ಬೆಂಗಳೂರು: ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ವಿಡಿಯೋ ಮಾಡಿಕೊಂಡು ಸಂತೃಪ್ತಿ ಪಡುತ್ತಿದ್ದ ಹಾಸನ ಸಂಸದ, NDA ಅಭ್ಯರ್ಥಿ ಮೇಲೆ ಒಂದಾದ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದು, ಮತ್ತೋರ್ವ ಸಂತ್ರಸ್ತೆ ಇಂದು ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ಚನ್ನರಾಯಪಟ್ಟಣದ ಮನೆಯೊಂದರಲ್ಲಿ ತನ್ನ ಮೇಲೆ ಪ್ರಜ್ವಲ್ ನಿಂದ ಅತ್ಯಾಚಾರವಾಗಿದೆ ಎಂದು ಸಂತ್ರಸ್ತೆ ದೂರು ನೀಡಿದ್ದು, ಆಕೆ ನ್ಯಾಯಾಲಯದಲ್ಲೂ ತನ್ನ ಹೇಳಿಕೆಯನ್ನು ನೀಡಿದ್ದಾರೆ. ನಿನ್ನೆಯಷ್ಟೇ ಸಂತ್ರಸ್ತೆಯನ್ನು ಚನ್ನರಾಯಪಟ್ಟಣದ ತೋಟದ ಮನೆಯೊಂದಕ್ಕೆ ಕರೆದೊಯ್ದು ಮಹಜರು ಮಾಡಲಾಗಿತ್ತು.
ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವೂ ಗಂಭೀರ ಸ್ವರೂಪದ್ದಾಗಿದ್ದು, ಕಠಿಣ ಸೆಕ್ಷನ್ ಗಳ ಅಡಿಯಲ್ಲಿ FIR ಮಾಡಲಾಗಿದೆ. 376(2)(N)- ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರ, IPC 354(A) -ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ, IPC 354(B)-ಬಟ್ಟೆ ಹಿಡಿದು ಎಳೆದಾಡಿದ ಆರೋಪ, IPC 354(C)- ಖಾಸಗಿ ಚಿತ್ರಗಳ ಸೆರೆ ಹಿಡಿದು ವೀಕ್ಷಣೆ. 376(2)(K)- ಜನಪ್ರತಿನಿಧಿ ಸ್ಥಾನದಲ್ಲಿದ್ದು ಅತ್ಯಾಚಾರ ಹಾಗೂ ಸೆಕ್ಷನ್ 506ರ ಅಡಿ ಬೆದರಿಕೆ ಹಾಕುವ ಕೇಸ್ ದಾಖಲು. 3ನೇ FIRನಲ್ಲಿ ಕಠಿಣ ಸೆಕ್ಷನ್ ಗಳನ್ನ ಹಾಕಿದ ಎಸ್ ಐಟಿ. ಮೇ 8ರಂದು ಸಂತ್ರಸ್ತೆ SIT ಮುಂದೆ ದೂರು ನೀಡಿದ್ದರು.
ಆರೋಪಿ ಪ್ರಜ್ವಲ್ ರೇವಣ್ಣ ಹಗರಣ ಬಯಲಿಗೆ ಬರುತ್ತಿದ್ದಂತೆ ಜರ್ಮನಿಗೆ ಪರಾರಿಯಾಗಿದ್ದಾನೆ. ಈತ ಈಗ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಇಂಟರ್ ಪೋಲ್ ಮೂಲಕ 190ಕ್ಕೂ ಹೆಚ್ಚು ದೇಶಗಳಿಗೆ ಮಾಹಿತಿ ನೀಡಲಾಗಿದೆ.