Friday, December 6, 2024

ಕಾಟೇರ ಸಂದೇಶ: ದರ್ಶನ್ ಮೇಲಿನ ಅಭಿಮಾನ ಸಾರ್ಥಕವಾಗಬೇಕು

Most read

ದರ್ಶನ್‌ರವರ ದೊಡ್ಡ ಅಭಿಮಾನ ಬಳಗ ಅನ್ನದಾಸೋಹ, ಫ್ಲಕಾರ್ಡ್ ಗೆ ಹಾಲು ಸುರಿಯುವುದು ಇವೆಲ್ಲಾ ಕೆಲಸಕ್ಕಿಂತ ಕಾಟೇರನ ಸಂದೇಶವನ್ನು ಈ ಅಸಮಾನತೆಯ ಸಮಾಜದಲ್ಲಿ ಬಿತ್ತುವ ಕಾರ್ಯದಲ್ಲಿ ನಿರತರಾಗಬೇಕು. ಆಗ ಮಾತ್ರ ದರ್ಶನ್‌ ಅವರನ್ನು ಆರಾಧಿಸುವಂತ ಅಭಿಮಾನ  ಸಾರ್ಥಕವೆನಿಸುತ್ತದೆ – ಆಕಾಶ್‌ ಆರ್‌ ಎಸ್‌, ಪತ್ರಕರ್ತರು

” ಅವಳು ನಮ್ಮ ಜಾತಿಯವ್ನ ಜತೆಗೆ ಇದ್ದು ಕೆಟ್ಟೋಗಿದ್ರೆ ಅದನ್ನು ಕ್ಷಮ್ಸಿ ಒಪ್ಕೊಂಡ್ಬೀತ್ತಿವಿ, ಆದರೆ ನಿಮ್ಮಗ್ಳ ಜತೆಗೆ ಇರೋದು ಮಾತ್ರ ಒಪ್ಪಕ್ಕಿಲ್ಲ”, ” ನೀನು ಮಲ್ಗಬೇಕು ಅನ್ದಿದ್ರೆ ನಿನ್ನ ನಮ್ಮ ಜಾತಿ ಅವ್ನ್ಗೆ ನಾನೇ ತಲೆ ಇಡಿದಿದ್ದೆ, ಆದರೆ ಆ ನಾಯಿ ಜತೆಗೆ ಹೋಗಿದಿಯಾ” ಎಂದು ಹೇಳುವ ಆ ಊರಿನ ಶಾನುಭೋಗನ ಮಗ, ತಲಾಂತರದಿಂದ ಬಂದ ಈ ಸಮಾಜದಲ್ಲಿನ ಜಾತಿ ವ್ಯವಸ್ಥೆಯು ತನ್ನ ಪ್ರಖರತೆಯನ್ನು ಸೂಚಿಸುವಂತಿತ್ತು.

ಜಾತಿ, ಮೇಲು-ಕೀಳು, ಮರ್ಯಾದೆ ಎನ್ನುವ ಈ ವ್ಯವಸ್ಥೆಯು ಇಂದಿಗೂ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಯಾವುದೇ ಅಂಜಿಕೆ ಇಲ್ಲದೆ ಅದನ್ನು ಹೆಮ್ಮೆಯಿಂದ ಹೇಳುವ, ನಿರ್ಭೀತಿಯಿಂದ ಕೃತ್ಯ ಎಸಗುವ ಸ್ಥಿತಿಯೂ ಕೂಡ ನಿರ್ಮಾಣವಾಗಿದೆ. ಅದು ದಿನನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವೂ ಆಗುತ್ತಲೆ ಇರುತ್ತದೆ. ಆದರೆ ಅದು ಜನರಿಗೆ ತಲುಪುವಲ್ಲಿ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ ಜಾತಿಗೀತಿ ಇಲ್ಲ, ಅದೆಲ್ಲವು ಕೇವಲ ನೆಪಗಳು ಮಾತ್ರ ಎನ್ನುವವರಿದ್ದಾರೆ. ಇನ್ನೂ ಅದೆಷ್ಟೋ ಜನಕ್ಕೆ ಜಾತಿಯ ತಾರತಮ್ಯದ ಅರಿವೇ ಇಲ್ಲ. ಶಿವ ಇಟ್ಟಾಂಗೆ ನಾವು ಇರಬೇಕು ಎಂದುಕೊಂಡೆ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ವಾಸ್ತವಾಂಶವನ್ನು ಇತ್ತೀಚಿನ ಕಾಟೇರ ಸಿನಿಮಾ ಪರದೆ ಮೇಲೆ ನೈಜವಾಗಿ ಅಚ್ಚೊತ್ತಿದೆ.

ಕೆಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗವೂ ಪ್ಯಾನ್‌ ಇಂಡಿಯಾ, ಎಲ್ಲರನ್ನು ನಮ್ಮತ್ತಾ ಸೆಳೆಯಬೇಕು ಎನ್ನುವ ಹುಚ್ಚು ಕುದುರೆ ಹತ್ತಿ ಹೊರಟಿದೆ. ಹಾಗಾಗಿಯೇ ಈ ನೆಲದ ನೊಂದ ಕಥೆಗಳನ್ನು ಹೇಳುವ ಉತ್ಸಾಹವಾಗಲಿ ಅಥವಾ ಧೈರ್ಯವಾಗಲಿ ತೋರಿದ್ದು ಕಮ್ಮಿಯೇ. ಹಾಗೇ ನೋಡುವುದಾದರೆ ಈ ಹಿಂದೆ ಬಂದ ಗುರುದೇವ್‌ ಹೊಯ್ಸಳ, ಪಲಾರ್, ಜಟ್ಟ ಅಂತಹಾ ಸಿನಿಮಾ ಅಂತಹ ದುಸ್ಸಾಹಸಕ್ಕೆ ಕೈ ಹಾಕಿತ್ತು. ಅದು ಬಿಟ್ಟರೇ ಅಂತಹ ಯಾವುದೇ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ, ಕಥೆಗಾರರಾಗಲಿ ಇಂದಿನ ಜಾತಿ ವ್ಯವಸ್ಥೆಯ ಪರಿಸ್ಥಿತಿಯ ಅನುಗುಣವಾಗಿ ಒಂದು ಬಲವಾದ ಸಂದೇಶವನ್ನು ಈ ಸಮಾಜಕ್ಕೆ ರವಾನಿಸುವ ಸಿನಿಮಾ ನಿರ್ಮಾಣ ಮಾಡಲು ಮುಂದಾಗದೆ ಇದ್ದದ್ದು ದುರಂತವೇ. ಆದರೆ ಈಗ ಕಾಟೇರ ಅಂತಹ ಸಿನಿಮಾ ಇವೆಲ್ಲಕ್ಕೂ ತದ್ವಿರುದ್ದವಾಗಿ ನಿಂತಿದ್ದು, ಆ ಮೂಲಕ ಕನ್ನಡದಲ್ಲಿ ಒಂದು ಹೊಸ ಭಾಷ್ಯ ಬರೆದಿದೆ ಎಂದರೆ ಅತಿಶಯೋಕ್ತಿಯಲ್ಲ.

ತಮಿಳಿನ ಕರ್ಣನ್‌, ಅಸುರನ್‌, ಜೈ ಭೀಮ್‌, ಸರ್ಪಟೈ ಪರಂಬಂರೆ,  ಮಾಮನನ್, ಮಲೆಯಾಳಂನ ಜನ ಗಣ ಮನ, ನಾಯಟ್ಟು, ತೆಲುಗಿನ ಕಲರ್‌ಫೊಟೋ, ಮರಾಠಿಯ ಸೈರಟ್‌, ಪಾಂಡ್ರಿ ಅಂತಹ ಸಿನಿಮಾಗಳು ಕಣ್ದುಂಬಿಕೊಂಡಾಗಲೆಲ್ಲಾ ಈ ರೀತಿಯ ದಲಿತ ದಮನಿತರ, ಮಣ್ಣಿನ ಕಥೆಗಳು ಕನ್ನಡದಲ್ಲಿ ಬರಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಆತಂಕಕ್ಕೆ ಇದ್ದೆ ಇತ್ತು ಈಗ ಕಾಟೇರ ಸಿನಿಮಾ ಅದಕ್ಕೆಲ್ಲಾ ಸಮಾಧಾನ ಹೇಳಿದೆ.

