲ್ಲಿ ನಕಲಿ ಈಮೇಲ್ ಐಡಿ ಕ್ರಿಯೇಟ್ ಮಾಡಿ “ತಾವು ಪಾಕಿಸ್ತಾನದ ಐಎಎಸ್ ಎಜೆಂಟ್‌ ಗಳಾಗಿದ್ದು ರಾಮಮಂದಿರವನ್ನು ಬಾಂಬಿಟ್ಟು ಉಡಾಯಿಸುತ್ತೇವೆ, ಆದಿತ್ಯನಾಥರನ್ನು ಹತ್ಯೆ ಮಾಡುತ್ತೇವೆ, ಎಸ್ಟಿಪಿ ಮುಖ್ಯಸ್ಥರನ್ನು ಸಾಯಿಸುತ್ತೇವೆ” ಎಂಬ ಬೆದರಿಕೆ ಸಂದೇಶವನ್ನು ನಕಲಿ ಐಡಿಗಳ ಮೂಲಕ ಮುಸ್ಲಿಂ ಹೆಸರಲ್ಲಿ ರವಾನಿಸಿದ್ದರು. “ತನ್ನ ಹತ್ಯೆಗೂ ಸಂಚು ರೂಪಿತವಾಗಿದ್ದು  ಬೆದರಿಕೆಯ ಮೇಲ್ ಬಂದಿದೆ ರಕ್ಷಣೆ ಕೊಡಿ” ಎಂದು ಈ ಸಂಚಿನ ರೂವಾರಿ ಸಂಘಪರಿವಾರದ ಮುಖಂಡ ದೇವೇಂದ್ರ ತಿವಾರಿಯೂ ದೂರು ಕೊಟ್ಟಿದ್ದ.

ಈ ಎಲ್ಲಾ ಬೆದರಿಕೆಯ ಈಮೇಲ್ ಗಳಿಂದ ಆತಂಕಕ್ಕೊಳಗಾದ ಎಸ್ಟಿಎಫ್ ತನಿಖೆಯನ್ನು ತೀವ್ರಗೊಳಿಸಿತು. ಇಮೇಲ್ ಐಡಿ ಮೂಲವನ್ನು ಹುಡುಕಿತು. ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂಬ ಹೆಸರಿನ ಯುವಕರನ್ನು ಬಂಧಿಸಿತು. ಈ ಹುಸಿ ಬಾಂಬ್ ಬೆದರಿಕೆ ಪ್ರಕರಣದ ಸೂತ್ರಧಾರನಾದ ದೇವೇಂದ್ರ ತಿವಾರಿ ತಲೆಮರೆಸಿ ಕೊಳ್ಳುವಂತಾಯಿತು.

ಈ ಸಂಘಿಗಳು ಹೇಗೆಲ್ಲಾ ಹಿಂದೂ ಯುವಕರನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಈ ಇಬ್ಬರೂ ಯುವಕರು ಉತ್ತರಪ್ರದೇಶದ ಗೋಂಡಾ ನಿವಾಸಿಗಳಾಗಿದ್ದು ಅರೆ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುವವರಾಗಿದ್ದಾರೆ. 

ಇಷ್ಟೆಲ್ಲಾ ಆದರೂ ಗೋದಿ ಮೀಡಿಯಾಗಳು ಕಣ್ಣು ಕಿವಿ ಬಾಯಿ ಮುಚ್ಚಿಕೊಂಡಿವೆ. ಯಾಕೆಂದರೆ ರಾಮಮಂದಿರಕ್ಕೆ ಬಾಂಬಿಡುವಂತಹ ಬೆದರಿಕೆಯೊಡ್ಡಿದ್ದು ಮುಸ್ಲಿಂ ಯುವಕರಲ್ಲಾ ಹಿಂದೂಗಳೇ ಎಂಬುದು ಗೊತ್ತಾಗಿದ್ದೇ ತಡ ಮೀಡಿಯಾಂಗದ ಪಂಚೇಂದ್ರಿಯಗಳು ಬಂದಾಗಿವೆ. ಅಕಸ್ಮಾತ್ ಮುಸ್ಲಿಂ ಯುವಕರೇ ಈ ಕೆಲಸ ಮಾಡಿದ್ದರೆ ಮುಂದೇನಾಗುತ್ತಿತ್ತೆಂಬುದನ್ನು ಊಹಿಸ ಬಹುದಾಗಿದೆ.

