ಬಿಸಿಲಿನಿಂದ ಬೆಂದು ಹೋದ ಕರ್ನಾಟಕ: ಮಳೆ ಆರಂಭವಾಗುವುದು ಯಾವಾಗ ಗೊತ್ತೇ?

Most read

ಬೆಂಗಳೂರು: ಇಡೀ ಕರ್ನಾಟಕ ಸುಡುವ ಬಿಸಿಲಿನಿಂದ ಬೆಂದುಹೋಗುತ್ತಿದೆ. ತೀವ್ರ ಶಾಖದ ಅಲೆಗೆ ಜನರು ಕಂಗಾಲಾಗಿದ್ದಾರೆ, ಜಾನುವಾರುಗಳು, ಪಕ್ಷಿಗಳು ನರಳುತ್ತಿವೆ. ಹಿಂದೆಂದೂ ಕಾಣದಂಥ ಸುಡುಬೇಸಿಗೆಯನ್ನು ಈ ಬಾರಿ ಕರ್ನಾಟಕ ಅನುಭವಿಸುತ್ತಿದೆ.

ತೀವ್ರ ಶಾಖದ ಅಲೆಗಳಿಂದ ಜನರು ಸುರಕ್ಷಿತವಾಗಿರಬೇಕು ಎಂದು ಮುಂದಿನ ಮೂರು ದಿನಗಳವರೆಗೆ ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರೆಡ್ ಅಲರ್ಟ್ ಹೊರಡಿಸಿದೆ.

ರಾಜ್ಯದ ಬಹುತೇಕ ನಗರಗಳಲ್ಲಿ ನಿನ್ನೆ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಿದ್ದರಿಂದ ಜನರು ಪರದಾಡುವಂತಾಯಿತು. ರಾಯಚೂರಿನಲ್ಲಿ ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಯಿತು. ಇದು ಈ ವರ್ಷದ ಬೇಸಿಗೆಯ ಅತಿಹೆಚ್ಚು ತಾಪಮಾನ. ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲೂ ತಾಪಮಾನ 46ನ್ನು ದಾಟಿತು. ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಕ್ರಮವಾಗಿ 44.4, 44 ರಷ್ಟು ಗರಿಷ್ಠ ತಾಪಮಾನ ದಾಖಲಾಯಿತು. ಬೆಂಗಳೂರಿನಲ್ಲಿ ನಿನ್ನೆ ಮತ್ತು ಇವತ್ತು ಗರಿಷ್ಠ ತಾಪಮಾನ 40ರ ಗಡಿ ದಾಟಿತು. ನಿನ್ನೆ 41.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಬೆಂಗಳೂರಿನಲ್ಲಿ ದಾಖಲಾಗಿತ್ತು.

ಸೋಮವಾರದವರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ೆಲ್ಲ ಜಿಲ್ಲೆಗಳಲ್ಲಿ ಅತಿಹೆಚ್ಚಿನ ತಾಪಮಾನ ಇರಲಿದ್ದು, ಈ ವರ್ಷದ ಬೇಸಿಗೆ ತನ್ನ ಉಚ್ರಾಯ ಸ್ಥಿತಿಗೆ ತಲುಪಲಿದೆ. ಮುಂದಿನ ಮೂರು ದಿನಗಳ ಕಾಲ ಸಾರ್ವಜನಿಕರು ಜಂಕ್ ಫುಡ್ ಗಳನ್ನು ತಿನ್ನದಂತೆ, ನಿರ್ಜಲೀಕರಣವಾಗುವುದನ್ನು (  dehydration ) ತಡೆಯಲು ಹೆಚ್ಚಿನ ಪ್ರಮಾಣದ ನೀರು ಕುಡಿಯಬೇಕು ಎಂದು ಸೂಚಿಸಲಾಗಿದೆ.

ಸೋಮವಾರದವರೆಗೆ ಕರಾವಳಿ ಪ್ರದೇಶಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವಿರಲಿದ್ದು, ಮಧ್ಯಾಹ್ನದ ವೇಳೆ ಸಾಧ್ಯವಾದಷ್ಟು ಮನೆ, ಕಚೇರಿಯಲ್ಲೇ ಇರಬೇಕು, ಹೊರಗೆ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಬೇಸಿಗೆಯ ಝಳದ ನಡುವೆಯೂ ಒಂದು ಸಿಹಿಸುದ್ದಿಯಿದ್ದು ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 6 ಅಥವಾ 7 ನೇ ತಾರೀಕಿನಿಂದ ಮುಂಗಾರುಪೂರ್ವ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಂತರ ತಾಪಮಾನದಲ್ಲಿ ಇಳಿಕೆಯಾಗುವ ಸಂಭವವಿದೆ.

ಈ ಬಾರಿ ಮುಂಗಾರುಪೂರ್ವ ಮಳೆ ವಾಡಿಕೆಯಷ್ಟು ಬಿದ್ದಿಲ್ಲ. ವಾಡಿಕೆಯಂತೆ ಮೇ ತಿಂಗಳಿನೊಳಗೆ ಕನಿಷ್ಠ 129 ಮಿ.ಮೀ ಮಳೆಯಾಗಬೇಕು. ಆದರೆ ಈವರೆಗೆ ಕೇವಲ 31.6 ಮಿ.ಮೀ ಅಷ್ಟೇ ಮಳೆಯಾಗಿದ್ದು, ಮೇ 6-7ರ ನಂತರ ಬೀಳುವ ಮಳೆಯಿಂದಾಗಿ ವಾಡಿಕೆಯ ಮಳೆಯ ಪ್ರಮಾಣವನ್ನು ತಲುಪುವ ಸಾಧ್ಯತೆ ಇದೆ.

More articles

Latest article