ಈ ಕನ್ನಡ ನೆಲಕ್ಕೆ, ಜಾತಿ, ಧರ್ಮಗಳಿಂದ ಹಾದಿ ತಪ್ಪುತ್ತಿರುವ ಈಗಿನ ಸಮಾಜಕ್ಕೆ ಕಾಟೇರದಂತಹ ಸಿನಿಮಾ ಅಗತ್ಯವಿತ್ತು. ಅದರಂತೆ ಕಾಟೇರ ಅದರ ಜವಾಬ್ದಾರಿಯನ್ನು ನಿಭಾಯಿಸಿದ್ದು, ಸಮಾಜಕ್ಕೊಂದು ಸಂದೇಶವನ್ನು ರವಾನಿಸುವಲ್ಲಿ ಸಂಪೂರ್ಣವಾಗಿ ಶ್ರಮವಹಿಸಿದೆ. ಸಿನಿಮಾ ಮಾಧ್ಯಮ ಒಂದು ಬಹುದೊಡ್ಡ ಆಕರ್ಷಣೆಯ ಮಾಧ್ಯಮ ಆಗಿರುವುದರಿಂದ ಅಲ್ಲಿ ಬಿತ್ತಿದ ಬೀಜ ಇಂದಲ್ಲಾ ನಾಳೆ ಫಲ ಕೊಡುತ್ತದೆ. ಹಾಗಾಗಿಯೇ ಹಿಂದೆ ಕನ್ನಡದ ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಾಲ್, ದೊರೆ ಭಗವಾನ್‌, ರಾಜೇಂದ್ರಸಿಂಗ್‌ಬಾಬು, ಹಿಂದಿಯ ಸತ್ಯಜಿತ್‌ರೇ, ಮಜಿದ್‌ಮಜಿದಿ, ಜಪಾನ್‌ನ  ಅಕಿರು ಕುರುಸೊವಾ ದಂತಹ ನಿರ್ದೇಶಕರು ತಮ್ಮ ಆಲೋಚನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕಾರ್ಯಗತವಾಗಿದ್ದರು. ಕನ್ನಡದಲ್ಲಿ ಭೂತಯ್ಯನ ಮಗ ಅಯ್ಯು, ಋಷ್ಯಶೃಂಗ ಕಾದಂಬರಿ ಆಧಾರಿತ ಕಾಮನಬಿಲ್ಲು, ದೊರೆ ಸಿನಿಮಾಗಳು ಇಡೀ ವ್ಯವಸ್ಥೆಯನ್ನು ತೆರೆಮೇಲೆ ಕಟ್ಟಿಕೊಟ್ಟು ಜನರನ್ನು ಶಿಕ್ಷಿತರನ್ನಾಗಿ ಮಾಡಿತ್ತು. ಅದಕ್ಕೆ ಈಗಲೂ ಅದನ್ನು ನೆನೆಯುತ್ತಾರೆ.

ಆದರೆ ತದನಂತರ  ಕನ್ನಡದಲ್ಲಿನ ಹೊಸ ತಲೆಮಾರುಗಳಿಗೆ ಇಂತಹ ಆಲೋಚನೆಗಳು ಹುಟ್ಟಲೆ ಇಲ್ಲ. ಆದರೆ ತಮಿಳಿನಲ್ಲಿ ಇದರ ಪ್ರಭಾವ ಹೆಚ್ಚಾಗಿತ್ತು ಆ ದಿಸೆಯಲ್ಲಿ ಪ.ರಂಜಿತ್‌, ವೆಟ್ರಿಮಾರನ್‌, ಸೆಲ್ವರಾಜ್‌, ಜ್ಞಾನವೇಲ್‌ ನಂತಹ ಸಿನಿಮಾ ಮೇಕರ್ಸ್‌ ಜನರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಸಿನಿಮಾ ಮಾಧ್ಯಮವನ್ನು ಬಲವಾಗಿ ಬಳಸಿಕೊಂಡರು. ಈಗ ಆ ಸಾಲಿನಲ್ಲಿ ಕನ್ನಡದ ತರುಣ್‌ ಸುಧೀರ್‌, ಬರಹಗಾರ ಜಡೇಶ್‌ ಕೆ ಹಂಪಿ ನಿಲ್ಲುವ ಎಲ್ಲಾ ನಿರೀಕ್ಷೆ ಹುಟ್ಟಿಸಿದ್ದಾರೆ. ಅದಕ್ಕೆ ಕಾರಣ ಕಾಟೇರದಂತಹ ಜಾತಿ ವ್ಯವಸ್ಥೆಯ ವಿರುದ್ಧದ ಸಿನಿಮಾ. ರಾಜಕೀಯ, ಸಾಮಾಜಿಕ ಪ್ರತಿರೋಧವನ್ನು ಎದುರಿಸಬೇಕೆನ್ನುವ ಯಾವುದೇ ಭೀತಿಗೆ ಒಳಗಾಗದೆ ದರ್ಶನ್‌ರಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗ ನಾಯಕನನ್ನು ಇಟ್ಟುಕೊಂಡು ಸಮಾಜಕ್ಕೆ ಅನಿಷ್ಠ ವ್ಯವಸ್ಥೆ ವಿರುದ್ಧ ಸಮಾನತೆಯ ಸಂದೇಶವನ್ನು ಸಾರಿದ ಕಾಟೇರ ತಂಡದ ಧೈರ್ಯ ಮೆಚ್ಚಬೇಕು. ಹಾಗಾಗಿ ಇಂತಹದೇ ಆಲೋಚನೆ ಇಟ್ಟುಕೊಂಡು ಬರುವ ನಿರ್ದೇಶಕರಿಗೆ ದರ್ಶನ್‌ ದೊಡ್ಡ ಕ್ಯಾನ್ವಾಸ್‌ ಆಗಿ ಪರಿಣಮಿಸಿದರು ಆಶ್ಚರ್ಯ ಪಡಬೇಕಿಲ್ಲ. ಇದೆಲ್ಲದರ ನಡುವೆ ಸಿನಿಮಾದಲ್ಲಿ ಸಂಭಾಷಣೆಯೂ ಪ್ರತಿ ಸನ್ನಿವೇಶಕ್ಕೂ ಮಚ್ಚಿಗಿಂತ ಹರಿತವಾಗುತ್ತಲೆ ಇತ್ತು. 