“ಎಲ್ಲಾ ಅನಿಷ್ಟಕ್ಕೂ ಶನೀಶ್ವರನೇ ಕಾರಣ” ಎನ್ನುವ ಗಾದೆಯೊಂದಿದೆ. ಈಗ ಈ ದೇಶದಲ್ಲೂ ಅಂತಹುದೇ ವಾತಾವರಣ ಸೃಷ್ಟಿಸಿ ಏನೇ ಅವಘಡವಾದರೂ ಅದಕ್ಕೆ ಇಸ್ಲಾಂ ಧರ್ಮೀಯರೇ ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅನ್ಯಧರ್ಮದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿ ಪಕ್ಷದವರಂತೂ ಮುಸ್ಲಿಮರ ಮೇಲೆ, ಆ ಸಮುದಾಯದ ಬಗ್ಗೆ ಸಹಾನುಭೂತಿ ಹೊಂದಿದವರ ಮೇಲೆ ತನ್ನ ಅಸಹನೆಯನ್ನು ತೋರುತ್ತಲೇ ಬಂದಿದೆ. ಧರ್ಮದ್ರೋಹ ದೇಶದ್ರೋಹವೆಂಬ ಆಪಾದನೆಗಳನ್ನು ಮಾಡುತ್ತಲೇ ಬಂದಿದೆ. ಈ ರೀತಿಯ ಅನ್ಯಧರ್ಮ ದ್ವೇಷ ಈ ದೇಶದ ಸಾಮರಸ್ಯವನ್ನು ಕಲಕಿ ನೆಮ್ಮದಿಯನ್ನು ಹಾಳು ಮಾಡುವುದರಲ್ಲಿ ಸಂದೇಹವಿಲ್ಲ.

ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘ ಪರಿವಾರದ ನಾಯಕರು ಯುವಕರನ್ನು ಪರಿಕರವಾಗಿ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಮುಸ್ಲಿಂ ಹೆಸರಲ್ಲಿ ಹಿಂದೂ ವಿರೋಧಿ ಶಡ್ಯಂತ್ರಗಳನ್ನು ಸಂಘಿಗಳೇ ರೂಪಿಸಿ ಧರ್ಮದ್ವೇಷವನ್ನು ಪ್ರಚೋದಿಸುತ್ತಿರುವುದು ಇನ್ನೂ ಹೆಚ್ಚು ಆತಂಕದ ವಿಷಯವಾಗಿದೆ. ಪಾಕಿಸ್ತಾನದ ಬಾವುಟವನ್ನು ಹಿಂದೂ ಯುವಕರೇ ಹಾರಿಸಿ, ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿ ಮುಸ್ಲಿಂ ಸಮಾಜದ ಮೇಲೆ ದ್ವೇಷ ಹುಟ್ಟಿಸಿ ಕೋಮುಸೌಹಾರ್ದತೆ ಕದಡುವ ಪ್ರಯತ್ನಗಳನ್ನು ಕರ್ನಾಟಕದಲ್ಲೇ ಮಾಡಿಸಲಾಗಿದೆ. ಒಂದು ಧರ್ಮೀಯರನ್ನೇ ದೇಶದ್ರೋಹಿಗಳೆಂದು ಬಿಂಬಿಸುವ ಪ್ರಯತ್ನ ಸಂಘಪರಿವಾರದ ಪ್ರಪಗಂಡಾದ ಭಾಗವೇ ಆಗಿದೆ. ಈ ಕೋಮುವಾದಿಗಳ ಹುನ್ನಾರವನ್ನು ತಿರಸ್ಕರಿಸಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವ ಹೊಣೆಗಾರಿಕೆ ಸಮಸ್ತ ದೇಶವಾಸಿಗಳದ್ದಾಗಿದೆ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article