“ ಶಾನುಭೋಗರ ಮನೆಯಲ್ಲಿ ಕೆಳವರ್ಗದವರಿಗೆಂದು ಆಚೆ ಇಟ್ಟ ಲೋಟ”, “ಬೇರೆ ಜಾತಿ ಮದುವೆಯಾದ ಮಗಳನ್ನು ಕೂಡ ಅಸ್ಪೃಶ್ಯರಂತೆ ಕಾಣುವ ತಂದೆಯ” ದೃಶ್ಯ ಕಾಡದೆ ಬಿಡದು, ಇನ್ನೂ “ನಮ್ಮ ಕಷ್ಟನ ದೇವ್ರತ್ರ ಹೇಳ್ಕೋನ ಅಂದ್ರೆ ನಮ್ಮನ್ನ ದೇವಸ್ಥಾನ ಒಲಿಕೂ ಬಿಟ್ಕೊಳ್ಲ”, “ ನಮ್ಮ ಹೆಣ್ಮಕ್ಳು ನಾವು ಕಾಪಾಡ್ಕಬೇಕು” ಎನ್ನುವ ಸಂಭಾಷಣೆಗಳು ಈ ದೇಶದಲ್ಲಿ ಜಾತಿ ವ್ಯವಸ್ಥೆಗೆ ಚಾಟಿ ಬೀಸಿದೆ. ಜಾತಿ, ಧರ್ಮ ತಿಕ್ಕಾಟದ ಈ ವಾತಾವರಣದಲ್ಲಿ “ ಜಾತಿ ಮುದ್ರೆ ಒತ್ಬಾಡಿ, ಮನುಷ್ಯತ್ವ ಮುದ್ರೆ ಒತ್ತಿ, ಪ್ರೀತಿ, ಕರುಣೆ, ಸಮಾನತೆ ಮುದ್ರೆ ಒತ್ತಿ” ಎಂಬ ಸಂದೇಶ ಅವಶ್ಯಕವಾಗಿತ್ತು. ಅದು ನಿರ್ಭೀತಿಯಿಂದ ಗಟ್ಟಿ ಧ್ವನಿಯಲ್ಲಿ ಕಾಟೇರ ಹೇಳಿದ್ದಾನೆ. ಅದು ಈಗಿನ ಸಂದರ್ಭಕ್ಕೆ ಆಪ್ತವಾಗಿದೆ. ಆದರೆ ಇವನ್ನೂ ಕೇವಲ ಮನರಂಜನೆಯಾಗಿ ಗ್ರಹಿಸಿ ಬಿಟ್ಟರೆ  ದರ್ಶನ್‌, ತರುಣ್‌, ಜಡೇಶ್‌, ಮಾಸ್ತಿ ರಂತಹ ಶ್ರಮವೂ ವ್ಯರ್ಥವಾಗುತ್ತದೆ. ಅದನ್ನು ಹಾಗೇ ಆಗಲು ಬಿಡದಂತೆ ಕಾಯಬೇಕು. ದರ್ಶನ್‌ರ ದೊಡ್ಡ ಅಭಿಮಾನಿ ಬಳಗ ಅನ್ನದಾಸೋಹ, ಫ್ಲಕಾರ್ಡ್ ಗೆ ಹಾಲು ಸುರಿಯುವುದು ಇವೆಲ್ಲಾ ಕೆಲಸಕ್ಕಿಂತ ಕಾಟೇರನ ಸಂದೇಶವನ್ನು ಈ ಅಸಮಾನತೆಯ ಸಮಾಜದಲ್ಲಿ ಬಿತ್ತುವ ಕಾರ್ಯದಲ್ಲಿ ನಿರತರಾಗಬೇಕು. ಆಗ ಮಾತ್ರ ದರ್ಶನ್‌ ಅವರನ್ನು ಆರಾಧಿಸುವಂತ ಅಭಿಮಾನ  ಸಾರ್ಥಕವೆನಿಸುತ್ತದೆ.

ಆಕಾಶ್‌.ಆರ್‌.ಎಸ್‌.

ಪತ್ರಕರ್ತ, ಉಪನ್ಯಾಸಕ

More articles

Latest article